ಅತಿಸಾರವಾಗ್ತಿದ್ದಂತೆ ಫುಡ್ ಪಾಯಿಸಜ್ ಆಗಿದೆ ಅಂತಾ ನಿರ್ಲಕ್ಷ್ಯ ಮಾಡ್ತೇವೆ. ಕಾರಣ ಯಾವುದೇ ಇರಲಿ ವೈದ್ಯರ ಬಳಿ ಹೋಗೋದನ್ನು ಮರೆಯಬೇಡಿ. ಯಾಕೆಂದ್ರೆ ಮತ್ತೆ ಭಾರತಕ್ಕೆ ಕಾಲರಾ ಲಗ್ಗೆಯಿಟ್ಟಿದೆ. ಅದ್ರ ಲಕ್ಷಣ, ಮನೆ ಮದ್ದಿನ ವಿವರ ಇಲ್ಲಿದೆ.
ಕಾಲರಾ.. ಹೆಸರು ಕೇಳಿದ್ರೆ ಈಗ್ಲೂ ಜನರು ಬೆಚ್ಚಿ ಬೀಳ್ತಾರೆ. ಯಾಕೆಂದ್ರೆ ಹಿಂದೆ ಕಾಲರಾ ತನ್ನ ಆರ್ಭಟವನ್ನು ತೋರಿಸಿತ್ತು. ಆ ಇತಿಹಾಸ ಈಗ್ಲೂ ಜನರನ್ನು ಭಯಗೊಳಿಸುತ್ತದೆ. 1817ರಲ್ಲಿ ಬಂಗಾಳದಿಂದ ಆರಂಭವಾದ ಈ ಮಹಾಮಾರಿ ಭೀಕರ ಸ್ವರೂಪ ಪಡೆದೆ ಜನರ ಸಾವಿಗೆ ಕಾರಣವಾಗಿತ್ತು. ಅಂದಾಜು 10-20 ಲಕ್ಷ ಜನರನ್ನು ಈ ಕಾಲರಾ ಬಲಿ ಪಡೆದಿತ್ತು. ಅದ್ರ ವಿಷ್ಯ ಈಗೇಕೆ ಎಂದು ನೀವು ಕೇಳ್ಬಹುದು. ಕಾಲರಾ ಈಗ ಮತ್ತೆ ಕಾಲಿಟ್ಟಿದೆ. ವಿಶ್ವ ಆರೋಗ್ಯ ಸಂಸ್ಥೆ ಈ ಬಗ್ಗೆ ಮಾಹಿತಿಯನ್ನು ನೀಡಿದೆ.
ವಿಶ್ವ (World ) ದಲ್ಲಿ ಕಾಲರಾ (Cholera) ಆರ್ಭಟ : ಕಾಲರಾ ಸಂಪೂರ್ಣ ತೊಲಗಿಲ್ಲ ಎನ್ನುವುದು ನೆನಪಿರಲಿ. ಸದ್ಯ 22 ದೇಶಗಳು ಕಾಲರಾ ಸಾಂಕ್ರಾಮಿಕ ರೋಗವನ್ನು ಎದುರಿಸುತ್ತಿವೆ. ಒಟ್ಟು 43 ದೇಶ (Country) ಗಳಲ್ಲಿ 100 ಕೋಟಿ ಜನರ ಮೇಲೆ ಇದ್ರ ಪರಿಣಾಮ ಬೀರುವ ಸಾಧ್ಯತೆಯಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ (WHO) ಎಚ್ಚರಿಕೆ ನೀಡಿದೆ.
ಭಾರತದಲ್ಲಿ ಕಾಲರ ಕಾಟ : 2023ರಲ್ಲಿ ಕಾಲರಾ ಕಾಣಿಸಿಕೊಂಡ ದೇಶಗಳ ಪಟ್ಟಿಯಲ್ಲಿ ಭಾರತದ ಹೆಸರಿದೆ. ಪಾಕಿಸ್ತಾನದಲ್ಲೂ ಏಕಾಏಕಿ ಕಾಲರಾ ಪ್ರಕರಣ ಜಾಸ್ತಿಯಾಗ್ತಿದೆ ಎಂದು ವರದಿ ಮಾಡಲಾಗಿದೆ. ವರದಿ ಪ್ರಕಾರ 2011 ಮತ್ತು 2020 ರ ನಡುವೆ ಭಾರತದಲ್ಲಿ 565 ಬಾರಿ ಕಾಲರಾ ಕಾಣಿಸಿಕೊಂಡಿದೆ. ಇದರಲ್ಲಿ 263 ಜನರು ಪ್ರಾಣ ಕಳೆದುಕೊಂಡಿದ್ದಾರೆ.
ಈ ಹಿಂದೆ ಬಂದ ಸಾಂಕ್ರಾಮಿಕ ರೋಗಗಳು ಹೇಳದೆ ಕೇಳದೆ ಹೋದದ್ದೆಲ್ಲಿಗೆ?
ಅತಿಸಾರದ ಸೋಂಕು ಕಾಲರಾ : ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ, ಕಾಲರಾ ವಿಬ್ರಿಯೊ ಕಾಲರಾ ಬ್ಯಾಕ್ಟೀರಿಯಾದಿಂದ ಹರಡುತ್ತದೆ. ಈ ಸೋಂಕು ಆಹಾರ ಮತ್ತು ನೀರಿನ ಸೇವನೆಯಿಂದ ಉಂಟಾಗುತ್ತದೆ. ಇದ್ರಲ್ಲಿ ತೀವ್ರ ಅತಿಸಾರ ಕಾಣಿಸಿಕೊಳ್ಳುತ್ತದೆ. ಮಕ್ಕಳು ಮತ್ತು ವಯಸ್ಕರಲ್ಲಿ ಇದು ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ.
ಎಚ್ಚರಿಕೆ ಅಗತ್ಯ : ಕಾಲರಾ ಹೊಟ್ಟೆಯ ಸೋಂಕು. ಸೋಂಕಿಗೆ ಒಳಗಾದ 12 ಗಂಟೆಗಳಿಂದ 5 ದಿನಗಳಲ್ಲಿ ರೋಗ ಕಾಣಿಸಿಕೊಳ್ಳಬಹುದು. ಕೆಲವರಿಗೆ ಯಾವುದೇ ರೋಗ ಲಕ್ಷಣ ಇರುವುದಿಲ್ಲ. ತೀವ್ರವಾದ ಅತಿಸಾರದಿಂದ ಮಾರಣಾಂತಿಕ ನಿರ್ಜಲೀಕರಣ ಕಾಡುತ್ತದೆ. ಕಾಲರಾ ಹೆಚ್ಚಾದ ವ್ಯಕ್ತಿಗೆ ತಕ್ಷಣ ಚಿಕಿತ್ಸೆ ನೀಡ್ಬೇಕು. ಗಂಭೀರ ಸಮಸ್ಯೆಯಲ್ಲಿ ವೈದ್ಯರ ಸಹಾಯ ಸಿಗದೆ ಹೋದ್ರೆ ಸಾವು ನಿಶ್ಚಿತ. ಅತಿಸಾರ ನಿಮ್ಮನ್ನು ಕಾಡ್ತಿದ್ದರೆ ಯಾವುದೇ ಕಾರಣಕ್ಕೂ ಅದನ್ನು ನಿರ್ಲಕ್ಷ್ಯ ಮಾಡ್ಬೇಡಿ.
ಕಾಲರಾ ರೋಗದ ಲಕ್ಷಣ : ಕಾಲರಾ ರೋಗದ ಮೊದಲ ಲಕ್ಷಣ ಅತಿಸಾರ. ಇದ್ರ ಜೊತೆ ವಾಂತಿ, ಬಾಯಾರಿಕೆ, ಕಾಲು ಸೆಳೆತ, ಕಿರಿಕಿರಿ, ಹೃದಯ ಬಡಿತದಲ್ಲಿ ಹೆಚ್ಚಳ, ಕಡಿಮೆ ರಕ್ತದೊತ್ತಡ ಇತ್ಯಾದಿ ಸಮಸ್ಯೆ ಕೂಡ ಕಾರುತ್ತದೆ.
ಬೆಂಗಳೂರಲ್ಲಿ ರಸ್ತೆಬದಿ ತೆರೆದ ಆಹಾರ ಮಾರಾಟಕ್ಕೆ ಬ್ರೇಕ್
ರೋಗದಿಂದ ರಕ್ಷಣೆ ಹೇಗೆ? : ಕಾಲರಾ ಕಾಡಿದ ವ್ಯಕ್ತಿಗೆ ನಿರ್ಜಲೀಕರಣ ಸಮಸ್ಯೆ ಕಾಡುತ್ತದೆ. ಹಾಗಾಗಿ ಅತಿ ಹೆಚ್ಚು ನೀರು ಸೇವನೆ ಮತ್ತು ಆರೋಗ್ಯಕರ ಆಹಾರ ಸೇವನೆ ಮುಖ್ಯವಾಗುತ್ತದೆ. ವಿಶ್ವ ಆರೋಗ್ಯ ಸಂಸ್ಥೆ ಪ್ರಕಾರ, ಕಾಲರಾ ರೋಗಕ್ಕೆ ನೀವು ಮನೆಯಲ್ಲಿಯೇ ಸರಳವಾಗಿ ಚಿಕಿತ್ಸೆ ಮಾಡಬಹುದು. ಅತಿಸಾರದ ಸಂದರ್ಭದಲ್ಲಿ ತಕ್ಷಣ ಒಆರ್ ಎಸ್ ತೆಗೆದುಕೊಳ್ಳಲು ಪ್ರಾರಂಭಿಸಬೇಕು. ವಯಸ್ಕ ರೋಗಿಯು ಮೊದಲ ದಿನ 6 ಲೀಟರ್ ಒಆರ್ ಎಸ್ ದ್ರಾವಣವನ್ನು ಕುಡಿಯಬೇಕು. ಪರಿಸ್ಥಿತಿ ನಿಯಂತ್ರಣಕ್ಕೆ ಬರದೆ ಹೋದ್ರೆ ವೈದ್ಯರನ್ನು ಭೇಟಿಯಾಗ್ಬೇಕು.
ಭಯ ಬೇಡ ಎಂದ ವಿಶ್ವ ಆರೋಗ್ಯ ಸಂಸ್ಥೆ : ಕಾಲರಾ ಮುಂದಿನ ದಿನಗಳಲ್ಲಿ ಎಷ್ಟರ ಮಟ್ಟಿಗೆ ಪ್ರಭಾವ ಬೀರುತ್ತದೆ ಎಂಬುದನ್ನು ಹೇಳುವುದು ಕಷ್ಟ. ಆದ್ರೆ ಇದ್ರ ಬಗ್ಗೆ ಹೆಚ್ಚಿನ ಭಯ ಬೇಡ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ. ಸರಿಯಾದ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಂಡ್ರೆ ಇದನ್ನು ನಿಯಂತ್ರಿಸಬಹುದು.