ಬೋರಾಗುತ್ತಿದೆಯಾ? ಆಗಲಿ, ಅದೇ ಹೊಸತನಕ್ಕೆ ಕಾರಣವಾಗುತ್ತದೆ. ನಾವೇ ಪ್ರಾಡಕ್ಟುಗಳಾಗಿರುವ ಸೋಷಲ್ ಮೀಡಿಯಾ ಆ್ಯಪ್‌ಗಳಿಂದ ಹೊರಗುಳಿಯುವುದು ಸುಖಜೀವನದ ಸೋಪಾನ ಅನ್ನುವ ವಾದ ಜಗತ್ತಿನಾದ್ಯಂತ ಕೇಳಿಬರುತ್ತಿದೆ. ಆ ಕುರಿತು ಸೋಷಲ್ ಮೀಡಿಯಾ ಸಂತ್ರಸ್ತರ ಕಣ್ತೆರೆಸುವ ಲೇಖನ ಇಲ್ಲಿದೆ.
ಸಚಿನ್ ತೀರ್ಥಹಳ್ಳಿ
ಪ್ರತಿಯೊಂದು ಆವಿಷ್ಕಾರವೂ ಅನೇಕ ಸಾಧ್ಯತೆಗಳನ್ನು ತನ್ನೊಳಗೆ ಹುದುಗಿಸಿಟ್ಟುಕೊಂಡಿರುತ್ತದೆ ಎನ್ನುವ ವಿಚಾರ ಅದನ್ನು ಆವಿಷ್ಕರಿಸಿದವನಿಗೂ ಆ ಕ್ಷಣಕ್ಕೆ ಗೊತ್ತಿರುವುದಿಲ್ಲ. ಇವತ್ತು ನಮ್ಮ ಜಗತ್ತನ್ನು ಎಲ್ಲಾ ದಿಕ್ಕುಗಳಿಂದ ಆವರಿಸಿಕೊಂಡಿರುವ ಇಂಟರ್‌ನೆಟ್ ಕೂಡ ಅಂತಹದೇ ಒಂದು ಆವಿಷ್ಕಾರ. ಒಂದು ಇಮೇಲ್ ಕಳಿಸುವುದಕ್ಕೆ ಗಂಟೆಗೆ ಮೂವತ್ತು ರೂಪಾಯಿ ಕೊಟ್ಟು ಸೈಬರ್ ಕೆಫೆಗೆ ಹೋಗುವ ಕಾಲದಿಂದ ಹದಿನೈದು ರೂಪಾಯಿಗೆ ಇಡೀ ದಿನ ಇಂಟರ್‌ನೆಟ್ ಸಿಗುವ ಕಾಲದ ಮಧ್ಯೆ, ಬರೀ ನಮ್ಮ ವ್ಯವಹಾರಕ್ಕೆ ಸೀಮಿತವಾಗಿದ್ದ ಇಂಟರ್‌ನೆಟ್ ಕಿಡ್ನಿ, ಲಿವರ್‌ನಷ್ಟೆನಮ್ಮ ಅವಿಭಾಜ್ಯ ಅಂಗವಾಗಲು ಆರಂಭವಾಗಿದ್ದು ಸೋಷಿಯಲ್ ಮೀಡಿಯಾಗಳು ಬಂದ ಮೇಲೆ. ಕಳೆದ ಒಂದೂವರೆ ದಶಕದಲ್ಲಿ ಮನುಷ್ಯನ ಮೆದುಳಿನ ಮೇಲೆ ನಡೆದ ಅತಿದೊಡ್ಡ ಹ್ಯಾಕ್ ಫೇಸ್ಬುಕ್, ಟ್ವಿಟ್ಟರ್, ಇನ್ಸಾ$್ಟಗ್ರಾಮ್, ಟಿಕ್‌ಟಾಕ್, ಸ್ನ್ಯಾಪ್‌ಚಾಟ್‌ನಂತಹ ಸೋಷಿಯಲ್ ಮೀಡಿಯಾಗಳನ್ನ ಹೊಂದಿರುವ ಜಗತ್ತಿನ ದೈತ್ಯ ಟೆಕ್ ಕಂಪನಿಗಳದ್ದು.
ನೀವು ಇನ್ಸಾ$್ಟಗ್ರಾಮ್ ಬಳಸುತ್ತಿರುವುದಾದರೆ ನೀವು ಒಂದು ಫ್ಯಾಷನ್‌ಗೆ ಸಂಬಂಧಪಟ್ಟರೀಲುಗಳು, ಕುಕಿಂಗ್ ರೀಲ್‌ಗಳನ್ನ ಅಥವಾ ಟೂರಿಸಂಗೆ ಸಂಬಂಧಿಸಿದ ಟ್ರಾವೆಲಾಗ್ ರೀಲ್‌ಗಳನ್ನು ಲೈಕ್ ಮಾಡಿದರೆ ಇನ್ಸಾ$್ಟಗ್ರಾಮ್ ಅಲ್ಲಿಂದ ಅಂತಹದೆ ರೀಲುಗಳನ್ನ ಏಕಾಏಕಿ ಸಜೆಸ್ಟ್ ಮಾಡಲು ಶುರುಮಾಡುವುದನ್ನು ಗಮನಿಸಿರುತ್ತೀರಿ. ಹೀಗೆ ನಿಮ್ಮ ಆಸಕ್ತಿಯ ವಿಷಯ ಯಾವುದು ಎನ್ನುವ ಗುಟ್ಟು ಒಂದು ಲೈಕಿನ ಮೂಲಕ ಅವರಿಗೆ ಗೊತ್ತಾಗುತ್ತದೆ. ಇಂತಹ ಅಸಂಖ್ಯ ಲೈಕುಗಳು, ರೀಟ್ವೀಟುಗಳು, ಪೋಸ್ಟುಗಳು, ಕಮೆಂಟುಗಳು ಮೂಲಕ ನಿಮ್ಮ ಇಡೀ ವ್ಯಕ್ತಿತ್ವವನ್ನ ಹೋಲುವ ಪ್ರತಿಕೃತಿಯೊಂದನ್ನ ತಯಾರಿಸಿಟ್ಟುಕೊಂಡು ಅಲ್ಲಿಂದ ನಿಮಗೆ ಬೇಕಾದನ್ನ ಕೊಡುತ್ತಾ ನಿಮಗೆ ಬೋರೇ ಆಗದಂತೆ ನೋಡಿಕೊಳ್ಳುವ ನೆಪದಲ್ಲಿ ಶಾಶ್ವತವಾಗಿ ನಿಮ್ಮ ಸಮಯ, ಗಮನವನ್ನು ನೀವೇ ಅವರಿಗೆ ಧಾರೆಯೆರೆದು ಕೊಡುವಂತೆ ನೋಡಿಕೊಳ್ಳುತ್ತಾರೆ. ನಿಮ್ಮ ಆಯ್ಕೆಯ ಒಂದು ಪೋಸ್ಟ್ ತೋರಿಸಿ ಅವರಿಗೆ ಬೇಕಾದ ಎರಡು ಜಾಹಿರಾತುಗಳನ್ನ ನಡುವೆ ಮಾರಿ ಹಣ ಮಾಡಿಕೊಳ್ಳುತ್ತಾರೆ.
ಮನುಷ್ಯರ ‘ಗಮನ-ಅಟೆನ್ಷನ್’ಗಿಂತ ಮೌಲ್ಯಯುತವಾದದ್ದು ಜಗತ್ತಿನಲ್ಲಿ ಯಾವುದು ಇಲ್ಲ ಅಂತ ಗೊತ್ತಾದ ದಿನದಿಂದ ಇವತ್ತಿನವರೆಗೆ ನಮ್ಮನ್ನು ಹೀಗೆ ನಯವಾಗಿ ವಂಚಿಸುತ್ತಾ ಅವರ ಆ್ಯಪ್‌ಗಳಲ್ಲೇ ಮುಳುಗಿ ಮೈಮರೆಯಲು ಬಿಲಿಯನ್‌ಗಟ್ಟಲೆ ಹಣ ಹೂಡುತ್ತಿದ್ದಾರೆ. ಜಗತ್ತಿನ ಅತಿ ಬುದ್ಧಿವಂತ ಎಂಜಿನಿಯರುಗಳನ್ನ ಕೆಲಸಕ್ಕಿಟ್ಟುಕೊಂಡು ‘ಏನಾದರು ಮಾಡು, ಒಟ್ನಲ್ಲಿ ಇವನು ಹೆಬ್ಬೆರೆಳನ್ನ ಸ್ಕ್ರೀನ್ ಮೇಲಿಂದ ತೆಗೆದು ಯಾವುದೇ ಕಾರಣಕ್ಕೂ ಫೋನ್ ಕೆಳಗಿಡದಂತೆ ನೋಡಿಕೋ’ ಅಂತ ಹೇಳುತ್ತಿದ್ದಾರೆ. ನಾವು ಇವರ ಪ್ರಾಡಕ್ಟಗಳನ್ನು ಬಳಸುತ್ತಿಲ್ಲ, ಬದಲಿಗೆ ಈ ಕಂಪನಿಗಳಿಗೆ ದುಡ್ಡು ಮಾಡಿಕೊಡಲು ನಾವೇ ಇವರ ಪ್ರಾಡಕ್ಟುಗಳಾಗಿದ್ದೇವೆ ಎನ್ನುವ ಸತ್ಯ ನಮಗೆ ತಡವಾಗಿಯಾದರೂ ಗೊತ್ತಾಗುತ್ತಿದೆ.
ಮದುವೆಯಾದ ಮೇಲೂ ಐ ಲವ್ ಯೂ ಹೇಳಿ; ಇದು ಡಾಕ್ಟರ್ ಸಲಹೆ
ಆರೋಗ್ಯಕರ ಆಹಾರ, ಒಳ್ಳೆಯ ನಿದ್ದೆ, ನಿಯಮಿತವಾದ ದೈಹಿಕ ಕಸರತ್ತು, ವೃತಿಯಲ್ಲಿನ ಟಾಸ್ಕುಗಳನ್ನ ಸರಿಯಾದ ಸಮಯಕ್ಕೆ ಮುಗಿಸಿದಾಗ ನಮ್ಮ ಮನಸ್ಸನ್ನು ಆಹ್ಲಾದಕರವಾಗಿಸುವ ‘ಡೋಪಮೈನ್’ ಎನ್ನುವ ಫೀಲ್ ಗುಡ್ ಹಾರ್ಮೋನೊಂದು ನಮ್ಮ ಮೆದುಳಿಂದ ಬಿಡುಗಡೆಯಾಗುತ್ತದೆ. ಅದೇ ಹಾರ್ಮೋನು ನಾವು ಸೋಷಿಯಲ್ ಮೀಡಿಯಾದಲ್ಲಿ ಹಾಕುವ ಫೋಟೊಗಳಿಗೆ ಬರುವ ಲೈಕುಗಳು, ಹಾರ್ಟುಗಳು, ಪ್ರಶಂಸೆಗಳಿರುವ ಕಮೆಂಟುಗಳನ್ನ ನೋಡಿ ಉಬ್ಬುವಾಗ, ಒಂದು ನಿಮಿಷದಲ್ಲಿ ಮುಗಿಯವ ರೀಲುಗಳನ್ನ ಒಂದರ ಮೇಲೊಂದರಂತೆ ನೋಡುವಾಗಲೂ ಬಿಡುಗಡೆಯಾಗುತ್ತದೆ. ಹಾಗಾಗಿ ಗಮನಕೊಟ್ಟು ಕೆಲಸ ಮಾಡುವುದಕ್ಕಿಂತ ಬೆಳಗೆದ್ದು ಜಿಮ್ಮಿಗೆ ಹೋಗುವುದಕ್ಕಿಂತ, ಶ್ರಮವನ್ನೇ ಬೇಡದ ಹಾಸಿಗೆಯಲ್ಲಿ ಬಿದ್ದುಕೊಂಡು ಫೋನು ನೋಡುವುದನ್ನೆ ನಾವು ಆಯ್ಕೆ ಮಾಡಿಕೊಳ್ಳುತ್ತೇವೆ. ಮನುಷ್ಯನ ಈ ಒಂದು ಬಲಹೀನತೆಯನ್ನು ಇಟ್ಟಕೊಂಡು ದುಡ್ಡುಮಾಡಿಕೊಳ್ಳುತ್ತಾ ಒಂದೀಡಿ ತಲೆಮಾರನ್ನೇ ದಾರಿತಪ್ಪಿಸುತ್ತಿರುವ ಈ ಟೆಕ್ ಕಂಪನಿಗಳ ಕಳ್ಳಾಟಗಳನ್ನ ಬಯಲು ಮಾಡಲು ಜಗತ್ತಿನಾದ್ಯಂತ ಅಭಿಯಾನಗಳು ಶುರುವಾಗುತ್ತಿವೆ.
ಮನಃಶಾಸ್ತ್ರಜ್ಞರು, ಆ್ಯಕ್ಟಿವಿಸ್ಟ್‌ಗಳು, ಈ ಟೆಕ್ ಕಂಪನಿಗಳು ಮಾಜಿ ಉದ್ಯೋಗಿಗಳು ಒಕ್ಕೊರಲಿನಿಂದ ‘ಕ್ವಿಟ್ ಸೋಷಿಯ್ ಮೀಡಿಯಾ’ ಅಂತ ಯುವಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದಾರೆ. ‘ಡಿಜಿಟಲ್ ಡಿಟಾಕ್ಸ್’, ‘ಡಿಜಿಟಲ್ ಮಿನಿಮಲಿಸಮ್’ ಎನ್ನುವ ಹೊಸ ಹೊಸ ಪರಿಭಾಷೆಗಳು ಹುಟ್ಟಿಕೊಳ್ಳುತ್ತಿವೆ.
ಆಚಾರ್ಯ ಭವನಕ್ಕೆ ಹೊಸ ಆಯಾಮ ನೀಡಿದ ವರ್ಣಶಿಲ್ಪಿ ಶಿವಲಿಂಗಪ್ಪರಿಗೆ ಅಮೃತ ಗಳಿಗೆ!
ನಾವು ಸೋಷಿಯಲ್ ಮೀಡಿಯಾಗಳಿಗೆ ಎಷ್ಟೊಂದು ಅಡಿಕ್ಟ್ ಆಗಿದ್ದೇವೆ ಎನ್ನುವ ಸಂಗತಿ ಗೊತ್ತಾಗಬೇಕಾದರೆ ಆ ಆ್ಯಪ್‌ಗಳನ್ನ ಒಂದು ದಿನದ ಮಟ್ಟಿಗಾದರೂ ಡಿಲೀಟ್ ಮಾಡಿ ಫೋನಿಲ್ಲದೆ ಒಂದು ದಿನ ಇರಬಲ್ಲೆವಾ ಅಂತ ನಮ್ಮನ್ನು ನಾವೇ ಪರೀಕ್ಷಿಸಿಕೊಳ್ಳಬೇಕು. ಒಂದು ದಿನದಲ್ಲಿ ಎಷ್ಟೊಂದು ಖಾಲಿ ಸಮಯವಿದೆ ಏನು ಮಾಡುವುದು ಅಂತ ಗೊತ್ತಾಗದೆ, ಬೋರಾಗಿ ಸುಮ್ಮನೆ ಕುಳಿತುಕೊಳ್ಳಲೂ ಆಗದೆ ಒದ್ದಾಡುತ್ತೇವೆ.
ಆಗ ನಮ್ಮ ಮನಸ್ಸು ವಾಪಾಸು ಫೋನು ಎತ್ತಿಕೊಳ್ಳಲು ಎಂತೆಂಥಾ ಕಳ್ಳ ನೆಪಗಳನ್ನ ಹುಡುಕುತ್ತದೆ, ಜಂಕ್ ಫುಡ್‌ಗಾಗಿ ಗೋಗರೆಯುವ ನಾಲ್ಕು ವರ್ಷದ ಮಗುವಿನ ಹಾಗೆ ಹೇಗೆಲ್ಲಾ ರಚ್ಚೆ ಹಿಡಿಯುತ್ತದೆ ಎನ್ನುವುದು ಗೊತ್ತಾಗುತ್ತದೆ.
ಇದಕ್ಕಿರುವ ಏಕೈಕ ಪರಿಹಾರವೆಂದರೆ ಮೊದಲು ನಾವು ನಮ್ಮನ್ನು ಹುಡುಕಿಕೊಂಡು ಬರುವ ‘ಬೋರ್ ಡಮ್’ ಅನ್ನು ಎರಡು ಕೈಯಿಂದ ಬಾಚಿ ತಬ್ಬಿಕೊಳ್ಳುವುದು. ಮನುಷ್ಯನಿಗೆ ಬೋರ್ ಆದಾಗಲೆ ಏನನ್ನಾದರೂ ಹೊಸದನ್ನು ಮಾಡುವ ಹುಮ್ಮಸ್ಸು ಬರುವುದು. ಆ ಖಾಲಿ ಕೂತ ಸಮಯದಲ್ಲಿ ಒಂದು ಹೊಸ ಅಡಿಗೆಯೋ, ಎದುರುಗಡೆ ಮನೆಯವರ ಜೊತೆ ಎರಡು ಮಾತು, ಎಂದೋ ತಂದಿಟ್ಟಪುಸ್ತಕದ ಮೂರು ಪೇಜು ಓದಿದರೆ ಮನಸ್ಸು ಎಷ್ಟುಪುಳಕಗೊಳ್ಳುತ್ತದೆ ಎನ್ನುವುದು ನಮಗೇ ಅರಿವಾಗುತ್ತದೆ.
Improve General Knowledge: ಸ್ಪರ್ಧಾತ್ಮಕ ಪರೀಕ್ಷೆಗೆ ಸಾಮಾನ್ಯ ಜ್ಞಾನ ಹೆಚ್ಚಿಸಿಕೊಳ್ಳುವುದು ಹೇಗೆ?
ಸೋಷಿಯಲ್ ಮೀಡಿಯಾಗಳು ಬಂದ ಮೇಲೆ ನಾವು ನಮ್ಮ ಕೆಲಸ ಮಾಡುವುದಕ್ಕಿಂತ ಜನ ನಮ್ಮನ್ನು ಹೇಗೆ ನೋಡಬೇಕು ಮತ್ತು ಅದಕ್ಕೆ ಏನೆಲ್ಲಾ ಸರ್ಕಸ್ಸು ಮಾಡಬೇಕು ಎನ್ನುವುದರ ಬಗ್ಗೆಯೇ ಹೆಚ್ಚು ಗಮನ ಕೊಟ್ಟಿದ್ದೇವೆ. ಆ ನಮ್ಮ ಇಮೇಜ್ ಅಥವಾ ‘ಸೋಷಿಯಲ್ ಮೀಡಿಯಾ ಅವತಾರ್’ ಅನ್ನು ಉಳಿಸಿಕೊಳ್ಳುವ ಬೆಳೆಸಿಕೊಳ್ಳುವ ಆತುರದಲ್ಲಿ ಆ ಆ್ಯಪ್‌ಗಳು ಆ್ಯಂಕ್ಸೈಟಿ, ಡಿಪ್ರೆಶನ್‌ಗಳ ರೂಪದಲ್ಲಿ ನಮ್ಮ ಮಾನಸಿಕ ಆರೋಗ್ಯವನ್ನ ಯಾವ ಮಟ್ಟಿಗೆ ಹದಗೆಡಿಸಿವೆ ಎನ್ನುವುದೇ ನಮಗೆ ಗೊತ್ತಾಗಿಲ್ಲ. ಗಂಟೆಗಟ್ಟಲೆ ಗಮನಕೊಟ್ಟು ಒಂದೇ ಕೆಲಸ ಮಾಡಿ ಮುಗಿಸುತ್ತಿದ್ದ ನಾವು ಈಗ ಹತ್ತು ನಿಮಿಷಕ್ಕೊಮ್ಮೆ ಫೋನ್ ತೆಗೆದು ಇನ್‌ಸ್ಟಾಗ್ರಾಮಲ್ಲಿ ರೀಲ್ ನೋಡುತ್ತಾ ಕೂರುತ್ತೇವೆ. ನಮ್ಮ ಅಟೆನ್ಷನ್ ಸ್ಪಾ್ಯನ್ ಪಾತಾಳ ಮುಟ್ಟಿದೆ. ಸೋಷಿಯಲ್ ಮೀಡಿಯಾಗಳಿಂದ ಕೆಲವು ಅನುಕೂಲಗಳಿದ್ದರೂ ಅವು ನಮಗೆ ಮಾಡುತ್ತಿರುವ ಹಾನಿಯ ಮುಂದೆ ಅದು ಏನೇನೂ ಅಲ್ಲ.
ಲಂಕೇಶ್, ಲೇಖಕ ಹೆಮಿಂಗ್‌ವೇ ಬಗ್ಗೆ ಬರೆದ ಒಂದು ಲೇಖನದಲ್ಲಿ, ‘ಮನುಷ್ಯ ವೈಯುಕ್ತಿಕ ಮತ್ತು ಸಾರ್ವಜನಿಕ, ಸಾರ್ವಜನಿಕವಾಗಿ ಬದುಕುತ್ತಾ ಹೋದಷ್ಟುಅವನ ಭಾಷೆ ಸೊರಗುತ್ತದೆ, ಮಾತಿಗೆ ಹಳಸಲು ವಾಸನೆ ಬರುತ್ತದೆ, ವಿಚಾರಗಳು ಸತ್ತು ಹೋಗುತ್ತವೆ. ಮನುಷ್ಯ ಅಂತಹ ದಿವಂಗತ ಸ್ಥಿತಿಯಿಂದ ದೂರವಿರಲು ಪ್ರಯತ್ನಿಸಬೇಕು’ ಎಂದು ಬರೆದಿದ್ದಾರೆ.
ನಾವು ಕೂಡ ನಮ್ಮ ಭಾಷೆ ಸೊರಗುವ ಮುನ್ನ ಮಾತು ಹಳಸುವ ಮನ್ನ, ಕೃತಕ ಬುದ್ಧಿಮತ್ತೆಯಿಂದಲೇ ಕಟ್ಟುತ್ತಿರುವ ಸೋಷಿಯಲ್ ಮೀಡಿಯಾ ಎಂಬ ಆ ಕೃತಕ ಲೋಕದಿಂದ ಒಂದಿಷ್ಟುದಿನ ಹೊರಗಿದ್ದು, ಫೋನನ್ನು ಎಷ್ಟುಬೇಕು ಅಷ್ಟಕ್ಕೆ ಬಳಸಿ ಒಂದಿಷ್ಟುಗಾಳಿ ಬೆಳಕು ತೆಗೆದುಕೊಂಡು ಮತ್ತೆ ಮೊದಲಿನ ಹುಮ್ಮಸ್ಸಿಗೆ ಮರಳುವುದಕ್ಕೆ ಇದು ಸಕಾಲ.