ಚೀನಾದಲ್ಲಿ ಕೋವಿಡ್‌ಗೆ ಇನ್ನೂ 20 ಲಕ್ಷ ಮಂದಿ ಬಲಿಯಾಗುವ ಆತಂಕ ಎದುರಾಗಿದೆ. ಹೀಗಾಗಿ ನಿರ್ಬಂಧ ಸಡಿಲಿಕೆಯಿಂದ ಭಾರೀ ಅಪಾಯ ಎದುರಾಗಲಿದೆ ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ. ಚೀನಾದಲ್ಲಿರುವುದು ಅಂತಾರಾಷ್ಟ್ರೀಯ ಮಾನ್ಯತೆ ಇರದ ಲಸಿಕೆ. ಅದಲ್ಲದೆ ಹೆಚ್ಚಿನ ಚೀನೀಯರು ಕೋವಿಡ್ ಬೂಸ್ಟರ್ ಡೋಸ್ ಪಡೆದಿಲ್ಲವಾದ ಕಾರಣ ಸಾವಿನ ಪ್ರಮಾಣ ಹೆಚ್ಚಾಗಲಿದೆ ಎಂದು ಹೇಳಲಾಗಿದೆ.
ಬೀಜಿಂಗ್/ಶಾಂಘೈ: ಜನರ ಭಾರೀ ಪ್ರತಿಭಟನೆಗೆ ಮಣಿದು ಚೀನಾದ ಕಮ್ಯುನಿಸ್ಟ್ ಸರ್ಕಾರ ತನ್ನ ಶೂನ್ಯ ಕೋವಿಡ್ ನೀತಿಯನ್ನು ಹಿಂಪಡೆದುಕೊಂಡಿದೆ ಹಾಗೂ ಕಠಿಣ ನಿರ್ಬಂಧಗಳ ಸಡಲಿಕೆಗೆ ಮುಂದಾಗಿದೆ. ಹೀಗಾಗಿ, ಕಠಿಣ ಕೋವಿಡ್ ನಿಯಮಗಳಿಂದ ಬೇಸತ್ತಿದ್ದ ಜನರು ಸರ್ಕಾರದ ನಿರ್ಧಾರ ಸ್ವಾಗತಿಸಿದ್ದಾರೆ. ಆದರೆ ತಜ್ಞರು (Experts) ಬೇರೆ ವಿಷಯವನ್ನೇ ಹೇಳಿದ್ದಾರೆ. ಚೀನಾ ಸರ್ಕಾರ ಲಾಕ್‌ಡೌನ್ ಅನ್ನು ಸಂಪೂರ್ಣವಾಗಿ ತೆರವುಗೊಳಿಸಿದರೆ ಹಾಗೂ ಆರೋಗ್ಯ (Health) ಮೂಲಸೌಕರ‍್ಯ ವೃದ್ಧಿಸದಿದ್ದರೆ 20 ಲಕ್ಷಕ್ಕೂ ಹೆಚ್ಚು ಜನ ಕೋವಿಡ್‌ಗೆ ಬಲಿ ಆಗಬಹುದು ಎಂಬ ಸ್ಫೋಟಕ ಎಚ್ಚರಿಕೆಯನ್ನು ಅವರು ನೀಡಿದ್ದಾರೆ.
ಚೀನಾದ ಗುವಾಂಗ್‌ಸ್ಕಿಯ ಸೋಂಕು ನಿಯಂತ್ರಣ ಕೇಂದ್ರದ ಮುಖ್ಯಸ್ಥ ಝೌ ಜಿಯಾಟಂಗ್ ಈ ಬಗ್ಗೆ ಹೇಳಿಕೆ ನೀಡಿ, ‘ಪ್ರಸ್ತುತ ಚೀನಾದಲ್ಲಿನ ಲಾಕ್‌ಡೌನ್ ಅನ್ನು ಪೂರ್ಣ ಪ್ರಮಾಣದಲ್ಲಿ ಸಡಿಲಿಸಿದರೆ 20 ಲಕ್ಷಕ್ಕೂ ಹೆಚ್ಚು ಜನ ಸೋಂಕಿತರು ಸಾವಿಗೀಡಾಗಬಹುದು, ದಿನೇ ದಿನೇ ಚೀನಾದಲ್ಲಿ ವರದಿಯಾಗುತ್ತಿರುವ ಸಾರ್ವಕಾಲಿಕ ಗರಿಷ್ಠ ಕೇಸುಗಳು ಭಾರೀ ಪ್ರಮಾಣದ ಸಾವಿಗೆ (Death) ಮುನ್ನಡಿ ಬರೆಯಬಹುದು’ ಎಂದಿದ್ದಾರೆ. ತಮ್ಮ ಈ ವಾದಕ್ಕೆ ಅವರು ಹಲವು ಕಾರಣವನ್ನೂ ನೀಡಿದ್ದಾರೆ. ಬ್ರಿಟನ್‌ನ ಏರ್‌ಫಿನಿಟಿ ಸಂಸ್ಥೆ ಕೂಡಾ ಇದೇ ಆತಂಕ ವ್ಯಕ್ತಪಡಿಸಿದೆ.
China: ಚೀನಾದಲ್ಲಿ ಕೊರೋನಾ ರೌದ್ರ ನರ್ತನ: ಮತ್ತೆ ಲಾಕ್ ಡೌನ್, ದಂಗೆ ಎದ್ದ ಜನ
ಸಾವು ಹೆಚ್ಚಳದ ಆತಂಕಕ್ಕೆ ಏನು ಕಾರಣ ?
ಕಳೆದ ಹಲವಾರು ದಿನಗಳಿಂದ ಚೀನಾದಲ್ಲಿ ಸಾರ್ವಕಾಲಿಕ ಗರಿಷ್ಠ ಕೇಸುಗಳು ವರದಿಯಾಗುತ್ತಿವೆ. ಇದಕ್ಕೆ ಕಾರಣ ಚೀನಾದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಬೂಸ್ಟರ್ ಡೋಸುಗಳನ್ನೇ ಪಡೆದಿಲ್ಲ. ಅಲ್ಲದೆ, ಪಡೆದ 2 ಲಸಿಕೆಗಳು ಕೂಡ ಅಂತಾರಾಷ್ಟ್ರೀಯ ಮನ್ನಣೆ ಪಡೆದಿಲ್ಲ. ಪಾಕಿಸ್ತಾನ ಸೇರಿ ಕೆಲವೇ ಕೆಲವು ದೇಶಗಳು ಚೀನಾ ಲಸಿಕೆಯನ್ನು ಸ್ವೀಕರಿಸಿವೆ. ಇದೇ ವೇಳೆ, ಚೀನಾ ಆರೋಗ್ಯ ವ್ಯವಸ್ಥೆಗಳು ಏಕಕಾಲದಲ್ಲಿ ಭಾರೀ ಪ್ರಮಾಣದ ಸೋಂಕಿತರನ್ನು ನಿಭಾಯಿಸುವಷ್ಟುಸಮರ್ಥವಾಗಿಲ್ಲ. ಇದಲ್ಲದೇ ಜನರಲ್ಲಿ ಈವರೆಗೂ ಕೋವಿಡ್ ವಿರುದ್ಧ ಪ್ರಬಲ ಪ್ರತಿಕಾಯಗಳ ಕೊರತೆಯಿದೆ ಎಂದು ತಜ್ಞರು ಹೇಳಿದ್ದಾರೆ.
ಇವೆಲ್ಲವುಗಳ ನಡುವೆಯೂ ಸರ್ಕಾರ ಜನರ ಒತ್ತಾಯ ಹಾಗೂ ಆರ್ಥಿಕತೆ ಕುಸಿತದಿಂದಾಗಿ ಲಾಕ್‌ಡೌನ್ ನಿರ್ಬಂಧಗಳನ್ನು ತೆರವುಗೊಳಿಸಿದೆ. ಈಗಲಾದರೂ ಸರ್ಕಾರ ತೀವ್ರಗತಿಯಲ್ಲಿ ಲಸಿಕಾಕರಣ ಅಭಿಯಾನ ನಡೆಸಿ, ಆರೋಗ್ಯ ಸೌಕರ್ಯಗಳನ್ನು ಅಭಿವೃದ್ಧಿ ಪಡಿಸಬೇಕು. ಇಲ್ಲದೇ ಇದ್ದರೆ ಐಸಿಯುಗೆ ದಾಖಲಾಗಲು ಇಚ್ಛಿಸುವ ರೋಗಿಗಳ (Patients) ಸಂಖ್ಯೆ ಸಾಮರ್ಥ್ಯಕ್ಕಿಂತ 15 ಪಟ್ಟು ಹೆಚ್ಚಬಹುದು ಎಂದು ಚೀನಾದ ಫುಡಾನ್ ವಿವಿ ಹೇಳಿದೆ.
ಕರೋನಾ ನಂತರ ದುಪ್ಪಟ್ಟು ವೇಗದಲ್ಲಿ ಹೆಚ್ಚುತ್ತಿದೆ ಈ ರೋಗ, ಎಚ್ಚರವಿರಲಿ!
ಇನ್ನು, ‘ಶೂನ್ಯ ಕೋವಿಡ್ ನೀತಿ ಸಡಿಲಿಕೆ ಹಾಗೂ ಲಸಿಕಾಕರಣದ ನಿಧಾನಗತಿ ಪರಿಣಾಮ 13ರಿಂದ 21 ಲಕ್ಷ ಜನ ಸೋಂಕಿತರ ಸಾವಿಗೆ ಕಾರಣವಾಗಬಹುದು’ ಎಂದು ಬ್ರಿಟನ್‌ನ ಏರ್‌ಫಿನಿಟಿ ಸಂಸ್ಥೆ ಹೇಳಿದೆ. ಹಾಂಕಾಂಗ್‌ನಲ್ಲಿ ಕೂಡ ಕಳೆದ ಫೆಬ್ರವರಿಯಲ್ಲಿ ಕೋವಿಡ್ ನಿರ್ಬಂಧ ಸಡಿಲಿಸಲಾಗಿತ್ತು. ಆಗ ಕೂಡ ಬಿಎ.1 ಕೋವಿಡ್ ತಳಿಯ ಆರ್ಭಟದ ಬಗ್ಗೆ ತಾನು ಮುನ್ಸೂಚನೆ ನೀಡಿದ್ದಾಗಿ ಅದು ಹೇಳಿಕೊಂಡಿದೆ.
ಲಾಕ್‌ಡೌನ್ ನೀತಿ ವಿರೋಧಿಸಿ ಪ್ರತಿಭಟನೆ ನಡೆಸಿದ್ದ ಜನರು
ಚೀನಾದಲ್ಲಿ ಅತೀಯಾದ ಲಾಕ್‌ಡೌನ್ ನೀತಿಗೆ ರೋಸಿ ಹೋಗಿರುವ ಜನರು ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದ್ದರು. ಕಾಲೇಜು ವಿದ್ಯಾರ್ಥಿಗಳು ಈ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಪ್ರತಿಭಟನೆ ಹತ್ತಿಕ್ಕಲು ಗುಂಡಿನ ದಾಳಿಗಳು ನಡೆದಿದ್ದವು. ಕೆಲ ಪ್ರತಿಭಟನಾಕಾರರು ಮೃತಪಟ್ಟಿದ್ದರೆ, ಹಲವರು ಗಾಯಗೊಂಡಿದ್ದರು. ಭಾರಿ ಪ್ರತಿಭಟನೆ ಬೆನ್ನಲ್ಲೇ ಇತ್ತ ಚೀನಾದಲ್ಲಿ ದಾಖಲೆಯ ಮಟ್ಟದಲ್ಲಿ ಕೊರೋನಾ ಪ್ರಕರಣ ಸಂಖ್ಯೆ ಏರಿಕೆಯಾಗಿದೆ. ಒಂದೇ ದಿನ 40,000ಕ್ಕೂ ಕೋವಿಡ್ ಪ್ರಕರಣ ದಾಖಲಾಗಿತ್ತು. ಇದರ ಪರಿಣಾಮ ಚೀನಾ ರಾಜಧಾನಿ ಬೀಜಿಂಗ್ ಸೇರಿದಂತೆ ಕೆಲ ನಗರದಲ್ಲಿ ಹೊಸದಾಗಿ ಲಾಕ್‌ಡೌನ್ ಹೇರಲಾಗಿತ್ತು. ಹೀಗಾಗಿ ಹಲವು ನಿರ್ಬಂಧಗಳನ್ನು ಹೇರಲಾಗಿತ್ತು.
ಚೀನಾದಲ್ಲಿನ ಕೋವಿಡ್ ಪ್ರಕರಣಗಳ ಏರಿಕೆ ಇದೀಗ ಇತರ ರಾಷ್ಟ್ರಗಳಿಗೂ ಎಚ್ಚರಿಕೆ ಕರೆಗಂಟೆಯಾಗಿದೆ. 2019ರ ಅಂತ್ಯದಲ್ಲಿ ಚೀನಾದಲ್ಲಿ ಆರಂಭಗೊಂಡ ಕೊರೋನಾ ಇಡೀ ವಿಶ್ವಕ್ಕೆ ಹಬ್ಬಿ ಸ್ಥಗಿತಗೊಂಡಿತ್ತು. ಇದೀಗ ಇತರ ಎಲ್ಲಾ ದೇಶದಲ್ಲಿ ಕೋವಿಡ್ ನಿಯಂತ್ರಣದಲ್ಲಿದೆ. ಭಾರತ ಬಹುತೇಕ ಕೋವಿಡ್ ವೈರಸ್ ಮೆಟ್ಟಿನಿಂತಿದೆ. ಇದೀಗ ಚೀನಾದಲ್ಲಿ ಮತ್ತೆ ಕೋವಿಡ್ ಸ್ಫೋಟಗೊಂಡಿದೆ.