ಸೂಕ್ಷ್ಮವಾಗಿ ಗಮನಿಸಿ ಇದು ಡಿಪ್ರೆಶನ್‌ ಲಕ್ಷಣಗಳಿರಬಹುದು!

By Suvarna NewsFirst Published Jan 3, 2020, 3:42 PM IST
Highlights

ಖಿನ್ನತೆ ಬದುಕಿನ ಒಂದಲ್ಲ ಒಂದು ಹಂತದಲ್ಲಿ ಯಾರನ್ನು ಬೇಕಿದ್ದರೂ ಆವರಿಸಬಹುದು. ಇದನ್ನು ಗುರುತಿಸಲು ಕೆಲವು ಲಕ್ಷಣಗಳಿವೆ. ಅವು ನಿಮಗಿದೆಯಾ ಚೆಕ್‌ ಮಾಡಿಕೊಳ್ಳಿ.

ದುಃಖ, ಹತಾಶೆ, ಖಾಲಿ ಖಾಲಿ ಅನಿಸುವುದು, ದಿನದ ಚಟುವಟಿಕೆಗಳಲ್ಲಿ ಆಸಕ್ತಿ ಕಳೆದುಕೊಳ್ಳುವುದು ಇವೆಲ್ಲ ಖಿನ್ನತೆಯ ನೇರವಾದ ಗುರುತುಗಳು. ವು ಕೆಲವೊಮ್ಮೆ ಅಷ್ಟಕ್ಕೇ ಮುಗಿಯುತ್ತವೆ. ಇವು ಹೆಚ್ಚೇನೂ ಅಪಾಯಕಾರಿಯಲ್ಲ. ಆದರೆ ಇದು ಹೆಚ್ಚಾದಾಗ ಆತಂಕಕಾರಿ. ಕೆಲವೊಮ್ಮೆ ಇನ್ನಷ್ಟು ಸ್ಪಷ್ಟವಾದ ಖಿನ್ನತೆಯ ಲಕ್ಷಣಗಳು ಕಾಣಿಸಬಹುದು. ಕೆಲವೊಮ್ಮೆ ಅವು ತುಂಬ ಸೂಕ್ಷ್ಮ ವಾಗಿರುತ್ತದೆ. ಇಂಥ ಸೂಕ್ಷ್ಮ ಲಕ್ಷಣಗಳು ಇತರ ನೇರ ಲಕ್ಷಣಗಳ ಜೊತೆಗೆ ಸೇರಿಕೊಂಡು ಪ್ರಕಟವಾದರೆ ಅದು ಡಿಪ್ರೆಶನ್‌ ಅಂತ ತಿಳಿಯಬೇಕು. ಅಂಥ ಕೆಲವು ಸೂಕ್ಷ್ಮ ಲಕ್ಷಣಗಳು ಹೀಗಿವೆ.

ಖಿನ್ನತೆ ಗೆಲ್ಲುವುದು ಹೇಗೆ? ದೀಪಿಕಾ ಕೊಟ್ಟ ಮದ್ದಿದು!

ದೈಹಿಕ ನೋವು

ಖಿನ್ನತೆಗೆ ಒಳಗಾದ ಜನರಲ್ಲಿ ದೈಹಿಕ ನೋವಿನ ದೂರುಗಳು ಸಾಮಾನ್ಯ. ಬೆನ್ನು ನೋವು, ಕೀಲು ನೋವು ಮತ್ತು ಕಾಲು ನೋವು ಇವೆಲ್ಲವೂ ಖಿನ್ನತೆಯ ಲಕ್ಷ ಣಗಳು. ಚಿಕಿತ್ಸೆ ನೀಡದೆ ಹೋದರೆ ಇದು ದೀರ್ಘಕಾಲದ ನೋವಿಗೆ ಕಾರಣವಾಗಬಹುದು. ನೋವು ಮತ್ತು ಡಿಪ್ರೆಶನ್‌ ನಡುವೆ ನರವ್ಯವಸ್ಥೆಯ ಸಂಬಂಧವಿದೆ. ನೋವು ಅಧಿಕವಾಗಿದ್ದಷ್ಟೂ ಡಿಪ್ರೆಶನ್‌ ಹೆಚ್ಚಿರಬಹುದು, ಇದನ್ನು ಕಡೆಗಣಿಸಬಾರದು.

ಸಣ್ಣದಕ್ಕೂ ಕಿರಿಕಿರಿ

ಸಣ್ಣದೊಂದು ವಿಚಾರ ಕೂಡ ನಿಮ್ಮನ್ನು ಕಿರಿಕಿರಿಗೊಳಪಡಿಸಿ, ಕೋಪ ಉಂಟಾಗುವಂತೆ ಮಾಡುತ್ತಿದೆಯಾ? ಜಿಗುಪ್ಸೆಯ ಭಾವನೆಯೂ ಮರುಕಳಿಸುತ್ತದೆಯಾ? ಹಾಗಿದ್ದರೆ ನೀವು ಖಿನ್ನತೆಯೊಂದಿಗೆ ಹೋರಾಡುತ್ತಿರಬಹುದು. ಈ ಲಕ್ಷ ಣಗಳು ಖಿನ್ನತೆಗೆ ಒಳಗಾದ ಜನರಲ್ಲಿ ಹೆಚ್ಚು ಕಂಡುಬಂದಿವೆ. ಖಿನ್ನತೆಯ ತೀವ್ರತೆ, ಅವಧಿ, ಇವುಗಳೊಂದಿಗೆ ಸಂಬಂಧ ಹೊಂದಿದೆ.

ಹೆಚ್ಚು ಆಲ್ಕೊಹಾಲ್‌ ಸೇವನೆ

ವಾರಕ್ಕೊಮ್ಮೆಯೋತಿಂಗಳಿಗೊಮ್ಮೆಯೋ ಲಿಕ್ಕರ್‌ ತೆಗೆದುಕೊಳ್ಳುವುದು ನಾರ್ಮಲ್‌. ಆದರೆ ನೀವು ಪ್ರತಿದಿನ ರಾತ್ರಿ ಕುಡಿಯಬೇಕು ಅನಿಸಿದರೆ, ಈಗಾಗಲೇ ನೀವು ಕುಡಿಯುತ್ತಿದ್ದರೆ, ಅದರಿಂದ ಹೊರಬರಲು ಸಾಧ್ಯವಾಗುತ್ತಿಲ್ಲ ಅನಿಸಿದರೆ, ಇದರಿಂದ ಕಚೇರಿಯಲ್ಲೂ ಕಿರಿಕಿರಿಗೆ ಒಳಗಾಗುತ್ತಿದ್ದರೆ ನೀವು ಡಿಪ್ರೆಶನ್‌ ಎದುರಿಸುತ್ತಿರುವ ಸಾಧ್ಯತೆಯಿದೆ. ಭಾರಿ ಮದ್ಯಪಾನ ಮತ್ತು ಖಿನ್ನತೆಯ ನಡುವಿನ ಸಂಬಂಧ ಸಂಕೀರ್ಣವಾದ್ದು. ಕೆಲವರು ಡಿಪ್ರೆಶನ್‌ ನಿಭಾಯಿಸಲು ಲಿಕ್ಕರ್‌ ತೆಗೆದುಕೊಳ್ಳಬಹುದು. ಆದರೆ ಹೆಚ್ಚು ಆಲ್ಕೊಹಾಲ್‌ ಬಳಕೆಯು ಖಿನ್ನತೆಯನ್ನು ಮತ್ತಷ್ಟು ಪ್ರಚೋದಿಸುತ್ತದೆ.

ಡಿಪ್ರೆಷನ್ ಇದೆ ಎನ್ನೋದು ಗೊತ್ತಾಗೋದು ಹೇಗೆ?

ದೇಹತೂಕದಲ್ಲಿ ಭಾರಿ ಬದಲಾವಣೆ

ದೇಹತೂಕದಲ್ಲಿ ತುಂಬಾ ಇಳಿಕೆಯಾಗುವುದು ಅಥವಾ ತುಂಬಾ ಹೆಚ್ಚಾಗುವುದು ಅಪಾಯಕಾರಿ. ಒಂದು ತಿಂಗಳಲ್ಲಿ ದೇಹದ ತೂಕದ 5 ಶೇಕಡಕ್ಕಿಂತ ಹೆಚ್ಚು ಬದಲಾವಣೆ ಆಗಬಾರದು. ಖಿನ್ನತೆಯು ನೀವು ಅತಿಯಾಗಿ ಆಹಾರ ಸೇವಿಸುವಂತೆ ತಿನ್ನುವಂತೆ ಮಾಡುತ್ತದೆ. ಒತ್ತಡದಲ್ಲಿದ್ದಾಗ ಆಹಾರವನ್ನು ಹಂಬಲಿಸುವುದು ಸಾಮಾನ್ಯವಾದರೂ, ತೂಕ ಇಳಿಸುವಿಕೆ ಅಥವಾ ಹೆಚ್ಚಳಕ್ಕೆ ಕಾರಣವಾಗುವ ಹಸಿವಿನ ಬದಲಾವಣೆಗೂ ಖಿನ್ನತೆಗೂ ಸಂಬಂಧವಿದೆ.

ಸ್ನಾನ ಮಾಡಲು ಮರೆತಿರಾ?

ನಿಮ್ಮ ದೇಹದ ಆರೈಕೆ ಮಾಡಿಕೊಳ್ಳುವುದು, ಸ್ನಾನ ಮಾಡುವುದು, ಹಲ್ಲುಜ್ಜುವುದು, ಕೂದಲು ಬಾಚುವುದು ಇವನ್ನೆಲ್ಲ ಮರೆಯುತ್ತಿದ್ದೀರಿ ಅಂದರೆ ಡಿಪ್ರೆಶನ್‌ನ ಬಾಗಿಲಿನಲ್ಲಿ ಇದ್ದೀರಿ ಎಂದರ್ಥ. ಕೆಲವೊಮ್ಮೆ ಹಾಸಿಗೆಯಿಂದ ಏಳಲು ಕೂಡ ಮೂಡ್‌ ಇಲ್ಲದಿರಬಹುದು. ಅಂಥ ಸಂದರ್ಭದಲ್ಲಿ ಪ್ರಜ್ಞಾಪೂರ್ವಕವಾಗಿ ಈ ಕೆಲಸಗಳನ್ನು ಮಾಡಬೇಕು, ಇದನ್ನೊಂದು ರೂಢಿಯಾಗಿ ಮಾಡಿಕೊಳ್ಳಬೇಕು. ರೂಢಿ ಮರೆತರೂ ಕೂಡ ಡಿಪ್ರೆಶನ್‌ನ ಬಗ್ಗೆ ಎಚ್ಚರವಿರಬೇಕು.

ನಿರ್ಧಾರ ತೆಗೆದುಕೊಳ್ಳದ ಮನಸ್ಥಿತಿ

ಡಿಪ್ರೆಶನ್‌ ನಿಮ್ಮಲ್ಲಿ ಯಾವುದೇ ಏಕಾಗ್ರತೆ ಸಾಧ್ಯವಾಗದಂತೆ, ಯಾವುದೇ ವಿಷಯದಲ್ಲಿ ನಿರ್ಧಾರ ತೆಗೆದುಕೊಳ್ಳಲಾಗದಂತೆ ಮಾಡುತ್ತದೆ. ಏಕಾಗ್ರತೆಯ ಸಾಮರ್ಥ್ಯ‌ವನ್ನು ಕುಗ್ಗಿಸುತ್ತದೆ. ಅದು ಬೆಳಗ್ಗೆ ಕಾಫಿ ಕುಡಿಯಬೇಕೋ ಬೇಡವೋ ಎಂಬ ಕ್ಷುಲ್ಲಕ ವಿಚಾರದಿಂದ ಹಿಡಿದು ಆಫೀಸ್‌ಗೆ ಹೋಗಬೇಕೋ ಬೇಡವೋ ಎಂಬ ಮಹತ್ವದ ವಿಚಾರದ ಬಗ್ಗೆಯೂ ಇರಬಹುದು.

ಸಕ್ಕರೆ ಮೇಲೆ ಅಕ್ಕರೆ ಹೆಚ್ಚಿದ್ರೆ ಖಿನ್ನತೆ ಕಾಡಿತು ಜೋಕೆ!

ಕೀಳರಿಮೆ, ತಪ್ಪಿತಸ್ಥ ಭಾವನೆ

ಪ್ರತಿಯೊಂದು ಸಣ್ಣ ವಿಷಯಕ್ಕೂ ನೀವು ಕ್ಷ ಮೆ ಯಾಚಿಸುತ್ತೀರಾ? ಪ್ರತಿದಿನವೂ ತಪ್ಪಿತಸ್ಥ ಭಾವನೆಗಳಲ್ಲಿ ತೊಳಲಾಡುತ್ತೀರಾ? ಜೀವನದಲ್ಲಿ ಹಿಂದೆಂದೋ ಮಾಡಿದ, ಈಗ ಅಗತ್ಯವೂ ಇಲ್ಲದ ಸಣ್ಣಪುಟ್ಟ ತಪ್ಪುಗಳು ಕೂಡ ಈಗ ನೆನಪಾಗಿ ನೀವು ಪದೇ ಪದೆ ಅಳುವಂತೆ ಮಾಡುತ್ತಿದ್ದರೆ ಅದು ಖಿನ್ನತೆಯ ಚಿಹ್ನೆಯೇ ಹೊರತು ಮತ್ತೇನಲ್ಲ. ಅತಿಯಾದ ದುಃಖದ ಭಾವನೆಯು ಖಿನ್ನತೆಯ ಲಕ್ಷಣಗಳಲ್ಲೊಂದು.

ಮೇಲಿನ ಲಕ್ಷ ಣಗಳು ಕಾಲಾನಂತರದಲ್ಲಿ ಬೆಳೆಯಬಹುದು ಮತ್ತು ಕೆಲವೊಮ್ಮೆ ಇವುಗಳನ್ನು ಗುರುತಿಸುವುದು ಕಷ್ಟ. ಈ ಲಕ್ಷ ಣಗಳು ನಿಮ್ಮ ಸಾಮಾಜಿಕ, ಔದ್ಯೋಗಿಕ ಮತ್ತಿತರ ಕಾರ್ಯಚಟುವಟಿಕೆಗಳನ್ನು ದುರ್ಬಲಗೊಳಿಸುತ್ತವೆ ಎಂದು ನೀವು ಕಂಡುಕೊಂಡರೆ, ಚಿಕಿತ್ಸೆ ಪಡೆದುಕೊಳ್ಳುವುದು ಮರೆಯಬೇಡಿ. ಎಷ್ಟು ಬೇಗ ಟ್ರೀಟ್‌ಮೆಂಟ್‌ ತಗೊಳ್ತೀರೋ ಅಷ್ಟು ಒಳ್ಲೆಯದು.

click me!