ಗುರುವಾರ ಹೋರಿ ಬೆದರಿಸುವ ಕ್ರೀಡೆಯಲ್ಲಿ ಹೋರಿ ತಿವಿತಕ್ಕೆ ಬಲಿಯಾಗಿದ್ದ ಯುವಕ | ಜಮೀನಿನಲ್ಲಿ ಹೋರಿ ಮೇಯಿಸುತ್ತಿದ್ದಾಗ ಎಂದು ಪ್ರಕರಣ ದಾಖಲಿಸಿದ ಪೊಲೀಸರು | ಗ್ರಾಮೀಣ ಕ್ರೀಡೆ ಹೆಸರಿನಲ್ಲಿ ನಡೆಯುವ ಹೋರಿ ಬೆದರಿಸುವ ಸ್ಪರ್ಧೆ | ಸಂಘಟಕರ ಮೇಲೆ ಕ್ರಮ ಕೈಗೊಳ್ಳದ ಪೊಲೀಸ್ ಇಲಾಖೆ|
ಹಾವೇರಿ[ನ.2]: ದೀಪಾವಳಿಯಿಂದ ಸಂಕ್ರಾಂತಿವರೆಗೂ ಜಿಲ್ಲೆಯ ಗ್ರಾಮೀಣ ಭಾಗಗಳಲ್ಲಿ ಕೊಬ್ಬರಿ ಹೋರಿ ಸ್ಪರ್ಧೆಯದ್ದೇ ಮಾತು. ಜಲ್ಲಿಕಟ್ಟು, ಕಂಬಳ ಇತ್ಯಾದಿ ಗ್ರಾಮೀಣ ಕ್ರೀಡೆಗಳಂತೆ ಜಿಲ್ಲೆಯಲ್ಲಿ ಕೊಬ್ಬರಿ ಹೋರಿ ಬೆದರಿಸುವ ಸ್ಪರ್ಧೆಗೆ ಸಾಂಸ್ಕೃತಿಕ ಮಹತ್ವವಿದೆ. ಆದರೆ, ಇದರಲ್ಲಿ ಅಮಾಯಕ ಯುವಕರು ಪ್ರಾಣ ಕಳೆದುಕೊಳ್ಳುತ್ತಿದ್ದರೂ ಪೊಲೀಸ್ ಇಲಾಖೆ ಮೌನವಹಿಸುತ್ತಿದೆ. ಅಲ್ಲದೇ ಇದನ್ನು ಮರೆಮಾಚಿ ಎಫ್‌ಐಆರ್ ದಾಖಲಿಸುತ್ತಿದೆ.
‘ಹೊನ್ನಾಳಿ ಹುಲಿ’ಗೆ ತಿವಿದ ಹೋರಿ; ಶಾಸಕ ರೇಣುಕಾಚಾರ್ಯ ಗಲಿಬಿಲಿ!
ಹಾನಗಲ್ಲ ತಾಲೂಕಿನ ನರೇಗಲ್ ಗ್ರಾಮದಲ್ಲಿ ವರ್ದಿ ಗ್ರಾಮದ ಯುವಕ ಸುನೀಲ ಗಾಣಿಗೇರ ಎಂಬಾತ ಗುರುವಾರವಷ್ಟೇ ಕೊಬ್ಬರಿ ಹೋರಿ ಓಡಿಸುವ ಸ್ಪರ್ಧೆ ವೇಳೆ ಹೋರಿ ತಿವಿದು ಮೃತಪಟ್ಟಿರುವ ಸಂಗತಿ ಜಗಜ್ಜಾಹೀರಾಗಿದೆ. ಹೋರಿ ತಿವಿದ ವೀಡಿಯೋ ಕೂಡ ಎಲ್ಲ ಕಡೆ ಹರಿದಾಡುತ್ತಿದೆ. ಆದರೆ, ಇದನ್ನು ಪೊಲೀಸ್ ಇಲಾಖೆ ಸಹಜ ಪ್ರಕರಣ ಎಂಬಂತೆ ದಾಖಲಿಸಿಕೊಂಡಿದೆ. ಹೋರಿ ಸ್ಪರ್ಧೆ ಸಂಘಟಕರ ರಕ್ಷಣೆಗಾಗಿ ಈ ರೀತಿ ಮಾಡಿರುವ ಶಂಕೆ ವ್ಯಕ್ತವಾಗುತ್ತಿದೆ.
ಎಫ್‌ಐಆರ್‌ನಲ್ಲಿ ದಾಖಲಿಸಿದ್ದೇ ಬೇರೆ:
ನರೇಗಲ್ ಗ್ರಾಮದಲ್ಲಿ ದೀಪಾವಳಿ ಹಬ್ಬದ ನಿಮಿತ್ತ ಆಯೋಜಿಸಿದ್ದ ಹೋರಿ ಬೆದರಿಸುವ ಸ್ಪರ್ಧೆ ವೇಳೆ ಹೋರಿ ತಿವಿತದಿಂದ ಗಂಭೀರ ಗಾಯಗೊಂಡು ಸುನೀಲ ಎಂಬಾತ ಮೃತಪಟ್ಟಿರುವ ಸಂಗತಿ ಎಲ್ಲರಿಗೆ ಗೊತ್ತಿದೆ. ಆದರೆ, ಆಡೂರು ಠಾಣೆಯಲ್ಲಿ ಈ ಕುರಿತು ದಾಖಲಾಗಿರುವ ಎಫ್‌ಐಆರ್ ಹೇಗಿದೆ ನೋಡಿ.
‘ಅ. 310 ರಂದು ಸುನೀಲ್ ತನ್ನ ತಂದೆಯೊಂದಿಗೆ ಬೆಳಗ್ಗೆ 11 ಗಂಟೆಗೆ ಜಮೀನಿಗೆ ಎತ್ತುಗಳನ್ನು ಹೊಡೆದುಕೊಂಡು ಕೃಷಿ ಕೆಲಸ ಮುಗಿದ ಬಳಿಕ ಮಧ್ಯಾಹ್ನ 2 ಗಂಟೆ ಸುಮಾರಿಗೆ ಅವುಗಳನ್ನು ಹಿಡಿದುಕೊಂಡು ತನ್ನ ಜಮೀನಿನಲ್ಲಿ ಮೇಯಿಸುತ್ತಿರುವಾಗ ಅದರಲ್ಲಿಒಂದು ಎತ್ತು ತನ್ನ ಕೊಂಬಿನ ಮೂಲಕ ಸುನೀಲನ ಕಣ್ಣಿನ ಭಾಗದಲ್ಲಿ ಬಲವಾಗಿ ತಿವಿದಿದೆ. ಇದರಿಂದ ಗಾಯಗೊಂಡ ಆತನನ್ನು ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೇ ಮೃತ ಪಟ್ಟಿದ್ದಾನೆ’ ಎಂದು ಎಫ್‌ಐಆರ್ ದಾಖಲಿಸಲಾಗಿದೆ.
ಸಂಘಟಕರ ಮೇಲಿಲ್ಲ ಕ್ರಮ:
ಜಿಲ್ಲೆಯ ವಿವಿಧೆಡೆ ಕೊಬ್ಬರಿ ಹೋರಿ ಸ್ಪರ್ಧೆಯಲ್ಲಿ ಪಾಲ್ಗೊಂಡು ಹೋರಿ ತಿವಿತಕ್ಕೆ ಕಳೆದ ಮೂರು ವರ್ಷಗಳಲ್ಲಿ 10 ಜನ ಮೃತಪಟ್ಟಿದ್ದಾರೆ. ಕಳೆದ ವರ್ಷ ಸಂಕ್ರಾಂತಿ ವೇಳೆ ಮೂವರು ಮೃತಪಟ್ಟಿದ್ದಾರೆ. ದೀಪಾವಳಿ ಬಳಿಕ ಗ್ರಾಮೀಣ ಭಾಗದಲ್ಲಿ ಪ್ರತಿ ದಿನವೂ ಒಂದಲ್ಲ ಒಂದು ಕಡೆ ಈ ಕ್ರೀಡೆಯನ್ನು ಆಯೋಜಿಸಲಾಗುತ್ತದೆ. ಬೇರೆ ಜಿಲ್ಲೆಗಳಿಂದಲೂ ಜನ ಬಂದು ಪಾಲ್ಗೊಳ್ಳುತ್ತಾರೆ. ಅವರಲ್ಲಿ ಯುವಕರೇ ಹೆಚ್ಚು. ಹೋರಿ ತಂದವರು ಹಾಗೂ ಕೊಬ್ಬರಿ ಹರಿಯುವವರು ಸೇರಿದಂತೆ ಸಾವಿರಾರು ಜನ ಸೇರಿ ಹಬ್ಬದ ಸಂಭ್ರಮ ಆಚರಿಸುತ್ತಾರೆ. ಆದರೆ, ಸಂಘಟಕರು ಸುರಕ್ಷತೆ ಹಾಗೂ ಮುಂಜಾಗ್ರತೆ ಕ್ರಮ ಕೈಗೊಳ್ಳದೇ ಅಮಾಯಕರು ಪ್ರಾಣ ಕಳೆದುಕೊಳ್ಳುತ್ತಿರುವ ಘಟನೆಗಳು ಮರುಕಳಿಸುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಅಷ್ಟಕ್ಕೂ ಸ್ಪರ್ಧೆ ಆಯೋಜಿಸುವ ಸಂಘಟಕರು ಪೊಲೀಸರಿಂದ ಪರವಾನಗಿ ಪಡೆಯುವುದು ಹೋಗಲಿ, ಮಾಹಿತಿಯನ್ನೂ ನೀಡುವುದಿಲ್ಲವಂತೆ. ಏನಾದರೂ ಅವಘಡ ಸಂಭವಿಸಿದರೂ ತಕ್ಷಣ ಪೊಲೀಸರಿಗೆ ಮಾಹಿತಿ ನೀಡದೇ ಅಲ್ಲೇ ಪ್ರಕರಣ ಮುಚ್ಚಿ ಹಾಕುವ ಯತ್ನಗಳೇ ಹೆಚ್ಚಾಗಿ ನಡೆಯುತ್ತಿವೆ.
ಗ್ರಾಮೀಣ ಕ್ರೀಡೆ ಎಂಬ ಕಾರಣಕ್ಕೆ ಕೆಲವು ಕಡೆಗಳಲ್ಲಿ ಪೊಲೀಸರಿಗೆ ಮಾಹಿತಿ ಗೊತ್ತಿದ್ದರೂ ಸುಮ್ಮನಿರುತ್ತಾರೆ. ಪ್ರಾಣ ಹಾನಿಯಾದರೂ ಸಂಘಟಕರ ಮೇಲೆ ಪೊಲೀಸರು ಕಾನೂನು ಕ್ರಮ ಕೈಗೊಳ್ಳದೇ ಹಾಗೇ ಬಿಡುತ್ತಿದ್ದಾರೆ. ಯಾವುದೇ ಅಂಕೆ, ಅಂಕುಶ ಇಲ್ಲದ್ದರಿಂದ ಯಾರು ಎಲ್ಲಿ ಬೇಕಾದರೂ ಸ್ಪರ್ಧೆ ಆಯೋಜಿಸುತ್ತಿದ್ದಾರೆ. ಇದರಿಂದ ಮೇಲಿಂದ ಮೇಲೆ ಪ್ರಾಣ ಹಾನಿಯಂತಹ ಘಟನೆಗಳು ಮರುಕಳಿಸುತ್ತಲೇ ಇವೆ.
ಬಹುಮಾನದ ಆಮಿಷ:
ಕೊಬ್ಬರಿ ಹೋರಿ ಸ್ಪರ್ಧೆಯಲ್ಲಿ ಎರಡು ಬಗೆಯ ಬಹುಮಾನಗಳಿರುತ್ತವೆ. ಕೊರಳಿಗೆ ಕಟ್ಟಿದ ಕೊಬ್ಬರಿಯನ್ನು ಹರಿಯಲುಯಾರಿಗೂ ಸಿಗದೇ ವೇಗವಾಗಿ ಓಡುವ ಹೋರಿಗೆ ಬಹುಮಾನವಿರುತ್ತದೆ. ಅಲ್ಲದೇ, ಹೆಚ್ಚಿನ ಸಂಖ್ಯೆಯಲ್ಲಿಕೊಬ್ಬರಿ ಹರಿದವರಿಗೂ ಬಹುಮಾನ ನೀಡಲಾಗುತ್ತದೆ. ಚಿನ್ನದ ಉಂಗುರ, ದ್ವಿಚಕ್ರ ವಾಹನ ಸೇರಿದಂತೆ ಹತ್ತಾರು ಆಕರ್ಷಕ ಬಹುಮಾನಗಳನ್ನು ಇಡಲಾಗುತ್ತದೆ. ಸ್ಪರ್ಧೆಯಲ್ಲಿ ಭಾಗವಹಿಸುವುದಕ್ಕಾಗಿಯೇ ಕೆಲವರು ಹೋರಿಯನ್ನು ಪಳಗಿಸುತ್ತಾರೆ. ಹತ್ತಾರುಕಡೆ ಪ್ರಥಮ ಬಹುಮಾನ ಪಡೆದು ತನ್ನ ಒಡೆಯನಿಗೆ ಲಕ್ಷಾಂತರ ರು. ಮೌಲ್ಯದ ಬಹುಮಾನವನ್ನು ಗೆದ್ದು ಕೊಡುವ ಹೋರಿಗಳು ಇಲ್ಲಿವೆ. ಅದೇ ರೀತಿ ವೇಗವಾಗಿ ಓಡುವ ಕೊಬ್ಬಿದ ಹೋರಿಗಳ ಬೆನ್ನೇರಿ, ಕೊರಳಿಗೆ ಕೈ ಹಾಕಿ ಕೊಬ್ಬರಿ ಹರಿಯುವುದೇ ಯುವಕರಿಗೆ ದೊಡ್ಡ ಕ್ರೇಜ್. ಇದೇ ಪ್ರಾಣಕ್ಕೆ ಆಪತ್ತು ತರುತ್ತಿದೆ. ಪ್ರವೇಶ ಶುಲ್ಕದ ಹೆಸರಿನಲ್ಲಿ ಲಕ್ಷಾಂತರು ರುಪಾಯಿ ಸಂಗ್ರಹಿಸುವ ಸಂಘಟಕರು, ಸುರಕ್ಷತೆಗೆ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಗಾಯಗೊಂಡವರನ್ನು ತಕ್ಷಣ ಆಸ್ಪತ್ರೆಗೆ ಕರೆದೊಯ್ಯುವ ವ್ಯವಧಾನವನ್ನೂ ತೋರದೇ ಅಮಾಯಕರ ಪ್ರಾಣದೊಂದಿಗೆ ಚೆಲ್ಲಾಟ ಆಡುತ್ತಿದ್ದಾರೆ. ಗ್ರಾಮೀಣ ಕ್ರೀಡೆ ಹೆಸರಿನಲ್ಲಿ ಹಣಮಾಡುತ್ತಿರುವ ಸಂಘಟಕರ ಮೇಲೆ ಪೊಲೀಸ್ ಇಲಾಖೆ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂಬುದು ಸಾರ್ವಜನಿಕರ ಅಭಿಪ್ರಾಯವಾಗಿದೆ.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಇನ್ನು ಈ ಬಗ್ಗೆ ಮಾತನಾಡಿದ ಪೊಲೀಸ್‌ವರಿಷ್ಠಾಧಿಕಾರಿ ಕೆ.ಜಿ. ದೇವರಾಜ್ ಅವರು, ಜಿಲ್ಲೆಯ ಗ್ರಾಮೀಣ ಭಾಗದ ಅನೇಕ ಕಡೆಗಳಲ್ಲಿ ಕೊಬ್ಬರಿ ಹೋರಿ ಸ್ಪರ್ಧೆ ಆಯೋಜಿಸುತ್ತಾರೆ. ಅದಕ್ಕೆ ಇಲಾಖೆಯಿಂದ ಪರವಾನಗಿ ಕೊಡುತ್ತಿಲ್ಲ. ಸಂಘಟಕ ಮೇಲೆ ದೂರು ಬಂದರೆ ಕ್ರಮಕೈಗೊಳ್ಳುತ್ತೇವೆ. ಆದರೆ, ಗುರುವಾರ ಆಡೂರು ಠಾಣೆಯಲ್ಲಿ ಹೋರಿ ತಿವಿದು ಮೃತಪಟ್ಟ ಸುನೀಲ್‌ನ ಮನೆಯವರು ನೀಡಿದ ದೂರಿನಂತೆ ಎಫ್‌ಐಆರ್ ದಾಖಲಿಸಿದ್ದೇವೆ ಎಂದು ಹೇಳಿದ್ದಾರೆ. (ಸಾಂದರ್ಭಿಕ ಚಿತ್ರ)