ಪ್ರವಾಹಕ್ಕೆ ನಲುಗಿದ ಹಾವೇರಿ ಜಿಲ್ಲೆಗೆ ಎನ್‌ಡಿಆರ್‌ಎಫ್‌ ತಂಡ

By Web Desk  |  First Published Oct 23, 2019, 8:37 AM IST

ಅತಿವೃಷ್ಟಿ ಸಂತ್ರಸ್ತರಿಗೆ ತಕ್ಷಣ ಪರಿಹಾರ ಒದಗಿಸಿ: ಜಿಲ್ಲಾಧಿಕಾರಿ ಕೃಷ್ಣ ಬಾಜಪೇಯಿ| ಜಿಲ್ಲೆಗೆ ಎನ್‌ಡಿಆರ್‌ಎಫ್‌ ತಂಡ ಆಗಮನ|  ಪರಿಹಾರ ಕೇಂದ್ರ ತೆರೆಯಲು ಸೂಚನೆ| ಕೆರೆಯ ಕೋಡಿಗಳಿಂದ ರಸ್ತೆ ಸಂಪರ್ಕ ಕಡಿತ| 200 ಜನರಿಗೆ ಪರಿಹಾರ ಕೇಂದ್ರದಲ್ಲಿ ವ್ಯವಸ್ಥೆ|


ಹಾವೇರಿ[ಅ.23]:  ಮಳೆಯಿಂದ ಮನೆ ಕುಸಿತ, ಮನೆಯೊಳಗೆ ನೀರು ತುಂಬಿದ ನಿರಾಶ್ರಿತರಾದವರಿಗೆ ತಕ್ಷಣವೇ ಪರಿಹಾರ ಕ್ರಮಗಳನ್ನು ಕೈಗೊಳ್ಳಬೇಕು. ಕೆರೆಗಳ ಪರಿಶೀಲನೆ ನಡೆಸಿ ಬಿರುಕು ಕಂಡರೆ ತಕ್ಷಣವೇ ಎಂಜಿನಿಯರುಗಳ ನೆರವು ಪಡೆದು ಮುನ್ನೆಚ್ಚರಿಕೆಯಾಗಿ ಕೆರೆ ದಂಡೆಗಳನ್ನು ಭದ್ರಪಡಿಸುವ ಕಾರ್ಯವನ್ನು ಕೈಗೊಳ್ಳುವಂತೆ ಜಿಲ್ಲೆಯ ಎಲ್ಲ ತಹಸೀಲ್ದಾರ್‌ಗಳಿಗೆ ಜಿಲ್ಲಾಧಿಕಾರಿ ಕೃಷ್ಣ ಬಾಜಪೇಯಿ ಅವರು ಸೂಚನೆ ನೀಡಿದ್ದಾರೆ. 

ಮಂಗಳವಾರ ಸಂಜೆ ತಹಸೀಲ್ದಾರರೊಂದಿಗೆ ವೀಡಿಯೋ ಸಂವಾದ ನಡೆಸಿದ ಅವರು, ಮಳೆಯಿಂದ ಉಂಟಾಗುವ ವಿಪತ್ತುಗಳ ನಿರ್ವಹಣೆಗೆ ಎಲ್ಲ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು. ತಕ್ಷಣವೇ ಪರಿಹಾರ ಕಾರ್ಯಕೈಗೊಳ್ಳುವಂತೆ ಸೂಚನೆ ನೀಡಿದರು.

Latest Videos

undefined

ಎನ್‌ಡಿಆರ್‌ಎಫ್‌ ತಂಡ ಆಗಮನ 

ಸರ್ಕಾರವು ಜಿಲ್ಲೆಗೆ ಎನ್‌ಡಿಆರ್‌ಎಫ್‌ ತಂಡವನ್ನು ಕಳುಹಿಸಿಕೊಡಲಿದೆ. ಪುಣೆಯಿಂದ ಅ. 23ರ ಬೆಳಗ್ಗೆ 25 ರಿಂದ 30 ಜನರ ತಂಡ ಜಿಲ್ಲೆಗೆ ಆಗಮಿಸಲಿದೆ. ಮಳೆಯಿಂದ ಪ್ರವಾಹ ಇತರ ಅವಘಡಗಳ ಸಂದರ್ಭದಲ್ಲಿ ತುರ್ತು ಕಾರ್ಯಕ್ಕೆ ನಿಯೋಜಿಸಲಾಗುವುದು ಎಂದು ತಹಸೀಲ್ದಾರಗಳಿಗೆ ತಿಳಿಸಿದರು.

ಪರಿಹಾರ ಕೇಂದ್ರ ತೆರೆಯಲು ಸೂಚನೆ

ಕೆರೆಯ ಕೋಡಿಗಳಿಂದ ರಸ್ತೆ ಸಂಪರ್ಕ ಕಡಿತ, ಬೆಳೆಹಾನಿ ಕುರಿತಂತೆ ಮಾಹಿತಿ ಪಡೆದ ಅವರು, ಕೆರೆ ಕೋಡಿಗಳಿಂದ ತೊಂದರೆಗೊಳಗಾಗುವ ಕುಟುಂಬಗಳಿಗೆ ಪರಿಹಾರ ಕೇಂದ್ರ ತೆರೆದು ಪುನರ್ವಸತಿ ಕಲ್ಪಿಸುವಂತೆ ಸೂಚನೆ ನೀಡಿದರು. ಪ್ರಸ್ತುತ ರಾಣಿಬೆನ್ನೂರಿನಲ್ಲಿ ಮಾತ್ರ ಪರಿಹಾರ ಕೇಂದ್ರ ತೆರೆಯಲಾಗಿದ್ದು, 50 ಮನೆಗಳು ಮಳೆ ನೀರಿನಿಂದ ತೊಂದರೆಯಾಗಿದೆ. 200 ಜನರಿಗೆ ಪರಿಹಾರ ಕೇಂದ್ರದಲ್ಲಿ ವ್ಯವಸ್ಥೆ ಮಾಡಲಾಗಿದೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಹಾವೇರಿ ನಗರದ ಇಜಾರಿಲಕ್ಮಾಪುರದ 30 ಕುಟುಂಬಗಳಿಗೆ ತೊಂದರೆಗೊಳಗಾಗಿದ್ದು ಪರಿಹಾರ ಕೇಂದ್ರ ತೆರೆಯಲು ಸಿದ್ಧತೆ ನಡೆಸಲಾಗಿದೆ. ಹೆಗ್ಗೇರಿ ಕೆರೆಯ ನೀರಿನಿಂದ ಪೊಲೀಸ್‌ ಕಾಲೋನಿಯ 16 ಕುಟುಂಬಗಳು ತೊಂದರೆಗೊಳಗಾಗಿದ್ದು, ಪರಿಹಾರ ಕೇಂದ್ರಕ್ಕೆ ತೆರಳಲು ಈ ಕುಟುಂಬಗಳು ನಿರಾಕರಿಸಿದ್ದು, ಓಡಾಡಲು ರಸ್ತೆಯಲ್ಲಿ ನೀರು ನಿಂತಿರುವುದರಿಂದ ಉಸುಕಿನ ಚೀಲಹಾಕಿ ಓಡಾಡಲು ವ್ಯವಸ್ಥೆ ಮಾಡುವಂತೆ ಕುಟುಂಬದವರು ಮನವಿ ಮಾಡಿಕೊಂಡಿದ್ದಾರೆ ಎಂದು ತಿಳಿಸಿದರು.

ಬ್ಯಾಡಗಿ ತಾಲೂಕಿನ ಆಣೂರು ಕೆರೆ, ಹಾನಗಲ್ಲ ತಾಲೂಕಿನ ಕಲಕೇರಿ, ನರೇಗಲ್‌ ಕೆರೆ, ರಾಣೆಬೆನ್ನೂರಿನ ದೊಡ್ಡ ಕೆರೆ, ಹಾವೇರಿಯ ಹೆಗ್ಗೇರಿ ಕೆರೆ, ಸವಣೂರಿನ ಕಾರಡಗಿ ಕೆರೆ, ಶಿಗ್ಗಾಂವಿಯ ಹುನಗುಂದ ಕೆರೆ, ಹಿರೇಕೆರೂರಿನ ದುರ್ಗಾದೇವಿ ಸೇರಿದಂತೆ 33 ಕೆರೆಗಳಲ್ಲಿ ಕೋಡಿ ಬಿದ್ದಿದೆ. ಯಾವುದೇ ಗ್ರಾಮಗಳು ಜಲಾವೃತವಾಗಿಲ್ಲ. ಕೆಲವೆಡೆ ರಸ್ತೆಗಳಲ್ಲಿ ನೀರು ಹರಿದು ಕೆಲ ಕಾಲ ರಸ್ತೆ ಸಂಪರ್ಕ ಕಡಿತಗೊಂಡ ಪ್ರಕರಣಗಳು ಬಿಟ್ಟರೆ ಯಾವುದೇ ರಸ್ತೆ ಸಂಪರ್ಕಗಳು ಪೂರ್ಣ ಪ್ರಮಾಣದಲ್ಲಿ ಕಡಿತಗೊಂಡಿಲ್ಲ. ಬೆಳೆಹಾನಿ ಹಾಗೂ ಮನೆಹಾನಿ ಕುರಿತಂತೆ ಸಮೀಕ್ಷೆ ಕಾರ್ಯ ಕೈಗೊಳ್ಳಲಾಗಿದೆ ಎಂದು ತಹಸೀಲ್ದಾರಗಳು ಮಾಹಿತಿ ನೀಡಿದರು.

ಮಳೆಯಿಂದ ಹಿರೇಕೆರೂರಿನಲ್ಲಿ 402, ಸವಣೂರಿನಲ್ಲಿ 964, ಶಿಗ್ಗಾಂವಿಯಲ್ಲಿ 1125, ಹಾನಗಲ್‌ನಲ್ಲಿ 917, ರಾಣೆಬೆನ್ನೂರಿನಲ್ಲಿ 519, ಹಾವೇರಿಯಲ್ಲಿ 510 ಹಾಗೂ ಬ್ಯಾಡಗಿಯಲ್ಲಿ 140 ಮನೆಗಳು ಹಾನಿಯಾಗಿವೆ. ಮಳೆಯಿಂದಾಗಿ ಹಾವೇರಿಯಲ್ಲಿ 600 ಹೆಕ್ಟೇರ್‌ ಕೃಷಿ ಹಾಗೂ 13 ಹೆಕ್ಟೇರ್‌ ತೋಟಗಾರಿಕೆ, ಹಾನಗಲ್‌ನಲ್ಲಿ 278 ಕೃಷಿ ಹಾಗೂ 7 ಹೆಕ್ಟೇರ್‌ ತೋಟಗಾರಿಕೆ, ಹಿರೇಕೆರೂರುನಲ್ಲಿ 2550 ಕೃಷಿ ಹಾಗೂ 850 ತೋಟಗಾರಿಕೆ, ಸವಣೂರಿನಲ್ಲಿ 2945 ಕೃಷಿ ಹಾಗೂ 16 ಹೆಕ್ಟೇರ್‌ ತೋಟಗಾರಿಕೆ, ಶಿಗ್ಗಾಂವಿಯಲ್ಲಿ 1200 ಹಾಗೂ 177 ಹೆಕ್ಟೇರ್‌ ತೋಟಗಾರಿಕೆ, ರಾಣೇಬೆನ್ನೂರಿನಲ್ಲಿ 2500 ಹೆಕ್ಟೇರ್‌ ಕೃಷಿ ಹಾಗೂ 535 ಹೆಕ್ಟೇರ್‌ ತೋಟಗಾರಿಕೆ ಬೆಳೆ ಹಾನಿಯಾಗಿರುವ ಕುರಿತು ಅಂದಾಜಿದಲಾಗಿದೆ ಎಂದು ತಿಳಿಸಿದರು.

ಹಿರೇಕೆರೂರಿನಲ್ಲಿ ಒಬ್ಬ ಕೊಚ್ಚಿ ಹೋಗಿದ್ದಾರೆ. ರಾಣೆಬೆನ್ನೂರಿನಲ್ಲಿ ಓರ್ವ ಸಿಡಿಲಿನಿಂದ ಮೃತಪಟ್ಟಿದ್ದಾರೆ. ಹಾವೇರಿಯಲ್ಲಿ 14 ಜಾನುವಾರು, ಶಿಗ್ಗಾಂವಿಯಲ್ಲಿ ಒಂದು ಜಾನುವಾರು ಸಾವಾಗಿದೆ ಎಂದು ವಿವರಿಸಿದರು.

ಎನ್‌ಡಿಆರ್‌ಎಫ್‌ ಮಾರ್ಗಸೂಚಿಯಂತೆ ತುರ್ತು ಪರಿಹಾರ ನೀಡಬೇಕು ಹಾಗೂ ಕಳೆದ ತಿಂಗಳ ಪ್ರವಾಹ ಕುರಿತಂತೆ ಮನೆಹಾನಿ ಬಾಕಿ ಪ್ರಕರಣಗಳನ್ನು ರಾಜೀವಗಾಂಧಿ ವಸತಿ ನಿಗಮದ ಪೋರ್ಟೆಲ್‌ನಲ್ಲಿ ಅಪ್‌ಲೋಡ್‌ ಮಾಡಬೇಕು. ಶೆಡ್‌ಗಳಲ್ಲಿ ವಾಸಿಸುವ ಕುಟುಂಬಗಳ ವಿವರ ಹಾಗೂ ಬಾಡಿಗೆ ಮನೆಗಳಲ್ಲಿ ವಾಸಿಸುವವರ ವಿವರ, ಹಣ ಪಾವತಿಯ ವಿವರಗಳನ್ನು ಸಲ್ಲಿಸಬೇಕು. ಪರಿಹಾರ ಪೋರ್ಟೆಲ್‌ನಲ್ಲಿ ಮುಂಗಾರು ಹಾಗೂ ಹಿಂಗಾರಿನ ಬೆಳೆ ಹಾನಿ ವಿವರವನ್ನು ದಾಖಲಿಸಬೇಕು ಎಂದು ಸೂಚನೆ ನೀಡಿದರು.

ಅಪರ ಜಿಲ್ಲಾಧಿಕಾರಿ ಎನ್‌. ತಿಪ್ಪೇಸ್ವಾಮಿ, ಜಂಟಿ ಕೃಷಿ ನಿರ್ದೇಶಕ ಮಂಜುನಾಥ, ತಹಸೀಲ್ದಾರ್‌ ಶಂಕರ ಬಾರ್ಕಿ, ಚುನಾವಣಾ ತಹಸೀಲ್ದಾರ್‌ ಪ್ರಶಾಂತ ನಾಲವಾರ ಸೇರಿದಂತೆ ವಿವಿಧ ಅಧಿಕಾರಿಗಳು ಉಪಸ್ಥಿತರಿದ್ದರು.

click me!