ಜಿಲ್ಲೆಯಲ್ಲಿ ಅನೇಕ ಪ್ರವಾಸಿ ತಾಣಗಳಿದ್ದರೂ ಅಭಿವೃದ್ಧಿಗೆ ಕ್ರಮವಿಲ್ಲ| ಅನೇಕ ಸಾಧು ಸಂತರು ಬಾಳಿ ಜಿಲ್ಲೆಯ ಹೆಸರನ್ನು ಎಲ್ಲೆಡೆ ಪಸರಿಸುವಂತೆ ಮಾಡಿದ್ದಾರೆ| ನೈಸರ್ಗಿಕವಾಗಿಯೂ ಶ್ರೀಮಂತವಾಗಿರುವ ಜಿಲ್ಲೆ ಪ್ರವಾಸೋದ್ಯಮ ಅಭಿವೃದ್ಧಿಗೆ ಹೇಳಿ ಮಾಡಿಸಿದಂತಿದೆ| ಜಿಲ್ಲೆಯಾಗಿ ಎರಡು ದಶಕಗಳೇ ಕಳೆದರೂ ಆ ತಾಣಗಳಲ್ಲಿ ಮೂಲಸೌಕರ್ಯ ಗಳಿಲ್ಲದೇ ಪ್ರವಾಸಿಗರನ್ನುಆಕರ್ಷಿಸುತ್ತಿಲ್ಲ|
ನಾರಾಯಣ ಹೆಗಡೆ
ಹಾವೇರಿ[ನ.4]: ಜಿಲ್ಲೆಯಲ್ಲಿ ಹತ್ತಾರು ಪ್ರಸಿದ್ಧ ಪ್ರವಾಸಿ ತಾಣಗಳಿದ್ದರೂ ಅವುಗಳ ಅಭಿವೃದ್ಧಿಗೆ ಸರ್ಕಾರ ನಿರ್ಲಕ್ಷ್ಯ ವಹಿಸಿದೆ. ಮೂಲಸೌಕರ್ಯಗಳ ಕೊರತೆಯಿಂದ ಪ್ರವಾಸಿಗರನ್ನು ಸೆಳೆಯುವಲ್ಲಿ ವಿಫಲವಾಗಿವೆ. ಭೌಗೋಳಿಕವಾಗಿ ರಾಜ್ಯದ ಮಧ್ಯ ಭಾಗದಲ್ಲಿರುವ ಹಾವೇರಿ ಜಿಲ್ಲೆಯು ಉತ್ತರ ಕರ್ನಾಟಕದ ಹೆಬ್ಬಾಗಿಲು ಎನಿಸಿದೆ. ಚಾಲುಕ್ಯ ವಾಸ್ತುಶಿಲ್ಪ ಶೈಲಿಯ ಹತ್ತಾರು ಗುಡಿ ಗೋಪುರಗಳು ಇಲ್ಲಿಯ ಶ್ರೀಮಂತ ಸಂಸ್ಕೃತಿ, ಪರಂಪರೆಯನ್ನು ಬಿಂಬಿಸುತ್ತವೆ. ಪ್ರಸಿದ್ಧ ಹತ್ತಾರು ಮಠಮಾನ್ಯಗಳು ಇರುವುದರಿಂದ ಮರಿ ಕಲ್ಯಾಣ ಎಂದೇ ಖ್ಯಾತಿ ಗಳಿಸಿದೆ.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಇಲ್ಲಿಯ ಮಣ್ಣಿನಲ್ಲಿ ಅನೇಕ ಸಾಧು ಸಂತರು ಬಾಳಿ ಜಿಲ್ಲೆಯ ಹೆಸರನ್ನು ಎಲ್ಲೆಡೆ ಪಸರಿಸುವಂತೆ ಮಾಡಿದ್ದಾರೆ. ನೈಸರ್ಗಿಕವಾಗಿಯೂ ಶ್ರೀಮಂತವಾಗಿರುವ ಜಿಲ್ಲೆ ಪ್ರವಾಸೋದ್ಯಮ ಅಭಿವೃದ್ಧಿಗೆ ಹೇಳಿ ಮಾಡಿಸಿದಂತಿದೆ. ಆದರೆ, ಜಿಲ್ಲೆಯಾಗಿ ಎರಡು ದಶಕಗಳೇ ಕಳೆದರೂ ಆ ತಾಣಗಳಲ್ಲಿ ಮೂಲಸೌಕರ್ಯ ಗಳಿಲ್ಲದೇ ಪ್ರವಾಸಿಗರನ್ನುಆಕರ್ಷಿಸುತ್ತಿಲ್ಲ.
ಹಲವು ತಾಣಗಳು:
ಐತಿಹಾಸಿಕ, ನೈಸರ್ಗಿಕ, ಆಧುನಿಕ ವಿಹಾರ ತಾಣ ಸೇರಿದಂತೆ ವೈವಿಧ್ಯಮಯ ಪ್ರವಾಸಿ ಸ್ಥಳಗಳು ಜಿಲ್ಲೆಯಲ್ಲಿವೆ. ಕನಕದಾಸರ ಕರ್ಮಭೂಮಿ ಬ್ಯಾಡಗಿ ತಾಲೂಕಿನ ಕಾಗಿನೆಲೆ, ಕನಕರ ಜನ್ಮಸ್ಥಳ ಶಿಗ್ಗಾಂವಿ ತಾಲೂಕಿನ ಬಾಡ ಕನಕ ಅರಮನೆ, ಬಂಕಾಪುರ ನವಿಲುಧಾಮ, ರಾಣಿಬೆನ್ನೂರಿನ ಕೃಷ್ಣಮೃಗ ವನ್ಯಧಾಮ, ಶಿಶುನಾಥ ಷರೀಫರ ಶಿಶುವಿನಹಾಳ, ಸರ್ವಜ್ಞ ಕವಿಗೆ ಸಂಬಂಧಿಸಿದ ಸ್ಥಳ, ಚೌಡಯ್ಯದಾನಪುರ, ಗಳಗನಾಥ, ಹಾವೇರಿಯ ಸಿದ್ದೇಶ್ವರ ದೇವಸ್ಥಾನ, ರಟ್ಟೀಹಳ್ಳಿ ಕದಂಬೇಶ್ವರ, ಹಾನಗಲ್ಲಿನ ತಾರಕೇಶ್ವರ ದೇವಸ್ಥಾನ... ಒಂದಲ್ಲಎರಡಲ್ಲ, ಹೀಗೆ ಹತ್ತಾರು ಪ್ರಮುಖ ತಾಣಗಳು ಜಿಲ್ಲೆಯಲ್ಲಿವೆ. ಹೆಗ್ಗೇರಿ ಕೆರೆ, ಮದಗ ಮಾಸೂರು ಕೆರೆಗಳು ಪ್ರವಾಸಿ ತಾಣವಾಗಿಸಲು ಯೋಗ್ಯವಾಗಿದೆ. ಜಿಲ್ಲೆಯಲ್ಲಿ ಹರಿದಿರುವ ವರದಾ, ತುಂಗಭದ್ರಾ ನದಿಗಳನ್ನು ಬಳಸಿಕೊಂಡು ಪ್ರವಾಸಿಗರನ್ನು ಸೆಳೆಯಬಹುದಾಗಿದೆ. ಸರ್ಕಾರ ಈ ತಾಣಗಳನ್ನೆಲ್ಲ ನಾಡಿನ ಜನರಿಗೆ ಪರಿಚಯಿಸುವ ನಿಟ್ಟಿನಲ್ಲಿ ಕ್ರಮಕೈಗೊಳ್ಳಲು ಅವಕಾಶವಿದೆ. ಪ್ರವಾಸೋದ್ಯಮ ಬೆಳವಣಿಗೆಯಿಂದ ಜಿಲ್ಲೆಯ ಅನೇಕ ನಿರುದ್ಯೋಗಿಗಳಿಗೂ ಅನುಕೂಲವಾಗಲಿದೆ.
ಮೂಲಸೌಕರ್ಯವಿಲ್ಲ:
ಇಷ್ಟೊಂದು ಪ್ರವಾಸಿ ತಾಣಗಳಿದ್ದರೂ ಮೂಲಸೌಕರ್ಯಗಳಿಲ್ಲದೇ ಪ್ರವಾಸಿಗರನ್ನು ಸೆಳೆಯಲು ಸಾಧ್ಯವಾಗುತ್ತಿಲ್ಲ. ಕಾಗಿನೆಲೆಯಲ್ಲಿ ಕನಕ ಉದ್ಯಾನ, ಶಿಲ್ಪವನ, ನೃತ್ಯಕಾರಂಜಿ, ಬೋಟಿಂಗ್ ವ್ಯವಸ್ಥೆ ಕಲ್ಪಿಸಲಾಗಿದೆ. ಆದರೆ, ಬರುವ ಪ್ರವಾಸಿಗರ ವಸತಿ, ಊಟಕ್ಕೆ ಅನುಕೂಲಗಳಿಲ್ಲ. ಶಿಶುವಿನಹಾಳದಲ್ಲಿ ಯಾತ್ರಿ ನಿವಾಸವಿದ್ದರೂ ನಿರ್ವಹಣೆ ಕೊರತೆಯಿದೆ. ಇನ್ನುಳಿದ ತಾಣಗಳಲ್ಲಂತೂ ಸಮರ್ಪಕ ರಸ್ತೆ, ವಾಹನ ಸೌಲಭ್ಯವೂ ಇಲ್ಲ.ಇದರಿಂದ ಸ್ಥಳೀಯರು ಹಬ್ಬಹರಿ ದಿನಗಳಂದು ಬುತ್ತಿತೆಗೆದುಕೊಂಡು ಹೋಗಿ ಉಂಡು ಬರುವುದಕ್ಕೆ ಈ ತಾಣಗಳು ಸೀಮಿತವಾಗಿವೆ. ಜಿಲ್ಲೆಯಲ್ಲಿ ಪ್ರವಾಸೋದ್ಯಮ ಇಲಾಖೆಯ ಪ್ರತ್ಯೇಕ ಕಚೇರಿಯೂ ಇಲ್ಲದ್ದರಿಂದ ಮತ್ತಷ್ಟು ಸೊರಗುವಂತಾಗಿದೆ. ಜಿಲ್ಲೆಯ ಪ್ರವಾಸಿ ತಾಣಗಳನ್ನು ಪರಿಚಯಿಸುವ, ಪ್ರವಾಸಿಗರನ್ನು ಆಕರ್ಷಿಸುವ ನಿಟ್ಟಿನಲ್ಲಿ ಸರ್ಕಾರ ಗಮನ ನೀಡಬೇಕು ಎಂಬುದು ಜಿಲ್ಲೆಯ ಜನರ ಆಗ್ರಹವಾಗಿದೆ.
ಟೂರ್ ಪ್ಯಾಕೇಜ್ ಟುಸ್
ಹಿಂದಿನ ಜಿಲ್ಲಾಧಿಕಾರಿ ಡಾ. ವೆಂಕಟೇಶ್ ಅವರು ಆಸಕ್ತಿ ವಹಿಸಿ ಜಿಲ್ಲೆಯ ಪ್ರವಾಸಿ ತಾಣ ಗಳನ್ನು ಪ್ರವಾಸಿಗರಿಗೆ ತೋರಿಸಲು ಖಾಸಗಿ ಸಹಭಾಗಿತ್ವದಲ್ಲಿ ಟೂರ್ ಪ್ಯಾಕೇಜ್ ಆರಂಭಿಸಲು ಕ್ರಮ ಕೈಗೊಂಡಿದ್ದರು. ಪ್ರಮುಖ ತಾಣಗಳಿಗೆ ಪ್ರವಾಸಿಗರನ್ನು ಕರೆದುಕೊಂಡು ಹೋಗಿ ವಾಪಸ್ ತಂದುಬಿಡುವ ಒಂದು ದಿನದ ಪ್ಯಾಕೇಜ್ ರೂಪಿಸಿದ್ದರು. ಆರಂಭಿಕವಾಗಿ ಟ್ಯಾಕ್ಸಿಗಳನ್ನು ಗೊತ್ತುಪಡಿಸಲು ಆರ್ಜಿ ಕರೆಯಲಾಗಿತ್ತು. ಆದರೆ, ಇದಕ್ಕೆ ಟ್ಯಾಕ್ಸಿಗಳನ್ನು ನೀಡಲು ಹೆಚ್ಚಿನವರು ಆಸ ಕ್ತಿ ತೋರಲಿಲ್ಲ. ಅವರ ವರ್ಗಾವಣೆ ಬಳಿಕ ಈ ಟೂರ್ ಪ್ಯಾಕೇಜ್ ಟುಸ್ ಆಗಿದೆ.