ಜಗತ್ತಿನ ಎಲ್ಲ ರೀತಿಯ ಆಹಾರದ ರುಚಿಯನ್ನೂ ನೋಡಬೇಕೆನ್ನೋ ಫುಡೀ ನೀವಾಗಿದ್ದರೆ, ಅವುಗಳಲ್ಲಿ ಕೆಲವೊಂದರದಾದರೂ ಹೆಸರು ಹುಟ್ಟಿದ ಕತೆ, ಮೂಲವನ್ನು ತಿಳಿದುಕೊಂಡಿದ್ದರೆ ಚೆನ್ನಾಗಿರುತ್ತದೆ.
ನೀವು ಆಗಾಗ ಆಹಾಹಾ ಎಂದುಕೊಂಡು ತಿನ್ನೋ ನ್ಯಾಚೋಸ್, ಮಳೆ ತಂದ ಚಳಿಗೆ ದೇಹ ಬಿಸಿ ಬಿಸಿ ಮಾಡಿ ಖುಷಿ ಪಡಿಸುವ ಮ್ಯಾಗಿ, ಸಂಜೆಯೊಂದನ್ನು ಸರಿಯಾಗಿ ಸಮಾಪ್ತಿ ಮಾಡುವ ಸ್ಯಾಂಡ್‌ವಿಚ್, ಡಯಟ್ ಎಂದುಕೊಂಡು ಹೊಸದಾಗಿ ಶುರು ಹಚ್ಚಿಕೊಂಡಿರುವ ಸೀಸರ್ ಸಲಾಡ್ ಇತ್ಯಾದಿ ಇತ್ಯಾದಿ ಆಹಾರಕ್ಕೆ ಹೆಸರಿಟ್ಟೋರ್ಯಾರು? ಅವರು ಏಕೆ, ಯಾವಾಗ ಆ ಹೆಸರಿಟ್ಟರು ಎಂದು ಯಾವತ್ತಾದರೂ ಯೋಚಿಸಿದ್ದೀರಾ? ಇಲ್ಲಿದೆ ನೋಡಿ ಆಸಕ್ತಿಕರ ಕತೆಗಳು.
ನ್ಯಾಚೋಸ್
ಶೆಫ್ ಇಗ್ನಾಶಿಯೋ ಅನಯಾ 1943ರಲ್ಲಿ ಮೊದಲ ಬಾರಿಗೆ ನ್ಯಾಚೋಸ್ ಕಂಡುಹಿಡಿದ. ಫ್ರೈ ಮಾಡಿದ ಟೋರ್ಟಿಲ್ಲಾದ ಮೇಲೆ ಚೆಡ್ಡಾರ್ ಚೀಸ್, ಜಲಪೀನೋ ಹಾಗೂ ಪೆಪ್ಪರ್ ಹಾಕಿ ತನ್ನ ರೆಸ್ಟುರಾದಲ್ಲಿ ಮಾರಾಟ ಮಾಡಿದ. ಅದರ ಹೆಸರನ್ನು ಗ್ರಾಹಕರು ಕೇಳಿದಾಗ ನ್ಯಾಚೋಸ್ ಎಸ್ಪೆಶಲ್ಸ್ ಎಂದ. ಆತನ ನಿಕ್ ನೇಮ್ ನ್ಯಾಚೋ ಎಂದಾಗಿತ್ತು. ನಿಧಾನವಾಗಿ ಗ್ರಾಹಕರು ಆ ಹೆಸರನ್ನು ಸಣ್ಣದಾಗಿಸಿಕೊಂಡು ನ್ಯಾಚೋಸ್ ಎಂದು ಕರೆಯಲಾರಂಭಿಸಿದರು.
ಮ್ಯಾಗಿ
ಜೂಲಿಯಸ್ ಮೈಕೇಲ್ ಜೋಹಾನ್ಸ್ ಮ್ಯಾಗಿ ಎಂಬಾತನೇ ಮ್ಯಾಗಿ ಸಾಸ್ ಹಾಗೂ ಪ್ರೀಕುಕ್ಡ್ ಸೂಪ್‌ಗಳನ್ನು ಕಂಡುಹಿಡಿದವನು. ವರ್ಕಿಂಗ್ ಕ್ಲಾಸ್‌ಗಾಗಿ ಪ್ಯಾಕೇಜ್ ಮಾಡಿದ, ತಕ್ಷಣದಲ್ಲಿ ಸಿದ್ಧಪಡಿಸಬಲ್ಲ ಆಹಾರ ನೀಡಬೇಕೆಂಬ ಕಾರಣದಿಂದ ಆತ ಸಂಶೋಧನೆಯಲ್ಲಿ ತೊಡಗಿದ್ದಾಗ 1886ರಲ್ಲಿ ಮ್ಯಾಗಿಯ ರೆಡಿ ಟು ಡ್ರಿಂಕ್ ಸೂಪ್‌ಗಳು ಹೊರಬಂದವು. ಅದಾಗಿ ಹತ್ತಿರತ್ತಿರ ಒಂದು ಶತಮಾನದ ಬಳಿಕ, ಅಂದರೆ 1983ರಲ್ಲಿ ಭಾರತಕ್ಕೆ ಇನ್ಸ್‌ಟೆಂಟ್ ನೂಡಲ್‌ಗಳು ಕಾಲಿಟ್ಟವು. ಈಗ ಇವಿಲ್ಲದೆ ಯಾರ ಮನೆಯಲ್ಲೂ ವಾರ ಮುಂದೋಡುವುದಿಲ್ಲ ಎಂಬಂತಾಗಿದೆ. ತನ್ನ ಕಂಡುಹಿಡಿದ ಶೆಫ್‌ನ ಹೆಸರನ್ನೇ ಹೊತ್ತುಕೊಂಡಿದೆ ಮ್ಯಾಗಿ.
ಸ್ಯಾಂಡ್‌ವಿಚ್
18ನೇ ಶತಮಾನದಲ್ಲಿ ಇಂಗ್ಲೆಂಡ್‌ನಲ್ಲಿ ನಾಲ್ಕನೇ ಅರ್ಲ್ ಆಫ್ ಸ್ಯಾಂಡ್‌ವಿಚ್ ಎಂಬ ಸ್ಥರ ಹೊಂದಿದ್ದ ಜಾನ್ ಮೊಂಟಾಗು ಎಂಬಾತನಿಗೆ ಕಾರ್ಡ್ಸ್ ಆಡುವ ಚಟ. ಹೀಗೆ ಆಡುವಾಗ ಏನಾದರೂ ತಿನಿಸುಗಳನ್ನು ತಿಂದರೆ ಕೈಯ್ಯೆಲ್ಲ ಅಂಟಂಟಾಗುವುದು ಆತನಿಗೆ ಕಿರಿಕಿರಿ ಉಂಟು ಮಾಡುತ್ತಿತ್ತು. ಹಾಗಾಗಿ ಆತ ಎರಡು ಬ್ರೆಡ್ ಪೀಸ್ ನಡುವೆ ತಣ್ಣನೆಯ ಮಾಂಸವನ್ನು ಇಟ್ಟುಕೊಡುವಂತೆ ಶೆಫ್ ಬಳಿ ಕೇಳಿದ. ಇದನ್ನು ತಿನ್ನುತ್ತಾ ಕಾರ್ಡ್ಸ್ ಆಡಿದರೂ ಕೈ ಗಲೀಜಾಗುವುದಿಲ್ಲ ಎಂಬುದು ಆತನ ಅಂದಾಜಾಗಿತ್ತು. ಆದರೆ, ಆತನ ಅಂದಾಜಿಗೆ ಸಿಗದ ವಿಷಯವೆಂದರೆ ಈ ತನ್ನ ಬೇಡಿಕೆ ಜಗತ್ತಿನಲ್ಲಿ ಎಷ್ಟು ಪ್ರಸಿದ್ಧವಾಗುತ್ತದೆ ಎಂಬುದು!
ಪೇಟಾ
ಆಗ್ರಾಕ್ಕೆ ಹೋದವರಾರೂ ಪೇಟಾ ತಿನ್ನದೆ ಹಿಂದಿರುಗುವ ಮಾತೇ ಇಲ್ಲ. ಇಲ್ಲಿನ ಪ್ರತಿ ಅಂಗಡಿಗಳೂ ಪೇಟಾ ಇಟ್ಟುಕೊಂಡು ಪ್ರವಾಸಿಗರನ್ನು ಆಕರ್ಷಿಸುತ್ತವೆ. ಈ ಪೇಟಾಕ್ಕೆ ಕೂಡಾ ತಾಜ್‌ಮಹಲ್‌ನಷ್ಟೇ ವಯಸ್ಸು ಎಂಬುದು ಗೊತ್ತೇ? ತಾಜ್‌ಮಹಲ್ ನಿರ್ಮಾಣದಲ್ಲಿದ್ದ ಕಾರ್ಮಿಕರಿಗೆ ಪ್ರತಿ ದಿನ ರೋಟಿ ದಾಲ್ ತಿಂದೂ ತಿಂದೂ ಬಾಯಿ ಜಡಗಟ್ಟಿತ್ತು. ಇದನ್ನು ಮನಗಂಡ ಷಹಜಹಾನ್ ಪೀರ್ ನಕ್ಷ್‌ಬಂಧಿ ಸಾಹೀಬ್ ಬಳಿ ಇದಕ್ಕೊಂದು ಪರಿಹಾರ ಕಂಡುಹಿಡಿಯುವಂತೆ ಹೇಳುತ್ತಾನೆ. ನಂತರ ಪೀರ್ ಪ್ರಾರ್ಥಿಸುವಾಗ ಟ್ರಾನ್ಸ್‌ಗೆ ಒಳಗಾಗಿ ಸ್ವತಃ ದೇವರಿಂದಲೇ ಪೇಟಾದ ರೆಸಿಪಿ ಪಡೆದರೆಂಬ ಕತೆ ಇದೆ. ನಂತರದಲ್ಲಿ 500 ಬಾಣಸಿಗರು ಸೇರಿ ಕಾರ್ಮಿಕರಿಗಾಗಿ ಪೇಟಾ ತಯಾರಿಸಿದರಂತೆ.
ತುಂಡೇ ಕೆ ಕಬಾಬ್
ಆಶ್ಚರ್ಯವೆಂದರೆ ಈ ಆಹಾರಕ್ಕೆ ಹೆಸರು ತಂದುಕೊಟ್ಟಿದ್ದು ಇದನ್ನು ತಯಾರಿಸಿದ ಬಾಣಸಿಗನ ಅಂಗವಿಕಲತೆ. ಹೌದು, ಹಲ್ಲಿಲ್ಲದ ನವಾಬನಿಗೆ ತಿನ್ನಲು ಸುಲಭವಾಗಲಿ ಎಂದು ಶೆಫ್ ಹಜಿ ಮುರಾದ್ ಅಲಿ ಇದನ್ನು ಬರೋಬ್ಬರಿ 160 ಮಸಾಲೆ ಪದಾರ್ಥಗಳನ್ನು ಬಳಸಿ ತಯಾರಿಸಿದ್ದ.
ವರ್ಸೆಸ್ಟರ್‌ಶೈರ್ ಸಾಸ್
ಇಂಗ್ಲೆಂಡ್‌ನಿಂದ ಜನಪ್ರಿಯವಾದ ಈ ಸಾಸ್ ಹುಟ್ಟಿದ ಕ್ರೆಡಿಟ್ ಬೆಂಗಾಲ್‌ನ ಎಕ್ಸ್ ಗವರ್ನರ್ ಲಾರ್ಡ್ ಮಾರ್ಕಸ್ ಸ್ಯಾಂಡಿಗೆ ಸೇರಬೇಕು. ಆತ ಭಾರತದಿಂದ ಇಂಗ್ಲೆಂಡ್‌ನ ವರ್ಸೆಸ್ಟರ್‌ಶೈರ್‌ಗೆ ಮರಳಿದ ಬಳಿಕ ಭಾರತೀಯ ಅಡುಗೆ ರುಚಿಗಳನ್ನು ಮಿಸ್ ಮಾಡಿಕೊಳ್ಳುತ್ತಿದ್ದ. ಹಾಗಾಗಿ ಇಬ್ಬರು ಫಾರ್ಮಾಸಿಸ್ಟ್ ಬಳಿ ತಾನು ತಂದಿದ್ದ ಸಾಸ್‌ಗಳ ರುಚಿಯನ್ನು ಮರುಸೃಷ್ಟಿಸಲು ಕೇಳಿದ. ಅದರ ಫಲವಾಗಿ ಹುಟ್ಟಿದ ವರ್ಸೆಸ್ಟರ್‌ಶೈರ್ ಸಾಸ್ ಜನಪ್ರಿಯತೆ ಪಡೆಯಿತು.