ದುರಿತ ಕಾಲಕ್ಕೆ ಸರಳ ಅಡುಗೆಗಳು;ತೋತಾಪುರಿ ಸ್ಪೆಷಲ್‌ ಅಡುಗೆಗಳು!

By Kannadaprabha News  |  First Published May 3, 2020, 9:52 AM IST

ಅಡುಗೆ ಮನೆಯಲ್ಲಿ ತನ್ನದೇ ಸಾಮ್ರಾಜ್ಯ ಬೆಳೆಸಿಕೊಂಡ ಪ್ರತಿ ಗೃಹಿಣಿಗೂ ಲೀಲಾಜಾಲವಾಗಿ ಅಡುಗೆ ಮಾಡಬೇಕೆಂದರೆ ಬೇಕಾದ ಲವಜಮೆಗಳು, ಸಾಮಾಗ್ರಿಗಳು, ತರಕಾರಿಗಳು ಯಥೇಚ್ಛವಾಗಿರಬೇಕೆನ್ನುವ ಕಲ್ಪನೆ ಹೊಸದಲ್ಲ. ಬೀರು ತುಂಬಾ ಸೀರೆಯಿದ್ದು, ಹೊರ ಹೋಗುವಾಗ ಉಡುವುದಕ್ಕೆ ಮತ್ತೆ ಬೀರೆಲ್ಲಾ ತಡಕಾಡುವಂತೆ, ಫ್ರಿಡ್ಜ್‌ ತುಂಬಾ ತರಕಾರಿಯಿದ್ದರೂ, ಕೊತ್ತಂಬರಿ ಸೊಪ್ಪಿಲ್ಲವೆಂದು ಮತ್ತೆ ಅಂಗಡಿಗೆ ಓಡುವುದು ಸಾಮಾನ್ಯ


ಈಗಂತೂ ಕೊರೊನಾ ಸಮಸ್ಯೆಯಿಂದ ತರಕಾರಿಗಳು ಸರಿಯಾಗಿ ವಿಲೇವಾರಿಯಾಗದೆ ರೈತ ಕಂಗೆಡುವಂತಹ ಸ್ಥಿತಿ. ಬೇಕಾದ ತರಕಾರಿಗಳು ಸಕಾಲದಲ್ಲಿ ಸಿಗುತ್ತಿಲ್ಲವೆಂದು ಲಾಕ್‌ಡೌನ್‌ನಲ್ಲಿ ಹೊತ್ತು ದೂಡಲು ಅಡುಗೆಯಲ್ಲಿ ತೊಡಗಿಸಿಕೊಂಡಿರುವ ಗೃಹಿಣಿಯರ ಆಳಲು.

ಮಲೆನಾಡಿನಲ್ಲಿ ಹುಟ್ಟಿಬೆಳೆದ ನನಗೆ, ಮಳೆಗಾಲ ಬಂದರೆ ಆರು ತಿಂಗಳು ಧೋ ಎಂದು ಸುರಿವ ಮಳೆಯಲ್ಲಿ, ಅಂಗಡಿಗೆ ಹೋಗಿ ತರಕಾರಿ ತರುವುದಿರಲಿ, ಹೊರಗಡಿಯಿಡುವುದಕ್ಕೂ ಅಸ್ಪದವಿಲ್ಲದಾಗ ಮನೆಯಲ್ಲೇ ಇರುವ ಕೆಲವು ಸಾಮಾಗ್ರಿಗಳಲ್ಲಿ ಅದೆಷ್ಟುರುಚಿಕಟ್ಟಾಗಿ ಎಷ್ಟೆಲ್ಲಾ ವೈವಿಧ್ಯಮಯ ಅಡುಗೆ ಮಾಡುವುದನ್ನು ನಮ್ಮ ಹಿರಿಯರು ಕಂಡು ಕೊಂಡಿದ್ದರಲ್ಲಾ ಎಂದು ಈಗ ನೆನೆದರೂ ಆಶ್ಚರ್ಯ. ಕೆಲವೊಮ್ಮೆ ಒಂದೇ ತರಕಾರಿ ಬಳಸಿ, ‘ತರಕಾರಿ ಒಂದೇ, ರೂಪ ಹಲವು’ ಅನ್ನುವಂತೆ ತರಹೇವಾರಿ ಅಡುಗೆ ಮಾಡಿ ಬಡಿಸುತ್ತಿದ್ದರಲ್ಲಾ ಎಂಬ ಬೆರಗೂ ಸಹ. ಇನ್ನು ಮಾವು, ಹಲಸು ಸಿಗುವಾಗಂತೂ ತಿಂಗಳಾನುಗಟ್ಟಲೇ ಮಲೆನಾಡಿನಲ್ಲಿ ಬೇಳೆ ಬೇಯಿಸುವ ಕಟ್ಟಳೆಯೇ ಇರುತ್ತಿರಲಿಲ್ಲ. ದಿನನಿತ್ಯ ಅವುಗಳದ್ದೇ ವೈವಿಧ್ಯಮಯ ವ್ಯಂಜನಗಳು.

Tap to resize

Latest Videos

undefined

ಮಲೆನಾಡಿಗರಿಗೆ ಮಾವಿನ ಕಾಯಿ ಸಿಕ್ಕರೆ ನಿಧಿ ಸಿಕ್ಕಷ್ಟುಖುಷಿ. ಬೇಕಾದರೆ ಇಡೀ ದಿನ ಅದರೊಳಗೆ ಮುಳುಗೇಳುತ್ತಾರೆ. ಕಾಟು ಮಾವಿನ ಕಾಯಿರಸಕ್ಕೆ, ಡಿಂಡಿನಕಾಯಿ ಗೊಜ್ಜಿಗೆ, ಅಪ್ಪೆ ಸಾರಿಗೆ ಅವವೇ ಮಾವಾಗಬೇಕು. ಆಗಲೇ ಅದರ ರುಚಿ ನಾಲಿಗೆಗೆ ಹತ್ತಿ ರಸ ಸ್ವಾದಕ್ಕೆ ತೆರೆಯೊಂದು ಸಜ್ಜಾಗಿ ನಾವು ಮತ್ತೆ ಬಾಲ್ಯಕಾಲಕ್ಕೆ ತಲುಪಿ ಅಮ್ಮನೋ, ಅಜ್ಜಿನೋ ಮಾಡಿದ್ದ ನಳಪಾಕದ ಕೊನೆ ತೊಟ್ಟನ್ನೂ ಚಪ್ಪರಿಸುತ್ತಾ ನೆಕ್ಕಿ ಬರಲು ಸಾಧ್ಯ. ಈಗೇನಿದ್ದರೂ ನಗರದಲ್ಲಿ ಬಾಳುತ್ತಾ ಇಲ್ಲಿ ಸಿಗುವ ಕಾಯಿಗಳಲ್ಲಷ್ಟೇ ಅಡುಗೆ ಮಾಡಲು ಸಾಧ್ಯ.

ಮಾವಿನಕಾಯಿ ಅಡುಗೆಗಳಲ್ಲಿ ಹಲವು ಬಗೆಯಿದೆ. ಹಸಿ, ಬಿಸಿ, ಕುದ್ದಿದ್ದು, ಕಾಯಿ ಹಾಕಿ ಅರೆದದ್ದು, ಹಸಿ ಮೆಣಸಿನದ್ದು, ಕೆಂಪು ಮೆಣಸಿನದ್ದು, ಬರೀ ಸಾರಿನ ಪುಡಿಯದ್ದು... ಎಂದು ದಿನಕ್ಕೊಂದು ಹೊಸ ರುಚಿ.

ಸದ್ಯಕ್ಕೆ ಈ ದುರಿತ ಕಾಲದಲ್ಲೂ ತೋತಾಪುರಿ ಮಾವು ಧಾರಾಳವಾಗಿ ಸಿಗುತ್ತಿದೆ. ಮಲೆನಾಡಿನ ಸರಳ, ಸುಲಭ ಮತ್ತು ನಾಲಿಗೆಗೆ ರುಚಿಕಟ್ಟಾದ ಕೆಲವು ಅಡುಗೆಗಳು ಇಲ್ಲಿವೆ.

ತೋತಾಪುರಿ ಸ್ಪೆಷಲ್‌ ಅಡುಗೆಗಳು

1. ಮಾವಿನಣ್ಣಿನ ಸಾಸ್ವೆ

ಮಾವಿನಣ್ಣಿಗೆ, ಒಂದು ಮೆಣಸು, ಕಾಯಿ, ಸಾಸಿವೆ ಅರೆದು ಸ್ವಲ್ಪ ಉಪ್ಪು ಮತ್ತು ಮೊಸರು ಸೇರಿಸಿ, ತುಪ್ಪದಲ್ಲಿ ಒಗ್ಗರಣೆ ಕೊಟ್ಟರೆ ತಂಪಾದ ಸಾಸ್ವೆ ತಯಾರು.

2. ಮಾವಿನಕಾಯಿ ಹಸಿರು ಗೊಜ್ಜು

7,8 ಹಸಿಮೆಣಸು, ಚೂರೇ ಚೂರು ಮೆಂತ್ಯೆ ಮತ್ತು ಜೀರಿಗೆ ಹುರಿದುಕೊಂಡು ತೆಂಗಿನಕಾಯಿ ಜೊತೆ ರುಬ್ಬಿಕೊಳ್ಳಿ. ಅರ್ಧ ಮಾವಿನಕಾಯಿಯನ್ನು ಸಿಪ್ಪೆ ತೆಗೆದು ಹೋಳು ಮಾಡಿಕೊಳ್ಳಿ. ಬಾಣಲೆಯಲ್ಲಿ ಒಗ್ಗರಣೆ ಮಾಡಿ, ಹೋಳು ಹಾಕಿ ಒಂದೆರಡು ಸುತ್ತು ಕೈಯಾಡಿಸಿ, ಸಿಹಿಗೆ ಬೆಲ್ಲ, ಉಪ್ಪು, ಕಾಯಿ ಜೊತೆ ರುಬ್ಬಿಕೊಂಡ ಮಸಾಲ ಹಾಕಿ ಕುದಿಸಿ. ಅನ್ನಕ್ಕೆ, ರೊಟ್ಟಿಗೆ, ಚಪಾತಿಗೆ ಹುಳಿ ಸಿಹಿಯಾಗಿ ಚೆನ್ನಾಗಿರುತ್ತೆ.

ಬೇಸಿಗೆ ಸೆಕೆ ಓಡಿಸೋ ಮಾವಿನ ಕೂಲ್ ಕೂಲ್ ರೆಸಿಪಿ

3. ಮಾವಿನಕಾಯಿ ಸಾರು, ತಂಬುಳಿ, ಚಟ್ನಿ

ಮಾವಿನಕಾಯಿ ಚಿತ್ರಾನ್ನ ಮಾಡಿ ಅದರ ಸಿಪ್ಪೆ ಮತ್ತು ಗೊರಟನ್ನು ಎಸೆಯಬೇಡಿ. ಗೊರಟನ್ನು ಕುಕ್ಕರಿನಲ್ಲಿ ಅನ್ನ ಇಡುವಾಗ ತಟ್ಟೆಯಲ್ಲಿಟ್ಟು ಬೇಯಿಸಿಕೊಂಡು ತಣ್ಣಗಾದ ನಂತರ ಕಿವಿಚಿ ರಸ ತೆಗೆದು ಅದಕ್ಕೆ ಸಾಕಷ್ಟುನೀರು, ಉಪ್ಪು ಬೆರೆಸಿ, ಸಾಸಿವೆ, ಜೀರಿಗೆ, ಇಂಗು, ಮೆಣಸು, ಕರಿಬೇವಿನ ಗಮ್ಮತ್ತಾದ ಒಗ್ಗರಣೆ ಕೊಟ್ಟರೆ ಅಪ್ಪೆ ಸಾರಾಗುತ್ತದೆ. ಸಿಪ್ಪೆಯನ್ನು ತುಪ್ಪದಲ್ಲಿ ಬಾಡಿಸಿಕೊಂಡು, ಒಂದು ಒಣಮೆಣಸಿನಕಾಯಿ, ಜೀರಿಗೆ, ಉಪ್ಪು,ಕಾಯಿ, ಮಜ್ಜಿಗೆ ಸೇರಿಸಿ ರುಬ್ಬಿದರೆ ತಂಬುಳಿ ರೆಡಿ. ಸಿಪ್ಪೆಗೆ ಇಂಗು, ಉದ್ದು ಹುರಿದುಕೊಂಡು ತೆಂಗಿನಕಾಯಿ,ಹಸಿಮೆಣಸು, ಉಪ್ಪು ಸೇರಿಸಿ ರುಬ್ಬಿದರೆ ಚಟ್ನಿ ಆಗುತ್ತೆ.

4. ಮಾವಿನ ತೊಕ್ಕು

2,3 ಗಿಳಿ ಮೂತಿ ಮಾವಿನಕಾಯಿ ತುರಿದುಕೊಳ್ಳಿ. ಬಾಣಲೆಯಲ್ಲಿ ಜಾಸ್ತಿ ಇಂಗು ಮತ್ತು ಸ್ವಲ್ಪ ಮೆಂತ್ಯೆ ಹುರಿದುಕೊಂಡು ಪುಡಿ ಮಾಡಿಕೊಳ್ಳಿ. ಅದೇ ಬಾಣಲೆಯಲ್ಲಿ ಎಣ್ಣೆ ಹಾಕಿ, ಸಾಸಿವೆ ಹೊಟ್ಟಿಸಿ, ತುರಿದ ಮಾವು, ಪುಡಿ ಅರಸಿನ, ಉಪ್ಪು, ಖಾರದಪುಡಿ ಹಾಕಿ ಎಣ್ಣೆ ಬಿಡುವವರೆಗೆ ಮಗುಚಿ ಇಡಿ. ತಣಿದ ಮೇಲೆ ಬಾಟಲ್ಲಿಗೆ ತುಂಬಿ ಪ್ರೆಡ್ಜ್‌ ಮೂಲೆಯಲ್ಲಿ ಇಡಿ. ಒಂದು ವರುಷ ಕೆಡುವುದಿಲ್ಲ. ತೊಕ್ಕು ತರ ತಿಂಡಿಗೆ, ಅನ್ನಕ್ಕೆ ಉಪಯೋಗಿಸಬಹುದು. ಚಳಿಗಾಲದಲ್ಲಿ ಮಾವಿನಕಾಯಿ ಚಿತ್ರಾನ್ನ ತಿನ್ನಬೇಕೆನ್ನಿಸಿದರೆ, ಒಗ್ಗರಣೆ ಮಾಡಿ, ಈ ಹಿಂಡಿ ಹಾಕಿ ಅನ್ನ ಕಲೆಸಿದರೆ ಚಿತ್ರಾನ್ನ ರೆಡಿ.

ಕೋಲಾರ: ಮಾವು ರಕ್ಷಿಸಲು ಮೋಹಕ ಬಲೆ

5. ದಿಂಡಿನಕಾಯಿ ಗೊಜ್ಜು

ಮಾವಿನಕಾಯಿವನ್ನು ಕುಕ್ಕರಿನಲ್ಲಿ ಬೇಯಿಸಿ. ಅನ್ನ, ಬೇಳೆ ಇಡುವಾಗ ಒಂದು ತಟ್ಟೆಯಲ್ಲಿ ಮಾವಿನಕಾಯಿ ಎರಡು ಹೋಳು ಮಾಡಿ ಇಟ್ಟು ಬೇಯಿಸಿಕೊಳ್ಳಿ. ಇದಕ್ಕಾಗಿ ಮತ್ತೆ ಕುಕ್ಕರ್‌ ಇಡಲು ಹೋಗಬೇಡಿ. ತಣ್ಣಗಾದ ನಂತರ ತಿರುಳನ್ನು ಸಿಪ್ಪೆಯಿಂದ ಪ್ರತ್ಯೇಕಿಸಿ, ಚೆನ್ನಾಗಿ ಕಿವಿಚಿ, ಉಪ್ಪು, ಚೂರು ಬೆಲ್ಲ ಬೆರೆಸಿ, ಚೂರು ಮೆಂತ್ಯೆ, ಜೀರಿಗೆ ಹುರಿದು ಕುಟ್ಟಿಸೇರಿಸಿ. ಖಾರಕ್ಕೆ ತಕ್ಕಷ್ಟುಹಸಿಮೆಣಸಿನಕಾಯಿ ಹೆಚ್ಚಿಕೊಂಡು, ಇಂಗು, ಸಾಸಿವೆ, ಜೀರಿಗೆ, ಒಣಮೆಣಸು, ಚಿಟಿಕೆ ಅರಿಶಿನ, ಕರಿಬೇವಿನ ಉದ್ದದ ಒಗ್ಗರಣೆ ಕೊಡಿ.

click me!