
- ಮಾಲಾ.ಮ.ಅಕ್ಕಿಶೆಟ್ಟಿ, ಬೆಳಗಾವಿ
ಅಡುಗೆಯೊಂದು ಅಧ್ಯಾತ್ಮ. ಕೆಲವರಿಗೆ ದಕ್ಕುತ್ತದೆ ಕೆಲವರಿಗೆ ಇಲ್ಲ. ದಕ್ಕಿದವರಿಗೆ ಅದು ನಿಜವಾಗಲೂ ಧ್ಯಾನ, ಶಕ್ತಿ, ಪ್ರೇರಣೆ, ಆನಂದ ಮತ್ತು ಆತ್ಮತೃಪ್ತಿ. ದಕ್ಕದವರಿಗೆ ಅದೊಂದು ಬೇಸರ, ಕಾಲಹರಣದ ಕಾರ್ಯ ಮತ್ತು ಅನಾಸಕ್ತಿಗೆ ನೂರೆಂಟು ಕಾರಣಗಳ ಯಾದಿ.
ನನ್ನ ತಾಯಿ ನಾವು ಚಿಕ್ಕವರಿದ್ದಾಗಿನಿಂದಲೂ ಮನೆಯ ಎಲ್ಲ ಕೆಲಸಗಳನ್ನು ಕಲಿಸುತ್ತಿದ್ದಳು. ಕಸಗುಡಿಸುವುದು, ನೆಲ ಒರೆಸುವುದು, ಪಾತ್ರೆ ತೊಳೆಯುವುದು, ಬಟ್ಟೆ ಒಗೆಯುವುದು, ಜೊತೆಗೆ ಅಡುಗೆಯ ಸಣ್ಣ ಸಣ್ಣ ಕೆಲಸಗಳನ್ನು ಮಾಡಲು ಹಚ್ಚುತ್ತಿದ್ದಳು. ‘ಜಗತ್ತಿನಲ್ಲಿ ಯಾವ ಕೆಲಸಗಳಿಗೂ ಕೆಲಸದವರನ್ನು ಇಟ್ಟುಕೊಳ್ಳಿ. ಆದರೆ ಅಡುಗೆ ಮಾತ್ರ ನೀವೇ ಮಾಡಿ’ ಎಂದು ಅವಾಗಲೇ ಹೇಳಿ ಕಲಿಸಿದಾಕೆ. ಆಕೆಯ ಕಣ್ಣಲ್ಲಿ ಅದು ದೇವರ ಪೂಜೆ ಮಾಡಿದಷ್ಟೇ ಪವಿತ್ರ. ನಮ್ಮಿಷ್ಟದ ಇಷ್ಟಲಿಂಗವನ್ನು ನಾವೇ ಪೂಜಿಸಬೇಕು, ಬೇರೆಯವರಿಂದ ಅಲ್ಲ ಎನ್ನುವುದು ಅವಳ ಗಟ್ಟಿಯಾದ ನಿಲುವು ಮತ್ತು ಅದನ್ನು ಆಕೆ ತಾನೂ ಪಾಲಿಸುತ್ತಿದ್ದು ಮತ್ತು ನಮ್ಮಿಂದ ಇನ್ನೂವರೆಗೂ ಪಾಲಿಸುವಂತೆ ಮಾಡಿದ್ದು ಹೆಗ್ಗುರುತು.
ಕೆವಿ ತಿರುಮಲೇಶ್; ಹೊರನಾಡಿನ ಪರಮ ಕವಿ
ಅವ್ವ ನೌಕರಿ ಮಾಡುತ್ತಿದ್ದರಿಂದ ಎಲ್ಲರೂ ಮನೆ ಕೆಲಸ ಮಾಡುವುದು ಕಡ್ಡಾಯವಾಗಿತ್ತು. ಸಣ್ಣವರಿದ್ದಾಗಿಂದಲೇ ಅಡುಗೆಯ ಚಿಕ್ಕ ಚಿಕ್ಕ ಕೆಲಸಗಳು ಅಂದರೆ ಉಳ್ಳಾಗಡ್ಡಿ ಹೆಚ್ಚಿಕೊಡುವುದು, ಹಸಿ ಖಾರವನ್ನು ಖಾರ ಕಲ್ಲಿನಲ್ಲಿ ಕುಟ್ಟಿ ಕೊಡುವುದು, ಅನ್ನಕ್ಕೆ ಅಕ್ಕಿ ಹಸುನು ಮಾಡಿಕೊಡುವುದು, ಯಳ್ಳು, ಶೇಂಗಾ ಕೊಬ್ಬರಿಯನ್ನು ಹುರಿದು ಕೊಡುವುದು, ತಪ್ಪಲು ಪಲ್ಲೆಗಳನ್ನು ಸೋಸಿ, ಕತ್ತರಿಸಿ ಕೊಡುವುದು ಇತ್ಯಾದಿಗಳೆಲ್ಲ ನಮ್ಮಿಂದ ಆಗುತ್ತಿದ್ದವು. ನಾವೂ ಅಷ್ಟೇ ಅದನ್ನ ಕೆಲಸವೆಂದು ತಿಳಿದು ಬೇಸರಿಸದೇ ಮಾಡುತ್ತಿದ್ದೆವು. ಹಸಿ ಖಾರ ಕುಟ್ಟುವುದಕ್ಕೆ ಅವ್ವಳಿಂದ ಹೊಗಳಿಕೆಯ ಮಳೆಯೇ ಸುರಿಯುತ್ತಿತ್ತು. ನನ್ನ ಹಾಗೆ ಯಾರೂ ಸಣ್ಣಗೆ ಅಂದರೆ ಗಂಧದ ಹಾಗೆ ಖಾರ ಕುಟ್ಟಲು ಸಾಧ್ಯವಿಲ್ಲ ಎನ್ನುತ್ತಿದ್ದಳು ಅವ್ವ. ಆ ಹೊಗಳಿಕೆಯ ತುರಾಯಿಯನ್ನು ಹಾಕಿಕೊಂಡು ಖಾರ ಕುಟ್ಟಿದ್ದೆ ಕುಟ್ಟಿದ್ದು... ಈಗಲೂ ಕುಟ್ಟುತ್ತಿದ್ದೇನೆ. ಮುಂದೆ ಹೈಸ್ಕೂಲಿಗೆ ಬಂದಾಗ ನಿರಂತರವಾಗಿ ಕುರ್ಚಿ ಮೇಲೆ ಕುಳಿತು ಅಭ್ಯಾಸ ಮಾಡುತ್ತಿದ್ದರೆ ಅಪ್ಪ ಬಂದು ಚೇಂಜ್ ಆಫ್ ವರ್ಕ್ ಇಸ್ ರಿಲ್ಯಾಕ್ಸೇಶನ್ ಎಂದು ಚುರುಮರಿ ಒಗ್ಗರಣಿಯೋ, ಉಪ್ಪಿಟ್ಟೋ ಅಥವಾ ಅವಲಕ್ಕಿಯನ್ನು ಸಂಜೆ ಮಾಡುವಂತೆ ಒತ್ತಾಯಿಸುತ್ತಿದ್ದರು. ಅಪ್ಪನ ಪ್ರಕಾರ ಕೆಲಸದಲ್ಲಿ ಬದಲಾವಣೆ ತಂದರೆ ಮತ್ತೆ ಓದಿಗೆ ಪ್ರೇರಣೆ ಸಿಗುತ್ತದೆ ಎನ್ನುವುದು, ಜೊತೆಗೆ ಆ ಸಂಜೆಯ ಐದರಿಂದ ಆರರ ಹೊತ್ತಿನಲ್ಲಿ ಅವರಿಗೆ ಏನಾದರೂ ತುಸು ಬಾಯಾಡಿಸುವ ಚಪಲದ ಪೂರೈಕೆಯೂ ಅದರಿಂದ ಆಗುತ್ತಿತ್ತು. ನಾವು ಕೂಡ ಅಪ್ಪ ಹಂಗೆ ಹೇಳುವುದಕ್ಕೆ ಕಾಯ್ತಿದ್ದು ತಡ ಮಾಡದೇ ಚುರುಮುರಿಯೋ ಅಥವಾ ತೆಳು ಅವಲಕ್ಕಿ ಮಾಡೇ ಬಿಡುತ್ತಿದ್ದೆವು. ಬಾಯಿಯ ಎಲ್ಲ ರಸಗಳು ಸ್ರವಿಸಿ, ರುಚಿ ಅನುಭವಿಸಿ, ಚಹಾ ಕುಡಿದು ಮತ್ತೆ ಅಭ್ಯಾಸದಲ್ಲಿ ನಿರತರಾಗುತ್ತಿದ್ದೆವು.
ಹಾಗೆ ನೋಡಿದರೆ ಈ ಅಡುಗೆಯ ಸಾಮಾನುಗಳ ದಿವ್ಯದರ್ಶನವಾದದ್ದು ಬಾಲ್ಯದಲ್ಲೇ. ನಾವಾಗ ಹಳ್ಳಿಯಲ್ಲಿದ್ದೆವು. ಓಣಿಯಲ್ಲಿ ನಮ್ಮ ವಾರಿಗೆಯವರು ಮತ್ತು ಸ್ವಲ್ಪ ದೊಡ್ಡವರು ಪ್ರತಿ ಬೇಸಿಗೆಯಲ್ಲಿ ಚಿಗುಳಿ ಕುಟ್ಟುವ ಕಾರ್ಯವನ್ನು ಮಾಡುತ್ತಿದ್ದರು. ಒಬ್ಬರು ಹುಣಸೆ, ಇನ್ನೊಬ್ಬರು ಉಪ್ಪು ಹಾಗೂ ಇತರರು ಖಾರ, ಜೀರಿಗೆ, ಬೆಳ್ಳುಳ್ಳಿ, ಕರಿಬೇವು, ಲಿಂಬೆ ಎಲೆ ಇತ್ಯಾದಿಗಳನ್ನು ತರುತ್ತಿದ್ದೆವು. ಒಬ್ಬರು ಖಾರ ಕಲ್ಲು ತರಬೇಕಿತ್ತು. ಕೊನೆಗೆ ಒಂದು ಪ್ರಶಾಂತವಾದ ಸ್ಥಳದಲ್ಲಿ ಕೂತು ಎಲ್ಲ ಸಾಮಾನುಗಳನ್ನು ಹಾಕಿ ಹುಣಸೆಯನ್ನು ಸಣ್ಣಗೆ ಕುಟ್ಟಿ, ಚಿಗಳಿ ಎಂಬ ಅತ್ಯದ್ಭುತ ತಿನಿಸನ್ನು ತಯಾರಿಸುತ್ತಿದ್ದೆವು. ಆ ದಿನಗಳಿಂದಲೇ ಅಡುಗೆ ಸಾಮಾನುಗಳ ನಂಟು ಬೆಳಿಯಿತೆಂದರೆ ತಪ್ಪಾಗಲಾರದು.
ಕೃತಕ ಬರಹಗಾರ; ಕಂಪ್ಯೂಟರ್ ಕೈ ಬರೆಯುತ್ತದೆ
ಹೀಗೆ ಶುರುವಾದ ಅಡುಗೆಯ ನಂಟಿನಿಂದ ಅನ್ನ, ಅವಲಕ್ಕಿ, ಉಪ್ಪಿಟ್ಟು, ಚಹಾ, ಷರಬತ್, ಚುರುಮುರಿ ಒಗ್ಗರಣಿ ಇತ್ಯಾದಿ ಸಣ್ಣ ಅಡಿಗೆಯ ರೆಸಿಪಿಗಳನ್ನು ಮಾಡಲು ಕಲಿತೆ. ನಂತರ ಜೋಳದ ರೊಟ್ಟಿ ಮಾಡುವ ದೊಡ್ಡ ಘನ ಕಾರ್ಯ ಕಲಿಯುವುದಿತ್ತು. ಪಿಯುಸಿ ಇದ್ದಾಗ ಹಗುರವಾಗಿ ರೊಟ್ಟಿಯನ್ನು ಬಡಿಯಲು ಕಲಿತೆ. ಮೊದಮೊದಲು ರೊಟ್ಟಿ ಗುಂಡಗೆ, ಅಂಚು ಹರಿಯದ ಹಾಗೆ ತಟ್ಟಲು ಬರುತ್ತಿರಲಿಲ್ಲ. ಸರಿಯಾಗಿ ಗುಂಡಾದರೆ,ಅಂಚು ಹರಿಯುತಿದ್ದವು.ಅಂಚು ಸರಿಯಿದ್ದರೆ ಹೆಂಚಿನ ಮೇಲೆ ಉಬ್ಬುತ್ತಿರಲಿಲ್ಲ. ಇದೆಲ್ಲಾ ಆದರೆ ಬಾಯಲ್ಲಿ ರೊಟ್ಟಿ ಮೃದುವಾಗಿರುತ್ತಿರಲಿಲ್ಲ. ವರ್ಷಗಳು ಕಳೆದಂತೆ ರೊಟ್ಟಿ ಗುಂಡಾಗಿ ಅಂಚು ಹರಿಯದೇ ಉಬ್ಬಿ ಉಬ್ಬಿ ಬರತೊಡಗಿದವು.
ಅಡುಗೆ ಮಾಡಲು ಕಲಿಯುವಾಗಿನ ಅವಾಂತರಗಳಂತೂ ಪ್ರತಿ ವ್ಯಕ್ತಿಯ ಜೀವನದಲ್ಲಿ ನಡೆದೇ ಇರುತ್ತದೆ. ಅವಿಲ್ಲದೆ ಅಡುಗೆ ಕಲಿಕೆ ಅಸಾಧ್ಯ. ರವೆ ಎಂದು ಇಡ್ಲಿ ರವೆ, ಸಕ್ಕರೆ ಎಂದು ಉಪ್ಪು, ಅತಿಯಾದ ನೀರು ಅಕ್ಕಿಗೆ ಹಾಕುವ, ಹೆಚ್ಚು ಎಣ್ಣೆಯನ್ನು ಹಾಕಿ ಒಗ್ಗರಣೆ ಕೊಟ್ಟ, ಅವಲಕ್ಕಿಯನ್ನು ಅತಿಯಾಗಿ ನೀರಿನಲ್ಲಿ ನೆನೆಸಿ ಉಂಡೆಯಾಗಿಸಿದ, ಉಪ್ಪಿಟ್ಟು ಮಾಡಲು ನೀರಿನ ಪ್ರಮಾಣ ಗೊತ್ತಾಗದೇ ಹೆಚ್ಚು ನೀರು ಹಾಕಿ ಕುದಿಸಿ, ಗಂಜಿಯನ್ನೇ ಮಾಡಿದ, ಒಂದೋ ಎರಡೋ ಚಮಚ ಖಾರದ ಪ್ರಮಾಣ ತಿಳಿಯದೆ ಹಾಕಿ ಎಲ್ಲರನ್ನೂ ಉಸ್ ಉಸ್ ಎನಿಸಿದ, ಉಪ್ಪು ಹೆಚ್ಚು ಹಾಕಿ ಕಾಯಿಪಲ್ಲೆಯಲ್ಲಿ ಕಡಲನ್ನು ನಿರ್ಮಿಸಿದ ಹಲವಾರು ಅವಾಂತರಗಳು ಹೆಚ್ಚಿನವರ ಸ್ಮರಣೆಯಲ್ಲಿ ಜೀವಂತ. ಅವುಗಳನ್ನು ನೆನಪಿಸಿಕೊಳ್ಳುತ್ತಲೇ ಪರಿಪೂರ್ಣವಾಗಿ ಅಲ್ಲದಿದ್ದರೂ ನಾಲ್ಕು ಜನರಿಗೆ ರುಚಿ ಹತ್ತುವಂತೆ ಅಡುಗೆಯನ್ನು ಮಾಡಲು ಕಲಿತರೆ ಸಾರ್ಥಕತೆ.
ಜಗತ್ತು ವಿಪರ್ಯಾಸದ ಸಂತೆ. ಅಡುಗೆಯಲ್ಲಿ ಪ್ರವೀಣೆ ಎನಿಸಿಕೊಂಡ ಮಹಿಳೆ ತರ ತರ ಅಡುಗೆ ಮಾಡಿ ಹಾಕಿದರೂ ಗಂಡನಾದವನಿಗೆ ಹೊರಗೆ ತಿನ್ನುವ ಹವ್ಯಾಸ. ಅಡುಗೆ ಸರಿಯಾಗಿ ಮಾಡಲು ಬರದ ಹೆಂಡತಿಯ ಗಂಡನಿಗೆ ಮನೆ ಊಟವೆಂದರೆ ಪ್ರಾಣ. ವಿಧ ವಿಧ ಅಡುಗೆ ಮಾಡಲು ಬರುವ ಮಹಿಳೆಗೆ ಅತಿಯಾದ ಬಡತನ ಕಾಡಿದರೆ, ಸಿರಿವಂತಿಕೆ ತುಂಬಿ ತುಳುಕುತ್ತಿದ್ದರೂ ಅಡುಗೆ ಮಾಡಲು ಬರದ ಮಹಿಳೆ ಮತ್ತೊಂದೆಡೆ ಅಥವಾ ದುಡ್ಡಿನ ಅಹಮ್ಮಿನಲ್ಲಿ ಅಡುಗೆ ಮಾಡಲು ಆಳುಗಳಿವೆ ಎಂಬ ದರ್ಪ. ಅಡುಗೆಯನ್ನೇ ವೃತ್ತಿ ಮಾಡಿಕೊಂಡ ಹೋಟೆಲ್, ಖಾನಾವಳಿ, ರೆಸ್ಟೋರೆಂಟ್ ಮತ್ತು ಮದುವೆ ಛತ್ರಗಳು ಮತ್ತೊಂದೆಡೆ. ಅಡುಗೆ ವೃತ್ತಿಯಾಗಿಯೂ ಹೊಟ್ಟೆಯನ್ನು ಪೊರೆಯುತ್ತಿದೆ. ಮನೆಯ ಅಡುಗೆ ಪ್ರಿಯವೆಂದು ಅದಕ್ಕೆ ಜೋತು ಬಿದ್ದರೂ ಮನೆಯಿಂದ ಹೊರಗೆ ಹೋದಾಗ ಅಥವಾ ಪ್ರವಾಸದಲ್ಲಿ ಇದ್ದಾಗ ನಮಗೆ ಸಹಾಯಕ್ಕೆ ಬರುವುದು ಇವೇ ಹೋಟೆಲ್ ಮತ್ತು ಖಾನಾವಳಿಗಳು.
ಕೋವಿಡ್ ಸಮಯದಲ್ಲಿ ಹೊರಗಡೆ ತಿನ್ನುವುದು ಕಷ್ಟವಾದಾಗ ಅಡುಗೆ ಬಾರದವರು ಅಡುಗೆ ಮಾಡಲು ಕಲಿತರು. ಅಡುಗೆ ಮಾಡಲು ಬರುವವರಂತೂ ಮನೆಯಲ್ಲಿ ಕುಳಿತು ವಿಧ ವಿಧ ಭಕ್ಷ್ಯಗಳನ್ನು ಯೂಟ್ಯೂಬ್ ನಲ್ಲಿ ನೋಡಿ, ಕಲಿತು, ಮಾಡಿ, ರುಚಿ ತೋರಿಸಿ ಮನೆಯವರಿಂದ ಹೊಗಳಿಕೆಯನ್ನು ಪಡೆದದ್ದೆ ಪಡೆದದ್ದು. ಮಾಡಿದ್ದನ್ನು ಸಾಮಾಜಿಕ ಜಾಲತಾಣದಲ್ಲಿ ಸ್ಟೇಟಸ್ ಹಾಕಿ ತೃಪ್ತಿ ಹೊಂದಿದ್ದು ಸತ್ಯವೇ ಸರಿ. ಇದರಲ್ಲಿ ಬಹುಶಃ ಇದ್ದುಳ್ಳ ಎಲ್ಲರೂ ಭಾಗಿಯೇ! ಆದರೆ ಘಾಸಿಯಾದ ವಿಷಯವೇನೆಂದರೆ ಕರೋನ ಹೊಡೆತಕ್ಕೆ ಕೂಲಿ ಕಾರ್ಮಿಕರು, ಬಡವರು, ಉದ್ಯೋಗ ಕಳೆದುಕೊಂಡವರು ಬರಿಗಾಲಿನಲ್ಲಿ ತಮ್ಮ-ತಮ್ಮ ಊರಿಗೆ ಮರಳಲು ಕಷ್ಟ ಪಡುತ್ತಿರುವಾಗ ನಾವೆಲ್ಲ ಭಕ್ಷ್ಯಗಳನ್ನು ಮಾಡಿ ತಿಂದು ಕುಟುಂಬದೊಂದಿಗೆ ಸಮಯವೆಂದು ಆನಂದಿಸಿದ್ದು. ತಿನಿಸುಗಳನ್ನು ಮಾಡಿ, ನೀಡಿ, ಉಂಡ ಜೀವಕ್ಕೆ ಆ ಕಾಲದಲ್ಲಿ ಮಾತ್ರ ತುಂಬಾ ಮನ ನೋಯ್ದಿತ್ತು. ಎಲ್ಲವೂ ಮತ್ತೆ ಸರಿಯಾಗಲಿ ಎಂಬುದೊಂದೇ ಪ್ರಾರ್ಥನೆಯನ್ನು ಆ ಪರಮಾತ್ಮನಲ್ಲಿ ಬೇಡಿಕೊಂಡಿದ್ದೆ.
ದಾಸೋಹವೆಂಬ ಹಂಚಿಕೊಳ್ಳುವ ಪರಿಕಲ್ಪನೆಯನ್ನು 12ನೇ ಶತಮಾನದಲ್ಲೇ ಕೊಟ್ಟ ಬಸವಣ್ಣ ಎಂದೆಂದಿಗೂ ಪ್ರಸ್ತುತ. ಸತ್ಯ ಶುದ್ಧ ಕಾಯಕದಿಂದ ಬಂದ ಹಣದಲ್ಲಿ ಸ್ವಲ್ಪವಾದರೂ ದಾಸೋಹಕ್ಕೆ ಒಳಪಡಿಸಬೇಕೆಂಬ ಒತ್ತಾಸೆಯನ್ನು ಶರಣರು ನೀಡಿದ್ದು ಎಷ್ಟೊಂದು ನಿಖರ ಮತ್ತು ಕಾಲಾತೀತ. ಮನುಷ್ಯನಿಗೆ ಬಟ್ಟೆ, ಮನೆಗಿಂತಲೂ ಹಸಿವನ್ನು ನೀಗಿಸುವುದು ಮುಖ್ಯವಾಗಿದೆ. ದುಡಿತದ ಜೊತೆಗೆ ದಾಸೋಹವನ್ನು ಎಲ್ಲರೂ ಅನುಸರಿಸಿದರೆ ಬಹುಶಃ ಜಗತ್ತಿನಲ್ಲಿ ಯಾರು ಹಸಿವೆಯಿಂದ ಸಾಯುವುದಿಲ್ಲ. ಇದನ್ನು ಅನುಸರಿಸಿದ ಕೆಲ ದೇವಾಲಯಗಳು ದೇವರ ದರ್ಶನದ ನಂತರ ಭಕ್ತಾದಿಗಳಿಗೆ ಪ್ರಸಾದವನ್ನು ನೀಡುತ್ತಿವೆ. ಇಂಥ ದೇವಾಲಯಗಳಲ್ಲಿ ಅಡುಗೆ ಮಾಡುವವರ, ನೀಡುವವರ ಮತ್ತು ಶುಚಿಗೊಳಿಸುವವರ ಕಾಯಕವನ್ನು ಮನಸ್ಸಿಂದ ಮೆಚ್ಚಲೇಬೇಕು. ಶುಚಿ, ರುಚಿಯಾದ ಅಡುಗೆಯನ್ನು ಮಾಡಲು ಮಾಡುವವರ ಮನಸ್ಸು ಶುದ್ಧ ಇರಬೇಕೆನ್ನುತ್ತಾರೆ. ಹಾಗಾದಾಗ ಮಾತ್ರ ಅಡುಗೆ ಮಾಡಿದವರ ಸಾರ್ಥಕ್ಯ ಉಣ್ಣುವವರಲ್ಲಿ ಕಾಣಬಹುದು.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.