ಇದೆಂಥಾ ಪವಾಡ, ಪೂಜೆ ವೇಳೆ ಅಲಗುವ 16 ಅಡಿಯ ಹುತ್ತ!

By Suvarna News  |  First Published Nov 8, 2022, 3:02 PM IST

ಕಾಫಿನಾಡಲ್ಲೊಂದು ವಿಸ್ಮಯ ಉತ್ಸವ
ಆಚರಣೆಗಿದೆ 400 ವರ್ಷಗಳ ಇತಿಹಾಸ
ಸೂರಿಲ್ಲದ ಹುತ್ತವಾದರೂ ಗಾಳಿಮಳೆಗೆ ಕರಗದೆ ಬೆಳೆಯುತ್ತಲೇ ಇದೆ!


ವರದಿ: ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು 

ಈ ಹುತ್ತಕ್ಕೆ ಸೂರಿಲ್ಲ, ತಡೆಗೋಡೆಗಳಿಲ್ಲ, ಆದರೂ ಶತಶತಮಾನಗಳಿಂದ ಇದು ಕರಗಿಲ್ಲ, ಸೊರಗಿಲ್ಲ. ಗಾಳಿಮಳೆಗೆ ಸವೆದಿಲ್ಲ.. ಬದಲಿಗೆ ಬೆಳೆಯುತ್ತಲೇ ಇದೆ. ಸಾಲದ್ದಕ್ಕೆ ಹುತ್ತದ ಸುತ್ತಲೂ ಕಲ್ಲು-ಸಿಮೆಂಟ್‍ಗಳಿಂದ ಬಂದೋಬಸ್ತ್ ಮಾಡಿದ್ದರೂ ಕೂಡ ದೀಪಾವಳಿ ಅಮಾವಾಸ್ಯೆಯ ನಂತರದ ಮಕ್ಕಳ ಹುಣ್ಣಿಮೆಯ ದಿನ ಮಹಾಮಂಗಳಾರತಿ ವೇಳೆ ಅಲುಗಾಡಿ ಭಕ್ತರ ಸಂಖ್ಯೆಯನ್ನು ಬೆಳೆಸಿಕೊಳ್ಳುತ್ತಲೇ ಇದೆ. 

Tap to resize

Latest Videos

ಆಚರಣೆಗೆ 400 ವರ್ಷಗಳ ಇತಿಹಾಸ
ಸುಮಾರು ನಾಲ್ಕು ಶತಮಾನಗಳ ಹಿಂದೆ ದನ ಕಾಯುವ ಹುಡುಗರು ಕಟ್ಟಿದ ಮಣ್ಣಿನ ಗೂಡು ಇಂದು ಸಾವಿರಾರು ಭಕ್ತರ ಇಷ್ಟದೈವವಾಗಿದೆ. ಈಗ ಈ ಹುತ್ತ ಬರೀ ಮಣ್ಣಿನ ಗೂಡಲ್ಲ. ದೈವಿಶಕ್ತಿಯ ಗುಡಿ. 400 ವರ್ಷಗಳ ಹಿಂದೆ, ಚಿಕ್ಕದ್ದಿದ್ದ ಗೂಡು ಇಂದು 16 ಅಡಿಗೂ ಎತ್ತರ ಬೆಳೆದಿದೆ ವರ್ಷಪೂರ್ತಿ ಮಣ್ಣಿನ ಗೊಂಬೆಯಂತೆ ನಿಂತ ಹುತ್ತ ವರ್ಷಕ್ಕೊಮ್ಮೆ ಭಕ್ತರನ್ನ ಮೂಕವಿಸ್ಮಿತರನ್ನಾಗಿಸುತ್ತೆ. ಈ ಪವಾಡವನ್ನ ನೋಡಲೆಂದು ಬಂದವರು ನಾಗಪ್ಪನ ಭಕ್ತರಾಗಿ ಪ್ರತಿ ವರ್ಷ ಈ ಉಣ್ಣಕ್ಕಿ ಉತ್ಸವಕ್ಕೆ ಬರುತ್ತಿದ್ದಾರೆ. 

Astrology Tips: ದೇವರ ಮನೆಯಲ್ಲಿ ದೀಪ ಬೆಳಗುವಾಗ ಆಗದಿರಲಿ ಈ ತಪ್ಪು!

ಈ ಅಪರೂಪದ ಉಣ್ಣಕ್ಕಿ ಜಾತ್ರೆ ನಡೆಯುವುದು ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಬಣಕಲ್ ಸಮೀಪದ ಬಾನಹಳ್ಳಿಯಲ್ಲಿ. ಈ ಜಾತ್ರೆಯಲ್ಲಿ ಈ ಮಹಾಮಂಗಳಾರತಿ ವೇಳೆ ಈ ಹುತ್ತಾ ಸುಮಾರು 10 ರಿಂದ 15 ಡಿಗ್ರಿ ಅಂತರದಲ್ಲಿ ಅಲುಗಾಡುತ್ತೆ. ಹೊಯ್ಸಳರ ಕಾಲದಿಂದಲೂ ನಡೆದು ಬರುತ್ತಿರುವ ಇಲ್ಲಿನ ಆಚರಣೆಗೆ 400 ವರ್ಷಗಳ ಇತಿಹಾಸವಿದೆ. 

ತರ್ಕಕ್ಕೆ ನಿಲುಕದ ಹರಕೆ, ಆಚರಣೆ
ಉತ್ಸವದಂದು ಯಾವುದೇ ಗಾಯವಾಗದ ಕರುವಿನ ಕಿವಿಯನ್ನ ಕತ್ತರಿಸಿ ದೇವರ ಕರುವೆಂದು ಕಾಡಿಗೆ ಬಿಡುವ ವಾಡಿಕೆ ಇಂದಿಗೂ ಜೀವಂತವಿದೆ. ಇದರಿಂದ ಊರಿನ ದನಕರುಗಳು ಆರೋಗ್ಯದಿಂದ ಇದ್ದು ಯಾವುದೇ ಅನಾಹುತಗಳು ನಡೆಯೋದಿಲ್ಲ ಅನ್ನೋದು ನಂಬಿಕೆ. ದನ ಕಾಯುವ ಹುಡುಗರು ಕಟ್ಟಿದ ಹುತ್ತವಾದ್ದರಿಂದ ಕರುವನ್ನ ಕಾಡಿಗೆ ಹೊಡೆಯೋ ಆಚರಣೆ ಬೆಳೆದು ಬಂದಿದೆ. ಉತ್ಸವದ ದಿನ ಕರುವನ್ನ ಹುತ್ತಕ್ಕೆ ಸುತ್ತಿಸುವ ವೇಳೆ ಕರುವಿನ ಮೇಲೆ ಮಂಡಕ್ಕಿ ಹಾಕುತ್ತೇವೆ ಎಂದು ಜನರು ಹರಕೆ ಕಟ್ಟಿಕೊಳ್ಳುತ್ತಾರೆ. ಇಲ್ಲಿ ಹರಕೆ ಕಟ್ಟಿಕೊಂಡರೆ ಎಂತಹಾ ಕಷ್ಟವೂ ಕಳೆಯುತ್ತೆ ಅನ್ನೋದು ಭಕ್ತರ ನಂಬಿಕೆ. 

ಮುಂಜಾನೆ ಎದ್ದ ತಕ್ಷಣ ಈ ಕೆಲಸ ಮಾಡಿದ್ರೆ ಲಕ್ಷ್ಮೀ ದೇವಿ ಪ್ರಸನ್ನಳಾಗ್ತಾಳೆ

ಪ್ರತಿವರ್ಷ ದೀಪಾವಳಿಯ ನಂತರದ ಮಕ್ಕಳ ಹುಣ್ಣಿಮೆಯ ಗುರುವಾರ ಅಥವಾ ಭಾನುವಾರ ಈ ಉತ್ಸವ ನಡೆಯಲಿದೆ. ಚರ್ಮರೋಗವಿರುವವರು, ಮಕ್ಕಳಾಗದವರು, ದನಕರು ಸಾಯುತ್ತಿದ್ದರೆ ಅಥವಾ ಆಗಾಗ್ಗೆ ಆರೋಗ್ಯ ಹದಗೆಡುತ್ತಿದ್ದರೆ ಇಲ್ಲಿಗೆ ಹರಕೆ ಕಟ್ಟಿದರೆ ಸಾಕು, ವರ್ಷದೊಳಗೆ ಆ ಹರಕೆ ಈಡೇರುತ್ತಂತೆ. ಹಾಗಾಗಿ, ಸುತ್ತಮುತ್ತಲಿನ ಜಿಲ್ಲೆಯ ಜನರು ಈ ನಾಗಪ್ಪನ ಮಾಯೆಗೆ ಬೆರಗಾಗಿದ್ದಾರೆ. ತರ್ಕಕ್ಕೆ ನಿಲುಕದ ಈ ಗ್ರಾಮದ ಉತ್ಸವ ಇಂದಿಗೂ ಪ್ರಶ್ನಾತೀತ. 
ಹುತ್ತ ಅಲುಗಾಡೋದ್ರ ಹಿಂದೆ ವೈಜ್ಞಾನಿಕ ಕಾರಣವಿದ್ಯೋ ಅಥವಾ ದೈವಿಶಕ್ತಿಯ ಪ್ರಭಾವವಿದ್ಯೋ ಅನ್ನೋದು ಇಂದಿಗೂ ನಿಗೂಢ. ದನ ಕಾಯೋ ಹುಡುಗರ ಭಕ್ತಿಯ ಹಿಂದಿರೋ ಈ ಹುತ್ತ ಅಲುಗಾಡುತ್ತ ಪವಾಡವನ್ನೇ ಸೃಷ್ಟಿಸಿದ್ರೆ, ಹುತ್ತ ಅಲುಗಾಡೋದ್ರ ಬಗ್ಗೆ ಆಸ್ತಿಕ ಹಾಗೂ ನಾಸ್ತಿಕರಲ್ಲಿ ಹಲವು ವಾದ-ವಿವಾದಗಳು ಇವೆ. ಆದರೆ, ನೋಡುಗರ ಕಣ್ಮುಂದೆ ನಡೆಯೋ ಈ ವಿಚಿತ್ರ ಹಾಗೂ ವಿಶಿಷ್ಠ ಪವಾಡ ಮಾತ್ರ ಎಲ್ಲರನ್ನು ಮಂತ್ರಮುಗ್ಧರನ್ನಾಗಿಸಿದೆ. 

click me!