ಹಿಂದೂಗಳ ಅತ್ಯಂತ ಪ್ರಮುಖ ಧಾರ್ಮಿಕ ಕ್ಷೇತ್ರವಾದ ಕಾಶಿಗೆ ಪೂರ್ವಾಭಿಮುಖವಾಗಿರುವ ಏಕೈಕ ದೇವಾಲಯ ಇದು ಎಂದು ಹಿರಿಯರು ಹೇಳುತ್ತಾರೆ. ಕಾಶಿಯ ಗಂಗಾ ನದಿಯ ತೀರದಲ್ಲಿ ವಿಶ್ವನಾಥಸ್ವಾಮಿಯ ದೇವಸ್ಥಾನ ಇರುವಂತೆ ನಮ್ಮ ಊರಿನ ಕಾವೇರಿ ನದಿಯ ತೀರದಲ್ಲೂ ವಿಶ್ವನಾಥಸ್ವಾಮಿಯ ದೇವಸ್ಥಾನವಿದೆ. ಇದರ ಕುರಿತು ಹೆಚ್ಚಿನ ಸಂಶೋಧನೆಗಳಾಗಬೇಕಿದೆ.
- ಸಿಂಚನ.ಎಂ.ಕೆ ಮಂಡ್ಯ
'ಶೂಟಿಂಗ್ ಮಹದೇವಪುರ' ಎಂದೇ ಪ್ರಸಿದ್ಧಿ ಪಡೆದಿರುವ ನಮ್ಮ ಊರು ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನಲ್ಲಿದೆ. ಕಾವೇರಿ ನದಿ, ರಾಜರಾಜೇಶ್ವರಿ ಅಣೆಕಟ್ಟು, ಶ್ರೀ ಕಾಶಿ ವಿಶ್ವನಾಥಸ್ವಾಮಿ, ವೆಂಕಟೇಶ್ವರ ಸ್ವಾಮಿ, ಸಿದ್ದಪ್ಪಾಜಿ, ಚಿಕ್ಕಮ್ಮ ಚಿಕ್ಕದೇವಿ, ಪಟ್ಟಲದಮ್ಮ, ಮಾರಮ್ಮ, ಕಾವೇರಿ ಬೋರೆ ದೇವರು ಮುಂತಾದ ದೇವರ ದೇವಾಲಯಗಳು, ಐತಿಹಾಸಿಕ ಬಂಗಲೆ, ಹಚ್ಚಹಸಿರಾಗಿ ಕಂಗೊಳಿಸುವ ಕೃಷಿಭೂಮಿ, ರಮ್ಯ ರಮಣೀಯ ಪ್ರಕೃತಿ ಸೌಂದರ್ಯ ಹೀಗೆ ಮುಂತಾದ ವಿಶೇಷತೆಗಳನ್ನು ಒಳಗೊಂಡಿರುವ ಒಂದು ಅತ್ಯುತ್ತಮ ಪ್ರವಾಸಿ ತಾಣವಾಗಲು ಎಲ್ಲಾ ಅರ್ಹತೆಯನ್ನು ಹೊಂದಿದೆ. ಅದರಲ್ಲೂ ಈ ಎಲ್ಲಾ ವಿಶೇಷತೆಗಳ ಮಧ್ಯೆ ಸೂರ್ಯನಂತೆ ಪ್ರಕಾಶಮಾನವಾಗಿ ಕಂಗೊಳಿಸುವುದು ನಮ್ಮ ಶ್ರೀ ಕಾಶಿ ವಿಶ್ವನಾಥಸ್ವಾಮಿ ದೇವಸ್ಥಾನ. 600ಕ್ಕೂ ಹೆಚ್ಚು ವರ್ಷಗಳ ಇತಿಹಾಸವನ್ನು ಹೊಂದಿರುವ ಈ ದೇವಸ್ಥಾನವು ಹಿಂದೂಗಳ ಅತ್ಯಂತ ಪ್ರಮುಖ ಧಾರ್ಮಿಕ ಕ್ಷೇತ್ರವಾದ ಕಾಶಿಗೆ ಪೂರ್ವಾಭಿಮುಖವಾಗಿರುವ ಏಕೈಕ ದೇವಾಲಯ ಎಂದು ಹಿರಿಯರು ಹೇಳುತ್ತಾರೆ. ಹಾಗೆಯೇ ಕಾಶಿಯ ವಿಶ್ವನಾಥಸ್ವಾಮಿಯೇ ನಮ್ಮ ಊರಿನಲ್ಲಿ ಪೂಜಿಸಲ್ಪಡುವುದರಿಂದ ಕಾಶಿಗೂ ಈ ಸ್ಥಳಕ್ಕೂ ಒಂದು ಅವಿನಾಭಾವ ಸಂಬಂಧ ಇದೆ ಎಂಬ ಮಾತು ಚಾಲ್ತಿಯಲ್ಲಿದೆ. ಕಾಶಿಯ ಗಂಗಾ ನದಿಯ ತೀರದಲ್ಲಿ ವಿಶ್ವನಾಥಸ್ವಾಮಿಯ ದೇವಸ್ಥಾನ ಇರುವಂತೆ ನಮ್ಮ ಊರಿನ ಕಾವೇರಿ ನದಿಯ ತೀರದಲ್ಲೂ ವಿಶ್ವನಾಥಸ್ವಾಮಿಯ ದೇವಸ್ಥಾನವಿದೆ. ಇದರ ಕುರಿತು ಹೆಚ್ಚಿನ ಸಂಶೋಧನೆಗಳಾಗಬೇಕಿದೆ.
ಪ್ರತೀ ವರ್ಷವೂ ಜರುಗುವ ಶ್ರೀ ಕಾಶಿ ವಿಶ್ವನಾಥಸ್ವಾಮಿ ರಥೋತ್ಸವವು ನಮ್ಮ ಊರಿನಲ್ಲಿ ನಡೆಯುವ ಬೇರೆಲ್ಲಾ ಹಬ್ಬ, ಮಹೋತ್ಸವಗಳಿಗಿಂತ ಹೆಚ್ಚು ಐತಿಹಾಸಿಕ ಹಾಗೂ ಉತ್ಸಾಹ ಪೂರ್ವಕ. ಈ ರಥೋತ್ಸವಕ್ಕೆ ಸಂಬಂಧಿಸಿದಂತೆ ಅನೇಕ ಉತ್ಸವಗಳು ಜರುಗುತ್ತವೆ. ಅವುಗಳೆಂದರೆ ಪುಣ್ಯಾಹ ಗಣಪತಿ ಪೂಜೆ ಮೂಲದೇವರ ಪ್ರಾರ್ಥನೆ, ಗಿರಿಜಾ ಕಲ್ಯಾಣೋತ್ಸವ, ಬ್ರಹ್ಮ ರಥೋತ್ಸವ ಅನ್ನ ಸಂತರ್ಪಣೆ, ಆಶ್ವಾರೋಹಣೋತ್ಸವ ಶಯನೋತ್ಸವ, ಅವಭೃತ ತೀರ್ಥಸ್ನಾನ, ತೆಪ್ಪೋತ್ಸವ, ಮಹಾಸಂಪ್ರೋಕ್ಷಣ ಕೈಲಾಸ ವಾಹನೋತ್ಸವ, ಮಹಾಭಿಷೇಕ ನಂದಿ ವಾಹನೋತ್ಸವ. ರಥೋತ್ಸವದ ಹಿಂದಿನ ದಿನದ ರಾತ್ರಿ ಗಿರಿಜಾ ಕಲ್ಯಾಣೋತ್ಸವವನ್ನು ಮಾಡಲಾಗುತ್ತದೆ. ಬಾದರಾಯನಪುರ ಪುಣ್ಯಕ್ಷೇತ್ರವಾದ ಮಹದೇವಪುರದಲ್ಲಿ ನೆಲೆಸಿರುವ ಶ್ರೀ ಕಾಶಿ ವಿಶ್ವನಾಥಸ್ವಾಮಿ ಅವರಲ್ಲಿ ಶ್ರೀ ಅನ್ನಪೂರ್ಣೇಶ್ವರಿ ಅವರನ್ನು ವಿವಾಹವಾಗುವಂತೆ ಕೇಳಿಕೊಂಡು, ಎಲ್ಲಾ ಹಿಂದೂ ಶಾಸ್ತ್ರಗಳನುಸಾರ ಗಿರಿಜಾ ಕಲ್ಯಾಣೋತ್ಸವವನ್ನು ನೆರವೇರಿಸಲಾಗುತ್ತದೆ. ನಂತರ ಕಲ್ಯಾಣೋತ್ಸವದ ಅಕ್ಷತೆಯನ್ನು ವಿವಾಹವಯಸ್ಕರಾಗಿರುವವರಿಗೆ ನೀಡಿ ಉತ್ತಮ ವಧು/ವರ ಸದೊರೆತು ಶೀಘ್ರವಾಗಿ ವಿವಾಹ ಸಂಪನ್ನವಾಗಲೆಂದು
ಆಶೀರ್ವದಿಸಲಾಗುತ್ತದೆ. ನಂತರ ಅದರ ಮುಂದಿನ ದಿನ ನಡೆಯುವ ಶ್ರೀ ಕಾಶಿ ವಿಶ್ವನಾಥಸ್ವಾಮಿಯ ರಥೋತ್ಸವವು ಬಹಳ ವಿಜೃಂಭಣೆಯಿಂದ ನಡೆಯುತ್ತದೆ. ಮುಂಜಾನೆಯೇ ರಥವನ್ನು ನಾನಾ ಬಗೆಯ ಹೂಗಳಿಂದ ಅಲಂಕರಿಸಿ, ರಥದ ಮೆರವಣಿಗೆಗೆ ಸಾಗಲಿರುವ ಉತ್ಸವ ಮೂರ್ತಿಗಳನ್ನು ಪವಿತ್ರ ಮಂಟಪದಲ್ಲಿರಿಸಿ ಪೂಜೆ ಮಾಡಲಾಗುತ್ತದೆ.
ಮಂಗಳ ರಾಹುವಿನ ಅಂಗಾರಕ ಯೋಗದಿಂದ ಸಂಕಷ್ಟ, 3 ರಾಶಿಯ ಉದ್ವೇಗ ಹೆಚ್ಚಾಗಲಿದೆ ಎಚ್ಚರ
ಊರಿನ ಮುಖಂಡರೆಲ್ಲಾ ಪೂಜೆ ಮಾಡಿ ಗ್ರಾಮದ ಒಳಿತಿಗಾಗಿ ಪ್ರಾರ್ಥಿಸುತ್ತಾರೆ. ತಹಶೀಲ್ದಾರ್, ಊರಿನ ಪ್ರಮುಖ ವ್ಯಕ್ತಿಗಳು ಸೇರಿದಂತೆ ಮುಂತಾದ ಗಣ್ಯರು ಉಪಸ್ಥಿತರಿರುತ್ತಾರೆ. ಉತ್ಸವ ಮೂರ್ತಿಗಳನ್ನು ಹೊತ್ತು 3 ಬಾರಿ ರಥದ ಸುತ್ತ ಪ್ರದಕ್ಷಿಣೆ ಮಾಡಿ ರಥದ ಮೇಲಕ್ಕೇರಿಸಲಾಗುತ್ತದೆ. ನಂತರ ದೇವಸ್ಥಾನಕ್ಕೆ ಸುತ್ತುವರೆದಿರುವ ಪ್ರಮುಖ ಬೀದಿಗಳಲ್ಲಿ ಈ ರಥವು ಸಾಗುವುದರ ಮೂಲಕ ಗ್ರಾಮಸ್ಥರ ಜೀವನದಲ್ಲಿ ಭಕ್ತಿ, ಶ್ರದ್ದೆ ಮತ್ತು ಉತ್ಸಾಹಗಳನ್ನು ಹೆಚ್ಚಿಸುತ್ತದೆ. ನವ ದಂಪತಿಗಳು ರಥವು ಸಾಗುತ್ತಿರುವಾಗ ಅದರೆಡೆಗೆ ಹಣ್ಣು, ಜವನಗಳನ್ನು ಎಸೆಯುವುದರ ಮೂಲಕ ಮಂಗಳಕರ ಜೀವನಕ್ಕಾಗಿ ಪ್ರಾರ್ಥಿಸುತ್ತಾರೆ.
ಈ ರಥೋತ್ಸವವು ಯಾವಾಗಲೂ ನಡೆಯುವುದು ಬೇಸಿಗೆಗಾಲದಲ್ಲಿ ಅದರಲ್ಲೂ 11/12 ಗಂಟೆಯ ಆಸುಪಾಸಿನಲ್ಲೆ. ಆ ಸಮಯದಲ್ಲಿ ಸೂರ್ಯನ ಶಾಖ ಹೆಚ್ಚಿರುವುದರಿಂದ ಭಕ್ತರ ದಣಿವಾರಿಸಲು ಸ್ವಯಂ ಸೇವಕರು ಮಜ್ಜಿಗೆ ಅಥವಾ ಪಾನಕದ ವ್ಯವಸ್ಥೆಯನ್ನು ಮಾಡಿರುತ್ತಾರೆ. ರಥವು ಮೆರವಣಿಗೆಗೆ ಹೋಗಿ ಮತ್ತೆ ಮಂಟಪದ ಬಳಿ ಬಂದ ಮೇಲೆ ಭಕ್ತರೆಲ್ಲರೂ ರಥಕ್ಕೆ ಪೂಜೆ ಸಲ್ಲಿಸುತ್ತಾರೆ. ನಂತರ ಅನ್ನಸಂತರ್ಪಣೆಯಲ್ಲಿ ಪ್ರಸಾದವಾಗಿ ಪಾಯಸ, ಅನ್ನ, ಸಾಂಬಾರು, ಪಲ್ಯಗಳನ್ನು ನೀಡುವುದು ವಾಡಿಕೆ.
ಶ್ರೀಕೃಷ್ಣ ಕೇಳಿದ್ದು 5 ಗ್ರಾಮ, ಈಗ 3 ಶ್ರದ್ಧಾ ಕೇಂದ್ರ, ಕಾಶಿ ಮಥುರಾ ಕುರಿತು ಸಿಎಂ ಯೋಗಿ ಮಹತ್ವದ ಹೇಳಿಕೆ!
ವರ್ಷ ಪೂರ್ತಿ ಇಂತಹ ಹಲವಾರು ಆಚರಣೆಗಳನ್ನು ನಡೆಸಿಕೊಂಡು ಬರುವ ನಮ್ಮ ಊರಿನಲ್ಲಿ ಸದಾ ಜೀವನೋತ್ಸಾಹ ಜೀವಂತವಾಗಿರುತ್ತದೆ. ನಮ್ಮ ಊರಾದ ಮಹದೇವಪುರ ಎಂಬ ಹೆಸರಲ್ಲೇ ಆ ಮಹಾದೇವ, ದೇವಾದಿದೇವ ಶಿವನಿದ್ದಾನೆ. ನಮ್ಮ ಹಿಂದೂ ಧರ್ಮದ ಪ್ರಕಾರ ತ್ರಿಮೂರ್ತಿಗಳಲ್ಲಿ ಸಂಹಾರಕನಾದ ಶಿವನೇ ನಮ್ಮನ್ನು ಇಹಬಂಧನದಿಂದ ಬಿಡುಗಡೆಗೊಳಿಸಿ ಮುಕ್ತಿ ನೀಡುವವನು. ಆದ್ದರಿಂದ ಯಾವುದೇ ಮನುಷ್ಯನಾದರೂ ಶಿವನ ಮೇಲೆ ವಿಶೇಷವಾದ ಶ್ರದ್ಧಾಭಕ್ತಿಗಳನ್ನು ಹೊಂದಿರುತ್ತಾನೆ. ಇಂತಹ ಐತಿಹಾಸಿಕ ಕಾಶಿ ವಿಶ್ವನಾಥಸ್ವಾಮಿಯ ದೇವಸ್ಥಾನವನ್ನು ಮತ್ತಷ್ಟು ಮಗದಷ್ಟು ಅಭಿವೃದ್ಧಿ ಮಾಡುತ್ತಾ, ಅದರ ಸಂಬಂಧಿತ ಮಹೋತ್ಸವಗಳನ್ನು ಆಚರಿಸುತ್ತಾ ಅದನ್ನು ಒಂದು ಶ್ರೇಷ್ಠ ಸನಾತನ ಪರಂಪರೆಯ ಧಾರ್ಮಿಕ ಕ್ಷೇತ್ರವನ್ನಾಗಿ ಮಾಡಬೇಕು ಎಂಬುದೇ ಗ್ರಾಮಸ್ಥರಾದ ನಮ್ಮ ವಿನಂತಿ.