ಮಾನಸಿಕ ಒತ್ತಡ ನಿವಾರಣೆ, ಬುದ್ದಿಶಕ್ತಿ ಚೇತರಿಕೆಗೆ ಅಗ್ನಿಹೋತ್ರ ಬಹಳ ಒಳ್ಳೆಯದು..!

By Kannadaprabha NewsFirst Published Aug 3, 2020, 9:34 AM IST
Highlights

ಮಾನಸಿಕ ಒತ್ತಡ ನಿವಾರಣೆ, ಬುದ್ಧಿಶಕ್ತಿಯ ಚೇತರಿಕೆ, ಪ್ರಕೃತಿಯ ಅಂಗ ನಾನು ಎಂಬ ಭಾವನೆಯನ್ನು ಉಂಟುಮಾಡುವುದು, ಬಾಧಕ ಬ್ಯಾಕ್ಟೀರಿಯಾಗಳ ನಾಶ, ಕುಟುಂಬದಲ್ಲಿ ಒಗ್ಗಟ್ಟು, ಕೃಷಿ ಚಟುವಟಿಕೆಗಳಿಗೆ ಪ್ರಯೋಜನ ಹೀಗೆ ಅನೇಕಾನೇಕ ಲಾಭಗಳು ಅಗ್ನಿಹೋತ್ರದಲ್ಲಿವೆ.

1984 ರಲ್ಲಿ ಭೋಪಾಲದಲ್ಲಿ ನಡೆದ ಅನಿಲ ದುರಂತದ ಸಮಯದಲ್ಲಿ ಅಲ್ಲಿಂದ ಕೇವಲ 1 ಕಿ.ಮೀ. ದೂರದಲ್ಲಿದ್ದ ರಾಥೋಡ್‌ ಕುಟುಂಬದವರಿಗೆ ಏನೂ ಆಗಿರಲಿಲ್ಲವಂತೆ. ಅದಕ್ಕೆ ಕಾರಣ ಅವರ ಮನೆಯಲ್ಲಿ ನಿತ್ಯ ಅಗ್ನಿಹೋತ್ರ ಮಾಡುತ್ತಿದ್ದರು ಎಂಬುದು ನಂತರ ತಿಳಿಯಿತು. ಅಗ್ನಿಹೋತ್ರದಿಂದಾಗಿ ಅವರಿಗೆ ಅನಿಲ ದುರಂತದ ಸಮಯದಲ್ಲಿ ಉಸಿರುಗಟ್ಟುವುದು ಮುಂತಾದ ಯಾವುದೇ ಸಮಸ್ಯೆ ಉಂಟಾಗಿರಲಿಲ್ಲವಂತೆ.

‘ಅಗ್ನಿ’ ಎಂದರೆ ಬೆಂಕಿ, ಹೋತ್ರ ಎಂದರೆ ಸಮರ್ಪಣೆ, ಆಹುತಿ. ಪುರುಷಸೂಕ್ತದಲ್ಲಿ ಪ್ರತಿಯೊಬ್ಬರೂ ಯಜ್ಞ ಮಾಡಬೇಕೆಂದು ಹೇಳಲಾಗಿದೆ. ಯಜ್ಞದ ಸಂಕ್ಷಿಪ್ತ ರೂಪವೇ ಅಗ್ನಿಹೋತ್ರ. ಇದು ನಿತ್ಯಯಜ್ಞ. ಸಂಸ್ಕಾರವಂತ ಪ್ರತಿ ವ್ಯಕ್ತಿಯೂ ಇದನ್ನು ಮಾಡಬೇಕು. ಇಂದು ಯಜುರ್‌ ಉಪಾಕರ್ಮ. ಹೊಸ ಯಜ್ಞೋಪವೀತ ಧಾರಣೆ ಮಾಡಿ, ಅಗ್ನಿಹೋತ್ರ ನಡೆಸಿ, ನಿತ್ಯ ನೈಮಿತ್ಯಕ ಕರ್ಮಗಳಿಗೆ ಯೋಗ್ಯತೆಯನ್ನು ಪಡೆಯುವ ಸಂಪ್ರದಾಯವಿದೆ.

Latest Videos

ಸೂರ್ಯೋದಯ ಮತ್ತು ಸೂರ್ಯಾಸ್ತದ ವೇಳೆಯಲ್ಲಿ ವಾತಾವರಣದಲ್ಲಿ ಮತ್ತು ಜೀವಿಗಳ ದೇಹದಲ್ಲಿ ಬದಲಾವಣೆಗಳಾಗುವ ಸಮಯದಲ್ಲಿ ಅಗ್ನಿಹೋತ್ರ ಮಾಡಿದರೆ ಆದರೆ ಯಜ್ಞದ ರೂಪದಲ್ಲಿ ಬಿಡುಗಡೆಯಾಗುವ ಧನಾತ್ಮಕ ಶಕ್ತಿಯು ಎಲ್ಲೆಡೆ ಹಬ್ಬಿರುವ ಋುಣಾತ್ಮಕ ಗುಣಗಳನ್ನು ಹೊಡೆದೋಡಿಸುತ್ತದೆ. ಸೂರ್ಯೋದಯದ ಸಮಯದಲ್ಲಿ ಅಗ್ನಿಹೋತ್ರ ಆಚರಿಸಿದರೆ ಅದರ ಶಕ್ತಿಯು ಸೂರ್ಯಾಸ್ತದ ತನಕ ಇರುತ್ತದೆ. ಸಂಜೆ ಪುನಃ ಆಚರಿಸಿದರೆ ಮರುದಿನ ಸೂರ್ಯೋದಯದ ಪರ್ಯಂತ ಇರುತ್ತದೆ. ಮೂಲಭೂತವಾಗಿ ಪ್ರತಿಯೊಂದು ಜೀವಿಗೂ ಪ್ರಕೃತಿಯಲ್ಲಿನ ಪ್ರಾಣಶಕ್ತಿ ಅತ್ಯವಶ್ಯಕ. ಇದನ್ನು ಸಮತೋಲನಗೊಳಿಸಲು ಅಗ್ನಿಹೋತ್ರದ ನಿಯಮಿತ ಆಚರಣೆ ಅತ್ಯಗತ್ಯ.

ರಕ್ಷಾ ಬಂಧನದಲ್ಲಿ ಯಾವ ರಾಶಿಯವರಿಗೆ ಯಾವ ಬಣ್ಣದ ರಾಖಿ ಕಟ್ಟಬೇಕು..?

ಅಗ್ನಿಹೋತ್ರ ಏಕೆ ಬೇಕು?

ಈಗಿನ ನಮ್ಮೆಲ್ಲರ ಜೀವನಶೈಲಿಗೆ ಅಗ್ನಿಹೋತ್ರದ ಆಚರಣೆ ಅನಿವಾರ್ಯವೂ ಹೌದು. ಮಾನಸಿಕ ಒತ್ತಡ ನಿವಾರಣೆ, ಬುದ್ಧಿಶಕ್ತಿಯ ಚೇತರಿಕೆ, ಪ್ರಕೃತಿಯ ಅಂಗ ನಾನು ಎಂಬ ಭಾವನೆಯನ್ನು ಉಂಟುಮಾಡುವುದು, ಬಾಧಕ ಬ್ಯಾಕ್ಟೀರಿಯಾಗಳ ನಾಶ, ಕುಟುಂಬದಲ್ಲಿ ಒಗ್ಗಟ್ಟು ಹೀಗೆ ಅನೇಕಾನೇಕ ಲಾಭಗಳು ಅಗ್ನಿಹೋತ್ರದಲ್ಲಿವೆ. ಮಾತ್ರವಲ್ಲ ವ್ಯವಸಾಯ ಮಾಡುವ ಸ್ಥಳದಲ್ಲಿ, ಹೂ ತರಕಾರಿಗಳನ್ನು ಬೆಳೆಯುವ ಸ್ಥಳದಲ್ಲಿ ಈ ಸುಲಭ ಯಜ್ಞ ನಡೆಸಿದರೆ ಆಗುವ ಲಾಭಗಳು ಬಹಳ. ಡಾ ಎ.ಮೊಂಡ್ಕರ್‌ ಮತ್ತು ವೈ.ಬಿ.ಸೊಹನಿ ನಡೆಸಿದ ಸಂಶೋಧನೆಯಲ್ಲಿ ಅಗ್ನಿಹೋತ್ರದಿಂದ ಬಾಧಕ ಬ್ಯಾಕ್ಟೀರಿಯಾಗಳ ಬೆಳವಣಿಗೆ ತೊಂಭತ್ತಾರು ಪ್ರತಿಶತ ನಿಲ್ಲುತ್ತದೆ ಎಂದು ಸಾಬೀತಾಗಿದೆ. ಪ್ರಸಿದ್ಧ ವಿಜ್ಞಾನಿ ಡಾ

ಸೆಲ್ವಮೂರ್ತಿಯವರು ತಮ್ಮ ಸಂಶೋಧನೆಯಲ್ಲಿ ಅಗ್ನಿಹೋತ್ರ ಮಾಡುವಾಗ ಹೃದಯ ಬಡಿತ ಸಹಜ ಸ್ಥಿಯಲ್ಲಿರುತ್ತದೆ, ದೇಹದ ಉಷ್ಣತೆ ಸಮತೋಲನಗೊಳ್ಳುತ್ತದೆ, ಜೀರ್ಣಶಕ್ತಿ ಸುಸ್ಥಿತಿಯಲ್ಲಿರುತ್ತದೆ ಮಾತ್ರವಲ್ಲದೆ ಮನಸ್ಸಿನಲ್ಲಿ ದುಗುಡ, ದುಮ್ಮಾನ, ಭಯ, ಬೇಸರಗಳು ದೂರವಾಗಿ ಧೈರ್ಯವಿರುವ ವ್ಯಕ್ತಿತ್ವದ ನಿರ್ಮಾಣವಾಗುತ್ತದೆ ಎಂಬುದನ್ನು ತೋರಿಸಿದ್ದಾರೆ.

ಈ ಅಂಶಗಳನ್ನು ಪಾಲಿಸಿ

1.ಸಮಯ ಪಾಲನೆ

ನಾವೆಷ್ಟೇ ಯಾಂತ್ರಿಕವಾಗಿ ಮುಂದುವರೆದರೂ ನಮ್ಮ ದೇಹ ಸ್ಪಂದಿಸುವುದು ಪ್ರಾಕೃತಿಕ ಗಡಿಯಾರಕ್ಕೆ ಮಾತ್ರ. ಪ್ರಕೃತಿಯೊಂದಿಗಿನ ನಮ್ಮ ಬೆಸುಗೆಯನ್ನು ಮರೆತರೆ ದೇಹ ಕಾಯಿಲೆಗಳ ಗೂಡಾಗುವುದು. ಇಡಾ, ಪಿಂಗಳಾ ನಾಡಿಗಳು ನಮ್ಮ ಉಸಿರಾಟ ಹಾಗೂ ಸೂರ್ಯೊದಯ ಹಾಗೂ ಸೂರ್ಯಾಸ್ತದೊಂದಿಗೆ ಸಂಬಂಧ ಹೊಂದಿವೆ. ಹೀಗಾಗಿ ಸೂರ್ಯೋದಯ ಮತ್ತು ಸೂರ್ಯಾಸ್ತದ ಸಮಯದಲ್ಲೇ ಅಗ್ನಿಹೋತ್ರ ಮಾಡಬೇಕು.

2. ಸರಿಯಾದ ಪಾತ್ರೆ

ತಾಮ್ರವೆಂಬ ಅದ್ಭುತ ಲೋಹ ಉಷ್ಣತೆಯನ್ನು, ಶಕ್ತಿಯನ್ನು ಹಾಗೂ ವಿದ್ಯುತ್ಕಾಂತೀಯ ಒತ್ತಡವನ್ನು ಹಿಡಿದಿಟ್ಟುಕೊಳ್ಳುವ ಗುಣ ಹೊಂದಿದೆ. ಶುದ್ಧ ತಾಮ್ರದ ಪಾತ್ರೆ ಬ್ಯಾಕ್ಟೀರಿಯನಾಶಕ ಗುಣವನ್ನೂ ಹೊಂದಿದೆ. ಆದ್ದರಿಂದ ತಾಮ್ರದ ಪಾತ್ರೆಯನ್ನೇ ಅಗ್ನಿಹೋತ್ರಕ್ಕೆ ಬಳಸಬೇಕು. ಪಿರಾಮಿಡ್‌ ಆಕಾರದ ಪಾತ್ರೆಯು ಪ್ರಕೃತಿಯ ಹಾಗೂ ಜೀವಿಗಳಲ್ಲಿ ಐಕ್ಯವಾಗಿರುವ ಅಶುದ್ಧತೆಯನ್ನು ಶುದ್ಧ ಮಾಡುವ ಗುಣ ಹೊಂದಿದೆ. ಹೀಗಾಗಿ ಪಿರಾಮಿಡ್‌ ಆಕಾರದ ಯಜ್ಞಪಾತ್ರೆ ಅಗ್ನಿಹೋತ್ರಕ್ಕೆ ಸೂಕ್ತ.

3.ಬೆರಣಿ

ದನದ ಸಗಣಿ ಬ್ಯಾಕ್ಟೀರಿಯಾನಾಶಕವೂ, ಔಷಧಿಯೂ, ಕೀಟನಾಶಕವೂ ಹೌದು. ಯಾವುದೇ ಬೇರೆ ವಿಧಾನಗಳನ್ನನುಸರಿಸದೆ ದನದ ಸಗಣಿಯಿಂದ ತಟ್ಟಿದ ಬೆರಣಿಗೆ ತುಪ್ಪ ಸವರಿ ಅಗ್ನಿ ಸ್ಥಾಪಿಸುವುದು ಅತಿ ಶ್ರೇಷ್ಠ.

4. ದೇಸಿ ದನದ ತುಪ್ಪ

ಅಕ್ಕಿಕಾಳು, ದನದ ಸಗಣಿಯ ಬೆರಣಿ ಮತ್ತು ಅಗ್ನಿ ಇದರ ಜತೆ ದೇಸಿ ದನದ ತುಪ್ಪ ಸೇರಿಸಿ ಅಗ್ನಿಹೋತ್ರ ಆಚರಿಸಿದರೆ ಈ ಯಜ್ಞ ಔಷಧೀಯ ಗುಣಗಳನ್ನು ಹೇರಳವಾಗಿ ವಾತಾವರಣಕ್ಕೆ ಬಿಡುಗಡೆಗೊಳಿಸುತ್ತದೆ. ಆದ ಕಾರಣ ದೇಸಿ ದನದ ತುಪ್ಪ ಶ್ರೇಷ್ಠ.

5. ಮಾನಸಿಕ ಸಿದ್ಧತೆ

ಅಗ್ನಿಹೋತ್ರ ಮಾಡುವಾಗ ನಮಗೆ ಹಾಗೂ ಎಲ್ಲರಿಗೂ ಅಂದರೆ ಸರ್ವೇ ಜನಾಃ ಸುಖಿನೋ ಭವಂತು ಎಂಬ ದೀಕ್ಷೆಯನ್ನು ನಮಗೆ ನಾವೇ ಕೊಟ್ಟುಕೊಳ್ಳಬೇಕು. ಅಗ್ನಿಹೋತ್ರದ ಮಂತ್ರಗಳ ಅರ್ಥ ಅರಿತುಕೊಂಡು, ಯಾವುದೂ ನಮ್ಮದಲ್ಲ, ಎಲ್ಲವೂ ಪ್ರಕೃತಿಯದ್ದು ಎಂಬ ಭಾವದೊಂದಿಗೆ, ಶರಣಾಗತಿಯೊಂದಿಗೆ ಅಗ್ನಿಹೋತ್ರಕ್ಕೆ ಸಿದ್ಧವಾಗಬೇಕು.

ಇಂದು ರಕ್ಷಾ ಬಂಧನ; ಪ್ರೀತಿಯ ರಕ್ಷೆಯ ಬಂಧನ

ಓ ಸರ್ವನಿವಾರಕ ಅಗ್ನಿಯೇ, ನಾವು ದಿನಾಲೂ ಸೂರ್ಯೋದಯ ಮತ್ತು ಸೂರ್ಯಾಸ್ತದ ಸಮಯದಲ್ಲಿ ನಿನ್ನಲ್ಲಿಗೆ ಬರುತ್ತೇವೆ.

ಓ ಸೂರ್ಯದೇವನೇ, ನೀನು ಕೊಟ್ಟಿರುವುದನ್ನು ನಿನಗೆ ಮರಳಿಸುತ್ತಿದ್ದೇನೆ. ನನ್ನದು ಯಾವುದೂ ಅಲ್ಲ, ಎಲ್ಲವೂ ಪ್ರಕೃತಿಯದು.

ದಿವ್ಯಾಗ್ನಿಯೇ, ನಿನಗೆ ಶರಣು. ನೀನು ಕೊಟ್ಟಿರುವುದನ್ನು ನಿನಗೆ ಮರಳಿಸುತ್ತಿದ್ದೇನೆ. ನನ್ನದು ಯಾವುದೂ ಇಲ್ಲ...

ಇವು ಅಗ್ನಿಹೋತ್ರದ ಸಮಯದಲ್ಲಿ ಪಠಿಸುವ ಮಂತ್ರಗಳ ಸರಳಾರ್ಥ.

ಅಗ್ನಿಹೋತ್ರದ ಸರಳ ವಿಧಾನ

ಹೋಮಕುಂಡದಲ್ಲಿ ಎರಡು ಬೆರಣಿಗಳನ್ನಿಟ್ಟು, ಬೇರೆ ಒಂದು ಬೆರಣಿಯ ಸಣ್ಣ ತುಂಡಿಗೆ ತುಪ್ಪ ಸವರಿ, ಅದನ್ನು ಎಣ್ಣೆಯಲ್ಲಿ ಹಚ್ಚಿದ ದೀಪದ ಜ್ವಾಲೆಗೆ ಹಿಡಿದು ಅಗ್ನಿಯನ್ನು ಕುಂಡದಲ್ಲಿ ಸ್ಥಾಪಿಸಬೇಕು. ತುಪ್ಪ ಸವರಿದ ಅಕ್ಕಿ ಕಾಳುಗಳನ್ನು ಆಹುತಿಯಾಗಿ ಸಮರ್ಪಿಸಬೇಕು. ಸಾಂದರ್ಭಿಕ ಮಂತ್ರಗಳನ್ನು ಸ್ಪಷ್ಟವಾದ ಉಚ್ಚಾರದಲ್ಲಿ ಹಾಗೂ ಧ್ವನಿಯಲ್ಲಿ ಎಲ್ಲರೂ ಸೇರಿ ಪಠಿಸುತ್ತಾ, ಕುಟುಂಬದ ಯಾರಾದರೂ ಒಬ್ಬ ಸದಸ್ಯ ಆಹುತಿಗಳನ್ನು ನೀಡಬೇಕು. ನಂತರ ಇದರಿಂದ ನಿರ್ಮಿತವಾದ ಶುದ್ಧ ಭಸ್ಮವನ್ನು ಮನೆಯ ಒಳಗೆ, ಹೊರಗೆ, ಹೂ ಗಿಡಗಳಿಗೆ, ತೋಟಗಳಿಗೆ ಸಿಂಪಡಿಸಬಹುದು. ಧರ್ಮ, ಮತ, ವಯಸ್ಸು, ಲಿಂಗ, ವರ್ಣ, ದೇಶ, ಭಾಷೆ ಹೀಗೆ ಎಲ್ಲವನ್ನೂ ಬದಿಗಿಟ್ಟು ಅಗ್ನಿಯನ್ನು ಪೂಜಿಸುವುದು ಪ್ರತಿಯೊಬ್ಬರ ದಿನಚರಿಯಾಗಲಿ.

- ನಯನಾ ಭಿಡೆ ಮುಂಡಾಜೆ, ಧರ್ಮಸ್ಥಳ

click me!