ಗುರುಮಠಕಲ್ ಸಮೀಪದ ಕಂದಕೂರು ಬೆಟ್ಟದಲ್ಲಿ ಚೇಳುಗಳ ಜೊತೆ ಚೆಲ್ಲಾಟ
ಮೊಗುಲಪ್ಪ ಬಿ. ನಾಯಕಿನ್
ಗುರುಮಠಕಲ್(ಆ.02): ನಾಗರಪಂಚಮಿಯಂದು ನಾಗರಗೆ ಹಾಲೆರೆಯುವ ವಿಷಯ ಸಾಮಾನ್ಯವಾದರೆ, ಇಲ್ಲಿ ಅವತ್ತೊಂದು ಮಾತ್ರ ಬರೀ ಚೇಳುಗಳಿಗೆ ಹಾಲೆರೆಯುತ್ತಾರೆ. ಯಾದಗಿರಿ ಜಿಲ್ಲೆಯ ಗುರುಮಠಕಲ್ ತಾಲೂಕಿನ ಕಂದಕೂರು ಕೊಂಡಮಾಯಿ ಬೆಟ್ಟದ ಮೇಲೆ ಪ್ರತಿ ನಾಗರಪಂಚಮಿಯಂದು ಚೇಳುಗಳ ಮೈಮೇಲೆ ಬಿಟ್ಟುಕೊಂಡು ಆರಾಧಿಸಿಸುವ ಚೇಳಿನ ಜಾತ್ರೆಗೆ ರಾಜ್ಯದ ವಿವಿಧೆಡೆ ಸೇರಿದಂತೆ ನೆರೆಯ ಆಂಧ್ರ, ತೆಲಂಗಾಣ ಹಾಗೂ ಮಹಾರಾಷ್ಟ್ರದಿಂದ ಸಾವಿರಾರು ಭಕ್ತರು ಸಾಕ್ಷಿಯಾಗುತ್ತಾರೆ. ಕಂದಕೂರಿನ ಕೊಂಡಮಾಯಿ ಬೆಟ್ಟದ ಮೇಲೆ ಕೊಂಡಮಾಯಿ ದೇವಸ್ಥಾನವಿದೆ, ಬ್ರಿಟಿಷ್ ಕಾಲದಿಂದಲೂ ಇದಿದೆ ಎನ್ನಲಾಗುತ್ತಿದೆ. ಕೊಂಡಮಾಯಿ ಅಂದರೆ ಚೇಳುಗಳ ದೇವತೆ. ಜುಲೈ-ಆಗಸ್ಟ್ ತಿಂಗಳ, ಶ್ರಾವಣ ಮಾಸದ ನಾಗರಪಂಚಮಿಯಂದು ಇಡೀ ಬೆಟ್ಟದಲ್ಲಿ ಕೆಂಪು ಚೇಳುಗಳದ್ದೇ ಕಾರುಬಾರು. ಕಲ್ಲುಸಂದಿಗಳಲ್ಲಿರುವ ಈ ಚೇಳುಗಳನ್ನು ಹೊರತೆಗೆಯುವ ಮಕ್ಕಳು, ಮಹಿಳೆಯರು, ಹಿರಿ-ಕಿರಿಯರು ಮೈಮೇಲೆಲ್ಲಾ ಬಿಟ್ಟುಕೊಳ್ಳುವುದು ಮೈಜುಮ್ಮೆನಿಸುವ ಕ್ಷಣಗಳು.
undefined
ಚೇಳುಗಳ ಜೊತೆ ಸರಸ:
ಅಚ್ಚರಿ ಎಂದರೆ, ಬಹುತೇಕರಿಗೆ ಚೇಳು ಕಡಿಯುವುದೇ ಇಲ್ಲ, ಮೈಮೇಲೆ ಅವೆಲ್ಲ ಹರಿದಾಡಿದ ನಂತರ ಕೆಳಗೆ ಬಿಡುತ್ತಾರೆ. ಕೆಲವರಿಗೆ ಕಡಿದರೂ ಅಲ್ಲಿನ ‘ಆಧಾರ’ (ವಿಭೂತಿ) ಹಚ್ಚಿದರೆ ನೋವು ಮಾಯವಾಗಿ ವಿಷ ಇಳಿಯುತ್ತದೆ ಅನ್ನೋ ನಂಬಿಕೆಯಿದೆ. ಕಡಿಸಿಕೊಂಡವರು ಇದನ್ನು ಅನುಭವಿಸಿ, ಅನುಭವಗಳನ್ನು ಹಂಚಿಕೊಂಡಿದ್ದುಂಟು. ನಾಗರಪಂಚಮಿಯಂದು ಇಲ್ಲಿಗೆ ಬಂದವರಲ್ಲೆರೆಲೂ ಮೈಮೇಲೆ ಚೇಳುಗಳನ್ನು ಬಿಟ್ಟುಕೊಂಡು ಚೆಲ್ಲಾಟವಾಡ್ತುತ್ತಾರೆ.
ಭಾರತದ ಈ ಗ್ರಾಮಗಳಲ್ಲಿ ಹಾವುಗಳೊಂದಿಗೆ ಜೀವನ ನಡೆಸ್ತಾರೆ ಜನ
ಆ.2ರಂದು ಸಂಜೆ 4 ಗಂಟೆಯಿಂದ ಬೆಟ್ಟಕ್ಕೆ ಭಕ್ತರ ಹೆಜ್ಜೆಗಳು ದೌಡಾಯಿಸುತ್ತವೆ. ಬೆಳಿಗ್ಗೆಯಿಂದ ಚೇಳುಗಳು ಬೆಟ್ಟದಲ್ಲಿನ ಸಂದುಗೊಂದುಗಳಿಂದ ಹೊರಬರುತ್ತವೆ. ಬೆಟ್ಟಹತ್ತಿದವರು ದೇವರಿಗೆ ನಮಸ್ಕರಿಸಿ ಯಾವುದೆ ಕಲ್ಲನ್ನು ಕೀಳಿದರೂ ಕಲ್ಲಿನ ಕೆಳಗೆ ಚೇಳು ಕಾಣಿಸಿಕೊಳ್ಳುತ್ತದೆ. ಬೇರೆ ದಿನಗಳಲ್ಲಿ ಚೇಳುಗಳು ಗೋಚರಿಸುವುದಿಲ್ಲ ಅಂತಾರೆ ಗ್ರಾಮದ ಯುವಕ, ನ್ಯಾಯವಾದಿ ಬಸರೆಡ್ಡಿ.
ಕೊಂಡಮಾಯಿ ಬೆಟ್ಟಹತ್ತಲು ಮತ್ತು ಅಲ್ಲಿನ ವಿಶೇಷ ಚೇಳುಗಳೊಂದಿಗಿನ ಚೆಲ್ಲಾಟ ನೋಡಲು ಸುತ್ತಮುತ್ತಲಿನ ಗ್ರಾಮದ ಜನರಷ್ಟೇ ಅಲ್ಲದೇ ಮುಂಬೈ, ಆಂಧ್ರಪ್ರದೇಶ ರಾಜ್ಯದಿಂದ ಭಕ್ತರು ಮುಗಿಬೀಳುತ್ತಾರೆ. ರಾಜ್ಯದ ಹಾಗೂ ತೆಲಂಗಾಣದ ಕೆಲವು ಖಾಸಗಿ ಸುದ್ದಿ ವಾಹಿನಿಗಳು ಈ ಜಾತ್ರೆಯ ನೇರಪ್ರಸಾರ ಮಾಡಿದ್ದುಂಟು.
ಇಲ್ಲಿ ನಾಗ ದೇವತೆಗಳಿಗೆ ನಿತ್ಯವೂ ನೆರವೇರಲಿದೆ ಶೋಡಷೋಪಚಾರ ಪೂಜೆ!
ಶೈಶಾವಸ್ಥೆ:
ಈ ಬೆಟ್ಟವು ಕೆಂಪು ಮತ್ತು ಮರಳು ಮಿತ್ರ ಮಣ್ಣಿನ ತೇವಾಂಶದಿಂದ ಕೂಡಿದೆ. ಇದು ಚೇಳುಗಳ ಸಂತನೋತ್ಪತ್ತಿಗೆ ಅನುಕೂಲಕರವಾದ ವಾತವಾರಣ ಹೊಂದಿದೆ. ನಾಗರ ಪಂಚಮಿ ವೇಳೆಗೆ ಮಳೆಯಿಂದ ಭೂಮಿ ತಂಪಾಗಿ ಇರುತ್ತದೆ. ಇದೇ ವೇಳೆಯಲ್ಲಿ ಚೇಳುಗಳು ಸಂತನೋತ್ಪತ್ತಿಯಲ್ಲಿ ತೊಡಗಿರುತ್ತವೆ.
ಪಂಚಮಿ ಆದ ಐದು ದಿನಗಳಲ್ಲಿ ಚೇಳುಗಳು ಬೆಟ್ಟದ ತುಂಬ ಕಾಣಿಸುತ್ತವೆ. ಚೇಳುಗಳಲ್ಲಿ ಅನೇಕ ತರಹದ ಪ್ರಭೇಧಗಳಿವೆ. ಇಲ್ಲಿರುವ ಚೇಳುಗಳಲ್ಲಿ ಕಡಿಮೆ ಪ್ರಮಾಣದ ವಿಷ ಹೊಂದಿದೆ ಎಂಬುದು ಪ್ರಯೋಗದ ಮೂಲಕ ತಿಳಿದು ಬಂದ ಅಂಶವಾಗಿದೆ ಎಂದು ಕೀಟಶಾಸ್ತ್ರದ ಉಪನ್ಯಾಸಕ ಡಾ. ವೆಂಕಟೇಶ ಅಭಿಪ್ರಾಯ ಪಡುತ್ತಾರೆ. ಈ ವಾತಾವರಣದಲ್ಲಿ ಚೇಳುಗಳು ಶೈಶಾವಸ್ಥೆಯಲ್ಲಿರುತ್ತವೆ ಅನ್ನೋದು ಕೆಲವರ ಅಭಿಮತ. ಇದು ಪವಾಡವಲ್ಲ ಎಂದು ಪರೀಕ್ಷಿಸಿ ಹೇಳಲು ಕೆಲವು ವರ್ಷಗಳ ಹಿಂದೆ ಗುಲ್ಬರ್ಗ ವಿವಿಯಿಂದ ಬಂದಿದ್ದ ತಜ್ಞರ ತಂಡದ ಕೆಲವರಿಗೆ ಚೇಳು ಕಡಿದು, ಆಧಾರ ಹಚ್ಚಿಕೊಂಡು ಹೋಗಿದ್ದರಂತೆ. ಧಾರ್ಮಿಕ ಹಾಗೂ ಆಸಕ್ತಿದಾಯಕ ಸ್ಥಳವಾಗಿದ್ದರಿಂದ ಸ್ಥಳೀಯ ಶಾಸಕ ನಾಗನಗೌಡ ಕಂದಕೂರು ಅವರು ಇದರ ಅಭಿವೃದ್ಧಿಗೆ ಅನುದಾನ ನೀಡಿದ್ದಾರೆ.