ಸುಪ್ರೀಂಕೋರ್ಟ್ ಅಯೋಧ್ಯೆಯ ವಿವಾದಿತ ಸ್ಥಳದಲ್ಲಿ ರಾಮಮಂದಿರ ನಿರ್ಮಾಣಕ್ಕೆ ತೀರ್ಪನ್ನು ನೀಡಿದ್ದೇ ಅಲ್ಲದೆ, ಹತ್ತಿರದ ಧನ್ನಿಪುರದಲ್ಲಿ ಮಸೀದಿ ನಿರ್ಮಾಣಕ್ಕೆ 5 ಎಕರೆ ಜಾಗ ನೀಡಿತ್ತು. ಇದರ ನಿರ್ಮಾಣ ಕಾಮಗಾರಿ ಎಲ್ಲಿಗೆ ಬಂದಿದೆ?
ರಾಮಲಲ್ಲಾ ಪ್ರಾಣ ಪ್ರತಿಷ್ಠಾ ಸಮಾರಂಭವೇನೋ ಸೋಮವಾರ ಅಯೋಧ್ಯೆಯಲ್ಲಿ ಪೂರ್ಣಗೊಂಡಿತು. ಜನವರಿ 23ರಿಂದ ಭಕ್ತರಿಗಾಗಿ ದೇವಾಲಯ ಬಾಗಿಲನ್ನೂ ತೆರೆಯುತ್ತದೆ. ಆದರೆ, ಅಯೋಧ್ಯೆಯಲ್ಲಿ ಮಸೀದಿ ನಿರ್ಮಾಣ ಕಾರ್ಯ ಎಲ್ಲಿಗೆ ಬಂತು?
2019ರಲ್ಲಿ ರಾಮ ಜನ್ಮಭೂಮಿ ವಿವಾದ ಸಂಬಂಧ ತೀರ್ಪು ನೀಡಿದ್ದ ಸುಪ್ರೀಂ ಕೋರ್ಟ್, ವಿವಾದಿತ ಸ್ಥಳದಲ್ಲಿ ರಾಮಮಂದಿರ ನಿರ್ಮಾಣಕ್ಕೆ ಆದೇಶಿಸಿದ್ದಲ್ಲದೆ, ಅಯೋಧ್ಯೆಯಿಂದ 25 ಕಿಮೀ ದೂರದಲ್ಲಿರುವ ಧನ್ನಿಪುರ ಗ್ರಾಮದಲ್ಲಿ ಮಸೀದಿ ನಿರ್ಮಾಣಕ್ಕೆ ಸುನ್ನಿ ವಕ್ಫ್ ಮಂಡಳಿಗೆ ಭೂಮಿಯನ್ನು ಮಂಜೂರು ಮಾಡಿತ್ತು.
ಸುಪ್ರೀಂ ಕೋರ್ಟ್‌ನ ತೀರ್ಪಿನ ನಂತರ, ಮಂದಿರ ನಿರ್ಮಾಣಕ್ಕಾಗಿ 5 ಫೆಬ್ರವರಿ 2020ರಂದು ಪ್ರಧಾನಿ ಮೋದಿ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಅನ್ನು ಘೋಷಿಸಿದರು. ಸರಿಯಾಗಿ ಆರು ತಿಂಗಳ ನಂತರ, 5 ಆಗಸ್ಟ್ 2020ರಂದು, ರಾಮಮಂದಿರದ ಅಡಿಪಾಯವನ್ನು ಹಾಕಲಾಯಿತು. ಅದಾಗಿ ಆರು ತಿಂಗಳ ಬಳಿಕ ಅಂದರೆ, 26 ಜನವರಿ 2021ರಂದು ಉದ್ದೇಶಿತ ಮಸೀದಿಯ ಶಿಲಾನ್ಯಾಸವನ್ನು ಹಾಕಲಾಯಿತು. ಆದರೆ, ಮಸೀದಿಯ ನಿರ್ಮಾಣ ಕಾರ್ಯವು ಇನ್ನೂ ಪ್ರಾರಂಭವಾಗಿಲ್ಲ.
3 ವರ್ಷವಾದರೂ ನಿರ್ಮಾಣ ಕಾರ್ಯವಿಲ್ಲ
ಶಿಲಾನ್ಯಾಸ ನೆರೆವೇರಿ 3 ವರ್ಷವೇ ಆದರೂ, ಮಸೀದಿ ನಿರ್ಮಾಣಕಾರ್ಯ ಶುರುವಾಗಿಲ್ಲ ಎಂಕೆ ಎಂಬ ಬಗ್ಗೆ ಇಂಡೋ ಇಸ್ಲಾಮಿಕ್ ಕಲ್ಚರಲ್ ಫೌಂಡೇಶನ್ (ಐಐಸಿಎಫ್) ಟ್ರಸ್ಟ್‌ನ ಮೇಲೆ ಪ್ರಶ್ನೆಗಳು ಎದ್ದಿವೆ. ವಕ್ಫ್ ಮಂಡಳಿಯಿಂದ ಈ ಟ್ರಸ್ಟ್ ರಚನೆಯಾಗಿದ್ದು, ಮಸೀದಿ ನಿರ್ಮಾಣದ ಕೆಲಸವನ್ನು ಈ ಟ್ರಸ್ಟ್‌ಗೆ ವಹಿಸಲಾಗಿದೆ.
ಉದ್ದೇಶಿತ ಮಸೀದಿಗೆ ನೀಡಿದ ಜಾಗದಲ್ಲಿ ದರ್ಗಾ ನಿರ್ಮಿಸಲಾಗಿದ್ದು, ಭೂಮಿ ಮಂಜೂರು ಮಾಡುವ ಮುನ್ನವೇ ಅದು ಇತ್ತು. ಸದ್ಯ ಈ ದರ್ಗಾದ ದುರಸ್ತಿ ಕಾರ್ಯ ಮಾತ್ರ ನಡೆದಿದ್ದು, ಅದರ ಗೋಡೆಯ ಮೇಲೆ ಕಂಬವಿದ್ದು, ಅದರಲ್ಲಿ ಅಲ್ಲಿ ನಿರ್ಮಿಸಲಿರುವ ಮಸೀದಿಯ ಚಿತ್ರವನ್ನು ಮುದ್ರಿಸಲಾಗಿದೆ.
ಮಸೀದಿ ನಿರ್ಮಾಣದಲ್ಲಿ ವಿಳಂಬ ಏಕೆ?
ಮಸೀದಿ ನಿರ್ಮಾಣ ವಿಳಂಬದ ಬಗ್ಗೆ, ಅಯೋಧ್ಯೆಯಲ್ಲಿ ಯುಪಿ ಸುನ್ನಿ ಸೆಂಟ್ರಲ್ ಬೋರ್ಡ್ ವಕ್ಫ್ ಉಪ ಸಮಿತಿಯ ಅಧ್ಯಕ್ಷ ಅಜಮ್ ಖಾದ್ರಿ ಅವರು ಮಾತನಾಡಿದ್ದು, ಅಯೋಧ್ಯೆ ಅಭಿವೃದ್ಧಿ ಪ್ರಾಧಿಕಾರವು ನಕ್ಷೆಯನ್ನು ಅನುಮೋದಿಸುತ್ತಿಲ್ಲ ಮತ್ತು ಇದಲ್ಲದೇ ಆ ಜಾಗದಲ್ಲಿ ಗ್ರಂಥಾಲಯ ನಿರ್ಮಿಸಲು ಆಡಳಿತ ಮಂಡಳಿ ಚಿಂತನೆ ನಡೆಸಿದ್ದು, ಇದೀಗ ಮಸೀದಿಯ ಪಕ್ಕದಲ್ಲಿಯೇ ಕ್ಯಾನ್ಸರ್ ಆಸ್ಪತ್ರೆ ನಿರ್ಮಿಸಲು ನಿರ್ಧರಿಸಲಾಗಿದೆ. ಇದಕ್ಕಾಗಿ ಹೆಚ್ಚಿನ ಜಮೀನು ಬೇಕು. ಹಾಗಾಗಿ ಇನ್ನೂ ನಿರ್ಮಾಣ ಶುರುವಾಗಿಲ್ಲ ಎಂದಿದ್ದಾರೆ.
ಹಣದ ಕೊರತೆ
ಅಖಿಲ ಭಾರತ ಮಿಲ್ಲಿ ಕೌನ್ಸಿಲ್ ಸದಸ್ಯ ಖಾಲಿಕ್ ಅಹ್ಮದ್ ಖಾನ್ ಹೇಳುವಂತೆ, ಟ್ರಸ್ಟ್‌ಗೆ ನಿರೀಕ್ಷಿಸಿದಷ್ಟು ಹಣವನ್ನು ಸಂಗ್ರಹಿಸಲು ಸಾಧ್ಯವಾಗಲಿಲ್ಲ, ಆದ್ದರಿಂದ ಕೆಲಸವು ವಿಳಂಬವಾಗುತ್ತಿದೆ. ಕಾಮಗಾರಿ ಚುರುಕುಗೊಳಿಸಲು ಹಣ ವಸೂಲಿ ಮಾಡುವ ತಂತ್ರ ಬದಲಿಸಲಾಗುತ್ತಿದೆ.
ಷರಿಯಾ ಕಾನೂನು ಮತ್ತು ವಕ್ಫ್ ಬೋರ್ಡ್ ನಿಯಮಗಳ ಪ್ರಕಾರ, ಮಸೀದಿಗಳು ಮತ್ತು ಸ್ಮಶಾನಗಳಂತಹ ಆಸ್ತಿಗಳನ್ನು ಮಾರಾಟ ಮಾಡಲಾಗುವುದಿಲ್ಲ, ಅಡಮಾನ ಇಡಲಾಗುವುದಿಲ್ಲ ಅಥವಾ ಉಡುಗೊರೆಯಾಗಿ ನೀಡಲಾಗುವುದಿಲ್ಲ. ಜೊತೆಗೆ, ಯಾವುದೇ ವಿವಾದದಲ್ಲಿ ಭಾಗಿಯಾಗುವ ಇಚ್ಚೆಯಿಲ್ಲದ ಕಾರಣ, ರಾಜ್ಯ ಸರ್ಕಾರ ನಮಗೆ ಜಮೀನಿನ ಮಾಲೀಕತ್ವ ಸ್ಪಷ್ಟವಾಗಿದೆ ಎಂಬ ಪ್ರಮಾಣಪತ್ರ ನೀಡಬೇಕು. ಆಗ ಮಸೀದಿ ನಿರ್ಮಾಣ ಆರಂಭಿಸಲಾಗುತ್ತದೆ ಎನ್ನಲಾಗಿದೆ.