ನನ್ನ ಸಹೋದರನಿಗೆ ಎಲ್ಲದರಿಂದಲೂ ರಕ್ಷೆ ಹಾಗೂ ಜಯ ಸಿಗಲಿ ಮತ್ತು ನನ್ನ ರಕ್ಷಣೆಯ ಭಾರ ನಿನ್ನದು ಎಂದು ಸಹೋದರಿಯು ಸಹೋದರನಿಗೆ ರಕ್ಷಾಸೂತ್ರ ಕಟ್ಟುತ್ತಾಳೆ. ಇದರ ಹಿಂದೆ ರಕ್ಷಣೆಯ ಭಾರವಿರುವುದರಿಂದ ರಕ್ಷಾಬಂಧನ ಅಥವಾ ರಕ್ಷಾಪೂರ್ಣಿಮೆ ಎಂಬ ಹೆಸರು ಬಂದಿದೆ.
ಬೆಂಗಳೂರು (ಆ. 03): ಭಾರತೀಯ ಪ್ರಾಚೀನ ಋುಷಿ-ಮಹರ್ಷಿಗಳು ಮನುಷ್ಯನ ಜೀವನದಲ್ಲಿ ಸುಖ-ಶಾಂತಿ ನೆಲೆಸಲು, ಉತ್ಕೃಷ್ಟಚಿಂತನೆ ನಡೆಸಿ, ಧರ್ಮಾಚರಣೆಯ ವಿಧಿವಿಧಾನಗಳನ್ನು ಸೂಚಿಸಿದರು. ಅದರ ಒಂದು ಭಾಗವಾಗಿ ಹಬ್ಬ-ಹರಿದಿನಗಳ ಆಚರಣೆ ನಡೆದು ಬಂದಿದೆ. ಅದರಂತೆ ಶ್ರಾವಣ ಮಾಸದ ಹುಣ್ಣಿಮೆಯನ್ನು ನೂಲುಹುಣ್ಣಿಮೆ, ರಕ್ಷಾಬಂಧನ, ಉಪಾಕರ್ಮ ಮುಂತಾದ ಹೆಸರಿನಿಂದ ಆಚರಿಸುತ್ತೇವೆ.
ಆದಿಮಾನವ ಆಧುನಿಕ ಮಾನವನಾಗುವಲ್ಲಿ ಮಹತ್ವದ ಕೊಡುಗೆಯನ್ನು ನೀಡಿದ್ದು ನೂಲು. ನೂಲನ್ನು ತೊಟ್ಟುಕೊಳ್ಳುವುದು, ನಮ್ಮ ಸಂಸ್ಕೃತಿಯ ಸಂಸ್ಕಾರದ ಒಂದು ಅಂಗವಾಗಿದೆ. ವಸ್ತ್ರಸಂಸ್ಕೃತಿಯ ಮೂಲವಾದ ನೂಲಿಗೆ ಕೃತಜ್ಞತೆ ಸಲ್ಲಿಸುವ ಹಬ್ಬವಾಗಿ ‘ನೂಲುಹುಣ್ಣಿಮೆ’ ಬಂದಿದೆ. ನನ್ನ ಸಹೋದರನಿಗೆ ಕಷ್ಟ-ನಷ್ಟಗಳಿಂದ, ಕೆಟ್ಟಜನರಿಂದ, ರೋಗಗಳಿಂದ, ರಕ್ಷಣೆ ಉಂಟಾಗಲಿ ಹಾಗೂ ನನ್ನ ರಕ್ಷಣೆಯ ಭಾರ ನಿನ್ನದು ಎಂದು ಸಹೋದರಿಯು ಸಹೋದರನಿಗೆ ರಕ್ಷಾಸೂತ್ರ ಅಥವಾ ರಾಖಿಯನ್ನು ಕಟ್ಟುತ್ತಾಳೆ.
ಸೂತ್ರಬಂಧನದ ಹಿಂದೆ, ರಕ್ಷಣೆಯ ಭಾರವಿರುವುದರಿಂದ ರಕ್ಷಾಬಂಧನ ಅಥವಾ ರಕ್ಷಾಪೂರ್ಣಿಮೆ ಎಂಬ ಹೆಸರು ಬಂದಿದೆ. ಇದು ಸಹೋದರ-ಸಹೋದರಿಯರ ನಿರ್ಮಲ ಪ್ರೀತಿಯ ಪ್ರತೀಕದ ಹಬ್ಬ. ತಾಯಿ-ಮಗ, ಪತಿ-ಪತ್ನಿ, ಗುರು-ಶಿಷ್ಯ ಇವೇ ಮುಂತಾದ ಪ್ರೀತಿಯ ಸಂಬಂಧಗಳು ಬಹುತೇಕ ಸ್ವಾರ್ಥದಿಂದ ಕೂಡಿರುತ್ತವೆ. ಆದರೆ ಈ ಜಗತ್ತಿನಲ್ಲಿ ಸ್ವಾರ್ಥ ರಹಿತವಾದ ಸಂಬಂಧವಿದ್ದರೆ ಅದು ಅಣ್ಣ-ತಂಗಿಯ ಪ್ರೀತಿಯ ಸಂಬಂಧ ಮಾತ್ರ.
ರಕ್ಷಾ ಬಂಧನದಲ್ಲಿ ಯಾವ ರಾಶಿಯವರಿಗೆ ಯಾವ ಬಣ್ಣದ ರಾಖಿ ಕಟ್ಟಬೇಕು..?
ಉಪಾಕರ್ಮದ ಮಹತ್ವ
ಶ್ರಾವಣ ಪೂರ್ಣಿಮೆಯಂದು ದ್ವಿಜರು ಶ್ರದ್ಧಾ-ಮೇಧಾ-ಪ್ರಜ್ಞಾವರ್ಧನೆಗೆ, ಶ್ರುತಿ-ಸ್ಮೃತಿಯಲ್ಲಿ ಹೇಳಿದ ಕರ್ಮಾಂಗಗಳ ಯೋಗ್ಯತಾ ಪ್ರಾಪ್ತಿಗೆ, ಯಜ್ಞೋಪವಿತಕ್ಕೆ ಓಂಕಾರ ಅಗ್ನಿ ಮುಂತಾದ ನವತಂತು ದೇವತೆ ಹಾಗೂ ತ್ರಿಮೂರ್ತಿಗಳನ್ನು ಆಹ್ವಾನಿಸಿ, ಪೂಜಿಸಿ, ಗಾಯತ್ರಿಯಿಂದ ಅಭಿಮಂತ್ರಿಸಿ, ಅಗ್ನಿಗೂ ಸಮರ್ಪಿಸಿ, ಗುರುಹಿರಿಯರಿಗೆ ವಿತರಿಸಿ ಉಪಾಕರ್ಮ ಹೋಮದ ಸಮ್ಮುಖದಲ್ಲಿ ಯಜ್ಞೋಪವಿತಧಾರಣೆ ಮಾಡುತ್ತಾರೆ. ಈ ದಿನ ದೇವರಿಗೂ ಯಜ್ಞೋಪವಿತ ತೊಡಿಸಿ ಪೂಜಿಸುತ್ತಾರೆ. ನಮ್ಮ ಬದುಕಿಗೆ ಚೆಲುವನ್ನು ತುಂಬುವ ದೇವ-ಋುಷಿ-ಪಿತೃಗಳ ತರ್ಪಣದ ಮೂಲಕ ಅವರನ್ನು ಸ್ಮರಿಸಿ, ವೇದ-ವೇದಾಂಗಗಳ ಅಧ್ಯಯನ ಕೈಗೊಂಡು ಅನುಗ್ರಹವನ್ನು ಬೇಡಲಾಗುತ್ತದೆ.
ರಕ್ಷಾ ಬಂಧನದ ವಿಶಿಷ್ಟ ಹಿನ್ನೆಲೆ
ಭವಿಷ್ಯಪುರಾಣದ ಪ್ರಕಾರ ಹಿಂದೆ ದೇವ-ದಾನದವರಿಗೆ ಹನ್ನೆರಡು ವರ್ಷಗಳ ಕಾಲ ನಿರಂತರ ಯುದ್ಧ ನಡೆಯಿತು, ರಾಕ್ಷಸರು ದೇವತೆಗಳನ್ನು ಸೋಲಿಸಿ, ದೇವಲೋಕವನ್ನು ಆಕ್ರಮಿಸಿ, ದೇವತೆಗಳನ್ನು ಅಲ್ಲಿಂದ ಹೊರದಬ್ಬಿದರು. ಮೂರುಲೋಕದ ಆಡಳಿತವನ್ನು ತಮ್ಮ ಕೈವಶ ಮಾಡಿಕೂಂಡ ದಾನವರು, ಮನುಷ್ಯರು ಯಾವುದೇ ಯಜ್ಞ-ಯಾಗಾದಿಗಳನ್ನು ಮಾಡಬಾರದೆಂದೂ, ತಮ್ಮನ್ನೇ ಪೂಜಿಸಬೇಕೆಂದರು. ಇದರ ಪರಿಣಾಮ ವೇದಪಠಣ-ಯಜ್ಞ- ಉತ್ಸವಾದಿಗಳು ನಿಂತವು, ಧರ್ಮನಾಶವಾಗಿ ದೇವತೆಗಳು ಕ್ಷೀಣಬಲರಾದಾಗ, ದೇವರಾಜ ಇಂದ್ರನು, ಗುರು ಬೃಹಸ್ಪತಿ ಆಚಾರ್ಯರಲ್ಲಿ ಹೀಗೆ ಪ್ರಾರ್ಥಿಸಿದ.
‘ಈ ಪರಿಸ್ಥಿತಿಯಲ್ಲಿ ಯುದ್ಧ ಮಾಡಲಾರೆ, ಮಾಡದೆ ಇರಲಾರೆ, ಏನು ಮಾಡಬೇಕೆಂದು ಅರಿಯದವನಾಗಿದ್ದೇನೆ. ಯಾವುದಾದರೂ ಉಪಾಯ ಸೂಚಿಸಿ’ ಎಂದಾಗ ದೇವೇಂದ್ರನ ವೇದನೆ ಅರಿತು ವಿಜಯ ಪ್ರಾಪ್ತಿಯಾಗಲು, ಶ್ರಾವಣಪೂರ್ಣಿಮೆ ದಿನ ರಕ್ಷಾವಿಧಾನವನ್ನು ಮಾಡಲು ಸೂಚಿಸಿದರು. ಅದರಂತೆ ಇಂದ್ರಾಣಿಯು ಶ್ರಾವಣ ಪೂರ್ಣಿಮೆ ದಿನ, ಇಂದ್ರನಿಗೆ ಬೃಹ್ಮಸ್ಪತಿ ಆಚಾರ್ಯರಿಂದ ಸ್ಪಸ್ತಿವಾಚನ ಮಾಡಿಸಿ, ಅವರಿಂದ ರಕ್ಷಾಸೂತ್ರ ಪಡೆದು ಇಂದ್ರನ ಬಲಗೈಗೆ- ಯೇನ ಬದ್ಧೋ ಬಲೀರಾಜಾ ದಾನವೇಂದ್ರೋ ಮಹಾಬಲಃ
ತೇನತ್ವಾಮಪಿ ಬಧ್ನಾಮಿ ರಕ್ಷೇ ಮಾಚಲ ಮಾಚಲ
ಎಂಬ ಮಂತ್ರಪೂರ್ವಕವಾಗಿ ಕಟ್ಟಿದಳು. ಈ ರಕ್ಷಾಬಂಧನದ ರಕ್ಷೆಯೊಂದಿಗೆ, ಯುದ್ಧಭೂಮಿಗೆ ಹೋದ ದೇವೇಂದ್ರನು ದಾನವರನ್ನು ಸದೆಬಡೆದು ಗೆದ್ದುಬಂದ. ಅಲ್ಲಿಂದ ನಮ್ಮ ಸಂಸ್ಕೃತಿಯಲ್ಲಿ ರಕ್ಷಾಬಂಧನ ಪದ್ಧತಿ ಬೆಳೆದು ಬಂತು.
ಮತ್ತೊಂದು ಪುರಾಣ ಕಥೆಯ ಪ್ರಕಾರ ವಾಮನನು ರಾಜಾ ಬಲಿಗೆ ಈ ದಿನವೇ ರಕ್ಷಾಸೂತ್ರ ಕಟ್ಟಿದಕ್ಷಿಣೆ ಬೇಡಿದ್ದ. ಇನ್ನು ಮಹಾಭಾರತದಲ್ಲಿ ಶ್ರಾವಣ ಪೂರ್ಣಿಮೆಯಂದು ನಡೆದ ಈ ಸಂದರ್ಭ ಸುಪ್ರಸಿದ್ಧವಾದುದು. ಕೃಷ್ಣನು ಶಿಶುಪಾಲನನ್ನು ವಧಿಸುವಾಗ ಕೃಷ್ಣನ ಬಲಗೈ ತೋರುಬೆರಳಿಗೆ ಗಾಯವಾಯಿತು. ಅಲ್ಲೇ ಇದ್ದ ದ್ರೌಪದಿ ಕೂಡಲೇ ತನ್ನ ಸೀರೆಯ ಸೆರಗನ್ನು ಹರಿದು ಕೃಷ್ಣನ ತೋರುಬೆರಳಿಗೆ ಕಟ್ಟಿದಳು. ನಂತರ ದ್ರೌಪದಿ ವಸ್ತ್ರಾಪಹರಣದ ಸಂದರ್ಭದಲ್ಲಿ ಶ್ರೀಕೃಷ್ಣ ಅಕ್ಷಯಂಬರವನ್ನು ಇತ್ತು ಆಕೆಯನ್ನು ರಕ್ಷಿಸಿದ. ದ್ರೌಪದಿ ಕಟ್ಟಿದ ಕಟ್ಟು ಆಕೆಯ ರಕ್ಷಣೆಗೆ ಕಾರಣವಾಯಿತು. ಕ್ಷತ್ರಿಯ ಪುರುಷರು ಯುದ್ಧಕ್ಕೆ ತೆರಳುವಾಗ ಮಹಿಳೆಯರು ರಕ್ಷಾಸೂತ್ರ ಕಟ್ಟಿಕಳಿಸುತ್ತಿದ್ದರು. ಒಮ್ಮೆ ಮೇವಾಡದ ರಾಣಿ ಕರ್ಮಾವತಿ ತನ್ನ ರಾಜ್ಯದ ಮೇಲೆ ದಾಳಿ ಮಾಡುವ ಶತ್ರುವಿನಿಂದ ರಕ್ಷಣೆ ನೀಡುವಂತೆ ಮೊಘಲ… ದೊರೆ ಹುಮಾಯೂನ್‌ಗೆ ರಾಖಿಯೊಂದಿಗೆ ಸಂದೇಶ ಕಳುಹಿಸಿದಾಗ, ಮುಸಲ್ಮಾನನಾಗಿಯೂ ರಾಖಿಯ ಬಗ್ಗೆ ಗೌರವ ಹೊಂದಿದ ಆತ ಮೇವಾಡ ತಲುಪಿ ಕರ್ಮಾವತಿಯ ರಾಜ್ಯವನ್ನು ರಕ್ಷಿಸಿದ ಪ್ರಸಂಗ ಇತಿಹಾಸದಲ್ಲಿ ದಾಖಲಾಗಿದೆ.
ರಕ್ಷಾಬಂಧನ ಆಚರಣೆ ಹೇಗೆ?
ಈ ದಿನ ಸಮುದ್ರತೀರವಾಸಿಗಳು ಸಮುದ್ರಕ್ಕೆ ಕ್ಷೀರಾಭಿಷೇಕ ಮಾಡಿ, ಯಜ್ಞೋಪವೀತ ಹಾಗೂ ತೆಂಗಿನಕಾಯಿ ಸಮರ್ಪಿಸುತ್ತಾರೆ. ಸಂಸ್ಕೃತಪ್ರಿಯರು ಈ ದಿನವನ್ನು ರಕ್ಷಾಬಂಧನದ ಜೊತೆಗೆ ಸಂಸ್ಕೃತದಿನವಾಗಿ ಆಚರಿಸುತ್ತಾರೆ. ಹಿಂದೆಲ್ಲಾ ರಕ್ಷಾಬಂಧನದ ದಿನ ಕೇಸರಿ-ಕೆಂಪು-ಹಳದಿ ಬಣ್ಣಗಳಿಂದ ಕೂಡಿದ ರೇಷ್ಮೆನೂಲನ್ನು ರಾಖಿಯನ್ನಾಗಿ ಕಟ್ಟಿಕೊಳ್ಳುತ್ತಿದ್ದೆವು. ಯಾವಾಗ ಚೀನಾದ ರಾಖಿಗಳು ಬಂದವೋ ಆಗ ರಾಖಿಯ ಸ್ವರೂಪವೇ ಬದಲಾಗಿಹೋಯಿತು. ಈಗ ಮತ್ತೆ ಭಾರತೀಯ ರಾಖಿಗಳನ್ನು ಖರೀದಿಸಿ, ಚೈನೀಸ್ ರಾಖಿಗಳಿಂದ ದೂರವಿರಿ ಎಂಬ ಘೋಷಣೆಯೊಂದಿಗೆ ರಕ್ಷಾಬಂಧನ ಆಚರಿಸುವ ಕಾಲ ಬಂದಿದೆ. ನಮ್ಮದೇ ರಕ್ಷೆಯ ಹಿಂದೆ ನಮ್ಮ ದೇಶದ ಸುರಕ್ಷತೆ ಅಡಗಿದೆ ಎಂಬುದನ್ನು ನಾವು ಮರೆಯಬಾರದು.
ಕೊರೋನಾದ ಈ ಸಂಕಷ್ಟದ ಸಂದರ್ಭದಲ್ಲಿ ತಂಗಿ ಅಣ್ಣನ ಸಮೀಪ ತೆರಳಿ ರಾಖಿ ಕಟ್ಟುವುದು ಸಾಧ್ಯವಿಲ್ಲದೇ ಇರಬಹುದು. ಈಗ ಇ-ಕಾಮರ್ಸ್ ಕಾಲ. ನಾವು ನಮ್ಮ ಮನೆಯಲ್ಲಿಯೇ ಕುಳಿತು ದೂರದ ಅಣ್ಣನಿಗೆ ರಾಖಿ ಕಳುಹಿಸಬಹುದು. ದೂರವಿರಲಿ ಸಮೀಪವಿರಲಿ ಈ ದಿನ ಕಟ್ಟಲ್ಪಟ್ಟರಾಖಿಯ ಒಂದೊಂದು ನೂಲಿನ ಎಳೆಯೂ ಕೂಡ ಸಹೋದರ ಸಹೋದರಿಯರ ಹಾಗೂ ಸರ್ವರ ಪ್ರೀತಿಯ ಸಂಬಂಧವನ್ನು ಗಟ್ಟಿಗೊಳಿಸುವುದರಲ್ಲಿ ಸಂಶಯವಿಲ್ಲ.
- ಗಣೇಶ ಭಟ್ಟ
ನೆಲ್ಲಿಕೇರಿ, ಕುಮಟಾ