* ಇಂದು ಶಿವರಾತ್ರಿ ಹಬ್ಬ ಹಿನ್ನಲೆ
* ಕೆ ಆರ್ ಮಾರುಕಟ್ಟೆಯಲ್ಲಿ ಜನಸಾಗರ
* ಹೂವು ಹಣ್ಣು ಖರೀದಿಗೆ ಮುಗಿಬಿದ್ದ ಜನ
* ನಗರದಲ್ಲಿ ಶಿವನ ದೇವಾಲಯ ಸೇರಿದಂತೆ ಎಲ್ಲಾ ದೇವಸ್ಥಾನಗಳಲ್ಲೂ ವಿಶೇಷ ಪೂಜೆ
ಬೆಂಗಳೂರು(ಮಾ.01): ಇಂದು ನಾಡಿನಾದ್ಯಂತ ಮಹಾಶಿವರಾತ್ರಿ ಸಂಭ್ರಮ. ಹೀಗಿರುವಾಗ ನಗರದಲ್ಲಿ ಶಿವನ ದೇವಾಲಯ ಸೇರಿದಂತೆ ಎಲ್ಲಾ ದೇವಸ್ಥಾನಗಳಲ್ಲೂ ವಿಶೇಷ ಪೂಜೆ ನಡೆಯುತ್ತಿದೆ. ಮಲ್ಲೇಶ್ವರಂನ ಕಾಡು ಮಲ್ಲೇಶ್ವರ ದೇವಸ್ಥಾನದಲ್ಲಿ ಶಿವರಾತ್ರಿ ಆಚರಣೆ ನಡೆಯುತ್ತಿದ್ದು, ದೇವಸ್ಥಾನಕ್ಕೆ ಭಕ್ತರ ದಂಡೇ ಹರಿದು ಬರುತ್ತಿದೆ. ಕೋವಿಡ್ ನಿಂದ ಕಳೆದ ಎರಡು ವರ್ಷಗಳಿಂದ ದೇವಸ್ಥಾನಗಳಿಗೆ ಭಕ್ತರ ನಿಷೇಧವಿದ್ದು, ಸದ್ಯ ಕೋವಿಡ್ ನಿಯಮಗಳು ತೆರವಾದ ಹಿನ್ನಲೆ ದೇವಸ್ಥಾನ ಆಡಳಿತ ಮಂಡಳಿ ಭಕ್ತರಿಗೆ ಅವಕಾಶ ನೀಡಿದೆ.
ಶಿವರಾತ್ರಿ ಹಿನ್ನಲೆ ದೇವಾಲಯಗಳಲ್ಲಿ ವಿಶೇಷ ಅಲಂಕಾರ ಮಾಡಲಾಗಿದ್ದು, ಈಶ್ವರನಿಗೆ ಮುಂಜಾನೆ ನಾಲ್ಕು ಗಂಟೆಯಿಂದ ವಿಶೇಷ ಅಭಿಷೇಕ ನಡೆಯುತ್ತಿದೆ. ದೇವಸ್ಥಾನಕ್ಕೆ ದ್ರಾಕ್ಷಿ ಹಣ್ಣು, ಹಾಗೂ ವಿವಿಧ ರೀತಿಯ ಹೂ ಗಳಿಂದ ವಿಶೇಷ ಅಲಂಕಾರ ಮಾಡಿದ್ದು, ದೇವಸ್ಥಾನಗಳಲ್ಲಿ ಜಾಗರಾಣೆ ಹಿನ್ನೆಲೆ ಸಾಂಸ್ಕೃತಿಕ ಕಾರ್ಯಕ್ರಮವನ್ನೂ ಆಯೋಜಿಸಲಾಗಿದೆ.
Maha Shivarathri: ಶಿವರಾತ್ರಿ ವ್ರತದ ಆಚರಣೆ ಏಕೆ, ಹೇಗೆ?
ಇಷ್ಟೇ ಅಲ್ಲದೇ ನಿರಂತರವಾಗಿ ಕಾಡು ಮಲ್ಲಿಕಾರ್ಜುನನಿಗೆ ಜಲಾಭಿಷೇಕ ನಡೆಯುತ್ತಿದ್ದು, ರಾತ್ರಿ 12 ಗಂಟೆಯಿಂದ ಗಿರೀಜಾ ಕಲ್ಯಾಣೋತ್ಸವವೂ ನಡೆಯುತ್ತಿದೆ.
ಪ್ರಸನ್ನ ಗಣಪತಿ, ವಲ್ಲಿದೇವರ ಸಮೇತ ಸುಬ್ರಮಣ್ಯ ಸ್ವಾಮಿ, ಬ್ರಹ್ಮರಾಭ ಸಮೇತ ಮಲ್ಲಿಕಾರ್ಜುನ ಸ್ವಾಮಿಯ ಬ್ರಹ್ಮರಥೋತ್ಸವ ನಾಳೆ ನಡೆಯಲಿದೆ.
ಕೆ ಆರ್ ಮಾರುಕಟ್ಟೆಯಲ್ಲಿ ಭರ್ಜರಿ ವ್ಯಾಪಾರ
ಮಹಾಶಿವರಾತ್ರಿ ಹಬ್ಬದ ಪ್ರಯುಕ್ತ ಕೆ ಆರ್ ಮಾರುಕಟ್ಟೆಯಲ್ಲಿ ಭರ್ಜರಿ ವ್ಯಾಪಾರ ನಡೆಯುತ್ತಿದ್ದು, ಹೂವಿನ ಮಾರುಕಟ್ಟೆಯಲ್ಲಿ ಹಬ್ಬದ ಖರೀದಿ ಕೊಂಚ ಜೋತರಾಗೇ ಇದೆ. ಈ ಬಾರಿ ಶಿವರಾತ್ರಿ ಆಚರಣೆಗೆ ಯಾವುದೇ ನಿರ್ಬಂಧ ಇಲ್ಲದ ಕಾರಣ ವ್ಯಾಪಾರ ಕಳೆಗಟ್ಟಿದೆ. ಸಾವಿರಾರು ಸಂಖ್ಯೆಯಲ್ಲಿ ಕೆ ಆರ್ ಮಾರುಕಟ್ಟೆಗೆ ಜನರು ಆಗಮಿಸುತ್ತಿದ್ದು, ಬರೆಲೆ ಏರಿಕೆ ನಡುವೆಯೂ ಖರೀದಿ ಜೋರಾಗೇ ನಡೆಯುತ್ತಿದೆ. ಇದೇ ವೇಳೆ ಜನರು ಸಾಮಾಜಿಕ ಅಂತರ ಮರೆತಿದ್ದಾರೆಂಬುವುದು ಉಲ್ಲೇಖನೀಯ.
ಹಬ್ಬದ ಪ್ರಯುಕ್ತ ಗಗನಕ್ಕೇರಿದ ಹೂವು ಹಣ್ಣಿನ ಬೆಲೆ
ಹಬ್ಬದ ಪ್ರಯುಕ್ತ ಹೂವಿನ ಬೆಲೆಗಳಲ್ಲಿ ದಿಢೀರ್ ಏರಿಕೆಯಾಗಿದೆ. ಯಾವುದಕ್ಕೆಷ್ಟು ಬೆಲೆ? ಇಲ್ಲಿದೆ ವಿವರ
ಸೇವಂತಿ ಕೆಜಿಗೆ 220-250
ಮಲ್ಲಿಗೆ --200
ಬಿಡಿ ಗುಲಾಬಿ--240-260
ಕನಕಾಂಭರ--500-650
ಕಾಕಡಾ--400
ಬಿಲ್ವಪತ್ರೆ ಹಿಡಿ ಕಟ್ಟು- 50 ರೂಪಾಯಿ
Mahashivratri 2022: ಶಿವನ ಕೃಪೆಗೆ ರಾಶಿಯನುಸಾರ ಮಾಡಿ ರುದ್ರಾಭಿಷೇಕ
ಶಿವರಾತ್ರಿ ವಿಧಿವಿಧಾನ
ಮಾಘ ಕೃಷ್ಣ ಚತುರ್ದಶಿಯಂದು ಏಕಭುಕ್ತರಾಗಿರಬೇಕು (ಒಂದು ಹೊತ್ತು ಊಟ ಮಾಡುವುದು). ಚತುರ್ದಶಿಯಂದು ಬೆಳಗ್ಗೆ ವ್ರತದ ಸಂಕಲ್ಪ ಮಾಡಿ ಸಾಯಂಕಾಲ ನದಿಯಲ್ಲಿ ಅಥವಾ ಕೆರೆಯಲ್ಲಿ ಶಾಸೊತ್ರೕಕ್ತವಾಗಿ ಸ್ನಾನ ಮಾಡಬೇಕು. ಭಸ್ಮ ಮತ್ತು ರುದ್ರಾಕ್ಷಿಗಳನ್ನು ಧರಿಸಬೇಕು. ಪ್ರದೋಷ ಕಾಲದಲ್ಲಿ ಶಿವನ ದೇವಸ್ಥಾನಕ್ಕೆ ಹೋಗಬೇಕು. ಶಿವನ ಧ್ಯಾನ ಮಾಡಬೇಕು, ಆಮೇಲೆ ಷೋಡಶೋಪಚಾರ ಪೂಜೆ ಮಾಡಿ ಭವಭಾವಿನಿ ಪ್ರೀತ್ಯರ್ಥ ತರ್ಪಣವನ್ನು ನೀಡಬೇಕು. ಶಿವನಿಗೆ 108 ಕಮಲಗಳನ್ನು ಅಥವಾ ಬಿಲ್ವಪತ್ರೆಗಳನ್ನು ನಾಮಮಂತ್ರ ಸಹಿತ ಅರ್ಪಿಸಬೇಕು. ಆಮೇಲೆ ಪುಷ್ಪಾಂಜಲಿಯನ್ನು ಅರ್ಪಿಸಿ ಅಘ್ರ್ಯ ನೀಡಬೇಕು. ಪೂಜೆ, ಸ್ತೋತ್ರಪಠಣ ಮತ್ತು ಮೂಲಮಂತ್ರ ಜಪದ ನಂತರ ಶಿವನ ಮಸ್ತಕದ ಮೇಲಿನ ಒಂದು ಹೂವನ್ನು ತಮ್ಮ ತಲೆಯ ಮೇಲಿಟ್ಟುಕೊಳ್ಳಬೇಕು ಮತ್ತು ಕ್ಷಮಾಯಾಚನೆ ಮಾಡಬೇಕು.
ಯಾಮಪೂಜೆ ಎಂದರೇನು?
ಶಿವರಾತ್ರಿಯಂದು ರಾತ್ರಿಯ ನಾಲ್ಕು ಪ್ರಹರಗಳಲ್ಲಿ ನಾಲ್ಕು ಪೂಜೆಗಳನ್ನು ಮಾಡಬೇಕೆಂಬ ವಿಧಾನವಿದೆ. ಅದಕ್ಕೆ ‘ಯಾಮಪೂಜೆ’ ಎನ್ನುತ್ತಾರೆ. ಪ್ರತಿಯೊಂದು ಯಾಮಪೂಜೆಯಲ್ಲಿ ದೇವರಿಗೆ ಅಭ್ಯಂಗ ಸ್ನಾನ ಮಾಡಿಸಬೇಕು. ಅನುಲೇಪನ ಮಾಡಿ ಧೋತರ, ಮಾವು ಹಾಗೂ ಬಿಲ್ವದ ಎಲೆಗಳನ್ನು ಅರ್ಪಿಸಬೇಕು. ಅಕ್ಕಿಯ ಹಿಟ್ಟಿನ 26 ದೀಪಗಳನ್ನು ಮಾಡಿ ಅವುಗಳನ್ನು ದೇವರಿಗೆ ಬೆಳಗಬೇಕು. ಪೂಜೆಯ ನಂತರ 108 ದೀಪಗಳನ್ನು ದಾನ ಮಾಡಬೇಕು. ಪ್ರತಿಯೊಂದು ಪೂಜೆಯ ಮಂತ್ರಗಳು ಬೇರೆಬೇರೆಯಾಗಿರುತ್ತವೆ, ಅವುಗಳಿಂದ ಅಘ್ರ್ಯವನ್ನು ನೀಡಬೇಕು. ನೃತ್ಯ, ಗೀತೆ, ಕಥಾಶ್ರವಣ ಮುಂತಾದ ವಿಷಯಗಳಿಂದ ಜಾಗರಣೆ ಮಾಡಬೇಕು. ಬೆಳಗ್ಗೆ ಸ್ನಾನ ಮಾಡಿ ಮತ್ತೊಮ್ಮೆ ಶಿವಪೂಜೆ ಮಾಡಬೇಕು. ಉಪವಾಸವನ್ನು ಬಿಡುವಾಗ ಬ್ರಾಹ್ಮಣ ಭೋಜನ ನೀಡಬೇಕು. ಆಶೀರ್ವಾದ ಪಡೆದುಕೊಂಡು ವ್ರತದ ಸಮಾಪ್ತಿ ಮಾಡಬೇಕು. 12, 14 ಅಥವಾ 24 ವರ್ಷ ಈ ವ್ರತವನ್ನು ಆಚರಿಸಿದ ನಂತರ ಅದರ ಉದ್ಯಾಪನೆ (ವ್ರತದ ಪರಿಹಾರ)ಯನ್ನು ಮಾಡಬೇಕು.
ಆಪತ್ಕಾಲದಲ್ಲಿ ಆಚರಣೆ ಹೇಗೆ?
ಮಹಾಶಿವರಾತ್ರಿಯನ್ನು ಎಲ್ಲೆಡೆ ಬಹಳ ಉತ್ಸಾಹದಿಂದ ಆಚರಿಸಲಾಗುತ್ತದೆ. ಮಾಘ ಕೃಷ್ಣ ಪಕ್ಷ ಚತುರ್ದಶಿ ತಿಥಿಗೆ ಬರುವ ಮಹಾಶಿವರಾತ್ರಿಯಂದು ಶಿವನ ವ್ರತವನ್ನು ಮಾಡುತ್ತಾರೆ. ಉಪವಾಸ, ಪೂಜೆ ಮತ್ತು ಜಾಗರಣೆ ಇವು ಮಹಾಶಿವರಾತ್ರಿ ವ್ರತದ ಮೂರು ಅಂಗಗಳಾಗಿವೆ. ಈ ಬಾರಿ ಕೊರೋನಾ ಹಿನ್ನೆಲೆಯಲ್ಲಿ ಕೆಲವು ಸ್ಥಳಗಳಲ್ಲಿ ಈ ವ್ರತವನ್ನು ಎಂದಿನಂತೆ ಆಚರಿಸಲು ಕೆಲವೊಂದು ನಿರ್ಬಂಧಗಳಿರಬಹುದು. ಇಂತಹ ಸಮಯದಲ್ಲಿ ಏನು ಮಾಡಬೇಕು, ಮಹಾಶಿವರಾತ್ರಿಯಂದು ಶಿವತತ್ವದ ಲಾಭವನ್ನು ಪಡೆದುಕೊಳ್ಳಲು ಯಾವ ಕೃತಿಯನ್ನು ಮಾಡಬೇಕು, ಈ ವಿಷಯದಲ್ಲಿ ಕೆಲವು ಉಪಯುಕ್ತ ಅಂಶಗಳನ್ನು ಮತ್ತು ದೃಷ್ಟಿಕೋನವನ್ನು ಇಲ್ಲಿ ನೀಡುತ್ತಿದ್ದೇವೆ.