ಹೊಸ ವರುಷ, ಹೊಸ ಹರುಷ ; ಪ್ಲವ ಸಂವತ್ಸರ, ತರಲಿ ಸಂತಸ,ಸಡಗರ

By Kannadaprabha NewsFirst Published Apr 11, 2021, 9:52 AM IST
Highlights

ಯುಗಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ

ಹೊಸ ವರುಷಕೆ ಹೊಸ ಹರುಷವ ಹೊಸತು ಹೊಸತು ತರುತಿದೆ

ಎಂದು ಹಾಡಿದ ಕವಿ ಯುಗಾದಿಯನ್ನು ಕಂಡಿದ್ದು ಹರುಷದ ಹರಿಕಾರನಾಗಿ. ಕವಿ ನುಡಿಯುವಂತೆ ಅದೆಷ್ಟೋ ಯುಗಾದಿಗಳು ಬಂದುಹೋಗಿವೆ. ಅಷ್ಟುಸಲ ಬಂದರೂ ಅದು ಬರುವುದನ್ನು ನಿಲ್ಲಿಸಿಲ್ಲ. ನಿಯಮಿತವಾಗಿ ಬರುತ್ತಲೇ ಇದೆ. ಜೊತೆಗೆ ಹರುಷವನ್ನು ತರುತ್ತಿದೆ. ಇದರಲ್ಲೂ ಬದಲಿಲ್ಲ. ಪ್ರತಿ ಬಾರಿ ಬರುವಾಗಲೂ ಅದು ಸಂತಸ ಹೊತ್ತೇ ಬಂದಿದೆ.

- ಜಗದೀಶಶರ್ಮಾ ಸಂಪ

ಅದೇನು ಯುಗಾದಿಗೆ ಈ ಹುದ್ದೆ? ಅದು ಮತ್ತೆ ಮತ್ತೆ ಬರುವುದೇಕೆ? ಬರುವಾಗಲೆಲ್ಲ ಹೊಸ ಹರುಷ ತರುವುದೇಕೆ? ಅದು ತರುವ ಆ ಹೊಸ ಹರುಷವಾದರೂ ಏನು? ಅದು ಎಲ್ಲಿದೆ? ನಮ್ಮನ್ನು ಅದು ಆವರಿಸುತ್ತದಾ? ನಾವು ಆತುಕೊಳ್ಳಬೇಕಾ? ಅದು ನಮ್ಮನ್ನು ಮುಟ್ಟುತ್ತದಾ? ನಮ್ಮೊಳವನ್ನು ತಟ್ಟುತ್ತದಾ? ನಮಗದು ದಕ್ಕುತ್ತದಾ?

ಯುಗಾದಿಯಲ್ಲಿ ಬೇವು- ಬೆಲ್ಲ ತಿನ್ನುವ ವೈದಿಕ, ವೈಜ್ಞಾನಿಕ ಕಾರಣಗಳಿವು! 

ನಾವು ನಿನ್ನೆ ಇದ್ದೆವು. ಇಂದು ಇದ್ದೇವೆ. ನಾಳೆಯ ಬಗೆಗೆ ಗೊತ್ತಿಲ್ಲವಾದರೂ ನಾಳೆಯೂ ನಾವಿರಲೇಬೇಕು ಎಂದು ಖಡಾಖಂಡಿತವಾಗಿ ಅಂದುಕೊಂಡಿದ್ದೇವೆ. ನಮ್ಮ ಆ ನಿನ್ನೆ ಇಂದಾಗಿ ಬದಲಾಗುವಾಗ ಯುಗಾದಿ ತರುವ ಪರಿವರ್ತನೆ ಮೂಡಿಬರುವುದಾದರೂ ಎಲ್ಲಿ? ಇಂದು ಎಂದರೆ ಅದು ನಿನ್ನೆಯ ಮುದ್ರಿತ ರೂಪ. ನಾಳೆಯೆಂದರೆ ಅದು ಇಂದಿನ ಮರು ಮುದ್ರಣ. ನಾವು ಬದುಕು ಮಾಡುತ್ತಿರುವುದಂತೂ ಹೀಗೆಯೇ. ಹಾಗಾಗಿ ನಮಗೆ ಹರುಷದ ಮಾತಿರಲಿ, ಈ ಹೊಸತು ಎನ್ನುವುದೇ ಅನುಭವಕ್ಕೆ ಬರುವುದಿಲ್ಲ. ನಾವು ಹೊಸದರಿಂದ ಯಾವಾಗಲೂ ಬಾಹ್ಯರು, ಅಥವಾ ನಮಗೆ ಹೊಸತು ಎಂದೆಂದೂ ಬಾಹ್ಯ.

ಅದದೇ ಭ್ರಮೆ, ಅದೇ ಕ್ಲೀಷೆ, ಅದೇ ಸ್ವರತಿ, ಅದರಿಂದಾದ ಅವಮಾನ, ಅದರ ಮಾಯದ ಗಾಯ, ಗಾಯವನ್ನು ಒಣಗಲು ಬಿಡದೆ ಕೆರೆದು ಹುಲಿ ಹುಣ್ಣು ಮಾಡಿಕೊಳ್ಳುವ ಜನ್ಮಜಾತ ಜಾಯಮಾನ, ಅಳಬೇಕು ಎಂದುಕೊಂಡು ಅಳುವುದು, ನಗಬೇಕಲ್ಲ ಎಂದು ನಗುವುದು, ಸೋಲಿನಲ್ಲಿ ಆಸಕ್ತಿ, ಗೆಲುವಿನ ನನಸಾಗಿಸಿಕೊಳ್ಳದ ಕನಸು, ಅವನು ಕುಳಿತಿದ್ದು - ಇವನು ನಿಂತಿದ್ದು - ಮತ್ತೊಬ್ಬ ಮಲಗಿದ್ದು ಸರಿಯಿಲ್ಲ ಎನ್ನುತ್ತಾ ನಾವು ಈ ಮೂರನ್ನೂ ಸರಿಯಾಗಿ ಅನುಭವಿಸದ ಪ್ರತಿಕ್ಷಣದ ಆತ್ಮಘಾತ. ಇಂಥವೆಲ್ಲ ನಮ್ಮ ನಿನ್ನೆಯಾಗಿತ್ತು. ಇವತ್ತು ಅದನ್ನೆ ಹೊತ್ತು ಸಾಗಿದ್ದೇವೆ. ಶಿಲುಬೆ ಹೊತ್ತ ಯೇಸುವಿಗೆ ಹಾಗೆ ಮಾಡಬೇಕೆಂದು ಕಟ್ಟಳೆಯಿತ್ತು. ನಾವು ಬೇಡದ ಇದನ್ನೆಲ್ಲ ಹೊತ್ತು ಸಾಗುತ್ತಿದ್ದೇವಲ್ಲ, ಯಾರು ಹಾಗೆಂದು ಆದೇಶಿಸಿದ್ದು? ಯಾರ ಕಟ್ಟಾಜ್ಞೆ ಅದು? ಹೋಗಲಿ ಯಾರ ಬಯಕೆ ಅದು?

ಯುಗಾದಿಯಲ್ಲಿ ಕಷ್ಟ ಬಂದರೆ ಮುಂದಿನ ದಿನಗಳಲ್ಲಿ ಸುಖವಂತೆ! 

ಯಾರದೋ ಅಲ್ಲ. ನಮ್ಮದೇ ಬಯಕೆ, ನಮ್ಮದೇ ಸುಗ್ರೀವಾಜ್ಞೆ. ಜಾರಿ ಮಾಡಿದ್ದೂ ನಾವೇ, ಜಾರಿಯಾಗಿದ್ದು ನಮ್ಮ ಮೇಲೆಯೇ. ಹೀಗಿರುವಾಗ ಕವಿ ಹೇಳುವ ಹೊಸತು ಮತ್ತು ಹರುಷ ಎಲ್ಲಿ ಬಂತು? ಪ್ರಾಯಶಃ ನಮಗೆ ಅದು ಬಂದಿದ್ದಾಗಲಿ ಇದ್ದಿದ್ದಾಗಲಿ ಹೋದದ್ದಾಗಲಿ ಯಾವುದೂ ಗೊತ್ತಾಗುವುದಿಲ್ಲ.

ಯುಗಾದಿ ಬರುವಾಗ ಹರುಷ ತರುವುದಕ್ಕೆ ಕಾರಣ ಹೊಸದಾಗುವುದು. ಯಾವುದು ಹೊಸದಾಗುವುದು ಎಂದರೆ ಹಳೆಯ ಪ್ರಕೃತಿ. ಅವಳು ಹೊಸ ಹಸಿರು ತೊಟ್ಟು ಹೊಸ ಉಸಿರಿಗೆ ಎಡೆಯಾಗುತ್ತಾಳೆ. ವಸಂತನ ನವಾಗಮನಕ್ಕೆ ಕಳಕಳೆಯಾಗುತ್ತಾಳೆ. ಮನದುಂಬಿ ನಳನಳಿಸುತ್ತಾಳೆ. ಇಲ್ಲಿ ಗಮನಿಸಬೇಕಾದ ವಿಷಯವೊಂದಿದೆ. ಅದೇ ಕವಿ ಹೊಸತು ಮತ್ತು ಹರುಷವನ್ನು ಜಂಟಿಯಾಗಿಸುವುದರ ಕಾರಣ. ಪ್ರಕೃತಿ ಹೊಸಬಳಲ್ಲ. ಭೂರಮೆಗಾದ ವಯಸ್ಸೆಷ್ಟು? ವಿಜ್ಞಾನ 4.54 ಬಿಲಿಯನ್‌ ವರ್ಷಗಳು ಎನ್ನುತ್ತದೆ. ಹತ್ತು ಅಂಕೆಯ ಮೊತ್ತ ಅದು. ನಾವೋ, ಮೂರು ಅಂಕೆಯ ಆಯುಸ್ಸನ್ನೂ ಮುಟ್ಟದವರು. 4,540,000,000 ಎಂದರೆ ಅದೆಷ್ಟುಹಳಬಳು ಅವಳು? ಅಂಥವಳು ಪ್ರತಿ ವರ್ಷ ಹೊಸದಾಗುತ್ತಾಳೆ. ಚೈತ್ರದ ಆಸುಪಾಸಿನಲ್ಲಿ ಹೊಸದಾದ ಆ ಸಂಭ್ರಮವನ್ನು ಚೆಲ್ಲಾಡುತ್ತಾಳೆ. ಪ್ರಕೃತಿ ಹೊಸದಾಗುವ ಕಾಲ ಸಹಜವಾಗಿ ಸಂತಸ ನೀಡಬೇಕು. ಯಾಕೆಂದರೆ ಹರುಷವೆಂದರೆ ಹೊಸದಲ್ಲದೆ ಬೇರೇನಲ್ಲ.

ಶಾರ್ವರಿ ಸಂವತ್ಸರದ ಮಹತ್ವ, ಯುಗಾದಿ ಆಚರಣೆ ಹೇಗಿರಬೇಕು? 

ನಮ್ಮ ಹಳಬರಿಗೆ ಹೊಸದೆಂದರೆ ಆಸ್ಥೆ. ನವೋ ನವೋ ಭವತಿ ಜಾಯಮಾನಃ- ಬದುಕಿನಲ್ಲಿ ದಿನದಿನವೂ ಹೊಸ ಹೊಸದು ಮೂಡಿಬರಲಿ ಎಂದು ವೇದದ ಆಶಯ. ನವ-ನವೋನ್ಮೇಷ-ಶಾಲಿನೀ ಪ್ರಜ್ಞಾ ಪ್ರತಿಭಾ ಮತಾ- ಹೊಸ ಹೊಸದನ್ನು ಅರಳಿಸುವ ಪ್ರಜ್ಞೆಯೇ ಪ್ರತಿಭೆ, ಅದು ಇದ್ದರೆ ಮಾತ್ರ ಸಾಹಿತ್ಯ ಸೃಷ್ಟಿ, ಎನ್ನುವ ಮಾತು ಹೊಸತರ ಆವಿರ್ಭಾವಕ್ಕೆ ಕಾರಣವಾದದ್ದು ಸಾಹಿತ್ಯ ಎನ್ನುತ್ತದೆ. ಎಂದೂ ಹೊಸದಾಗುತ್ತಲೇ ಇರುವ ಚಿರನೂತನತೆ ಅವರ ಆಕಾಂಕ್ಷೆ.

ಯುಗಾದಿ ಮಾಡುವುದು ಇದನ್ನೇ. ಅದು ಬದುಕನ್ನು ಹೊಸದಾಗಿಸುತ್ತದೆ. ಆದರೆ ಅದು ಹಳತೂ ಆಗಿದೆ. ಕಾಲಚಕ್ರ ಆ ಒಂದು ಕ್ಷಣದಲ್ಲಿ ತಿರುಗಲು ಆರಂಭಿಸಿತಂತೆ. ಅದು ಯುಗದ ಆದಿಯ ಕ್ಷಣ. ಆ ದಿನವನ್ನು ಪ್ರತಿಪತ್‌ ಎಂದರು. ಆ ಪಕ್ಷವನ್ನು ಶುಕ್ಲ ಎಂದರು. ಆ ಮಾಸವನ್ನು ಚೈತ್ರ ಎಂದರು. ಎಂಬಲ್ಲಿಗೆ ಚೈತ್ರ ಶುಕ್ಲ ಪ್ರತಿಪದೆಯಂದು ಸೃಷ್ಟಿಆರಂಭವಾಯಿತು ಎಂದಾಯಿತು. ಅದರ ವಾರ್ಷಿಕ ದಿನವೇ ಈ ಯುಗಾದಿಯ ಪರ್ವ. ಅತ್ಯಂತ ಹಳೆಯ ಯುಗಾದಿ ಪ್ರತಿವರ್ಷ ಹೊಸರೂಪ ತಳೆಯುತ್ತದೆ.

ಆದರೆ ನಾವು ಹೊಸಬರಾಗುತ್ತೇವಾ? ಹೊತ್ತ ಹಳೆಯ ಕರ್ಮದ ಮೂಟೆಯನ್ನು ಇಳಿಸಲು ಅರಿಯೆವು. ಯೋಚಿಸಿ ಯೋಚಿಸಿ ಹೈರಾಣಾದರೂ ಅದರಿಂದ ಹೊರಬರಲು ಮನಸ್ಸು ಮಾಡೆವು. ಎಂದೋ ಆದ ಗಾಯ ಗುಣವಾಗಲು ಬಿಡೆವು.

ನಾವು ಈಗಲಾದರೂ ಬದಲಾಗೋಣ. ಹೊಸದಾಗಿ ಯೋಚಿಸತೊಡಗೋಣ. ಎಂದರೆ ಯೋಚಿಸುವ ಧಾಟಿ ಬದಲಿಸೋಣ. ಈಗಿನ್ನೂ ಬದುಕು ಆರಂಭವಾದಂತೆ ಹೊಸ ಯೋಜನೆ ಮಾಡೋಣ. ಹಳೆಯ ಕನಸಗಳಿಗೆ ನನಸಾಗುವ ಅವಕಾಶ ಕೊಡೋಣ. ‘ವರುಷಕೊಂದು ಹೊಸತು ಜನ್ಮ ಹರುಷಕೊಂದು ಹೊಸತು ನೆಲೆಯು ಅಖಿಲ ಜೀವಜಾಲಕೆ’ ಎನ್ನುವ ಕವಿ ವಾಣಿಯಲ್ಲಿ ನಮ್ಮನ್ನೂ ಅಂತರ್ಗತಗೊಳಿಸೋಣ.

ಈ ಸದಾಶಯದೊಂದಿಗೆ ಯುಗಾದಿಯನ್ನು ಸ್ವಾಗತಿಸೋಣ:

ಮತ್ತೆ ಬಂತು ಯುಗದ ಆದಿ ಹೊಸ ಬಗೆಯನು ಬಿತ್ತಲು

ಹಳೆಯ ಜಗದ ಸಾವ ನೋವ ಮರೆತು ಮುಂದೆ ಸಾಗಲು

ಕಷ್ಟಕರಗಿ ಭೀತಿ ಅಳಿದು ನಗುವ ಹೂವು ಅರಳಲಿ

ಹೊಸ ಯುಗಾದಿ ಹೊಸದೆ ತೆರದಿ ನಲಿವ ನಮಗೆ ನೀಡಲಿ

click me!