ಹಿಂದೂ ಧರ್ಮದಲ್ಲಿ ಹಾವನ್ನು ದೇವರೆಂದು ಪೂಜಿಸುತ್ತೇವೆ. ಹಾಗೆ ಸರ್ಪ, ನಾಗರಗಳೆಲ್ಲ ಅತಿ ಪವಿತ್ರ ಹಾವುಗಳೆಂಬ ಭಾವನೆ ನಮ್ಮಲ್ಲಿದೆ. ಹೀಗೆ ನಾಗನಿಗೆ ಸಂಬಂಧಿಸಿದ ಪ್ರಮುಖ ದೇವಾಲಯ ಸುಬ್ರಹ್ಮಣ್ಯ.
ನಾಗ ದೋಷ, ಸರ್ಪಹತ್ಯೆ, ಸಂಸ್ಕಾರ, ಮಗುವಾಗಲು ಸಮಸ್ಯೆ, ಮದುವೆಯಾಗಲು ಸಮಸ್ಯೆ- ಹೀಗೇ ಬಹುತೇಕ ಸಮಸ್ಯೆಗಳಿಗೆ ಜ್ಯೋತಿಷಿಗಳು ಸಲಹೆ ಮಾಡೋದು ಸುಬ್ರಹ್ಮಣ್ಯ(Subrahmanya)ಕ್ಕೆ ಹೋಗಿ ಪೂಜೆ ಮಾಡಿಸಿಕೊಂಡು ಬರಬೇಕೆಂದು. ಕರ್ನಾಟಕ(Karnataka)ದ ಪ್ರಮುಖ ದೇವಾಲಯಗಳಲ್ಲೊಂದಾಗಿರುವ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದ ಬಗ್ಗೆ ಕೆಲ ಆಸಕ್ತಿಕರ ಮಾಹಿತಿಗಳನ್ನಿಲ್ಲಿ ಕೊಡಲಾಗಿದೆ.
ಪುರಾಣ
ಸುಮಾರು 5000 ವರ್ಷಗಳ ಹಿಂದೆ ಸುಬ್ರಹ್ಮಣ್ಯ ದೇವಾಲಯವನ್ನು ಇಲ್ಲಿ ನಿರ್ಮಿಸಲಾಗಿದೆ ಎನ್ನಲಾಗುತ್ತದೆ. ಪುರಾಣದ ಕತೆಯಂತೆ, ಪವಿತ್ರವಾದ ಸರ್ಪವೆನಿಸಿರುವ ವಾಸುಕಿ ಹಾಗೂ ಇತರೆ ಹಾವುಗಳಿಗೆ ಗರುಡನು ಬೆದರಿಕೆ ಹಾಕಲು ಸುಬ್ರಹ್ಮಣ್ಯನು ಇಲ್ಲಿ ಸುರಕ್ಷಿತ ಸ್ಥಳ ನೀಡಿ ಕಾಪಾಡಿದನಂತೆ. ಸುಬ್ರಹ್ಮಣ್ಯನೆಂದರೆ ಕಾರ್ತಿಕೇಯನೇ ಆಗಿದ್ದಾನೆ.
ಕುಮಾರ ಪರ್ವತ (Kumara Parvatha)
ಕರ್ನಾಟಕದ ಅತಿ ಕಷ್ಟದ ಚಾರಣ ಎಂಬ ಹಿರಿಮೆಗೆ ಪಾತ್ರವಾಗಿರುವ, ಚಾರಣಿಗರ ಕನಸಿನ ಸ್ಥಳವಾಗಿರುವ ಕುಮಾರ ಪರ್ವತವು ದೇವಾಲಯದ ಹಿನ್ನೆಲೆಯಲ್ಲಿ ನಿಂತಿದೆ. ಈ ಶೇಷ ಪರ್ವತ ಹಾಗೂ ದೇವಾಲಯವನ್ನು ಒಟ್ಟಾಗಿ ನೋಡಿದಾಗ, ಸರ್ಪವು ಸುಬ್ರಹ್ಮಣ್ಯ ದೇವಾಲಯಕ್ಕೆ ಕಾವಲಾಗಿ ನಿಂತಂತೆ ಭಾಸವಾಗುತ್ತದೆ. ಈ ಬೆಟ್ಟವು ಆರು ತಲೆಗಳ ಹಾವಿನ ಹಾಗೆ ಕಾಣುವುದರಿಂದ ಇದಕ್ಕೆ ಶೇಷ ಪರ್ವತವೆಂಬ ಹೆಸರಿದೆ.
ಕುಕ್ಕೆ(Kukke)
ದಕ್ಷಿಣ ಕನ್ನಡದ ಸುಣ್ಯ ತಾಲೂಕಿನಲ್ಲಿ ಹಸಿರಾದ ಕಾಡು ಹಾಗೂ ಪರ್ವತಗಳ ನಡುವೆ ಸುಬ್ರಹ್ಮಣ್ಯವಿದೆ. ಒಂದು ಕಾಲದಲ್ಲ ಶ್ರೀ ಕ್ಷೇತ್ರಕ್ಕೆ ಕುಕ್ಕೆ ಎಂಬ ಹೆಸರಿತ್ತು. ಹಾಗಾಗಿ, ಇಂದಿಗೂ ಕುಕ್ಕೆ ಸುಬ್ರಹ್ಮಣ್ಯ ಎಂಬ ಎರಡೂ ಹೆಸರನ್ನು ಬಳಸಿ ಕರೆಯಲಾಗುತ್ತದೆ. ಈ ಸ್ಥಳದಲ್ಲಿ ಆದಿ ಶಂಕರಾಚಾರ್ಯರು ಉಳಿದಿದ್ದರು ಎಂಬ ಪ್ರತೀತಿ ಇದೆ.
Temple special: ಮಣ್ಣಿನ ಗೊಂಬೆಯ ಹರಕೆ ಕೇಳುವ ಸದಾಶಿವ ರುದ್ರ
ಧಾರಾ ನದಿ (Dhara river)
ಸುಬ್ರಹ್ಮಣ್ಯ ಕ್ಷೇತ್ರವು ಧಾರಾ ನದಿಯ ಪುಣ್ಯ ತಟದಲ್ಲಿದೆ. ಧಾರಾ ನದಿಯ ಮೂಲವು ಕುಮಾರ ಪರ್ವತವಾಗಿದೆ. ಹಾಗಾಗಿ, ಇದಕ್ಕೆ ಕುಮಾರ ಧಾರಾ ಎಂದೂ ಕರೆಯಲಾಗುತ್ತದೆ.
ಗರುಡಗಂಬ (Garuda Pillar)
ದೇವಾಲಯಕ್ಕೆ ಪ್ರವೇಶಿಸುತ್ತಿದ್ದಂತೆ, ಗರ್ಭಗುಡಿ ಹಾಗೂ ಮುಖ್ಯದ್ವಾರದ ನಡುವೆ ಬೆಳ್ಳಿಯ ಗರುಡಗಂಬವನ್ನು ಕಾಣಬಹುದು. ಗರ್ಭಗುಡಿಯೊಳಗಿರುವ ವಾಸುಕಿಯ ಉಸಿರಾಟದಿಂದ ಹೊಮ್ಮುವ ವಿಷಗಾಳಿಯಿಂದ ಭಕ್ತರನ್ನು ರಕ್ಷಿಸುವ ಸಲುವಾಗಿ ಈ ಗರುಡಗಂಬ ನಿಲ್ಲಿಸಲಾಗಿದೆ.
ಶೇಷ, ವಾಸುಕಿ, ಸುಬ್ರಹ್ಮಣ್ಯ
ಗರ್ಭಗುಡಿಯಲ್ಲಿ ಮೇಲೆ ಸುಬ್ರಹ್ಮಣ್ಯ ಹಾಗೂ ವಾಸುಕಿಯ ಮೂರ್ತಿಗಳಿದ್ದು, ಕೆಳಗಿನ ಹಂತದಲ್ಲಿ ಶೇಷನನ್ನು ಕಾಣಬಹುದಾಗಿದೆ.
ಮೃತ್ತಿಕೆ
ಇಲ್ಲಿನ ಮುಖ್ಯ ಗರ್ಭಗುಡಿ(sanctum)ಯನ್ನು ಕೇರಳ(Kerala) ಮಾದರಿಯಲ್ಲಿ ನಿರ್ಮಿಸಲಾಗಿದೆ. ಇಲ್ಲಿನ ಪ್ರಸಾದದ ಒಂದು ವಿಶೇಷವೆಂದರೆ ಹುತ್ತದ ಮಣ್ಣಾದ ಮೃತ್ತಿಕೆಯನ್ನು ಪ್ರಸಾದವಾಗಿ ನೀಡಲಾಗುತ್ತದೆ. ಪ್ರತಿ ದಿನ ಬರುವ ಎಲ್ಲ ಭಕ್ತರಿಗೂ ಪ್ರಸಾದ ಭೋಜನವಿರುತ್ತದೆ.
ಮಾಧ್ವಮಠ
ಈ ದೇವಾಲಯದಲ್ಲಿ ಮೊದಲು ಸ್ಥಾನಿಕ ತುಳು ಬ್ರಾಹ್ಮಣರಾದ ಮೊರೋಜಾ ಕುಟುಂಬ ಅರ್ಚಕ ವೃತ್ತಿಯನ್ನು ನಡೆಸುತ್ತಿತ್ತು. 1845ರವರೆಗೂ ಅವರೇ ಮುಖ್ಯ ಅರ್ಚಕರು ಹಾಗೂ ದೇವಾಲಯದ ತಂತ್ರಿಗಳಾಗಿದ್ದರು. ನಂತರದಲ್ಲಿ ದೇಗುಲದ ಹತೋಟಿಯನ್ನು ಮಾಧ್ವರು ತೆಗೆದುಕೊಂಡರು. ದೇವಾಲಯದ ಪಕ್ಕದಲ್ಲಿ ಮಠವನ್ನೂ ಕಟ್ಟಿದರು.
ನಾಗದೋಷ
ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನವು ಮುಖ್ಯವಾಗಿ ಹೆಸರಾಗಿರುವುದೆ ನಾಗ ದೋಷ ಸಂಬಂಧಿ ಪೂಜೆಗಳಿಗಾಗಿ. ಅದರಲ್ಲೂ ಆಶ್ಲೇಷ ಬಲಿ ಹಾಗೂ ಸರ್ಪ ಸಂಸ್ಕಾರ ಇಲ್ಲಿ ನಡೆಸಿದಾಗ ಮಾತ್ರ ನಿಜವಾದ ಫಲ ಸಿಗುವುದು ಎಂಬ ನಂಬಿಕೆ ಇದೆ. ಒಳ್ಳೆಯ ಹಾವನ್ನು ಸಾಯಿಸಿದರೆ, ಅಥವಾ ಅದು ಸತ್ತು ಬಿದ್ದಿದ್ದನ್ನು ನೋಡಿದರೆ ಅದಕ್ಕೆ ಸಂಪೂರ್ಣ ಸಂಸ್ಕಾರ ಕ್ರಿಯೆ ಮಾಡಲೇಬೇಕು. ಇಲ್ಲದಿದ್ದಲ್ಲಿ ಸರ್ಪಹತ್ಯೆ ದೋಷ ಉಂಟಾಗುತ್ತದೆ ಎಂಬ ನಂಬಿಕೆ ಹಿನ್ನೆಲೆಯಲ್ಲಿ ಸರ್ಪ ಸಂಸ್ಕಾರ ನಡೆಸಲಾಗುತ್ತದೆ.
ಶ್ರೀಮಂತ ದೇಗುಲ(Rich temple)
ಕುಕ್ಕೆ ಸುಬ್ರಹ್ಮಣ್ಯ ದೇವಾಲಯವು ಕರ್ನಾಟಕದ ಶ್ರೀಮಂತ ದೇವಾಲಯಗಳಲ್ಲೊಂದು ಎನ್ನಲಾಗುತ್ತದೆ. ಆದರೆ, ಈ ಬಗ್ಗೆ ಅಧಿಕೃತ ಮಾಹಿತಿ ಇಲ್ಲ.
ಧಾರ್ಮಿಕವಾಗಿಯೂ ಮನಸ್ಸಿಗೆ ಸಮಾಧಾನ ನೀಡುವ, ಪ್ರಾಕೃತಿಕ ಸೌಂದರ್ಯದಿಂದ ಮನಸ್ಸನ್ನು ಸೆಳೆಯುವ ಕುಕ್ಕೆ ಸುಬ್ರಹ್ಮಣ್ಯಕ್ಕೆ ಕುಟುಂಬದೊಂದಿಗೆ ಭೇಟಿ ಕೊಟ್ಟು ನೋಡಿ.