ಬರದ ನಡುವೆಯೂ ಮತ್ತೆ ಬಂದಿದೆ ದಸರಾ

By Kannadaprabha News  |  First Published Oct 15, 2023, 4:18 PM IST

ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ಸುಮಾರು 414 ವರ್ಷಗಳ ಇತಿಹಾಸವಿದೆ. ಬರ, ನೆರೆ, ಕಾವೇರಿ, ವೀರಪ್ಪನ್‌, ಡಾ.ರಾಜ್‌ಕುಮಾರ್‌ ಅಪಹರಣ, ಮಾಜಿ ಸಚಿವ ಎಚ್‌. ನಾಗಪ್ಪ ಹತ್ಯೆ, ಭೂಕಂಪ, ಪ್ಲೇಗ್‌, ಕೋವಿಡ್‌- ಹೀಗೆ ಹತ್ತು ಹಲವು ಸಮಸ್ಯೆಗಳು ಎದುರಾದರೂ ದಸರೆ ಮಾತ್ರ ನಿಂತಿಲ್ಲ. ಯಾವುದೇ ಅಡ್ಡಿ ಆತಂಕಗಳು ಇಲ್ಲದಿದ್ದಾಗ ಅದ್ಧೂರಿಯಾಗಿ, ಸಮಸ್ಯೆ ಇದ್ದಾಗ ಸರಳ ಅಥವಾ ಸಾಂಪ್ರದಾಯಿಕವಾಗಿ ಮುನ್ನಡೆದುಕೊಂಡು ಬಂದಿದೆ.


-ಅಂಶಿ ಪ್ರಸನ್ನಕುಮಾರ್‌

ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ಸುಮಾರು 414 ವರ್ಷಗಳ ಇತಿಹಾಸವಿದೆ. ಬರ, ನೆರೆ, ಕಾವೇರಿ, ವೀರಪ್ಪನ್‌, ಡಾ.ರಾಜ್‌ಕುಮಾರ್‌ ಅಪಹರಣ, ಮಾಜಿ ಸಚಿವ ಎಚ್‌. ನಾಗಪ್ಪ ಹತ್ಯೆ, ಭೂಕಂಪ, ಪ್ಲೇಗ್‌, ಕೋವಿಡ್‌- ಹೀಗೆ ಹತ್ತು ಹಲವು ಸಮಸ್ಯೆಗಳು ಎದುರಾದರೂ ದಸರೆ ಮಾತ್ರ ನಿಂತಿಲ್ಲ. ಯಾವುದೇ ಅಡ್ಡಿ ಆತಂಕಗಳು ಇಲ್ಲದಿದ್ದಾಗ ಅದ್ಧೂರಿಯಾಗಿ, ಸಮಸ್ಯೆ ಇದ್ದಾಗ ಸರಳ ಅಥವಾ ಸಾಂಪ್ರದಾಯಿಕವಾಗಿ ಮುನ್ನಡೆದುಕೊಂಡು ಬಂದಿದೆ.

Tap to resize

Latest Videos

undefined

ಪ್ರಸ್ತುತ ರಾಜ್ಯದಲ್ಲಿ ಬರದ ಪರಿಸ್ಥಿತಿ. ಹೀಗಾಗಿ ಈ ಬಾರಿಯ ದಸರೆಯನ್ನು ಸರಳವೂ ಅಲ್ಲದ, ಅದ್ಧೂರಿಯೂ ಅಲ್ಲದ ಸಾಂಪ್ರದಾಯಿಕ ರೀತಿಯಲ್ಲಿ ಅ.15 ರಿಂದ 24ರವರೆಗೆ ಆಚರಿಸಲಾಗುತ್ತಿದೆ. ಇದಕ್ಕಾಗಿ ಅರಮನೆಗಳ ನಗರಿ, ಪಾರಂಪರಿಕ ನಗರಿ, ಯೋಗ ನಗರಿ, ಶಿಕ್ಷಣ ನಗರಿ, ಸಾಂಸ್ಕೃತಿಕ ರಾಜಧಾನಿ ಮೈಸೂರು ಸಜ್ಜಾಗಿದೆ. ಪ್ರಮುಖ ರಸ್ತೆ, ವೃತ್ತಗಳು ಬಣ್ಣ, ಬಣ್ಣದ ವಿದ್ಯುತ್‌ ದೀಪಾಲಂಕಾರಗಳಿಂದ ಝಗಮಗಿಸುತ್ತಿವೆ.

ವಿಶ್ವವಿಖ್ಯಾತ ಮೈಸೂರು ದಸರಾ ಉದ್ಘಾಟನೆಗೆ ಕ್ಷಣಗಣನೆ: ಇಂದು 10.15ಕ್ಕೆ ಹಂಸಲೇಖರಿಂದ ಚಾಲನೆ!

ದುಷ್ಟ ಶಿಕ್ಷಣೆ, ಶಿಷ್ಟ ರಕ್ಷಣೆಯ ಪ್ರತೀಕವಾಗಿ ದಸರೆಯನ್ನು ದೇಶದ ವಿವಿಧೆಡೆ ಬೇರೆ ಬೇರೆ ಹೆಸರುಗಳಲ್ಲಿ ಆಚರಿಸಲಾಗುತ್ತಿದೆ. ಆದರೆ ಕರ್ನಾಟಕದ ನಾಡಹಬ್ಬ ಎನಿಸಿಕೊಂಡಿರುವ ಮೈಸೂರು ದಸರೆ ಮಾತ್ರ ರಾಜ ಮಹಾರಾಜರ ಕಾಲದಿಂದಲೂ ವಿಶ್ವ ಪ್ರಸಿದ್ಧಿ ಪಡೆದಿದೆ. ಹದಿನೈದನೇ ಶತಮಾನದಲ್ಲಿ ವಿಜಯನಗರ ರಾಜರ ಕಾಲದಲ್ಲಿ ಆರಂಭವಾದ ದಸರೆ ಆ ಸಾಮ್ರಾಜ್ಯದ ಪತಾನಾನಂತರವೂ ಕ್ರಿ.ಶ.1610ರಿಂದ ಮೈಸೂರು ಅರಸರು ಮುಂದುವರೆಸಿಕೊಂಡು ಬಂದಿದ್ದಾರೆ. ಶ್ರೀರಂಗಪಟ್ಟಣದಲ್ಲಿ ಆರಂಭವಾದ ದಸರೆ ನಂತರ ಮೈಸೂರಿಗೆ ಸ್ಥಳಾಂತರವಾಯಿತು. ಹೀಗಾಗಿ ಪ್ರತಿವರ್ಷ ಮೈಸೂರಿನ ಜೊತೆಗೆ ಶ್ರೀರಂಗಪಟ್ಟಣದಲ್ಲೂ ದಸರೆಯನ್ನು ಆಚರಿಸಿಕೊಂಡು ಬರಲಾಗುತ್ತಿದೆ. ದಸರೆ ಆರಂಭಕ್ಕೆ ಮೈಸೂರು ಅರಸರಾಗಿದ್ದ ರಾಜ ಒಡೆಯರ್‌ ಕಾರಣ. ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್‌ ಕಾಲದಲ್ಲಿ ಆಡಳಿತದ ಜೊತೆಗೆ ದಸರೆ ಆಚರಣೆ ಕೂಡ ಅಪಾರ ಖ್ಯಾತಿಗೆ ಪಾತ್ರವಾಯಿತು. ಜಯಚಾಮರಾಜ ಒಡೆಯರ್‌ ಕೊನೆಯ ಮಹಾರಾಜರು. ಅವರ ನಂತರ ರಾಜ್ಯ ಸರ್ಕಾರವೇ ನಾಡಹಬ್ಬವನ್ನಾಗಿ ಆಚರಿಸಿಕೊಂಡು ಬರುತ್ತಿದೆ. ಆದರೆ ನವರಾತ್ರಿಯ ಸಂದರ್ಭದಲ್ಲಿ ರಾಜವಂಶಸ್ಥರು ಖಾಸಗಿ ದರ್ಬಾರ್‌ ನಡೆಸುತ್ತಾ, ಗತಕಾಲದ ವೈಭವವನ್ನು ನೆನಪಿಸುತ್ತಾರೆ. ಹಿಂದೆ ರಾಜವಂಶಸ್ಥ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್‌ ಅವರು, ಈಗ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್‌ ಅವರು ನವರಾತ್ರಿಯ ಸಂದರ್ಭದಲ್ಲಿ ಪ್ರತಿನಿತ್ಯ ಖಾಸಗಿ ದರ್ಬಾರ್‌ ನಡೆಸುತ್ತಾ ಆ ಪರಂಪರೆಯನ್ನು ಮುಂದುವರೆಸಿಕೊಂಡು ಬಂದಿದ್ದಾರೆ.

ಈ ಬಾರಿ ಹತ್ತು ದಿನಗಳ ಕಾಲ ನಡೆಯುವ ದಸರೆಯಲ್ಲಿ ಕರುನಾಡಿನ ಪರಂಪರೆ, ಇತಿಹಾಸ, ಸಂಪ್ರದಾಯ, ಕಲೆ, ಸಂಸ್ಕೃತಿ ವೈಭವ ಅನಾವರಣಗೊಳ್ಳಲಿದೆ. ನಾಡದೇವತೆ ಚಾಮುಂಡೇಶ್ವರಿ ದೇವಿ ನೆಲೆಸಿರುವ ಚಾಮುಂಡಿ ಬೆಟ್ಟದ ಮೇಲೆ ಅ.15ರಂದು ಬೆಳಗ್ಗೆ 10.15 ರಿಂದ 10.36 ರೊಳಗೆ ಸಲ್ಲುವ ಶುಭ ವೃಶ್ಚಿಕ ಲಗ್ನದಲ್ಲಿ ಚಲನಚಿತ್ರ ನಿರ್ದೇಶಕ ಹಂಸಲೇಖ ದಸರೆಗೆ ಚಾಲನೆ ನೀಡುವರು. ಮುಖ್ಯಮಂತ್ರಿ ಸಿದ್ದರಾಮಯ್ಯ ಆದಿಯಾಗಿ ಹಲವರು ಗಣ್ಯರು ಪಾಲ್ಗೊಳ್ಳುವರು. ದಸರೆಯ ಪ್ರಮುಖ ಆಕರ್ಷಣೆಯಾದ ಜಂಬೂ ಸವಾರಿಯು ಅ.24ರಂದು ನಡೆಯಲಿದೆ.

ನವರಾತ್ರಿ: ಒಂಬತ್ತು ದಿನಗಳಲ್ಲಿ ಯಾವ ದೇವಿಯನ್ನು ಪೂಜಿಸಬೇಕು, ವಿಶೇಷತೆ ಏನು?

ಅರಮನೆ ಆವರಣದಲ್ಲಿ ಪ್ರತಿನಿತ್ಯ ಸಂಗೀತ ಕಾರ್ಯಕ್ರಮಗಳು, ಇದಲ್ಲದೇ ಚಲನಚಿತ್ರೋತ್ಸವ, ಫಲಪುಷ್ಪ ಪ್ರದರ್ಶನ, ಆಹಾರ ಮೇಳ, ಕುಸ್ತಿ ಪಂದ್ಯಾವಳಿ, ಕ್ರೀಡಾಕೂಟ, ವಸ್ತು ಪ್ರದರ್ಶನ, ಶಿಲ್ಪ, ಚಿತ್ರಕಲಾ ಪ್ರದರ್ಶನ, ಲಲಿತಕಲೆ, ಕರಕುಶಲ ಪ್ರದರ್ಶನ, ಯುವ, ಯೋಗ, ರೈತ, ಮಹಿಳಾ ಹಾಗೂ ಮಕ್ಕಳ ದಸರಾ, ಹಾಸ್ಯ- ಚುಟುಕು- ಜಾನಪದ ಮೇಳೈಸಿರುವ ಕಾವ್ಯ ಸಂಭ್ರಮ, ಚಿಗುರು, ಮಹಿಳಾ ಕವಿಗೋಷ್ಠಿ, ಯುವ, ಪ್ರಾದೇಶಿಕ ಕವಿಗೋಷ್ಠಿ, ಉರ್ದು ಕವಿಗೋಷ್ಠಿ, ಪ್ರಧಾನ ಕವಿಗೋಷ್ಠಿ, ಪಾರಂಪರಿಕ ಸೈಕಲ್‌ ಸವಾರಿ, ಪಾರಂಪರಿಕ ನಡಿಗೆ, ಟಾಂಗಾ ಸವಾರಿ, ಚಾರಣ, ಸಾಕು ಪ್ರಾಣಿಗಳ ಪ್ರದರ್ಶನ ಮೊದಲಾದ ಕಾರ್ಯಕ್ರಮಗಳನ್ನು ರೂಪಿಸಲಾಗಿದೆ.

ದಸರೆ ಇರಲಿ, ಇಲ್ಲದಿರಲಿ ಮೈಸೂರಿನಲ್ಲಿ ಯಾವಾಗಲೂ ಪ್ರವಾಸಿಗರ ದಂಡು! ದೇಶ ಮಾತ್ರವಲ್ಲದೇ ವಿಶ್ವದ ಪ್ರಮುಖ ಪ್ರವಾಸಿತಾಣ ಎಂದು ಗುರುತಿಸಲ್ಪಟ್ಟಿದೆ. ವಾರಾಂತ್ಯದಲ್ಲಿ ಮೈಸೂರಿನ ರಸ್ತೆಗಳು, ಹೋಟೆಲ್‌ಗಳು, ಪ್ರಮುಖ ತಾಣಗಳು ಪ್ರವಾಸಿಗರಿಂಗ ಕಿಕ್ಕಿರಿದು ತುಂಬಿರುತ್ತವೆ. ನವರಾತ್ರಿಯ ಸಂದರ್ಭದಲ್ಲಂತೂ ಕೇಳುವಂತೆಯೇ ಇಲ್ಲ. ಸರ್ಕಾರಿ ದಸರೆ ಸರಳವೋ, ಸಾಂಪ್ರದಾಯಿಕವೋ ಜನಸಾಗರ ಹರಿದು ಬರುತ್ತದೆ.

click me!