ಆತ್ಮವಿಶ್ವಾಸದಿಂದ ಕೊರೋನಾ ಎದುರಿಸಲು ವೈದ್ಯರಿಗೆ ಗೀತೋಪದೇಶ

By Suvarna News  |  First Published Apr 27, 2020, 1:47 PM IST

ಅಬ್ಬಾ, ಈ ಕೊರೋನಾ ವೈರಸ್ ತಂದಿರುವ ಮಾನಸಿಕ ಕ್ಷೋಭೆ ಅಷ್ಟಿಷ್ಟಲ್ಲ. ಸಾಮಾನ್ಯರು ಮನೆಯಲ್ಲಿಯೇ ಇದ್ದು, ಸುರಕ್ಷಿತವಾಗಿರಬಹುದು. ಆದರೆ, ವೈದ್ಯರು, ದಾದಿಯರು ಹಾಗೂ ವೈದಕೀಯ ಸಿಬ್ಬಂದಿ ಕಥೆ ಏನು? ಅವರಿಗೂ ಸಂಸಾರವಿದೆ, ಮಕ್ಕಳು, ಮನೆ ಇವೆ. ಆದರೆ, ಈ ಯುದ್ಧದಲ್ಲಿ ನೇರವಾಗಿ ಪಾಲ್ಗೊಳ್ಳಲೇ ಬೇಕು. ಇಂಥ ಮಾನಸಿಕ ತೊಳಲಾಟಕ್ಕೆ ಭಗವದ್ಗೀತೆ ಮದ್ದು ಎನ್ನುತ್ತಿದ್ದಾರೆ, ಮ್ಯಾಂಚೆಸ್ಟರ್‌ನಲ್ಲಿರುವ ವೈದ್ಯರೊಬ್ಬರು...


ಇಡೀ ವಿಶ್ವವೇ, ಕೊರೊನಾ ವೈರಸ್‌ನಿಂದಾಗಿ ಭಯಭೀತಗೊಂಡು ಹೋರಾಟಕ್ಕೆ ಇಳಿದಿದ್ದರೆ, ವೈದ್ಯರ, ದಾದಿಯರ, ಅರೋಗ್ಯ ಕಾರ್ಯ ಸಿಬ್ಬಂದಿ - ಉದ್ವೇಗ, ಸನ್ನಿಪಾತ, ಉಭಯಸಂಕಟ  ಒಂದಕ್ಕೆರಡಾಗಿ, ಈ ಮಹಾಮಾರಿ ಕೊರೋನಾ ವೈರಸ್‌ನೊಂದಿಗೆ, ಅದರ ಒಡನಾಡಿಯಾಗಿ ವ್ಯವಹರಿಸುವುದು ಸಾಹಸವೇ ಸರಿ! ಇವರ ಎಲ್ಲವನ್ನೂ - ಊಟ, ನಿದ್ದೆ, ಮನೆ, ಮಕ್ಕಳು, ಪತಿ/ಪತ್ನಿ ಕೊರೊನಾ, ಕಬಳಿಸುತ್ತಿದೆ. ವಿಚಿತ್ರ ಎಂದರೆ ನಾನೇ ಸ್ವತಃ ವೈದ್ಯನಾಗಿದ್ದರೂ ಮತ್ತು ನಮಗಾರಿಗೂ, ಕಂಡರಿಯದ ಕೇಳರಿಯದ  ಈ ಸಾಂಕ್ರಾಮಿಕ ಕಾಯಿಲೆಯನ್ನು ಎದುರಿಸಿರುವ ಅನುಭವ ಇಲ್ಲದೇ ಇರುವುದು !!

ಸ್ವಲ್ಪದರಲ್ಲಿ ಹೇಳಬಹುದಾದರೆ, ಪರಿಣಾಮ ಸ್ವರೂಪಿಯಾಗಿ ಉದ್ಭವಿಸಿದ ಈ ಸಾರ್ವಜನಿಕ ತುರ್ತುಪರಿಸ್ಥಿತಿ, ಅಂತಾರಾಷ್ಟ್ರೀಯ ಗಂಭೀರ ವಿಚಾರವಾಗಿದೆ ಎಂದು 30 ಜನವರಿ 2020 ರಂದು ಘೋಷಿಸಲಾಯಿತು. ವಿಶ್ವ ಆರೋಗ್ಯ ಸಂಸ್ಥೆ (WHO) ಸಹ, ಇದು ಮಾರಾಣಾಂತಿಕ ಸೋಂಕು ಎಂದು 11 ಮಾರ್ಚ 2020 ರಂದು ಪುನರುದ್ಧರಿಸಿ, ಇದು ವಿಶ್ವವ್ಯಾಪಿ,ಶೀಘ್ರವಾಗಿ ಪಸರಿಸಬಲ್ಲದು ಎನ್ನುವ ಆತಂಕ ವ್ಯಕ್ಪ್ತಪಡಿಸಿತು.

Tap to resize

Latest Videos

ಆರೋಗ್ಯ ಇಲಾಖೆಯ ಈ ಹೇಳಿಕೆಯಿಂದಾಗಿ, ಮುಂಚೂಣಿಯಲ್ಲಿರುವ ವಿಶ್ವ ನಾಯಕರ ಗಾಬರಿಯನ್ನು ಉಂಟುಮಾಡಿ ಇಡೀ ಸಮುದಾಯ  ಒಂದು ಹೆಜ್ಜೆ  ಹಿಂದೆ ಹಾಕಿದ್ದರೆ, ನಾವು, ಅಂದರೆ, ಆಸ್ಪತ್ರೆ ವೈದ್ಯರು, ದಾದಿಯರು, ಕಾಯಿಲೆಯ ಗುಣಲಕ್ಷಣಗಳನ್ನು ಅರಿಯದ ಮಹಾ ಮಾರಿಯೊಂದಿಗಿನ ಸಮರದ ನಾಯಕತ್ವ ವಹಿಸುವುದು - ಸಮಯದ ಕರೆಯಾಗಿತ್ತು. ಹೆಜ್ಜೆ ಮುಂದಿಡುವುದು ಜರೂರಿಯಾಗಿತ್ತು. ಪರಿಸ್ಥಿತಿಯ ಕಠೋರ ಬೇಡಿಕೆಯಾಗಿತ್ತು. ಅಭೂತಪೂರ್ವ, ಜಾಗತಿಕ ಸಮರವಾಗಿದ್ದು ಮಾನವೀಯತೆಯೇ ತನ್ನದೆ ಆದ ಶತೃವನ್ನು ಎದುರಿಸುವ ದುರ್ಭರ ಪ್ರಸಂಗ ! ಆಸ್ಪತ್ರೆಯೇ ಯುದ್ದಭೂಮಿ, ಅಲ್ಲಿಯ ಸಿಬ್ಬಂದಿಯೇ ಸೈನಿಕರು, ಡಾಕ್ಟರ್‌ಗಳು ಮತ್ತು ನರ್ಸ್‌ಗಳು ಈ ಸಮರದ ಸೇನಾಧಿಪತಿಗಳು. ತಾತ್ವಕವಾಗಿ ಏನನ್ನೂ ಅರಿಯದೇ ಇರುವ ಕೊರೋನಾ ಎನ್ನುವ ಶತ್ರುವಿನೊಂದಿಗೆ ಯದ್ಧ. ಅನಿವಾರ್ಯದ ಹೋರಾಟಕ್ಕೆ ಸಂಸಿದ್ಧತೆ. 

ಕೋವಿಡ್ 19 ಸೋಲಿಸಲು ಪ್ರಾಣಾಯಮ ಬೆಸ್ಟ್ ಮದ್ದು

ಸ್ವತಃ ತಾವೇ ಸೋಂಕಿಗೆ ಒಳಗಾಗುವ ಭಯ. ಸಾವೂ ಸಂಭವಿಸಬಹುದು. ತಮ್ಮ ಪ್ರೀತಿಯ ಕುಟುಂಬದ ಸದಸ್ಯರಿಗೆ, ಹಾಗೂ ಸಾರ್ವಜನಿಕರಿಗೆ, ಪಸರಿಸಬಹುದು. ವಿಪರೀತ ಒತ್ತಡದಿಂದಾಗಿ, ಮಾನಸಿಕ ಯಾತನೆಯ ಹೊರ ಹರಿವು, ಜೊತೆಗೆ ಅಸ್ವಸ್ಥತೆ.  ಕಣ್ಣುಕಟ್ಟಿ ಕಾಡಿಗೆ ಬಿಟ್ಟಂತಹ ಗೊಂದಲದ ಪರಿಸ್ಥಿತಿ. ರೋಗಿಗಳಿಗೆ ಚಿಕಿತ್ಸೆ ನೀಡಬೇಕೇ ಅಥವಾ ಈ ಮೇಲೆ ಹೇಳಿದ ಕಾರಣಗಳ ನೆಪ ಹೂಡಿ ಮನೆಯಲ್ಲಯೇ ಇರಬೇಕೇ? ಹೋರಾಟದ, ಹಾದಿಯಲ್ಲಿ, ರೋಗಿಗಳು ಸಾವನ್ನಪ್ಪಿದರೆ ? ಅಥವಾ ಸೂಕ್ತ ಚಿಕಿತ್ಸೆ ನೀಡಲು ಆಗದಿದ್ದರೆ ? ಈ ವೈರಸ್ ಡಾಕ್ಟರುಗಳನ್ನು, ನರ್ಸಗಳನ್ನು ಸಾಯಿಸಿದರೆ ? ಈ ಪರಿಸ್ಥಿತಿಯನ್ನು ನೋಡುವಾಗ, ನನಗೆ ಕುರುಕ್ಷೇತ್ರ ರಣಭೂಮಿಯಲ್ಲಿ, ಅರ್ಜುನನ ವಿಷಾದ ಮತ್ತು ವಾಸುದೇವ ಕೃಷ್ಣನ ಗೀತೋಪದೇಶ, ನೆನಪಿಗೆ ಬರಲಾರಂಭಿಸಿತು.

ಕುತತ್ಸ್ವಾಕಶ್ಮಲಮಿದಂ ವಿಷಮೇವ ಸಮುಪಸ್ಥಿತಮ್ |
ಅನಾರ್ಯಜುಷ್ಟಮಸ್ವರ್ಗ್ಯಮ ಕೀರ್ತಿರಮರ್ಜುನಃ ||2-2

ಕ್ಲೈಬ್ಯಮಾಸಗಮಃ ಪಾರ್ಥಾನೈತತ್ತ್ವಯ್ಯುಪೊದ್ದಯತೇ |
ಕ್ಷುದ್ರಂ ಹೃದಯ ದೌರ್ಬಲ್ಯಂತ್ವಕ್ತೋತಿಷ್ಠ ಪರಂತಪಃ|| 2-3

[ ಎಲೈ ಅರ್ಜುನ, ಆರ್ಯರಿಗೆ ಅಯೋಗ್ಯತೆ, ಸ್ವರ್ಗಗತಿಗೆ ವಿರೋಧ, ಅಪಕೀರ್ತಿ,ಉಂಟುಮಾಡುವ ಈ ವಿಷಮ  ಸ್ಥಿತಿ  ಅದು ಹೇಗೆ ನಿನ್ನ ಆವರಿಸಿದೆ ? ಷಂಡತನ ಸಲ್ಲದು. ನಿನಗಂತೂ ಇದು ಯೋಗ್ಯವಲ್ಲ.ಎಲೈ ಶತೃಸಂಹಾರಕನೇ,ತುಚ್ಛ ಮನಸ್ಸಿನ ದೌರ್ಬಲ್ಯವನ್ನು ಹಿಮ್ಮೆಟ್ಟಿ ಏಳು ]

ಅರ್ಜುನನ ಹಾಗೆ ಕೊರೊನಾ ವೈರಸ್ ವಿರುದ್ಧ ಹೋರಾಡುತ್ತಿರುವ ಡಾಕ್ಟರ್‌ಗಳಿಗೂ ಈ ರೀತಿಯ ವಾದ, ತರ್ಕ, ತಲ್ಲಣಗಳು ಉಂಟಾಗುವುದು ಸಹಜ ಕ್ರಿಯೆ. ಶ್ರೀ ಕೃಷ್ಣನ ಮೊದಲ ಉತ್ತರ ಸಹ, ಮಾನಸಿಕ ಯಾತನೆಯ ಮಟ್ಟದ್ದೇ.  ಪಾರ್ಥನ, ಪ್ರಶ್ನೆಗಳಿಗೆ  ಉತ್ತರ ನೀಡಬೇಕಾದ ಶ್ರೀ ಕೃಷ್ಣ, ನಮಗೆಲ್ಲ ಇರಬಹುದಾದ ಯಾತನೆಗಳ ಕಡೆಗೆ ಗಮನ ನೀಡದೆ, ಭಾವನೆಗಳ ಉನ್ಮಾದಕ್ಕೇ ದಾಳಿ ಇಡುತ್ತಾನೆ. ಸರಳ ಮಾತಿನಲ್ಲಿ ಹೇಳುವುದಾದರೆ ಅರ್ಜುನನ ವಿಷಾದ ಉತ್ತರಿಸಲು ಯೋಗ್ಯವಿಲ್ಲದ್ದು. ಯಾಕೆಂದರೆ ಅದರ ಮೂಲ ಉದ್ವೇಗ ಸ್ಥಿತಿ. ಅದಕ್ಕೆ ತಾರ್ಕಿಕ ವಿಶ್ಲೇಷಣೆ ಇಲ್ಲ. ಹೃದಯಕ್ಕೆ ದಾಳಿ ಇಡುವಂತಹ ಈ ಸಂಗತಿ, ಇಂದಿನ ಈ ಸಂದರ್ಭದಲ್ಲಿ ಡಾಕ್ಟರುಗಳಿಗೂ ಅನ್ವಯಿಸುತ್ತದೆ. ಇದಕ್ಕೆ ಮಾನಸಿಕ ಉಪಶಮನ ಬೇಕು. ಭಗವದ್ಗೀತೆ ಮಾತ್ರ ವೈದ್ಯರುಗಳಿಗೆ  ಚಿಕಿತ್ಸೆ ನೀಡಬಲ್ಲದು.

ಏನೆಲ್ಲಾ ಅನಾಹುತ ಕೊರೋನಾದಿಂದ ಜಾಗತಿಕವಾಗಿ ಸಂಭವಿಸುತ್ತಿದ್ದರೂ, ಕೆಲವೊಂದು ವೈದ್ಯರು ದಾದಿಯರು, ತಮ್ಮ ತಮ್ಮ ಕರ್ತವ್ಯದಿಂದ ವಿಮುಖರಾಗಿ ಮನೆಗಳಲ್ಲಿ ಅಡಗಿಕುಳಿತಿರುವುದು ನಾಚಿಕೆಗೇಡಿನ ಸಂಗತಿ. ಶೇ.90 ವೈದ್ಯರು ಈ ಸಮರ ಆಹ್ವಾನ ವನ್ನು ಸ್ವೀಕರಿಸಿ ಸಮರ್ಥವಾಗಿ ಹೋರಾಡುತ್ತಿದ್ದಾರೆ. ಶೇ.10 ವೈದ್ಯ ವೃಂದದ ಮೇಲೆ ನಾನು ಯಾವುದೇ ರೀತಿಯ ಆಪಾದನೆ ಮಾಡುತ್ತಿಲ್ಲ. ವೈಚಿತ್ರವೆಂದರೆ ಅವರೂ ಅರ್ಜುನನ ಹಾಗೆ ವಿಷಾದಕ್ಕೆ ಸಿಲುಕಿದ್ದು. ಅವರಲ್ಲಿರುವ ಸ್ಪೂರ್ತಿ ಸೆಲೆಯನ್ನು ಉದ್ದೀಪನಗೊಳಿಸ ಬೇಕಾಗಿದೆ. 

ರೋಗಿ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಲು ಮನೆ ಮದ್ದಿದು

ವೀರ ಸೈನಿಕನಾದ ಅರ್ಜುನನ ವಿಷಾದ ಎಂದರೆ, ರಣರಂಗದಲ್ಲಿ ತನ್ನವರೇ ಆದ ಬಂದು ಬಳಗ, ಗುರು ಹಿರಿಯರ ಸಾವಿಗೆ ತಾನೇ ಕಾರಣವಾಗುವುದು. ವಿಪರ್ಯಾಸವೆಂದರೆ, ಕೋವಿಡ್ ಯುದ್ಧದಲ್ಲಿ, ತಮ್ಮ ಪ್ರೀತಿಯ ಜನಗಳನ್ನು ಕಳೆದು ಕೊಳ್ಳುತ್ತೇವೆ ಎನ್ನುವ ಕುಟುಂಬ ಸದಸ್ಯರ ಆತಂಕ. ಕಾರಣ ಸ್ಪಷ್ಟ. ಎಲ್ಲರೂ ಮಾನಸಿಕ ಕ್ಲೈಬ್ಯದಿಂದ ಬಳಲುತ್ತಿರುವವರೇ!  ಈ ಪರೀಕ್ಷಾ ಸಮಯದಲ್ಲಿ, ಹಿಂದೆಂದೂ ಕಾಣದ ಮಾನಸಿಕ ಯಾತನೆ. ನಿದರ್ಶನ ರೂಪವಾಗಿ ಹೇಳುವುದಾದರೆ, ತಂದೆ ಅಥವಾ ತಾಯಂದಿರು ದೈನಂದಿನ ಕರ್ತವ್ಯ ಪೂರೈಸಿ ಮನೆಗೆ ಹಿಂದಿರುಗಿದಾಗ, ಮಕ್ಕಳು ಓಡೋಡುತ್ತ ಬಂದು ಅಪ್ಪಿ ಅಂತಃಕರಣ ಪ್ರಕಟಿಸುವ ಹಾಗಿಲ್ಲ! ನನ್ನ ವಿಭಾಗದಲ್ಲಿ ಇದ್ದ ಒಬ್ಬ ವೈದ್ಯ ಪಾಪ, ಗರ್ಭಿಣಿ ಪತ್ನಿಗೆ ಸೋಂಕು ತಗಲದೇ ಇರಲಿ ಎಂದು ಆಸ್ಪತ್ರೆಯ ಆವರಣದಲ್ಲಿಯೇ ರಾತ್ರಿಗಳನ್ನು ಕಳೆಯುತ್ತಿದ್ದಾನೆ. ಇನ್ನೂ ಕೆಲಲಪ ದಾದಿಯರು, ಸಿಬ್ಬಂದಿ, ಆಸ್ಪತ್ರೆಯ ಹತ್ತಿರ ಇರುವ ಹೋಟೆಲ್‌ಗಳಲ್ಲಿ ವಾಸ್ತವ್ಯ ಹೂಡಿ, ತಮ್ಮ ಕುಟುಂಬದ ರಕ್ಷಣೆ ಮತ್ತು ಕರ್ತವ್ಯ ಎರಡನ್ನೂ ನಿಭಾಯಿಸುತ್ತಿರುವುದು. ಪ್ರತಿದಿನ ಬೆಳಿಗ್ಗೆ ನಾನೂ ಆಸ್ಪತ್ರೆಗೆ ಹೋಗಲು ಸಿದ್ಧವಾಗಿ ಹೊರಬೀಳುವಾಗ, ನನ್ನ ಪತ್ನಿ ಪುತ್ರರು, ಬಾಗಿಲಿಗೆ ಬಂದು ನಿಂತಾಗ ಒಂದು ನಿಮಿಷ ನಿಶ್ಯಬ್ಧ ಹಾಗೂ ಎದೆಯೊಳಗೇನೋ ತಣ್ಣನೆಯ ಭಾವ ! ಶಬ್ದಗಳಿಗೆ ನಿಲುಕದ ಚಿಂತೆ ? ಮಾನಸಿಕ ಒತ್ತಡ ? ಇದೊಂದು ಮುಗಿಯಲಾರದ ಭಾವೊದ್ವೇಗಗಳ ಕ್ಷಣ.

ಪರಿಸ್ಥಿತಿ ಹೀಗಿದ್ದರೂ, ಆರೋಗ್ಯ ವಿಭಾಗದ ಎಲ್ಲರೂ ತಮ್ಮ ಎಲ್ಲಾ ಭಾವನಾತ್ಮಕ ವಿಷಯಗಳನ್ನು ಮನೆಯಲ್ಲಿ ಬಿಟ್ಟು, ಆಸ್ಪತ್ರೆಗೆ ಧಾವಿಸುತ್ತಾರೆ. ತಮಗೇನೂ ಆಗಿಲ್ಲ, ಆಗುವುದೂ ಇಲ್ಲ, ಎಂದು ಸಕಾರಾತ್ಮಕ ಮನಸಿನಿಂದ, ರೋಗಿಗಳ ಚಿಕಿತ್ಸೆಯಲ್ಲಿ ನಿರತರಾಗುತ್ತಾರೆ. ಶ್ರೀ ಕೃಷ್ಣನ ಆದೇಶದಂತೆ, ಅರ್ಜುನ ಸಹ ತನ್ನಲ್ಲಿರುವ ಭಾವನಾತ್ಮಕ ಸಂದೇಹಗಳನ್ನು ಬದಿಗಿರಿಸಿ, ಧರ್ಮದ ರಕ್ಷಣೆಗಾಗಿ ಯುದ್ದಕ್ಕೆ ಸನ್ನದ್ಧನಾದ. ಕುರುಕ್ಷೇತ್ರ ಧರ್ಮಕ್ಷೇತ್ರವಾಯಿತು. 

ಈ ಕೊರೋನಾ ಯುದ್ಧದಲ್ಲಿ ಡಾಕ್ಟರ್, ನರ್ಸಗಳಿಗೆ,'ಜೀವ ಉಳಿಸುವ' ಜವಾಬ್ದಾರಿ ಇದೆ. ಈ ವಿಶ್ವ ವಿಷಮ ಸನ್ನಿವೇಶದಲ್ಲಿ, ಆಸ್ಪತ್ರೆಯ ವಾರ್ಡ್‌ಗಳು ನೂರಕ್ಕೂ ಮೀರಿ ಸಂದಣಿಯಾದಾಗ, ಕೆಲವೊಂದು ಕಠಿಣ ನಿರ್ಧಾರಗಳ ಅಗತ್ಯ ಇರುತ್ತದೆ. ಯಾವ ಜೀವ ಉಳಿಸಬಹುದು ? ಯಾರದ್ದು ಬೇಡ ? ಐ.ಸಿ.ಯು ಗಳಲ್ಲಿ ಸಾವಿನ ಪ್ರಮಾಣ ಶೇ.50. ಹೀಗಿರುವಾಗ ಡಾಕ್ಟರ್‌ಗಳ ನಿರ್ಧಾರ ಬಹಳ ಕರುಣಾಹೀನವಾದದ್ದು. ಈ ರೋಗಿಗೆ ಚಿಕಿತ್ಸೆಯಿಂದ ಯಾವ ಉಪಯೋಗವೂ ಇಲ್ಲವೇ? ಆ ರೋಗಿಗೆ ಚಿಕಿತ್ಸೆ ಸಾಕು? ಎನ್ನುವ ನಿರ್ಧಾರ? ರೋಗಿಯ ಸಾವು ಸಮೀಪಿಸಿದೆ. ಕುಟುಂಬದ ಸದಸ್ಯರನ್ನು ಕರೆಯುವ ಮಾತೇ ಇಲ್ಲ. ವೀಡಿಯೋ ಹಾಕಿ ಸಂಬಂಧಿಕರಿಂದ ವಿದಾಯ ಹೇಳಿಸಬೇಕು!  

ಮತ್ತೊಂದು ಮುಖ್ಯ ವಿಷಯ ಎಂದರೆ, ವೈದ್ಯರಿಗೆ, ನರ್ಸ್‌ಗಳಿಗೆ ನರ್ಸಗಳಿಗೆ, ಉಳಿದ ಸಿಬ್ಬಂದಿ ವರ್ಗಕ್ಕೆ, ಅತೀ ಅಗತ್ಯ ವಾಗಿ ಇರಲೇ ಬೇಕಾದ  ಸಂಗತಿ – ‘ಸನ್ನಡತೆ’ ಮತ್ತು ‘ತಾಳ್ಮೆ’. ಭಗವದ್ಗೀತೆಯ  ಪಾತ್ರ ಇಲ್ಲಿ ಹಿರಿದು. ನಮ್ಮ ಧಾರ್ಮಿಕ ನಾಯಕರು, ಇದನ್ನೇ ಔಷಧೀಯ ರೂಪದಲ್ಲಿ ನೀಡಿ ಸಂಕಟ ಸಮಯದಿಂದ ಪಾರು ಮಾಡುತ್ತಾರೆ.

ಹೇಗಿದ್ದೀರಿ? ಚೆನ್ನಾಗಿ ನಿದ್ರಿಸುತ್ತಿದ್ದೀರಾ?

ಈ ಸಮಯದಲ್ಲಿ, ನಮ್ಮ ಆರೋಗ್ಯ ರಕ್ಷಣಾ ವಿಧಾನಗಳಿಗೆ, ಉನ್ನತ ಮಟ್ಟದ ಗೌರವ ಪ್ರಶಂಸೆಗಳು ಇರುವುದು ನೆಮ್ಮದಿ ತಂದಿದೆ. ಕಾರಣ, ನಮ್ಮ ತರಬೇತಿ ಪಡೆದ ಸಿಬ್ಬಂದಿ, ನಿಸ್ವಾರ್ಥ ಸೇವಾ ಮನೋಭಾವ, ಪ್ರತಿ ರೋಗಿಯಲ್ಲಿ ತೋರುವ ಸಮಾನತಾ ಗುಣ, ನಮ್ಮ ಮೌಲ್ಯಗಳು, ಸ್ವಭಾವ ನಡವಳಿಕೆಗಳು. ಹೀಗಾಗಿ ನಮ್ಮ ಪರಿಣಾಮಗಳು ಪ್ರಭಾವಶಾಲಿಯಾಗಿರುತ್ತವೆ.  ಒಳ್ಳೆಯ ವೈದ್ಯರ ಗುಣಗಳು ಎಂದರೆ ರೋಗಿಗೆ ಸರಿಯಾದ ಸಮಯದಲ್ಲಿ ಸರಿಯಾದ ಚಿಕಿತ್ಸೆ ಮತ್ತು ಅದನ್ನು ಮೀರಿ ನಿಂತು ಸಾಧಿಸುವ ಛಲ.

ಕರ್ತವ್ಯ ನಿರ್ವಹಣೆ ಎಂದರೆ ಶ್ರೀ ಕೃಷ್ಣ ಸೂಚಿಸುವ ‘ಸ್ವಂತ’ ಧರ್ಮ. ಒಬ್ಬ ಕ್ಷತ್ರಿಯನಿಗೆ ಧರ್ಮಕ್ಕಾಗಿ ಹೋರಾಡುವದಕ್ಕಿಂತ ಮಿಗಿಲಾದ ಧರ್ಮ ಇಲ್ಲ. ರೋಗಿಗೆ ಅಗತ್ಯದ ಚಿಕಿತ್ಸೆ ಮತ್ತು ರಕ್ಷಣೆ ಗಿಂತ ಬೇರೆ ಉಂಟೇ !

ಡಾಕ್ಟರ್ಸ್‌ಗೆ ಇದು ನಿಶ್ಚಿತವಾಗಿ ಅನ್ವಯಿಸುತ್ತದೆ. ಕರ್ತವ್ಯ ನಿರ್ವಹಣೆಯ ಬಗೆಗಿನ ತರಬೇತಿಯನ್ನು ಅವರು ಪಡೆದಿರುತ್ತಾರೆ. ಕೊರೋನಾ ವಿರುದ್ಧ ಸಾರಿರುವ ಈ ಯುದ್ಧದಿಂದ, ಹಿಂದೆ ಸರಿಯುವುದು, ರೋಗಿಗಳ ಚಿಕಿತ್ಸೆಯಂತಹ ಕರ್ತವ್ಯ ದಿಂದ ವಿಮುಖರಾಗುವುದು ರಜುಮಾರ್ಗ ಬಿಟ್ಟ, ಪ್ರಯೋಜಕತನವಲ್ಲ, ಮತ್ತು ಅದು ಪ್ರಾಯೋಗಿಕ ತನವೂ ಅಲ್ಲ.

ಭಗವದ್ಗೀತೆಯ ಎರಡನೆಯ ಅಧ್ಯಾಯದ 33 ಮತ್ತು 34ನೆಯ  ಶ್ಲೋಕಗಳನ್ನು ಇಲ್ಲಿ ಉದ್ದರಿಸಿದರೆ ಎಲ್ಲಾ ಹೇಳಿದಂತೆ ಎಂದುಕೊಳ್ಳುತ್ತೇನೆ :

ಅಥ ಚೇತ ತ್ವಮಿಮಂ ಧರ್ಮ್ಯಂ ಸಂಗ್ರಾಮಂ ನ ಕರಿಷ್ಯಸಿ |
ತತಃ ಸ್ವ ಧರ್ಮಂ ಕೀರ್ತಿಂ ಚ ಹಿತ್ವಾ ಪಾಪಮವಾಪ್ಸ್ಯಸಿ ||  2-33

ಅಕೀರ್ತಿಂ ಚಾಪಿ ಭೂತಾನಿ ಕಥಯಿಷ್ಯಂತಿ ತೇsವ್ಯಯಾಮ್ |
ಸಂಭಾವಿತಸ್ಯ,ಚಾ ಕೀರ್ತಿಮರಣಾದತಿ ರಿಚ್ಯತೇ||   2-34

1.ಹಾಗೊಂದು ವೇಳೆ, ನೀನು ಈ ಧರ್ಮ ಯದ್ಧದಿಂದ ಪಲಾಯನ ಮಾಡಿದರೆ, ನಿನ್ನ ಸ್ವಧರ್ಮ ಮತ್ತು ನಿನ್ನ ಕೀರ್ತಿಯನ್ನು ನಾಶಪಡಿಸಿಕೊಂಡು ಪಾಪ ಪ್ರಾಪ್ತಿಯಾಗುವುದು.
2. ಅಷ್ಟೇ ಅಲ್ಲ ನಿನ್ನ ಅಕ್ಷಯವಾಗಿರುವ, ಕೀರ್ತಿ ಹೋಗಿ ಅಪಕೀರ್ತಿ ಬಂದರೆ ಅದು ನಿನ್ನ ಮರಣಕ್ಕಿಂತಲೂ ಮಾರಕವಾದದ್ದು.

ಡಾಕ್ಟರುಗಳು ತಮ್ಮ ಧರ್ಮ ಪಾಲನೆಯಲ್ಲಿ ಮುನ್ನುಗ್ಗಲೇಬೇಕು. ಜೊತೆಗೆ ಎಲ್ಲಾ ರೀತಿಯ ಆಶೆ ಆಕಾಂಕ್ಷೆಗಳನ್ನು ತೊರೆದಿರಬೇಕು, ಬಂದನಗಳಿಂದ ಮುಕ್ತರಾಗಿರಬೇಕು. ಆಗ ಮಾತ್ರ ಅವರು ತಮ್ಮ ‘ಕರ್ಮವನ್ನು’, ‘ಕರ್ಮ ಯೋಗಕ್ಕೆ’ ಪರಿವರ್ತಿಸಿಕೊಳ್ಳಬಲ್ಲರು. ಕರ್ಮ ಯೋಗದ ಸಾಧನೆ ಎಂದರೆ, ಸಕ್ರಮದಿಂದ, ಕರ್ಮದಲ್ಲಿ ನಿರತರಾಗುವುದು. ಯಾವುದೇ ಫಲಾಪೇಕ್ಷೆ ಇಲ್ಲದೆ ಭೌತಿಕ ಬಂಧನಗಳನ್ನು ದೂರವಿರಿಸಿ, ಸೋಲು-ಗೆಲುವುಗಳನ್ನು ಸಮಚಿತ್ತದಿಂದ ಸ್ವೀಕರಿಸುವ ಮನೋಸ್ಥಿತಿ ಸಾಧಿಸಿರಬೇಕು. ಆಚಾರ್ಯ ಮಧ್ವರು ಇದನ್ನೇ ' ನಿಷ್ಕಾಮ ಕರ್ಮ ' ಎನ್ನುವ  ಹೊಸ ಪರಿಭಾಷೆಯ ಮೂಲಕ ವಿವರಿಸಿದ್ದಾರೆ. ಸ್ವಕರ್ಮ - ಈ ಕೋವಿಡ್-19 ರ ಸಮಯದಲ್ಲಿ ಕರ್ತವ್ಯ ಪಾಲನೆಯಲ್ಲಿ ನಿರತರಾಗಿರುವ ಎಲ್ಲಾ ಡಾಕ್ಟರ್ಸ್‌ಗೆ ಅನ್ವಯವಾಗುವ ಸಂಗತಿ.

ಬದುಕು ಬದಲಾಗಿದೆ, ಹಳೆಯದು ಮರುಕಳಿಸಿದೆ

ಆದರೊಂದು ಕರಿಚುಕ್ಕೆ ಇಲ್ಲಿ ಇರುವುದು ಯೋಚನೆಯ ಸಂಗತಿ. ಈ ವೃತ್ತಿಯಲ್ಲಿರುವ ಕೆಲ ವೈದ್ಯರು, ಸಂದರ್ಭದ ದುರುಪಯೋಗ ಪಡೆದುಕೊಂಡು ನಿರೀಕ್ಷೆಗೆ ಮೀರಿ ಹತ್ತು ಪಟ್ಟು ಹಣವನ್ನು, ತಾವು ನೀಡಿರುವ ಸೇವೆಗಾಗಿ ಕೇಳಿ ಪಡೆದು, ' ತ್ವರಿತ ಹಣ ' ಮಾಡುವ ಕೃತ್ಯದಲ್ಲಿ ತೊಡಗಿರುವುದು ಅಕ್ಷಮ್ಯ ಅಪರಾಧ.  ಔಷಧ ತಯಾರಿಕೆ ಮತ್ತು ಮಾರಾಟಗಾರರು, ವಿತರಕರುಗಳಿಗೂ ಈ ಮಾತು ಅನ್ವಯಿಸುತ್ತದೆ. ತಾವು ತಯಾರಿಸಿದ ಔಷಧಿ ಪರಿಣಾಮಕಾರಿ ಎಂದು ಬಿಂಬಿಸುವುದು, ಸತ್ಯಕ್ಕೆ ದೂರವಾದದ್ದು. ಇದನ್ನು ಖಂಡಿಸಬೇಕು. ಈ ಸಂದರ್ಭದಲ್ಲಿ ಅನುಗುಣವಾದ ಗೀತೆಯ, ಎರಡನೆಯ ಅಧ್ಯಾಯದ, 47 ಮತ್ತು 48 ನೆಯ ಶ್ಲೋಕಗಳನ್ನು ಇಲ್ಲಿ ಸೂಕ್ತ ಎನಿಸದೆ ಇರಲಾರದು.

ಕರಮಣ್ಯೇ ವಾಧಿಕಾರಸ್ತೇ ಮಾ ಫಲೇಷು ಕದಾಚನ |
ಮಾ ಫಲಕರ್ಮಹೇತುರ್ಭೂರ್ಮಾ ತೇ ಸಂಗೋಸ್ವ ಕರ್ಮಣಿ || 2-47

ಯೋಗಸ್ಥಃ ಕುರು ಕರ್ಮಾಣಿ ಸಂಗಂ ತ್ಯಕ್ತ್ವಾ ಧನಂಜಯ |
ಸಿದ್ಧ್ಯ ಸಿಧ್ಯೋಃಸಮಭೂತಾ ಸಮತ್ವಂಯೋಗ ಉಚ್ಯತೇ ||.2-48

1. ಕರ್ಮದಲ್ಲಿ ನಿನಗೆ ಅಧಿಕಾರವಿದೆ ಆದರೆ ಕರ್ಮಫಲದಲ್ಲಿ ಆಸಕ್ತಿ ಬೇಡ. ಕರ್ಮಫಲಕ್ಕೂ ನೀನು ಕಾರಣನಾಗದಿರು. ಕರ್ಮ ಬೇಡ ಎನ್ನುವ ಸಂಗತಿ ನಿನಗೆ ಅಪ್ರಿಯವಾಗಿರಲಿ.
2. ಧನಂಜಯ ಆಸಕ್ತಿಯನ್ನು ತ್ಯಜಿಸು. ಸಿದ್ಧಿ-ಅಸಿದ್ಧಿಗಳಲ್ಲಿ ಸಮಭಾವ ಹೊಂದಿರು. ಯೋಗ ದಲ್ಲಿದ್ದೇ ಕರ್ಮ ಮಾಡು. ಸಮತ್ವವೇ ಯೋಗ ಎಂಬುದನ್ನು ಗಮನಿಸು.

GMC ಎಂದರೆ ಬ್ರಿಟನ್ ಒಕ್ಕೂಟಗಳ  ಸಾಮಾನ್ಯ ಆರೋಗ್ಯ ಸಮಿತಿ, (General Medical Council) ಪ್ರಕಟಿಸಿರುವ ಕೈಪಿಡಿಯಲ್ಲಿ' ಉತ್ತಮ ವೈದ್ಯಕೀಯ ಸೇವೆ ' ಕುರಿತು ಸ್ಪಷ್ಟವಾಗಿ ಸೂಚಿಸಿದೆ.

ಕೊರೋನಾ ಸೋಂಕು ವೈರಸ್‌ಗೆ ಪ್ರತಿಸ್ಪಂದಿಸುತ್ತ, ಡಾಕ್ಟರ್ಸ್, ವಿಭಿನ್ನ ಮಾದರಿಯಲ್ಲಿ ಕಾರ್ಯ ನಿರ್ವಹಿಸ ಬೇಕಾಗುತ್ತದೆ. ಮತ್ತು ಅವರು ತಮಗೆ ಅನಾನುಕೂಲಕರ ವಾತಾವರಣದಲ್ಲಿ ಹೊಂದಾಣಿಕೆಯೊಡನೆ, ಕೆಲಸ ಮಾಡುವ ಪರಿಸರ ನಿರ್ಮಾಣ ಮಾಡಿಕೊಂಡು, ತಮ್ಮ ತಮ್ಮ ಕರ್ತವ್ಯ ನಿರ್ವಹಿಸಬಹುದಾಗಿದೆ. ಅದೂ ಅಲ್ಲದೇ ಹಲವು ಸಂದರ್ಭಗಳಲ್ಲಿ, ಡಾಕ್ಟರ್ ಮತ್ತು ನರ್ಸ್‌ಗಳು ಅಪರಿಚಿತ ಪರಿಸರಗಳಲ್ಲಿ ಕರ್ತವ್ಯ ನಿಭಾಯಿಸುವ ಆದೇಶಗಳು ಬರುತ್ತವೆ. ಅಥವಾ ತಮ್ಮ ದೈನಂದಿನ ಕಾರ್ಯವ್ಯಾಪ್ತಿ ಹೊರತು ಪಡಿಸಿ, ಬೇರೆ ಬೇರೆ ಚಿಕಿತ್ಸಾ ಕೇಂದ್ರಗಳಲ್ಲಿ, ಕೆಲಸ ಮಾಡಬೇಕಾಗುತ್ತದೆ. ಅಲ್ಲಿಯೂ ಸೇವಾ ಮನೋಭಾವದಿಂದ ಯಶಸ್ವಿಯಾಗಿ ರೋಗಿಗಳಿಗೆ ಚಿಕಿತ್ಸೆ ನೀಡಿದ ನಿದರ್ಶನಗಳು ಇವೆ.

ಶ್ರೇಯಾನ್ ಸ್ವಧರ್ಮೋ ವಿಗುಣಃ ಪರಧರ್ಮಾರ್ಥ ದ್ವನುಷ್ಟಿಪಾತ್ |
ಸ್ವಧರ್ಮೇ ನಿಧನಂ ಶ್ರೆಯಃ ಪರಧರ್ಮೋ ಭಯಾವಹಃ|| 3-35

ಗುಣರಹಿತ ಸ್ವಧರ್ಮವು, ಅನುಷ್ಠಾನದಿಂದ ಕೂಡಿದ ಪರಧರ್ಮಕ್ಕಿಂತಲೂ ಶ್ರೇಯಸ್ಕರವಾದದ್ದು. ಸ್ವಧರ್ಮದಲ್ಲಿ ಸಾವೇ ಬಂದರೂ ಒಳ್ಳೆಯದೇ. ಅದರೆ ಪರಧರ್ಮ ಮಾತ್ರ ಭಯಭೀತ ವಾದುದು.

ಡಾಕ್ಟರ್‌ಗಳ, ದೃಷ್ಟಿಯಿಂದ ನೋಡುವಾಗ, ಬೇರೆ ಬೇರೆ ಸ್ಥಾನಗಳಲ್ಲಿ ರೋಗಿ ರಕ್ಷಣಾ ವಿಷಯದಲ್ಲಿ ಅದೇ ಸರಿಯಾದ ಮಾರ್ಗ. ಯಾಕೆಂದರೆ ಇಲ್ಲಿ ವೃತ್ತಿಪರ ದೃಷ್ಟಿಯಿಂದ ನೋಡಿದರೆ, ಅವನೇ  ಶುದ್ಧ ನಡವಳಿಕೆಯ ಡಾಕ್ಟರ್ ಎನಿಸಿಕೊಳ್ಳುತ್ತಾನೆ. 

ಅರ್ಜುನನ ಕುರುಕ್ಷೇತ್ರ ಯುದ್ಧದಲ್ಲಿ ಕೌರವರು ಶತ್ರುಗಳು ಆದರೆ ಇಲ್ಲಿ ಕೋವಿಡ್ 19, ಬಹು ಅಪಾಯಕಾರಿ ಮತ್ತು ಬಲಶಾಲಿ. ಈ ಶತ್ರುವಿನ ನಾಶ ಹೇಗೆ? ಯರಿಗೂ ಮಾಹಿತಿ ಇಲ್ಲ! ಯಾವ ಶಸ್ತ್ರಾಸ್ತ್ರಗಳು? 

ಕುರುಕ್ಷೇತ್ರ ಯುದ್ಧದಲ್ಲಿ ಮಡಿದ ಜನಗಳು ಎಷ್ಟು ? 1.6 ಕೋಟಿ ? ಕೋವಿಡ್ -19 ರ ಹಾವಳಿಗೆ ಈಗಾಗಲೇ ಲಕ್ಷಕ್ಕೂ ಹೆಚ್ಚು ಜನರು ಸಾವಿಗೀಡಾಗಿದ್ದಾರೆ (15 ಎಪ್ರಿಲ್‌ರ ಅಂಕಿ ಸಂಖ್ಯೆ ಆಧರಿಸಿ). ಇದರಲ್ಲಿ ಡಾಕ್ಟರ್ಸ್ ನರ್ಸ್‌ಗಳು ಇತರ ಅರೋಗ್ಯ ಸಿಬ್ಬಂದಿ ಸಹ ಸೇರಿದ್ದಾರೆ. ಕುರುಕ್ಷೇತ್ರ ಯುದ್ದದಲ್ಲಿ ಸತ್ತವರೆಲ್ಲ ವೀರಸೇನಾನಿಗಳು. ಆದರೆ ಕೋವಿಡ್ -19 ಮಾತ್ರ ಶಕ್ತರು, ಅಶಕ್ತರು ಮಹಿಳೆಯರು, ಪುರುಷರು, ಮುದುಕರು, ಮಕ್ಕಳು ಎನ್ನುವ ಭೇದ ಭಾವವಿಲ್ಲದೆ, ಎಲ್ಲರನ್ನೂ ಸಾಯಿಸುತ್ತ ಹೋಗುತ್ತಿದೆ. 

ಹಾಗಾದರೆ ಈ ಕೋವಿಡ್ ಹೊರಹೊಮ್ಮಿದ್ದು ಹೇಗೆ? ಸಾಮಾನ್ಯ ಜನತೆ, ಈ ಯುದ್ಧದಲ್ಲಿ ಜಯಸಾಧಿಸಲು ಮುನ್ನುಗ್ಗುತ್ತಿರುವ, ಡಾಕ್ಟರ್ ಮತ್ತು ನರ್ಸಗಳಿಗೆ, ಯಾವ ರೀತಿಯ ಸಹಾಯ ಮತ್ತು ಸಹಕಾರ ನೀಡಬಹುದು ? ಭಗವದ್ಗೀತೆ ಇದಕ್ಕೆಲ್ಲ ಔಷದಿ ಹೌದಾದರೆ ಹೇಗೆ? 

ಒಂದು ನಂಬಿಕೆಯ ಪ್ರಕಾರ ಈ ಕೊರೋನಾ ವೈರಸ್ ಬಾವಲಿಗಳನ್ನು ಮಾದ್ಯಮವಾಗಿಟ್ಟುಕೊಂಡು ಬಂದಿದೆ ಎಂದು ಹೇಳಲಾಗುತ್ತಿದೆ. ಮತ್ತು ಈ ಸೋಂಕು ಮನುಷ್ಯರಿಗೆ,ನೇರವಾಗಿ ಚೀನಾದ ವುಹಾನ ನಗರದ ಜೈವಿಕ ಮಾರುಕಟ್ಟೆಯಿಂದ ಪ್ರವೇಶಿಸಿದೆ. ಇದು ನೂರಕ್ಕೆ ನೂರು ಸತ್ಯ ಎಂದು ಇನ್ನೂ ಸಾಬೀತಾಗಿಲ್ಲ. ಈ ಜೈವಿಕ ಮಾರುಕಟ್ಟೆಯಲ್ಲಿ ಕಾಡು ಮೃಗಗಳ ವಹಿವಾಟು ನಡೆಯುತ್ತದೆ. ಇದೊಂದು ಪರಿಸರ ದ್ರೋಹಿ ವ್ಯಾಪಾರ. ಭಗವದ್ಗೀತೆ ಇದನ್ನು ಖಂಡಿಸುತ್ತದೆ. 

ಕೊರೋನಾ ತಡೆಗೆ ಮನೆಯಲ್ಲೇ ಮಾಡಬಹುದಾದ ಮುನ್ನೆಚ್ಚರಿಕಾ ಕ್ರಮಗಳು

ನಮ್ಮ ಜನ, ಆರೋಗ್ಯ ಚಿಂತನೆ, ಬರೀ ಮಾನವರಿಗೆ ಸೇರಿದ್ದು ಎಂದು ತಿಳಿಯುವುದು ತಪ್ಪು. ಪ್ರಾಣಿ ಪ್ರಪಂಚ, ಪರಿಸರವನ್ನು ದೃಷ್ಟಿಯಲ್ಲಿಟ್ಟಕೊಂಡು, ಮುಂಬರುವ ವರ್ಷಗಳಲ್ಲಿ ಉದ್ಭವಿಸಬಹುದಾದ, ಸಮಸ್ಯೆಗಳನ್ನು ಲಕ್ಷದಲ್ಲಿರಿಸಿಕೊಳ್ಳಬೇಕು. ಆಧುನಿಕ ವಿಜ್ಞಾನ ಪರಿಸರವನ್ನು ವಿನಾಶದ ಅಂಚಿಗೆ ಕೊಂಡೊಯ್ಯದಂತೆ ಕಾಳಜಿವಹಿಸಬೇಕಾದ ಅಗತ್ಯ ಇದೆ. ಇಲ್ಲವಾದಲ್ಲಿ ಕೋವಿಡ್ ನಂತಹ ಜಾಗತಿಕ ಸೋಂಕು ದಾಳಿಯಿಡುತ್ತವೆ. ಕೊರೋನಾ ವೈರಸ್ ಬರಲು ಪರಿಸರ ವಿನಾಶ ಕಾರಣ ಎಂದರೆ ಅದರಲ್ಲಿ ಯಾವ ತಪ್ಪೂ ಇಲ್ಲ.

ಭಗವದ್ಗೀತೆ ಉದ್ದಕ್ಕೂ 'ಶೌಚಮ್ ' (ಸ್ವಚ್ಛತೆ) ಕುರಿತು ಉಲ್ಲೇಖ ಇದ್ದು, ನಾನು ಇಲ್ಲಿ ಒಂದನ್ನು ಮಾತ್ರ ತಮ್ಮ ಗಮನಕ್ಕೆ ತರ ಬಯಸುತ್ತೇನೆ.

ದೇವದ್ವಿಜಗುರುಪ್ರಾಜ್ಞ ಪೂಜನಂ ಶೌಚಮಾರ್ಜವಮ್ |
ಬ್ರಹ್ಮಚರ್ಯಮಹಿಂ ಚ ಶಾರೀರಂ ತಪ ಉಚ್ಯತೇ ||.17-14

ಕಟ್ಟುನಿಟ್ಟಾದ ಈ ದೇಹ, ದೈವ ಉಪಾಸನೆ, ಬ್ರಾಹ್ಮಣ್ಯ, ಗುರು, ಪಂಡಿತಜನ, ಸ್ವಚ್ಚತಾ, ಮತ್ಯ ಪ್ರಾಮಾಣಿಕತೆಯಿಂದ ಕೂಡಿದ್ದು ಅಹಿಂಸೆಯನ್ನು ಪಾಲಿಸುತ್ತದೆ.

ದೇಹ ತಪಸ್ಸು ಎಂದರೆ, ಕೈತೊಳೆಯುವಿಕೆ, ಕೆಮ್ಮು, ಸೀನು ಮುಂತಾದ ಸಮಯದಲ್ಲಿ ತೆಗೆದುಕೊಳ್ಳುವ ಮುಂಜಾಗ್ರತಾ ಕ್ರಮ, ಪರಿಶುದ್ದ ಉಡುಪು, ಕಾಗದ ತಯಾರಿತ ಕರವಸ್ತ್ರಗಳ ನಾಶ, ಸಾಮಾಜಿಕ ಅಂತರ ಕಾಯ್ದುಕೊಳ್ಳುವಿಕೆ ಇತ್ಯಾದಿ.

ಅನೇಕ ದೇಶಗಳು 'ಲಾಕ್ ಡೌನ್ ' ( ಮನೆಯಿಂದ ಹೊರಬಾರದೇ ಇರುವಿಕೆ) ನಿಯಮಗಳನ್ನು ತಮ್ಮ ಅನೇಕ ಪಟ್ಟಣಗಳಲ್ಲಿ ಕಠಿಣವಾಗಿ ಜಾರಿಗೆ ತಂದಿದ್ದಾರೆ. ಇದು, ವೈರಸ್ ಹರಡುವುದಕ್ಕೆ, ತಡೆ ಉಂಟಾಗುವುದಲ್ಲದೇ ವ್ಯಕ್ತಿಯ ಮಾನಸಿಕ ನಿಯಂತ್ರಣದ ಒಂದು ಭಾಗವೂ ಆಗಿದೆ. ಭಗವದ್ಗೀತೆ  ಈ ‘ಇಂದ್ರಿಯ ನಿಗ್ರಹ’ ಕುರಿತಂತೆ, ಅನೇಕ ಸಂಗತಿಗಳ ಮೇಲೆ ಬೆಳಕು ಚೆಲ್ಲುತ್ತದೆ. ಕೋವಿಡ್ ನಿಯಂತ್ರಣದ ಈ ಸಂದರ್ಭದಲ್ಲಿ ಇದು ಬಹು ಮೌಲಿಕ ಸಂಗತಿ. ಆಹಾರ ಸಾಮಗ್ರಿಗಳನ್ನು ಅಗತ್ಯಕ್ಕಿಂತ ಹೆಚ್ಚಿಗೆ ಸಂಗ್ರಹಿಸಬಾರದು, ಸಿನೆಮಾ ಗೃಹ, ವ್ಯಾಪಾರ ಮಳಿಗೆಗಳು, ಉಪಹಾರ ಗೃಹಗಳನ್ನು ಸಂದರ್ಶಿಸುವುದಿಲ್ಲ ಎನ್ನುವ ಮನೋನಿಶ್ಚಯವೇ ಇಂದ್ರಿಯ ನಿಗ್ರಹ ಮತ್ತು ಅದು ಆ ವ್ಯಕ್ತಿಯ ತಿಳವಳಿಕೆಯ ಮಟ್ಟವನ್ನು ಸೂಚಿಸುತ್ತದೆ.

ಯದಾ ಸಂಹರತೇ ಚಾಯಂ ಕರ್ಮೋಂಗಾನೀವ ಸರ್ವಶಃ |
ಇಂದ್ರಿಯಾಣೀಂದ್ರಿಯಾರ್ಥೇಭ್ಯಸ್ತಸ್ಯ ಪ್ರಜ್ಞಾಪ್ರಿಷ್ಠಿತಾ || 2-48

(ಆಮೆ ತನ್ನ ಇಂದ್ರಿಯಗಳನ್ನು ಒಳಗೆ ಎಳೆದುಕೊಳ್ಲುವ ಹಾಗೆ ಜ್ಞಾನನಿಷ್ಠನಾದ ಯೋಗಿ ವಿಷಯ ಲಾಲಸೆಯಿಂದ ಹಿಂದೆ ಸರಿದು,ಒಳ ಎಳೆದುಕೊಳ್ಳುವನು.ಅವನೇ ನಿಜವಾದ ಪ್ರಜ್ಞಾವಂತ ಎನಿಸಿ ಕೊಳ್ಳುತ್ತಾನೆ)

ನಮಗೆಲ್ಲ ತಿಳಿದಂತೆ ದೇವಾಲಯಗಳು ಬಾಗಿಲು ಹಾಕುವುದರಿಂದ, ಭಕ್ತರಿಗೆ ತೊಂದರೆ ಎನಿಸುತ್ತದೆ. ಆದರೆ ಜನತೆ ತಾವೇ ವಿಧಿಸಿಕೊಂಡ ಶಿಸ್ತು. ದರ್ಶನಕ್ಕಾಗಿ, ಅಸಂಖ್ಯಾತ ಜನ ಕ್ಯೂನಲ್ಲಿ ನಿಲ್ಲುವುದು, ನೂಕುನುಗ್ಗಲು, ಕೆಮ್ಮು ಉಗುಳುವಿಕೆ, ಸರಿಯಾದ ಮುಂಜಾಗೂರುಕತೆ ಇಲ್ಲದೆ ಸೀನುವುದು, ಸಹನೆ ಕಳೆದು ಕೊಳ್ಳುವುದು. ಇದರಿಂದ, ದೇವಾಲಯದ ಪಾವಿತ್ರತೆ ಇಲ್ಲವಾಗುತ್ತದೆ. ಇದು ಸೋಂಕು ಹರಡಲು ಪ್ರಚೋದನೆ ನೀಡಿದಂತಾಗುತ್ತದೆ. ಹೀಗಾಗಿ ಗುಂಪು ಸೇರುವ ಸ್ಥಳಗಳನ್ನು ನಿರ್ಭಂಧಿಸಲಾಗುತ್ತದೆ. ಜನರಲ್ಲಿ ಭಕ್ತಿಯಿಂದ, ಶಿಸ್ತಿನಿಂದ ದರ್ಶನ ಪಡೆಯುವ ಗುಣದ ಕೊರತೆ ಇದಕ್ಕೆ ಕಾರಣ.

ಮೂಲ ಪ್ರಶ್ನೆಗೆ ಹಿಂದಿರುಗೋಣ. ಜನತೆ ಈ ಕೊರೋನಾ ತಲ್ಲಣದಿಂದ, ಎಷ್ಟರಮಟ್ಟಿಗೆ ಕಳವಳ ಹೊಂದಿದ್ದಾರೆ ? ಅವರು ನಿಜವಾಗಿ ಕಳವಳ ಪಡುತ್ತಿದ್ದಾರೆಯೇ ? ದೇವರ ಮೇಲೆ ನಂಬಿಕೆ ಮತ್ತು ಆಧ್ಯಾತ್ಮದ ಚಿಂತನೆ ಹೊಂದಿದ್ದರೆ ಅವರು ಕೊರೋನಾ ದ ಬಗೆಗೆ ಕಳವಳ ಪಡುವುದಿಲ್ಲ. ಅವರ ಅಂತರಾತ್ಮದಲ್ಲಿ ಇರುವ 'ಅವನು' ಅವರಿಗೆ ರಕ್ಷಣೆ ಮತ್ತು ರೋಗಧಾರಣ ಶಕ್ತಿನೀಡುತ್ತಾನೆ.

ಅಹಂ ವೈಶ್ವಾನರೋ ಭೂತ್ವಾ ಪ್ರಾಣೀನಾಂ ದೇಹಮಾಶ್ರಿತಃ |
ಪ್ರಾಣಾಪಾನಾಸಮಾಯುಕ್ತಃ ಪಚಾಮನ್ನಂ ಚತುರ್ವಿಧಮ್ || 15-14

(ನಾನು,ಜಠರಾಗ್ನಿ ರೂಪದಿಂದ, ಸಮಸದತ ಜೀವರಾಶಿಗಳ ಶರೀರದಲ್ಲಿ ಆಶ್ರಯ ಪಡೆದು, ಪ್ರಾಣಾಪಾನಗಳಿಂದ ಕೂಡಿದವನಾಗಿ, ನಾಲ್ಕು ವಿಧವಾದ ಅನ್ನವನ್ನು ಜೀರ್ಣವಾಗುವಂತೆ ನೋಡಿಕೊಳ್ಳುತ್ತೇನೆ)

ನಾವುಗಳು - ಈ ನಮ್ಮೊಳಗಿನ ದೇವರು, ನಮ್ಮ ಭೌತಿಕ ಜಗತ್ತನ್ನು ನಿಯಂತ್ರಿಸಿ ನಾವು ಜೀವಿಸಿರುವಂತೆ ಮಾಡಬಲ್ಲವನಾಗಿದ್ದಾನೆ ಎಂದು ನಂಬುವದೆ ಜ್ಞಾನ. ಅದೇ ದೇವರ ಅಸ್ತಿತ್ವವನ್ನು ಸಾರುವುದು. ಈ ಜ್ಞಾನವೇ ಶ್ರೀಕೃಷ್ಣ ಪರಮಾತ್ಮ. ಈ ಸಂಕಟ ಸಮಯದಿಂದ ಎಲ್ಲರನ್ನೂ ರಕ್ಷಿಸಬಲ್ಲ.

ಈ ಜಾಗತಿಕ ಮಹಮ್ಮಾರಿ, ಆರ್ಥಿಕ ಸಂಕಟಕ್ಕೆ ಕಾರಣವಾಗಿದೆ. ಜಾಗತಿಕ ಆಧ್ಯಾತ್ಮ ಚಿಂತನೆ ಇದ್ದದ್ದೇ ಆದರೆ ಸುಸ್ಥಿರ ಆರ್ಥಿಕ ಜಾಗತೀಕರಣದಿಂದ ಆರ್ಥಿಕ ಬೆಳವಣಿಗೆ ಸಾಧ್ಯ. ನಾನು ಇಲ್ಲಿ ಉದ್ಧರಿಸುತ್ತಿರುವುದು, ಉಡುಪಿಯ ಪುತ್ತಿಗೆ ಮಠದ ಶ್ರೀ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದಂಗಳವರು, ಹೇಳಿದ್ದು.' ಆಧ್ಯಾತ್ಮಿಕ ಜಾಗತೀಕರಣ,ಈ ಕೊರೋನಾ ವೈರಸ್ ತಡೆಗಟ್ಟಲು ಬಹು ಮುಖ್ಯ ಪಾತ್ರ ವಹಿಸಬಲ್ಲದು.' 

ಡಾಕ್ಟರ್ಸ್, ನರ್ಸ್‌ಗಳು,ಆರೋಗ್ಯ ಕರ್ಮಚಾರಿಗಳನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ನೋಡುವಾಗ ಭಗವದ್ಗೀತೆಯಿಂದ ಇವರಿಗೆ ಯಾವ ರೀತಿಯ ಪ್ರಯೋಜನ ಮತ್ತು ಹೇಗೆ ಸಿಗುತ್ತದೆ ? ಈ ಕೆಳಗಿನ ಗೀತೆಯ ಶ್ಲೋಕ ನೋಡಿ,  ಸಬಲ ಮತ್ತು ಸ್ಪೂರ್ತಿದಾಯಕ:

ಹತೋ ವಾ ಪ್ರಾಪ್ಸ್ಯಸಿ ಸ್ವರ್ಗಂ ಜಿತ್ವಾ  ವಾ ಭೋಕ್ಷ್ಯಸೇ ಮಹೀಮ್ |
ತಸ್ಮಾದುತಿಷ್ಠ ಕೌಂತೇಯ ಯುದ್ಧಾಯ ಕೃತನಿಶ್ಚಯಃ || 2-37

(ಎಲೈ ಕೌಂತೇಯ, ರಣರಂಗದಲ್ಲಿ ಮಡಿದರೆ ಸ್ವರ್ಗ ಪ್ರಾಪ್ತಿ. ಗೆದ್ದರೆ ಭೂಮಂಡಲವನ್ನು ಆಳುವೆ. ಆದುದರಿಂದ ಯುದ್ದವನ್ನು ಮಾಡುವೆ ಎಂದು ನಿಶ್ಚಯಿಸು, ಏಳು )

ಇದನ್ನು ತಿಳಿದರೆ ಸಾಕು, ಡಾಕ್ಟರ್‌ಗಳಿಗೆ, ನರ್ಸಗಳಿಗೆ ಇನ್ನಿತರೆ ತತ್ಸಂಬಂಧಿತ ಕೆಲಸಗಾರರಿಗೆ ಕರ್ತವ್ಯ ನಿರ್ವಹಣೆಯ ಹೊರತಾಗಿ ಅನ್ಯಮಾರ್ಗವೇ ಇಲ್ಲ. ಅವರು ತಮ್ಮ ಕರ್ತವ್ಯವನ್ನು ಶ್ರದ್ಧೆ ಮತ್ತು ನಿಸ್ವಾರ್ಥ ದಿಂದ ನಿರ್ವಹಿಸಬೇಕು. ಡಾಕ್ಟರ್‌ಗಳ ವೃತ್ತಿಧರ್ಮ ಮತ್ತು ಅರ್ಜುನನ ಕ್ಷತ್ರಿಯ ಧರ್ಮ ಎರಡೂ ಒಂದೇ. ಆದ್ದರಿಂದ ಸನ್ನದ್ಧರಾಗಿ ಕೋವಿಡ್ ಅನ್ನು ಸೋಲಿಸಲೇಬೇಕಾಗಿದೆ‌. ಶ್ರೀ ಕೃಷ್ಣನನ್ನು ನಂಬಿದರೆ ಸಾಕು ! ಸರ್ವವಿಧವಾದ ರಕ್ಷಣೆ ನೀಡುತ್ತಾನೆ. ಎಲ್ಲಿ ಶ್ರೀ ಕೃಷ್ಣ ಇರುವನೋ ಅಲ್ಲಿ ಜಯ ನಿಶ್ಚಿತ. ಸಂಶಯಕ್ಕೆ ಆಸ್ಪದವೇ ಇಲ್ಲ. ಕೆಳಗಿನ ಶ್ಲೋಕ ನೋಡಿ:

ಯತ್ರ ಯೋಗೇಶ್ವರ:ಕೃಷ್ಣ ಯತ್ರ ಪಾರ್ಥೋ ಧನುರ್ಧರ : |
ತತ್ರ ಶ್ರೀರ್ವಿಜಯೋ ಭೂತಿರ್ಧುವಾ ನೀತಿರ್ಮತಿರ್ಮಮ || 18-78

ಎಲ್ಲಿ ಯೋಗೀಶ್ವರನಾದ ಕೃಷ್ಣನಿರುವನೋ ಎಲ್ಲಿ ಗಾಂಡೀವಧಾರಿ ಪಾರ್ಥ ಇರುವನೋ ಅಲ್ಲಿ ದೈವಿಕ ಶಕ್ತಿ ಇದೆ ವಿಜಯ ಇದ್ದೇ ಇದೆ. ನ್ಯಾಯ‌ ಇದೆ ಯಶಸ್ಸು  ಇದೆ. 

ಸದ್ಯದ ಪರಿಸ್ಥಿತಿಯಲ್ಲಿ ಶ್ರೀ ಕೃಷ್ಣನನ್ನು ನಂಬಿಕೆ ಮತ್ತು ಭಕ್ತಿ ಯಿಂದ ಪ್ರಾರ್ಥನೆ ಮಾಡುವುದು ಬಿಟ್ಟು ಅನ್ಯ ಮಾರ್ಗವೇ ಇಲ್ಲ. ಪ್ರಾರ್ಥನೆಯೇ ನಮ್ಮೆಲ್ಲರನ್ನು ರಕ್ಷಿಸುವ ದಿವ್ಯ ಔಷದಿ. ಗೀತೆಯ ಈ ಇನ್ನೊಂದು ಶ್ಲೋಕ ದೇವರ ಭರವಸೆಯನ್ನು ಸ್ಪಸ್ಟಪಡಿಸುತ್ತದೆ :

ಅನನ್ಯಾಶ್ಚಿಂತಯಂತೋ ಮಾಂ ಯೇ ಜನಾಃ ಪರ್ಯುಪಾಸತೇ |
ತೇಷಾಂ ನಿತ್ಯಾಭಿಯುಕ್ತಾನಾಂ ಯೋಗಕ್ಷೇಮಂ ವಹಾಮ್ಯಹಮ್ || 9-22

(ಧೃಡ ಭಕ್ತಿ ಯಿಂದ ಯಾರು ನನ್ನ ಸೇವೆಯನ್ನು ಪ್ರತಿನಿತ್ಯ  ಮಾಡುವರೋ ಅಂತಹ ಭಕ್ತ ರ ಯೋಗಕ್ಷೇಮವನ್ನು ನಾನು ವಹಿಸಿಕೊಳ್ಳುತ್ತೇನೆ) 

ಪ್ರತಿ ಡಾಕ್ಟರ್ಸ್, ರೋಗಿಗಳ ಪೂರ್ಣ ಚಿಕಿತ್ಸೆಯನ್ನು ನನ್ನ ಯೋಗ್ಯತೆ ಗೆ ಅನುಗುಣವಾಗಿ ಮಾಡುತ್ತೇನೆ ಎನ್ನುವ ವಚನ ಕೈಗೊಳ್ಳಬೇಕು. ಇಡೀ ಪ್ರಪಂಚವನ್ನು ಈ ಕೊರೋನಾ ಕಪಿಮುಷ್ಠಿಯಿಂದ ರಕ್ಷಿದುವುದು ಈಗ ಡಾಕ್ಟರ್ಸ್ ಸರದಿ. ಹೀಗಾಗಿ ಅವರು ವಚನಬದ್ಧರಾಗುವುದು ಅತೀ ಜರೂರು ಇದೆ. ಬೆಳೆಯುತ್ತಿರುವ ರೋಗಿಗಳ ಸಂಖ್ಯೆಯನ್ನು ಗಮನದಲ್ಲಿಟ್ಟುಕೊಂಡು, ತಮ್ಮ ಮಾನಸಿಕ ಹಾಗೂ ದೈಹಿಕ ಆಯಾಸಗಳನ್ನು ಬದಿಗಿಟ್ಟು ಆಸ್ಪತ್ರೆಗೆ ಬರುವ ಎಲ್ಲಾ ರೋಗಿಗಳಿಗೆ ಸಹಾಯ ಹಸ್ತ ನೀಡಬೇಕು. ಮುಖಗವಸು ಧರಿಸಿರುವ ಡಾಕ್ಟರ್ ಮತ್ತು ನರ್ಸಗಳ ಕಣ್ಣುಗಳಲ್ಲಿ ಕೈಕೊಂಡ ಈ ವಚನದ ಪ್ರತಿಬಿಂಬ ನಾನು ಪ್ರತಿ ದಿವಸ ಹೆಮ್ಮೆಯಿಂದ ಕಾಣುತ್ತಿದ್ದೇನೆ. ಯಾವುದೇ ಹಿಂಜರಿಕೆ ಇಲ್ಲದೇ ನಿರಂತರ ರೋಗಿಗಳ ಸೇವೆಯಲ್ಲಿ ಇವರು ನಿರತರಾಗಿದ್ದಾರೆ. ಶ್ರೀ ಕೃಷ್ಣ ಅವರ ಸಹಾಯಕ್ಕೆ ನಿಂತು ಅವರ ಮಾನಸಿಕ ದೈಹಿಕ ಆಯಾಸಗಳನ್ನು ಪರಿಹರಿಸಲಿ ಎಂದು ನಾನು ಪ್ರಾರ್ಥಿಸುತ್ತೇನೆ.

ಭಗವದ್ಗೀತೆ ಯ  ಈ ಶ್ಲೋಕ ದೊಂದಿಗೆ ನನ್ನ ಈ ಲೇಖನಕ್ಕೆ ಮಂಗಳ ಹಾಡುತ್ತ ವಿರಮಿಸುತ್ತೇನೆ. 

ಪರಿತ್ರಾಣಾಯ ಸಾಧೂನಾಂ ವಿನಾಶಾಯಚ ದುಷ್ಕೃತಾಮ್ |
ಧರ್ಮ ಸಂಸ್ಥಾಪನಾರ್ಥಾಯ ಸಂಭವಾಮಿ ಯುಗೇ ಯುಗೇ ||

ಜಗತ್ತಿನ ಸಾಧು ಜನಗಳ ರಕ್ಷಣೆಗಾಗಿ,ದುಷ್ಟ ಶಕ್ತಿ ಗಳ ಸಂಹಾರ ಕ್ಕಾಗಿ ಮತ್ತು ಧರ್ಮ ಸಂಸ್ಥಾಪನೆಗಾಗಿ ನಾನು ಯುಗ ಯುಗದಲ್ಲಿ ಅವತರಿಸುತ್ತೇನೆ.
              
ಶ್ರೀ ಕೃಷ್ಣಾರ್ಪಣಮಸ್ತು.
ಓಂ ತತ್ಸತ್

ಸೂ:- ಭಗವದ್ಗೀತೆಯ ಮೇಲೆ ನನಗಿರುವ ಪರಿಮಿತ ಜ್ಞಾನದ ಆಧಾರದ ಮೇಲೆ ಮತ್ತು ಈ ಕೊರೋನಾ ಸೋಂಕು ಪಸರಿಸಿರುವ ಪರಿಸ್ಥಿತಿಯಲ್ಲಿ  ನನ್ನ ಮಾಹಿತಿಗೆ ದಕ್ಕಿದ ಸಂಗತಿಗಳನ್ನು ಕ್ರೋಢೀಕರಿಸಿ  ಈ ಲೇಖನ ಬರೆದಿದ್ದೇನೆ‌. ಏನಾದರೂ ತಪ್ಪುಗಳಾಗಿದ್ದಲ್ಲಿ ಕ್ಷಮಿಸಿಬಿಡು ಎಂದು ಕೃಷ್ಣನ ಲ್ಲಿ ಬೇಡುತ್ತೇನೆ. ಧಾರ್ಮಿಕ ನಾಯಕರಿಂದ ಸಲಹೆ ಸೂಚನೆಗಳೇನಾದರೂ ಬಂದಲ್ಲಿ ನಾನು ಕೃತಜ್ಞ.


ಆಕರ :-
1.    ಕೃತಿಗಳು ಮತ್ತು ಧ್ವನಿ ಸುರಳಿಗಳು -ಪದ್ಮಶ್ರೀ ಬನ್ನಂಜೆ ಗೋವಿಂದಾಚಾರ್ಯರು.
2.    ಭಗವದ್ಗೀತಾ - ದಿ.ಆಕ್ಸ್‌ಫರ್ಡ್ ಸೆಂಟರ್ ಆಫ್ ಹಿಂದೂ ಸೈನ್ಸಸ್ - ನಿಕೋಲಸ್ ಸಟ್ಟಾನ್
3.    ದಿ ಜನರಲ್ ಮೆಡಿಕಲ್ ಕೌನ್ಸಿಲ್ ಯು.ಕೆ
4.    ದಿ ಭಗವದ್ಗೀತಾ - ವೆಂಕಟಕೃಷ್ಣ ವೃಂದಾವನ.ಯು.ಕೆ.
5.    ಪರಮ ಪೂಜ್ಯ ಶ್ರೀ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮಿಗಳು ಪುತ್ತಿಗೆ ಮಠ ಉಡುಪಿ

ಕನ್ನಡಕ್ಕೆ ಅನುವಾದ 
ಶ್ರೀ ಗೋನ್ವಾರ್ ಕಿಶನ್ ರಾವ್

ಇಂಗ್ಲಿಷ್ ಲೇಖಕ
ಡಾ.ಆನಂದ್ ಕುಲಕರ್ಣಿ
ಎಂ.ಬಿ.ಬಿ.ಎಸ್ (ಓಸ್ಮಾನಿಯಾ ಹೈದರಾಬಾದ್); ಎಂ.ಡಿ ( ಎಐಐಎಂಎಸ್- ನವದೆಹಲಿ), ಎಫ್ ಆರ್ ಸಿ.ಎ.(ಲಂಡನ್) 
ಎಫ್. ಎಫ್ ಎ.ಆರ್.ಸಿ.ಎಸ್.ಐ (ಡಬ್ಲಿನ್) ಎಫ್,ಎಫ್,ಐ,ಸಿ,ಎಮ್ (ಲಂಡನ್)
ಕ್ಲಿನಿಕಲ್ ಡೈರೆಕ್ಟರ್ ಆಫ್ ಅನ್ಯಸ್ತೆಸಿಯಾ, ಕ್ರಿಟಿಕಲ್ ಕೇರ್ ಅ್ಯಂಡ್ ಥಿಯೇಟರ್ಸ
ಟೇಮಸೈಡ್ ಅ್ಯಂಡ್ ಗ್ಲಾಸ್ಸಾಪ್ ಇಂಟಿಗ್ರೇಟೆಡ್ ಕೇರ್, ಎನ್ಎಚ್ಎಸ್ ಫೌಂಡೇಶನ್ ಟ್ರಸ್ಟ್
ಅ್ಯಸ್ಟನ್ ಅಂಡರ್ ಲೈನ್
ಗ್ರೇಟರ್ ಮ್ಯಾಂಚೆಸ್ಟರ್, ಯು.ಕೆ.

click me!