ದೃಶ್ಯ 1:
ವಿಲನ್: ಯಾರೋ ನೀನು?
ನಾಯಕ: ನಮ್ ಅಪ್ಪನ ವಿಸಿಟಿಂಗ್ ಕಾರ್ಡ್ ಕಣೋ.
ದೃಶ್ಯ 2
ರೈತನ ಕೊನೆ ಸಾವಿನಲ್ಲೇ ತಾನೇ...
ಆರ್ ಕೇಶವಮೂರ್ತಿ
ಈ ಮಾತು ಕೇಳುವ ನಾಯಕ ಶಾಕ್ ಆಗುತ್ತಾನೆ. ದೇಶಕ್ಕೆ ಅನ್ನ ಕೊಡೋ ರೈತನಿಗೇ ಸಾವು ಪರಿಹಾರನಾ ಎಂದು ಯೋಚಿಸುತ್ತಾನೆ.
ಈ ಎರಡು ದೃಶ್ಯಗಳನ್ನು ನೋಡಿದವರಿಗೆ ರಾಜ್ಯದ ಮುಖ್ಯಮಂತ್ರಿ ಕುಮಾರಸ್ವಾಮಿಯವರ ಯೋಚನೆಗಳಿಗೆ ತೀರಾ ಹತ್ತಿರವಿದ್ದಂತೆ ಇದೆಯಲ್ಲ ಅನಿಸಿದರೆ ಅದು ಅತಿಶಯೋಕ್ತಿಯಲ್ಲ. ಯಾಕೆಂದರೆ ಈ ಚಿತ್ರದ ನಾಯಕ ನಿಖಿಲ್ ಕುಮಾರ್ ಹಿನ್ನೆಲೆ ಹೇಳಬೇಕಿಲ್ಲ. ಹೀಗಾಗಿ ಅಪ್ಪನ ಯೋಚನೆಗಳು, ತಾತನ ಮಣ್ಣಿನಮಕ್ಕಳ ಪರ ಗುಣ ಇವೆರಡನ್ನೂ ಸಮತಟ್ಟಾಗಿ ಮೇಳೈಸಿಕೊಂಡೇ ಸೀತಾರಾಮ ಕಲ್ಯಾಣ ಚಿತ್ರ ಮೂಡಿಬಂದಿದೆ. ಈಗಿನ ಕಮರ್ಷಿಯಲ್ ಚಿತ್ರಗಳಲ್ಲಿ ಇಂಥಾ ರೈತಪರ ಕನಸುಗಳಿಗೆ ಹತ್ತಿರವಾಗುವಂಥ ಅಂಶಗಳನ್ನು ನೋಡಲು ಸಾಧ್ಯವೇ ಎಂದು ಪ್ರಶ್ನಿಸಿಕೊಳ್ಳುವವರಿಗೆ ಸಾಧ್ಯ ಎನ್ನುವಂತೆ ಚಿತ್ರದ ಆತ್ಮವನ್ನು ನಿರ್ದೇಶಕರು ರೂಪಿಸಿದ್ದಾರೆ. ಅದಕ್ಕೆ ಪೂರಕವಾದ ಡೈಲಾಗ್ ಹೀಗಿದೆ: ಮರ ಎಷ್ಟೇ ಎತ್ತರಕ್ಕೆ ಬೆಳೆದರೂನು ಅದರ ಬೇರು ಇರುವುದು ಮಣ್ಣಲ್ಲೇ. ಮಣ್ಣನ್ನು ಪ್ರೀತಿಸೋದು ನಮ್ಮ ತಾತನಿಂದ ಕಲಿತೆ. ಜನರನ್ನು ಪ್ರೀತಿಸೋದು ನಮ್ಮ ಅಪ್ಪನಿಂದ ಕಲಿತೆ. ಮಾಡೋ ಕೆಲಸವನ್ನು ಪ್ರೀತಿಸುವುದು ಹಿರಿಯರಿಂದ ಕಲಿತೆ.
'ಸೀತಾರಾಮ ಕಲ್ಯಾಣ..' ಒನ್ ಲೈನ್ ವ್ಯಾಖ್ಯಾನವಿದು...!
‘ಸೀತಾರಾಮ ಕಲ್ಯಾಣ’ ಚಿತ್ರ ಹೆಸರಿಗೆ ತಕ್ಕಂತೆ ರಾಮ ಮತ್ತು ಸೀತೆಯಂಥ ಜೋಡಿ. ಈ ಜೋಡಿ ಒಂದಾಗುವ ನಿಟ್ಟಿನಲ್ಲಿ ಆಗುವ ಒಂದಿಷ್ಟು ಫ್ಯಾಮಿಲಿ ಫ್ಲ್ಯಾಷ್‌ಬ್ಯಾಕ್ ಕತೆಗಳು. ಅಲ್ಲಿ ಹುಟ್ಟಿಕೊಳ್ಳುವ ಸ್ನೇಹ, ಪ್ರೀತಿ ಮತ್ತು ಮತ್ತು ವಂಚನೆ ಇವೆಲ್ಲವೂ ಚಿತ್ರದ ಹೈಲೈಟ್. ತೆಲುಗು ಚಿತ್ರ ಮಾದರಿಯ ರಿಚ್ ಆಗಿರುವ ಸಾಹಸ ದೃಶ್ಯಗಳು ಚಿತ್ರದ ಶಕ್ತಿಗಳಲ್ಲಿ ಒಂದು. ಫೈಟ್‌ಗಳಲ್ಲಂತೂ ನಾಯಕನ ಹವಾ, ಗುಡುಗು- ಸಿಡಿಲು ಒಟ್ಟಿಗೆ ಬಂದಂತೆ. ಇದರ ನಡುವೆ ಕೇಳುವಂಥ ಹಾಡುಗಳು, ಅದ್ದೂರಿ ಮೇಕಿಂಗ್, ಬೇಕೋ- ಬೇಡವೋ ತೆರೆ ತುಂಬಾ ಕಾಣಿಸಿಕೊಳ್ಳುವ ಪೋಷಕ ನಟ- ನಟಿಯರು. ‘ಜಾಗ್ವಾರ್’ನಲ್ಲಿ ಮಿಸ್ ಆಗಿದ್ದನ್ನು ಇಲ್ಲಿ ನೋಡಬಹುದು ಎನ್ನುವ ಚಿತ್ರತಂಡದ ಮಾತಿನಂತೆ ಆ ಮಿಸ್ಸಿಂಗ್‌ಇಲ್ಲಿ ಪ್ಲಸ್ ಆಗಿದೆ. ಅದೇನು ಎಂಬುದನ್ನು ಹೇಳುವುದಕ್ಕಿಂತ ನೋಡುವುದು ವಾಸಿ. ಆದರೆ, ಈ ಬಾರಿ ಆ್ಯಕ್ಷನ್ ಜತೆಗೆ ಫ್ಯಾಮಿಲಿ ಡ್ರಾಮಾವನ್ನೂ ನೆಚ್ಚಿಕೊಂಡು ನಿಖಿಲ್ ಕುಮಾರ್ ಪ್ರೇಕ್ಷಕರ ಮುಂದೆ ಬಂದಿದ್ದಾರೆ. ಹೀಗಾಗಿ ಸಾಹಸವೇ ಪ್ರಧಾನ ಎನ್ನುವಂತೆ ನಾಯಕನೇ ಪಾತ್ರ ಪೋಷಣೆ ಸಾಗಿದರೆ, ಕತೆಯೂ ಬೇಕು ಎನ್ನುವಂತೆ ನಿರ್ದೇಶಕರ ನಿರೂಪಣೆಯ ಜಾಣ್ಮೆ ಸಾಗುತ್ತದೆ. ಆ ಮೂಲಕ ‘ಸೀತಾರಾಮ ಕಲ್ಯಾಣ’ ಎಲ್ಲಾ ವರ್ಗದ ಪ್ರೇಕ್ಷಕರ ಸಿನಿಮಾ ಆಗುವ ನಿಟ್ಟಿನಲ್ಲಿ ಸಾಕಷ್ಟು ಪ್ರಯತ್ನ ಹಾಕಿದೆ. ಇಂಥಾ ಚಿತ್ರದಲ್ಲೂ ನಿಖಿಲ್ ತಮ್ಮ ತಂದೆ ಕುಮಾರಸ್ವಾಮಿಯವರ ರೈತ ಕನಸುಗಳನ್ನು ತಂದಿದ್ದಾರೆ ಎನ್ನುವುದು ಪ್ರಶಂಸೆಗೆ ಅರ್ಹ.
ಸಂದರ್ಶನ: 'ಸೀತಾರಾಮ ಕಲ್ಯಾಣ' ಚಿತ್ರದ ಬಗ್ಗೆ ಗುಟ್ಟು ಬಿಚ್ಚಿಟ್ಟ ನಿಖಿಲ್!
ಒಂದು ಹಂತದಲ್ಲಿ ಅಪ್ಪ ಮತ್ತು ಮಗನ ಆಟವೇ ಜೋರು ಎನ್ನುವ ಭಾವನೆ ಮೂಡಿದರೂ ವಿರಾಮದ ನಂತರ ಕತೆ, ಕುಟುಂಬದ ಅಂಗಳಕ್ಕೆ ಪ್ರವೇಶಿಸಿ, ಅಲ್ಲೊಂದು ಪುಟ್ಟ ಭೂತಕಾಲದ ಕತೆಯನ್ನು ವರ್ತಮಾನಕ್ಕೆ ತಂದೊಡ್ಡುತ್ತದೆ. ದೊಡ್ಡ ಉದ್ಯಮಿಯ ಪುತ್ರ. ತನ್ನ ಸ್ನೇಹಿತನ ಮದುವೆಗೆ ಹಳ್ಳಿಗೆ ಹೋಗುತ್ತಾನೆ. ಅಲ್ಲಿ ರೈತನ ಗದ್ದೆಗಳಿಗೆ ನುಗ್ಗಿದ ರೌಡಿಗಳಿಗೆ ಒದೆಗಳ ಮೂಲಕ ಬುದ್ಧಿ ಕಲಿಸುತ್ತಾನೆ. ಅದೇ ಗದ್ದೆಯಲ್ಲಿನ ಮರಕ್ಕೆ ನೇಣು ಹಾಕಿಕೊಳ್ಳುವ ರೈತನ ಸಂಕಟ ನೋಡಿ, ರೈತರಿಗೆ ನೀರಾವರಿ ಸೌಲಭ್ಯ ಒದಗಿಸುವುದಕ್ಕೆ ಡ್ಯಾಮ್ ಕಟ್ಟುವುದಕ್ಕೆ ಕೈ ಹಾಕುತ್ತಾನೆ. ಮಗನ ಈ ಆಶಯಕ್ಕೆ ಅಪ್ಪ ಕೂಡ ಜೈ ಎನ್ನುತ್ತಾರೆ. ಆದರೆ, ಡ್ಯಾಮ್ ಯೋಜನೆ ವಿಲನ್ ಹುಟ್ಟಿಗೆ ಕಾರಣವಾಗುತ್ತದೆ. ರೈತನ ಈ ಯೋಜನೆ ಜತೆಗೆ ನಗರದಲ್ಲಿ ಪ್ರೀತಿ- ಪ್ರೇಮದ ಪ್ರಾಜೆಕ್ಟ್ ಅನ್ನೂ ನಾಯಕ ಚಾಲ್ತಿಯಲ್ಲಿಟ್ಟಿರುತ್ತಾನೆ. ಆದರೆ, ಲವ್ ಬ್ರೇಕ್ ಹಾಕಿ ಬ್ಯಾಕ್ ಸ್ಟೋರಿಗೆ ಹೋಗುವ ಹೊತ್ತಿಗೆ ನಾಯಕನ ಹಿನ್ನೆಲೆ ಮತ್ತು ನಾಯಕನ ತಂದೆಯ ಪೂರ್ವಪರ ತಿಳಿಯುತ್ತದೆ. ಸಿನಿಮಾ ಮತ್ತೊಂದು ಮುಖ ತೋರುತ್ತದೆ.
'ಸೀತಾರಾಮನ' ನೋಡಲು ಒಂದಾದ ಎಚ್‌ಡಿಕೆ-ಈಶ್ವರಪ್ಪ..ನೋ ಪಾಲಿಟಿಕ್ಸ್
ವಿರಾಮಕ್ಕೂ ಮೊದಲು ಸಿನಿಮಾ, ಡಾಮ್- ಡೂಮ್- ಡಿಶುಂ ಅಂತ ಅಡ್ಡಾದಿಡ್ಡಿ ನುಗ್ಗಿದರೆ. ದ್ವಿತೀಯಾರ್ಧದಲ್ಲಿ ಫ್ಯಾಮಿಲಿ ಮೇಲೆ ಫೋಕಸ್ ಮಾಡುತ್ತದೆ. ಆರಂಭದಲ್ಲಿ ಬರುವ ಮದುವೆ ದೃಶ್ಯ ಅಗತ್ಯಕ್ಕಿಂತ ಹೆಚ್ಚು ಉದ್ದ ಆಯಿತು ಎನಿಸಿದರೂ ಹೇಗೋ ಚಿಕ್ಕಣ್ಣ, ನಿಧಾನಗತಿಯಲ್ಲಿ ಮರೆಸುವ ಪ್ರಯತ್ನ ಮಾಡಿದಂತೆ ತೋರುತ್ತದೆ. ಉಳಿದಂತೆ ನಿರ್ದೇಶಕ ಹರ್ಷ, ಕಮರ್ಷಿಯಲ್ ಚಿತ್ರದಲ್ಲೂ ರೈತರ ಕರೆಂಟ್ ಇಶ್ಯೂಗಳನ್ನು ಟಚ್ ಮಾಡಿರುವುದು ಒಪ್ಪುವಂತದ್ದು. ಅನೂಪ್ ರೂಬಿನ್ಸ್ ಸಂಗೀತದಲ್ಲಿ ಹಾಡುಗಳು ಕೇಳುವಂತಿವೆ. ಹಾಗೆ ರಾಮ್-ಲಕ್ಷ್ಮಣ್‌ರ ಸಾಹಸಗಳು ಚಿತ್ರದ ಪ್ರಮುಖ ಸ್ತಂಭಗಳು. ಸ್ವಾಮಿ ಅವರ ಕ್ಯಾಮೆರಾ, ಫೈಟ್ ದೃಶ್ಯಗಳಲ್ಲಿ ಸಿಕ್ಕಾಪಟ್ಟೆ ಆ್ಯಕ್ಟಿವ್ ಆಗುತ್ತದೆ. ದೊಡ್ಡ ತಾರಾಗಣ ಇದ್ದರೂ ಕೆಲವೇ ಪಾತ್ರಗಳ ಮೇಲೆ ಸಾಗುವ ಕತೆಯಲ್ಲಿ ನಿಖಿಲ್ ಕುಮಾರ್ ಡ್ಯಾನ್ಸ್, ಫೈಟ್‌ನಲ್ಲಿ ಸೂಪರ್. ಇನ್ನೂ ಶರತ್‌ಕುಮಾರ್ ಹಾಗೂ ರವಿಶಂಕರ್ ಅವರ ಪ್ರಬುದ್ಧ ನಟನೆಯ ನಡುವೆ ರಚಿತಾ ರಾಮ್‌ರ ಪಾತ್ರವೂ ನೆನಪಿನಲ್ಲಿ ಉಳಿಯುತ್ತದೆ. ರಘು ನಿಡುವಳ್ಳಿಯವರ ಸಂಭಾಷಣೆ ಈ ಚಿತ್ರ ಹೆಗ್ಗಳಿಕೆ. ಅವರ ಅನೇಕ ಸಾಲುಗಳನ್ನು ಜನ ಮತ್ತೆ ಮತ್ತೆ ನೆನಪಿಸಿಕೊಳ್ಳುತ್ತಾರೆ.