ಯಾದಗಿರಿ: ಸುರಪುರ ಬಾಲಕರ ಮಹಾವಿದ್ಯಾಲಯಕ್ಕೆ ದುರಸ್ತಿ ಎಂದು?

By Kannadaprabha NewsFirst Published Jul 13, 2023, 9:16 PM IST
Highlights

ಶಾಲೆಯಲ್ಲಿ ಕನ್ನಡ ಕಲಾ, ಆಂಗ್ಲ ಪಂಡಿತ-2, ಉರ್ದು ವಿಜ್ಞಾನ, ಉರ್ದು ಗಣಿತ, ಉರ್ದು ಪಂಡಿತ, ಮೂವರು ಸೇವಕರು 9 ಖಾಲಿ ಹುದ್ದೆಗಳಿವೆ. ಇದರಿಂದ ಗುಣಮಟ್ಟದ ಶಿಕ್ಷಣ ವಿದ್ಯಾರ್ಥಿಗಳಿಗೆ ದೊರೆಯಲು ಸಾಧ್ಯವೇ ಎಂಬುದು ಶಿಕ್ಷಣ ಪ್ರೇಮಿಗಳು ಪ್ರಶ್ನಿಸಿದ್ದಾರೆ.

ನಾಗರಾಜ್‌ ನ್ಯಾಮತಿ

ಸುರಪುರ(ಜು.13):  ತಾಲೂಕಿನ ಮೊದಲ, ಶತಮಾನದ ಹೊಸ್ತಿಲಲ್ಲಿರುವ ಸರಕಾರಿ ಸಂಯುಕ್ತ ಪದವಿ ಪೂರ್ವ ಮಹಾವಿದ್ಯಾಲಯದ ಕೊಠಡಿಗಳ ಮೇಲ್ಛಾವಣಿಗಳು ಶಿಥಿಲಗೊಂಡಿದ್ದು, ಸಿಮೆಂಟ್‌ ಮಿಶ್ರಿತ ಮರಳು ಯಾವಾಗಂದರೆ ಆವಾಗ ಉದುರಿ ಬೀಳುತ್ತಿದೆ. ಜೀವಭಯದಲ್ಲೇ ಮಕ್ಕಳು ವಿದ್ಯಾಭ್ಯಾಸ ನಡೆಯುತ್ತಿದೆ.

Latest Videos

ನಗರದ ಹೃದಯ ಭಾಗದಲ್ಲಿರುವ ಸರಕಾರಿ ಬಾಲಕರ ಮಹಾವಿದ್ಯಾಲಯವು 1936ರಲ್ಲಿ ಆರಂಭಗೊಂಡಿದ್ದು, ಪ್ರಸಕ್ತ ಸಾಲಿನ 2023-24ರಲ್ಲಿ 8ರಿಂದ 10ನೇ ತರಗತಿವರೆಗೆ 252 ಬಾಲಕರು, 98 ಬಾಲಕಿಯರು ಸೇರಿ 350 ವಿದ್ಯಾರ್ಥಿಗಳು ಓದುತ್ತಿದ್ದಾರೆ. 22 ಹುದ್ದೆಗಳಿದ್ದು, 13 ಸರಕಾರಿ ಶಿಕ್ಷಕರು, ನಾಲ್ವರು ಅತಿಥಿ ಶಿಕ್ಷಕರು ಕಾರ್ಯ ನಿರ್ವಹಿಸುತ್ತಿದ್ದಾರೆ.

ಶಹಾಪುರ: ಬೆನಕನಹಳ್ಳಿ ಶಾಲೆ ಬಯಲು ಶೌಚ ಮುಕ್ತ ಆಗೋದು ಯಾವಾಗ?

ಖಾಲಿ ಹುದ್ದೆಗಳು:

ಶಾಲೆಯಲ್ಲಿ ಕನ್ನಡ ಕಲಾ, ಆಂಗ್ಲ ಪಂಡಿತ-2, ಉರ್ದು ವಿಜ್ಞಾನ, ಉರ್ದು ಗಣಿತ, ಉರ್ದು ಪಂಡಿತ, ಮೂವರು ಸೇವಕರು 9 ಖಾಲಿ ಹುದ್ದೆಗಳಿವೆ. ಇದರಿಂದ ಗುಣಮಟ್ಟದ ಶಿಕ್ಷಣ ವಿದ್ಯಾರ್ಥಿಗಳಿಗೆ ದೊರೆಯಲು ಸಾಧ್ಯವೇ ಎಂಬುದು ಶಿಕ್ಷಣ ಪ್ರೇಮಿಗಳು ಪ್ರಶ್ನಿಸಿದ್ದಾರೆ.

ಮೇಲ್ಛಾವಣಿ ಶಿಥಿಲ:

ಬಾಲಕರ ಮಹಾವಿದ್ಯಾಲಯದಲ್ಲಿ 29 ಕೊಠಡಿಗಳಿದ್ದು, 13 ಗುಣಮಟ್ಟದಿಂದ ಕೂಡಿವೆ. 6 ಕೊಠಡಿಗಳು ಬಾಗಿಲ, ಕಿಟಕಿ ಕಿತ್ತು ಹೋಗಿವೆ. ಡೆಸ್‌್ಕಗಳು ಅಲುಗಾಡುತ್ತಿವೆ. 10 ಕೊಠಡಿಗಳ ಮೇಲ್ಛಾವಣಿಗಳು ಉದುರಿ ಬೀಳುತ್ತಿದೆ. ಸಿಮೆಂಟ್‌ ಮಿಶ್ರಿತ ಮರಳು ಯಾವಾಗಂದರೆ ಆವಾಗ ಬೀಳುತ್ತಿದೆ. ದೇವರ ದಯೆಯಿಂದ ತರಗತಿ ನಡೆಯುತ್ತಿರುವಾಗ ಚೆತ್ತಿಗೆ (ಆರ್‌ಸಿಸಿ) ಹಾಕಿರುವ ಸಿಮೆಂಟ್‌ ಮರಳು ಕಿತ್ತು ಬಿದ್ದಿಲ್ಲ. ಈ ಬಿದ್ದ ಸ್ಥಳದಲ್ಲಿ ಕಬ್ಬಿಣ ಸಲಾಕೆಗಳು ಕಾಣುತ್ತಿವೆ.

ಮನುಷ್ಯರ ಹಾವಳಿ:

ಸೂರ್ಯ ಮುಳುಗಿತ್ತಿದ್ದಂತೆ ಇತ್ತ ಬಾಲಕರ ಪ್ರೌಢಶಾಲೆಯ ಕಾಂಪೌಂಡ್‌ ಏರಿದ ಪುಡಾರಿಗಳು ಕುಡಿದು ಶಾಲೆಯ ತುಂಬೆಲ್ಲ ಗಲೀಜು ಮಾಡುತ್ತಾರೆ. ಕುಡಿದ ನಶೆಯಲ್ಲಿ ಬಾಗಿಲು ಮುರಿಯುತ್ತಾರೆ. ಬಳಿಕ ಡೆಸ್‌್ಕಗಳಿಗೆ ಹಾನಿಯುಂಟು ಮಾಡುತ್ತಾರೆ. ಶಾಲೆಗೆ ಕಾವಲುಗಾರ ಅವಶ್ಯಕತೆ ಇದೆ ಎನ್ನುವುದು ಶಿಕ್ಷಣ ಪ್ರೇಮಿಗಳ ಒತ್ತಾಯವಾಗಿದೆ.

ಹಳೆ ಕೊಠಡಿಗಿಲ್ಲ ಅನುದಾನ:

ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ(ಕೆಕೆಆರ್‌ಡಿಬಿ) ಸಾವಿರಾರು ಕೋಟಿ ರು.ಗಳು ಅಭಿವೃದ್ಧಿಗಾಗಿ ರಾಜ್ಯ ಸರಕಾರ ನೀಡುತ್ತದೆ. ಕೆಲವು ನಿಯಮಗಳು ಹೇಗಿರುತ್ತವೆ ಅಂದರೆ ಹಲ್ಲಿದ್ದರೆ ಕಡಲೆಯಿಲ್ಲ, ಕಡಲೆಯಿದ್ದರೆ ಹಲ್ಲಿಲ್ಲ ಎಂಬ ಗಾದೆ ಮಾತಿನಂತೆ ಸರಕಾರಿ ಶಾಲೆಗಳ ಹಳೆ ಕೊಠಡಿಗಳ ದುರಸ್ತಿಗೆ ಅನುದಾನ ಮಾತ್ರ ನೀಡುವುದಿಲ್ಲ. ಕೆಕೆಆರ್‌ಡಿಬಿಯ ಕೆಲ ನಿಯಮಗಳಲ್ಲಿ ಬದಲಾವಣೆ ಅಗತ್ಯವಿದೆ. ಸರಕಾರಿ ಶಾಲೆ ಸೇರಿದಂತೆ ಬೇರೆ ಇಲಾಖೆಗಳ ಕೊಠಡಿಗಳಿಗೂ ದುರಸ್ತಿ ಅನುದಾನ ನೀಡಿದರೆ ಬಾಳಕೆ ಬರುತ್ತವೆ. 25 ಲಕ್ಷ ರು.ಗಳು ಒಂದು ನೂತನ ಕೊಠಡಿಗೆ ಅನುದಾನ ಬಿಡುಗಡೆ ಮಾಡುವುದಕ್ಕಿಂದ ಒಂದು ಪ್ರೌಢಶಾಲೆಗೆ 20 ಲಕ್ಷ ರು.ಗಳು ಬಿಡುಗಡೆ ಮಾಡಿದರೆ ಎಲ್ಲ ಕೊಠಡಿಗಳು ದುರಸ್ತಿಯಾಗುತ್ತವೆ ಎನ್ನವುದು ದಲಿತ ಮುಖಂಡ ಮಲ್ಲಿಕಾರ್ಜುನ ಕ್ರಾಂತಿ ಅಭಿಪ್ರಾಯವಾಗಿದೆ.

ಹೊಸ ಕೊಠಡಿಗೆ ಕೆಕೆಆರ್‌ಡಿಬಿ ಅನುದಾನ:

ಕಲ್ಯಾಣ ಕರ್ನಾಟಕ ಭಾಗದ ಪ್ರದೇಶಗಳು ನೂತನ ಕೊಠಡಿಗಳು ನಿರ್ಮಿಸಲು ಅನುದಾನ ನೀಡುತ್ತದೆ. ಹಳೆ ಕೊಠಡಿ ಕೆಡವಿ/ಬೀಳಿಸಿದರೆ ಹೊಸ ಕಟ್ಟಡ ನಿರ್ಮಾಣಕ್ಕೆ 25 ಲಕ್ಷ ರು.ಗಳು ಬಿಡುಗಡೆ ಮಾಡುತ್ತದೆ. ಇದರಿಂದ ಅಭಿವೃದ್ಧಿ ಹೊಂದುವುದಿಲ್ಲ. ನಮ್ಮ ಹಿರಿಯರು ಬಿಟ್ಟು ಹೋಗಿರುವ ಕೊಠಡಿಗಳ ದುರಸ್ತಿಗೂ ಕೆಕೆಆರ್‌ಡಿಬಿ ಅನುದಾನ ಬಿಡುಗಡೆ ಮಾಡಿದರೆ ಸರಕಾರದ ಬೊಕ್ಕಸದ ಹಣ ಉಳಿತಾಯವಾಗುತ್ತದೆ ಎನ್ನುತ್ತಾರೆ ಸಾಮಾಜಿಕ ಕಾರ್ಯಕರ್ತ, ಶಿಕ್ಷಣ ಪ್ರೇಮಿ ಗುರುನಾಥರೆಡ್ಡಿ ಶೀಲವಂತ.

ಶಿಕ್ಷಣ ಸಚಿವರಿಗೆ ಪತ್ರ:

ಗುಣಮಟ್ಟದ ಕೊಠಡಿಗಳಿದ್ದಾಗ ಮಾತ್ರ ಉತ್ತಮ ಶಿಕ್ಷಣ ಕೊಡಲು ಸಾಧ್ಯ. ಶಾಲೆಗಳಿಗೆ ಬಿಸಿಯೂಟ, ಕ್ಷೀರಭಾಗ್ಯ ಇನ್ನಿತರ ಯೋಜನೆಗಳಂತೆ ಶಾಲೆ ಕೊಠಡಿಗಳ ದುರಸ್ತಿಗೂ ಅನುದಾನ ಬಿಡುಗಡೆ ಮಾಡಬೇಕು. ಬಡವರ ಮಕ್ಕಳ ಶಿಕ್ಷಣಕ್ಕೆ ಒತ್ತು ನೀಡಬೇಕು. ಸರಕಾರಿ ಪ್ರೌಢಶಾಲೆಗಳ ಅಭಿವೃದ್ಧಿಗಾಗಿ ಮುಖ್ಯಮಂತ್ರಿಗೆ ಪತ್ರ ಬರೆಯುತ್ತೇವೆ ಎಂದು ಎಸ್‌ಡಿಎಂಸಿ ಅಧ್ಯಕ್ಷ ರಾಮಣ್ಣ ಮೂಲಿಮನಿ ತಿಳಿಸಿದ್ದಾರೆ.

ಪ್ರೌಢಶಾಲೆಯ ಸುತ್ತಮುತ್ತ ಮುಳ್ಳುಕಂಠಿಗಳು ಬೆಳೆದಿವೆ. ಸೊಳ್ಳೆಗಳ ಹಾವಳಿ ಹೆಚ್ಚಾಗಿದೆ. ಮಳೆಗಾಲವಾಗಿದ್ದರಿಂದ ವಿಷ ಜಂತುಗಳು ಬರುವ ಸಂಭವ ಹೆಚ್ಚಿದೆ. ಆದ್ದರಿಂದ ಕೂಡಲೇ ನಗರಸಭೆಯವರು ಸ್ವಚ್ಛಗೊಳಿಸಬೇಕು ಎಂದು ನಿವಾಸಿಗಳು ಒತ್ತಾಯಿಸಿದ್ದಾರೆ.

ಮುಂದಿನ ವರ್ಷದಿಂದ ಪಠ್ಯದಲ್ಲಿ ಸಿದ್ದೇಶ್ವರ ಶ್ರೀ ಪಾಠ: ಸಚಿವ ಮಧು ಬಂಗಾರಪ್ಪ

ಪ್ರೌಢಶಾಲೆಗೆ ಕೊಠಡಿಗಳ ದುರಸ್ತಿಗೆ ಅನುದಾನ ಬರದೇ ಬಹಳಷ್ಟುವರ್ಷಗಳೇ ಅಯ್ತು. ಇದರಿಂದ ಶಾಲೆಗಳ ಮೇಲ್ಛಾವಣಿ ಕುಸಿದು ಬೀಳುತ್ತಿದ್ದು, ಕಬ್ಬಿಣದ ರಾಡ್‌ಗಳು ಕಾಣಿಸುತ್ತಿವೆ. ಹೊಸ ಕೊಠಡಿಗಳಿಗೆ ಅನುದಾನಕ್ಕಿಂತ ದುರಸ್ತಿಗೆ ಕೆಕೆಆರ್‌ಡಿಬಿ ಅನುದಾನ ನೀಡಬೇಕು. ಇದರಿಂದ ಕಟ್ಟಡಗಳು ಬಾಳಕೆ ಬರುತ್ತವೆ ಅಂತ ಸುರಪುರ ಬಾಲಕರ ಪ್ರೌಢಶಾಲೆ ಉಪಪ್ರಾಂಶುಪಾಲ ಯಲ್ಲಪ್ಪ ಕಾಡ್ಲೂರು ಹೇಳಿದ್ದಾರೆ. 

ರಾಜ್ಯ ಸರಕಾರ ಶಾಲೆಗಳ ದುರಸ್ತಿಗೆ ಅನುದಾನ ಬಿಡುಗಡೆ ಮಾಡುತ್ತಿಲ್ಲ. ಕೆಕೆಆರ್‌ಡಿಬಿಯಲ್ಲಿ ಹೊಸ ಕಟ್ಟಡಗಳಿಗೆ ಮಾತ್ರ ಅನುದಾನ ಬಿಡುಗಡೆ ಮಾಡುತ್ತದೆ. ಹಾಗಾದರೆ ದುರಸ್ತಿಗೆ ಬಂದ ಕಟ್ಟಡಗಳನ್ನು ಬೀಳಸಬೇಕಾಗುತ್ತೆ. ಅದರ ಬದಲು ದುರಸ್ತಿಗೆ ಅನುದಾನ ಬಿಡುಗಡೆ ಮಾಡಿದರೆ ಸರಕಾರದ ಬೊಕ್ಕಸಕ್ಕೆ ಸಾಕಷ್ಟುಅನುದಾನ ಉಳಿಯುತ್ತದೆ. ಕೆಕೆಆರ್‌ಡಿಬಿಯಲ್ಲಿ ಕೆಲವು ನಿಯಮಗಳ ಬದಲಾವಣೆ ಅಗತ್ಯವಿದೆ ಅಂತ ದಲಿತಾ ಪ್ಯಾಂಥರ್‌ ರಾಜ್ಯ ಸಂಘಟನಾ ಕಾರ್ಯದರ್ಶಿ ಆದಪ್ಪ ಹೊಸ್ಮನಿ ತಿಳಿಸಿದ್ದಾರೆ.  

click me!