ಸ್ಫೂರ್ತಿಯ ಸೆಲೆ ಡಾಕ್ಟರ್ ಕಲೆಕ್ಟರ್ ಡಾ.ರಾಜೇಂದ್ರ ಭಾರೂಡ್

By Suvarna News  |  First Published Oct 30, 2020, 3:59 PM IST

ದೇಸಿ ವೈನ್ ತಯಾರಿಸಿ ಮಾರಾಟ ಮಾಡಿ ಕುಟುಂಬ ಸಾಕುತ್ತಿದ್ದ ತಾಯಿ, ತನ್ನ ಮಗ ಡಾಕ್ಟರ್ ಆಗುತ್ತಾನೆಂದು ನಂಬಿದ್ದಳು. ಅದರಂತೆ ಡಾಕ್ಟರ್ ಜೊತೆಗೆ ಕಲೆಕ್ಟರ್ ಕೂಡ ಆಗಿ ಬಿಟ್ಟರು ಬುಡಕಟ್ಟು ಜನಾಂಗದ ಡಾ.ರಾಜೇಂದ್ರ ಭಾರೂಡ್ ಅವರು.


ನಮ್ಮ ಮಧ್ಯೆ ಅದೆಷ್ಟೋ ಸಾಧಕರು ಇದ್ದಾರೆ. ಕಡು ಬಡತನದಿಂದ ಮೇಲೆ ಬಂದು ತಮ್ಮ ಗುರಿ ತಲುಪಿದ್ದಾರೆ. ಯಶಸ್ಸಿನ ಒಂದೊಂದೇ ಮೆಟ್ಟಿಲುಗಳನ್ನ ಹತ್ತಿ ಉನ್ನತ ಹುದ್ದೆಯನ್ನು ಅಲಂಕರಿಸಿದ್ದಾರೆ. ಕಷ್ಟದ ಸಂಕೋಲೆಯನ್ನೇ ಜಯಿಸಿ ತಾವು ಬಯಸಿದ ದೇಶದ ಉನ್ನತ ಪರೀಕ್ಷೆಗಳನ್ನ ಎದುರಿಸಿ, ಅತ್ಯುನ್ನತ ಸ್ಥಾನ ಗಿಟ್ಟಿಸಿಕೊಂಡವರಿದ್ದಾರೆ. ಇಂಥವರ ಸಾಲಿಗೆ ಮಹಾರಾಷ್ಟ್ರದ ನಂದೂರ್ಬರ್ ಜಿಲ್ಲೆಯ ಜಿಲ್ಲಾಧಿಕಾರಿ ಡಾ.ರಾಜೇಂದ್ರ ಬರೂಡ್ ಕೂಡ ಸೇರುತ್ತಾರೆ. ಆದಿವಾಸಿ ಕುಟುಂಬದಲ್ಲಿ ಹುಟ್ಟಿ ಬೆಳೆದ ಡಾ.ರಾಜೇಂದ್ರ, ಕಷ್ಟಪಟ್ಟು ಮೆಡಿಕಲ್ ಕೋರ್ಸ್ ಗಿಟ್ಟಿಸಿಕೊಂಡರೂ ಬಳಿಕ ಐಎಎಸ್ ಪಾಸ್ ಮಾಡಿ ಸಾಕಷ್ಟು ಜನರಿಗೆ ಸ್ಫೂರ್ತಿಯಾಗಿದ್ದಾರೆ.

ಡಾ.ರಾಜೇಂದ್ರ ಅವರು, 1988 ಜನವರಿ 7ರಂದು ಸಾಕ್ರಿ ತಾಲೂಕಿನ ಸಾಮೊಡೆ ಎಂಬ ಸಣ್ಣ ಹಳ್ಳಿಯಲ್ಲಿ ಬಂಡು ಬರೂಡ್ ಹಾಗೂ ಕಮಲಾಬಾಯಿ ದಂಪತಿಯ ಮೂರನೇ ಮಗನಾಗಿ ಜನಿಸಿದರು. ರಾಜೇಂದ್ರ, ತಾಯಿಯ ಹೊಟ್ಟೆ ಯಲ್ಲಿರುವಾಗಲೇ ತಂದೆಯನ್ನ ಕಳೆದುಕೊಂಡರು. ಹೀಗಾಗಿ ಅವರಿಗೆ ತಮ್ಮ ತಂದೆ ಹೇಗಿದ್ದರು ಅನ್ನೋದು ಕೂಡ ಗೊತ್ತಿಲ್ಲ. ತಾಯಿಯೇ ಅವರಿಗೆಲ್ಲ. ಒಂದು ಪುಟ್ಟ ಗುಡಿಸಲಲ್ಲಿ ಕಮಲಾಬಾಯಿ ತಮ್ಮ ಮೂವರು‌ ಮಕ್ಕಳನ್ನು ಸಾಕಿ ಬೆಳೆಸುತ್ತಾರೆ.

Tap to resize

Latest Videos

undefined

ನಿವೃತ್ತಿ ಬಳಿಕವೂ ವಿದ್ಯಾದಾನ ಮಾಡುತ್ತಿರುವ ಶಿಕ್ಷಕ

ನಾವು ಬೆಳೆದದ್ದು ಕಡು ಕಷ್ಟದ ಕುಟುಂಬದಲ್ಲಿ. ಅದ್ಯಾವ ಪರಿ ಕಷ್ಟ ಅಂದ್ರೆ ತಮ್ಮ ತಂದೆ ಸಾಯುವ ಮುನ್ನ ಒಂದೇ ಒಂದು ಫೋಟೋ ತೆಗೆಸಿಕೊಂಡಿರಲಿಲ್ಲ ಎನ್ನುತ್ತಾರೆ ಡಾ.ರಾಜೇಂದ್ರ ಅವರು.

ಅಜ್ಜಿ ಹಾಗೂ ತಾಯಿಯ ಆರೈಕೆ ಯಲ್ಲಿ ಬೆಳೆದವರು ಡಾ.ರಾಜೇಂದ್ರ.  ದೇಸಿ ವೈನ್ ತಯಾರಿಸಿ ಮಾರಾಟ ಮಾಡಿ ತಮ್ಮ ಮಕ್ಕಳನ್ನ ಸಾಕಿ ಬೆಳೆಸುತ್ತಾರೆ. ಮಹಾರಾಷ್ಟ್ರದ ಆದಿವಾಸಿ ಜನಾಂಗಗಳಿರೋ ಏರಿಯಾಗಳಲ್ಲಿ ಮೌವಾ ಎಂಬ ಹೂಗಳನ್ನು ಬಳಸಿ ಸಂಪ್ರದಾಯಿಕವಾಗಿ ವೈನ್ ತಯಾರಿಸಲಾಗುತ್ತದೆ. ಇದು ಕಾನೂನು ಬಾಹಿರವಲ್ಲ. ಇಲ್ಲಿನ ಪ್ರದೇಶಗಳಲ್ಲಿ ಈ ವೈನ್ ಸರ್ವೇ ಸಾಮಾನ್ಯ. ಹೀಗೆ ವೈನ್ ಉತ್ಪಾದನೆಯಿಂದ ರಾಜೇಂದ್ರ ಕುಟುಂಬ ನಿತ್ಯ 100 ರೂಪಾಯಿ ಸಂಪಾದನೆ ಮಾಡುತ್ತಿತ್ತು. ರಾಜೇಂದ್ರ ಹಾಗೂ ಅವರ ಸಹೋದರಿ ಊರಿನ ಜಿಲ್ಲಾ ಪರಿಷತ್ ಶಾಲೆಯಲ್ಲಿ ವ್ಯಾಸಂಗ ಮಾಡಿದ್ರೆ, ಮತ್ತೊಬ್ಬ ಸಹೋದಯ ಸ್ಥಳೀಯ ಆದಿವಾಸಿ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿದರು.

ಕಮಲಾಬಾಯಿ ಅವರು ವೈನ್ ವ್ಯವಹಾರ ನಡೆಸುತ್ತಿರುವಾಗಲೇ, ಅತ್ತ ರಾಜೇಂದ್ರ ತಮ್ಮೂರಿನಿಂದ 150 ಕಿ.ಮೀ. ದೂರದಲ್ಲಿರೋ ಸಿಬಿಎಸ್ ಸಿ ಬೋರ್ಡ್ ವ್ಯವಸ್ಥೆಯುಳ್ಳ ಜವಾಹರ್ ಲಾಲ್ ನವೋದಯ ವಿದ್ಯಾಲಯ ಶಾಲೆಗೆ ಸೇರುತ್ತಾರೆ. ಈ ಶಾಲೆಯಲ್ಲಿ ಗ್ರಾಮೀಣ ಭಾಗದ ಮಕ್ಕಳಿಗೆ ಉಚಿತ ಶಿಕ್ಷಣ ಹಾಗೂ ವಸತಿ ವ್ಯವಸ್ಥೆ ಒದಗಿಸಲಾಗುತ್ತದೆ. ಈ ಶಾಲೆಗೆ ಸೇರುವ ವೇಳೆ ತಾಯಿಯನ್ನು ಬಿಟ್ಟು ಬರಲು ರಾಜೇಂದ್ರ ಬಹಳ ಅತ್ತಿದ್ದರಂತೆ.

ಜೀವನ ಬದಲಿಸಿದ ನವೋದಯ
ನವೋದಯ ಶಾಲೆ ರಾಜೇಂದ್ರರ ಜೀವನವನ್ನೇ ಬದಲಿಸಿಬಿಟ್ಟಿತು. ಗಣಿತ ಹಾಗೂ ವಿಜ್ಞಾನ ವಿಷಯದಲ್ಲಿ ಕಲಿಯಲು ಬಹಳ ಸಹಕಾರಿಯಾಗಿತ್ತು. ಅಷ್ಟೇ ಅಲ್ಲ, 10ನೇ ತರಗತಿಯ ಬೋರ್ಡ್ ಎಕ್ಸಾಂನಲ್ಲಿ ಈ ಎರಡು ವಿಷಯಗಳಲ್ಲಿ ಇವರೇ ಟಾಪ್. ಆ ನಂತರ 12ನೇ ತರಗತಿಯ ಬೋರ್ಡ್ ಎಕ್ಸಾಂನಲ್ಲೂ ಮೇಲುಗೈ ಸಾಧಿಸಿದ್ದರು. ಹೀಗಾಗಿ ಅವರಿಗೆ ಮೆರಿಟ್ ಆಧಾರದ ಮೇಲೆ ಮುಂಬೈನ ಸೇತ್ ಜಿಎಸ್ ಮೆಡಿಕಲ್ ಕಾಲೇಜಿನಲ್ಲಿ ಎಂಬಿಬಿಎಸ್ ಪದವಿ ಸೇರಲು ಸಾಧ್ಯವಾಯಿತು.

ಬಾಲ್ಯದಿಂದಲೂ ಹಲವು ಜನರಿಗೆ ಸೇವೆ ಸಲ್ಲಿಸುವ ವೈದ್ಯನಾಗಬೇಕು ಅನ್ನೋದು ನನ್ನ ಕನಸ್ಸಾಗಿತ್ತು. ಅದರಂತೆ ಎಲ್ಲವೂ ಆಗಿತ್ತು. ಆದ್ರೆ ಜನರಿಗೆ ಉತ್ತಮ ಶಿಕ್ಷಣ ಹಾಗೂ ಉತ್ತಮ ಜೀವನದ ಅವಕಾಶಗಳನ್ನು‌ ಕಲ್ಪಿಸಿ ಕೊಡಲು ನಾನು ಈಗ ಸರ್ಕಾರಿ ಸೇವಕನಾಗಲು ಬಯಸಿದ್ದೆ ಅಂತಾರೆ ರಾಜೇಂದ್ರ.

ಬಡ ಮಕ್ಕಳಿಗೆ ಸಖತ್ ಯೂನಿಫಾರ್ಮ್ ಡಿಸೈನ್ ಮಾಡಿದ ಸಭ್ಯಸಾಚಿ

ವಿದ್ಯಾರ್ಥಿಯಾಗಿದ್ದಲೇ ತಯಾರಿ
ವೈದ್ಯ ವಿದ್ಯಾರ್ಥಿ ಯಾಗಿದ್ದಾಗಲೇ ಯುಪಿಎಸ್ ಸಿ ಪರೀಕ್ಷೆಗೆ ತಯಾರಿ ನಡೆಸಿದ್ದರಂತೆ ರಾಜೇಂದ್ರ. ಅದಕ್ಕಾಗಿ ಸಾಕಷ್ಡು ಪರಿಶ್ರಮ ಪಟ್ಟಿದ್ದಾರೆ. ನಿತ್ಯ ಬೆಳಗ್ಗೆ 5 ಗಂಟೆಗೆ ಎದ್ದು ಧ್ಯಾನ, ವ್ಯಾಯಮ‌ ಮಾಡಿ, ಓದುವುದು, ಕ್ಲಾಸ್ ಅಟೆಂಡ್ ಮಾಡುವುದು, ಬಳಿಕ‌ ಸಂಜೆ ಬಂದು‌ ಮತ್ತೆ ಅಧ್ಯಯನ ಮಾಡುವುದು ಅವರ ದಿನಚರಿಯಾಗಿತ್ತು.

ಅಂತಿಮ ವರ್ಷದ ಎಂಬಿಬಿಎಸ್ ಪದವಿಯ ಪರೀಕ್ಷಾ ಸಂದರ್ಭದಲ್ಲೇ ರಾಜೇಂದ್ರ ಯುಪಿಎಸ್ಸಿ ಪರೀಕ್ಷೆ ಬರೆದು ಮೊದಲ ಪ್ರಯತ್ನದಲ್ಲಿ ತೇರ್ಗಡೆಯಾಗಿದ್ದರು. ಊರಿಗೆ ಮರಳುವಾಗ ಅವರು ಸರ್ಕಾರಿ ಅಧಿಕಾರಿಯಾಗಿದ್ದರು. ರಾಜೇಂದ್ರ ಅವರ ತಾಯಿ ಹಾಗೂ ಅವರ ಊರಿನವರ್ಯಾರಿಗೂ ಇದರ ಅರಿವು ಇರಲಿಲ್ಲ. ತಮ್ಮ ಮಗ ವೈದ್ಯನಾಗುತ್ತಾನೆ ಎಂದೇ ಅವರ ತಾಯಿ ಅಂದು ಕೊಂಡಿದ್ದರು. ಆದ್ರೆ ರಾಜೇಂದ್ರ ಸರ್ಕಾರಿ ಉದ್ಯೋಗ ಪಡೆದು ಊರಿಗೆ ಮರಳಿದ್ದರು. ತಾನೀಗ ಸರ್ಕಾರಿ ಅಧಿಕಾರಿ ಅಂತ ತಿಳಿ ಹೇಳಿದಾಗ, ಎಲ್ಲರೂ ಅವರನ್ನ ಅಭಿನಂದಿಸಿದ್ದರು.

ಐಎಎಸ್‌ ‌ಕನಸ್ಸು ನನಸು
2012ರಲ್ಲಿ ರಾಜೇಂದ್ರ ಫರಿದಾಬಾದನಲ್ಲಿ ಐಆರ್‌ಎಸ್ ಅಧಿಕಾರಿಯಾಗಿ ಸಲ್ಲಿಸುತ್ತಾರೆ. ಈ ಸಂದರ್ಭದಲ್ಲೇ ಅವರು ಮತ್ತೊಮ್ಮೆ ಯುಪಿಎಸ್‌ಸಿ ಪರೀಕ್ಷೆ ತೆಗೆದುಕೊಳ್ಳುತ್ತಾರೆ. ಐಎಎಸ್ ಅಧಿಕಾರಿಯಾಗಿ‌ ನೇಮಕಗೊಂಡು ಮಸ್ಸೂರಿಯಲ್ಲಿ ಎರಡು ವರ್ಷ ತರಬೇತಿ‌ ಪೂರೈಸುತ್ತಾರೆ. 2015ರಲ್ಲಿ ನಾಂದೇಡ್ ಜಿಲ್ಲೆಯಲ್ಲಿ  ಸಹಾಯಕ ಜಿಲ್ಲಾಧಿಕಾರಿಯಾಗಿ ನೇಮಕವಾಗುತ್ತಾರೆ. 2017ರಲ್ಲಿ ಸೋಲಾಪುರ್‌ನಲ್ಲಿ ಮುಖ್ಯ ‌ಕಾರ್ಯನಿರ್ವಾಹಕ ಅಧಿಕಾರಿಯಾಗಿ ನೇಮಕಗೊಂಡರು. ಬಳಿಕ 2018ರ ಜುಲೈನಲ್ಲಿ ನಂದೂರ್ಬರ್ ಜಿಲ್ಲಾಧಿಕಾರಿಯಾಗಿ ನೇಮಕವಾಗುತ್ತಾರೆ.

ಸದ್ಯ ಡಾ.ರಾಜೇಂದ್ರ ಅವರು ನಂದೂರ್ಬರ್ ಜಿಲ್ಲೆಯಲ್ಲಿ ಕೋವಿಡ್ ನಿರ್ವಹಣೆಯಲ್ಲಿ‌ ಪ್ರಮುಖ ಪಾತ್ರ ನಿರ್ವಹಿಸುತ್ತಿದ್ದಾರೆ. ವೈದ್ಯಕೀಯ ಕೋರ್ಸ್ ಪೂರೈಸಿರೋದು ಕೂಡ ಅವರ ಜಿಲ್ಲಾಧಿಕಾರಿ ಕೆಲಸವನ್ನು ಸಮರ್ಥವಾಗಿ ಎದುರಿಸಲು ಸಹಕಾರಿಯಾಗಿದೆ.

New Normal: ಆನ್‌ಲೈನ್ ಕ್ಲಾಸ್‌ಗಾಗಿ ಬೆಟ್ಟ ಹತ್ತಬೇಕು

click me!