ಇತ್ತೀಚಿನ ದಿನಗಳಲ್ಲಿ ಸರ್ಕಾರಿ ಶಾಲೆಗಳು ಅಂದ್ರೆ ಸಾಕು ಮೂಗು ಮುರಿಯುವ ಪೋಷಕರೇ ಹೆಚ್ಚು. ಯಾಕಪ್ಪ ಅಂದ್ರೆ ಅಲ್ಲಿ ಸರಿಯಾಗಿ ಶಿಕ್ಷಣ ಸಿಗುವುದಿಲ್ಲ ಎಂಬ ಭ್ರಮೆಯಲ್ಲಿ ಎಲ್ಲರೂ ಖಾಸಗಿ ಶಾಲೆಗಳತ್ತ ಮಕ್ಕಳಿಗೆ ವಿದ್ಯಾಭ್ಯಾಸ ಕೊಡಿಸಲು ಮುಂದಾಗ್ತಾರೆ.
ವರದಿ: ಕಿರಣ್ ತೊಡರನಾಳ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿತ್ರದುರ್ಗ
ಚಿತ್ರದುರ್ಗ (ಜೂ.08): ಇತ್ತೀಚಿನ ದಿನಗಳಲ್ಲಿ ಸರ್ಕಾರಿ ಶಾಲೆಗಳು ಅಂದ್ರೆ ಸಾಕು ಮೂಗು ಮುರಿಯುವ ಪೋಷಕರೇ ಹೆಚ್ಚು. ಯಾಕಪ್ಪ ಅಂದ್ರೆ ಅಲ್ಲಿ ಸರಿಯಾಗಿ ಶಿಕ್ಷಣ ಸಿಗುವುದಿಲ್ಲ ಎಂಬ ಭ್ರಮೆಯಲ್ಲಿ ಎಲ್ಲರೂ ಖಾಸಗಿ ಶಾಲೆಗಳತ್ತ ಮಕ್ಕಳಿಗೆ ವಿದ್ಯಾಭ್ಯಾಸ ಕೊಡಿಸಲು ಮುಂದಾಗ್ತಾರೆ. ಆದರೆ ಈ ಸರ್ಕಾರಿ ಶಾಲೆಯಲ್ಲಿ ಮಕ್ಕಳು ನಿತ್ಯ ಬಂದು ನಮಗೆ ಪಾಠ ಮಾಡಿ ಎಂದು ಕೇಳಿದ್ರು ಸೂಕ್ತ ಶಿಕ್ಷಕರಿಲ್ಲದ ಕೊರತೆಯಿಂದ ಅದು ಸಾಧ್ಯವಾಗ್ತಿಲ್ಲ. ಧಿಕ್ಕಾರ, ಧಿಕ್ಕಾರ, ಸರ್ಕಾರಕ್ಕೆ ಧಿಕ್ಕಾರ.. ಕೊಠಡಿ ಕೊಡಿ, ಇಲ್ಲ ಟಿಸಿ ಕೊಡಿ ಎಂದು ಪ್ರತಿಭಟನೆ ಮಾಡ್ತಿರೋ ಮಕ್ಕಳು.
ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲ್ಲೂಕಿನ ಹಾಲ್ ಮಾದೇನಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆಯ ಮಕ್ಕಳು, ಪೋಷಕರು, ಎಸ್‌ಡಿಎಂಸಿ ಅಧ್ಯಕ್ಷರು, ಸದಸ್ಯರು ಇಂದು ಹಿರಿಯೂರಿನ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಿ ಶಾಲಾ ಕೊಠಡಿ ಮಂಜೂರು ಮಾಡಿ ಇಲ್ಲವೇ ಟಿ ಸಿ ಕೊಡಿ ಎಂದು ಪ್ರತಿಭಟಿಸಿದರು. ಹಾಲ್ ಮಾದೇನಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 1 ರಿಂದ 7 ರವರೆಗೆ ತರಗತಿಗಳಿದ್ದು ಸುಮಾರು 56 ಮಕ್ಕಳು ವ್ಯಾಸಂಗ ಮಾಡುತ್ತವೆ.1957ರಲ್ಲಿ ಪ್ರಾರಂಭವಾದ ಶಾಲೆಗೆ 1958-59 ರಲ್ಲಿ ಹೆಂಚಿನ ಕೊಠಡಿಗಳು ನಿರ್ಮಾಣವಾಗಿದ್ದು ಅವೇ ಕೊಠಡಿಗಳು ಮುಂದುವರೆದುಕೊಂಡು ಬಂದು 2015 ರಲ್ಲಿ ತರಗತಿಯ ಬೋಧನೆಯ ವೇಳೆ ಮರದ ತೀರು ಬಿದ್ದು ಶಿಕ್ಷಕರು ಮತ್ತು ಮಕ್ಕಳು ಗಾಯಗೊಂಡ ಘಟನೆ ಕೂಡ ನಡೆದಿತ್ತು.
ಅಪರೂಪದ ಖಾಯಿಲೆಯಿಂದ ಬಳಲುತ್ತಿರುವ ಅಮೂಲ್ಯ, ಬೇಕಿದೆ ನಿಮ್ಮ ನೆರವಿನ ಹಸ್ತ
ಈಗ ಆ ಕೊಠಡಿಗಳು ಹಾಳಾಗಿದ್ದು ಉಳಿದಿರುವ ಎರಡು ಕೊಠಡಿಯಲ್ಲೇ ಒಂದರಿಂದ ಏಳರವರೆಗೆ 56 ಮಕ್ಕಳಿಗೆ ಬೋಧಿಸಲು ಕಷ್ಟವಾಗುತ್ತದೆ ಎಂದು ಅಲ್ಲಿಂದ ಇಲ್ಲಿಯವರೆಗೆ ಸುಮಾರು 7 ವರ್ಷದಿಂದ ಆ ಗ್ರಾಮದ ಜನ ಮನವಿಗಳ ಮೇಲೆ ಮನವಿಯನ್ನು ಸಂಬಂಧಪಟ್ಟ ಎಲ್ಲಾ ಇಲಾಖೆಗಳಿಗೂ ನೀಡುತ್ತಲೇ ಬರುತ್ತಿದ್ದಾರೆ. ಕೊನೆಗೆ ಊರಿನ ದೇವಸ್ಥಾನವನ್ನು ಕೆಲಕಾಲ ಬಿಟ್ಟು ಕೊಟ್ಟು ಅಲ್ಲಿಯೇ ಶಾಲೆ ನಡೆಸಲಾಗಿತ್ತು. ಆನಂತರ ಶಾಲಾ ಆವರಣದ ಬಯಲಲ್ಲೇ ತರಗತಿಗಳು ನಡೆಯುತ್ತಾ ಬಂದಿವೆ. ಬಯಲ ಶಾಲೆಯಲ್ಲಿ ಧೂಳು, ಸೆಕೆ, ಶಬ್ದದಿಂದಾಗಿ ಮಕ್ಕಳು ಪಾಠ ಕೇಳಲಾಗುತ್ತಿಲ್ಲ.
ತುರ್ತಾಗಿ ಇನ್ನೆರಡು ಕೊಠಡಿ ನಿರ್ಮಿಸಿಕೊಡಿ ಎಂದು ಶಾಸಕರಿಗೂ, ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೂ, ಜಿಲ್ಲಾಧಿಕಾರಿಗಳಿಗೂ ಮನವಿ ನೀಡುತ್ತಲೇ ಬಂದಿದ್ದು ಯಾವ ಪ್ರಯೋಜನವೂ ಆಗಿಲ್ಲ ಎಂದು ಗ್ರಾಮಸ್ಥರು ದೂರುತ್ತಿದ್ದಾರೆ. ಮಾಧ್ಯಮಗಳೊಂದಿಗೆ ಮಾತನಾಡಿದ ಎಸ್‌ಡಿಎಂಸಿ ಅಧ್ಯಕ್ಷ ಸುರೇಶ್ 'ನಮ್ಮ ಮಕ್ಕಳು ಹೀಗೆ ಕೊಠಡಿ ಕೊಡಿ ಇಲ್ಲ ಟಿಸಿ ಕೊಡಿ ಎಂದು ಕೇಳುವ ಸ್ಥಿತಿ ಬರುವವರೆಗೂ ಸಂಬಂಧಪಟ್ಟವರು ನಮ್ಮ ಮನವಿಗೆ ಬೆಲೆ ನೀಡಲೇ ಇಲ್ಲ. ಈಗ ಗ್ರಾಮಸ್ಥರು ಮತ್ತು ಮಕ್ಕಳು ಪ್ರತಿಭಟನೆಯ ಹಾದಿ ಹಿಡಿಯಬೇಕಾಯಿತು. ನಾವೇ ಆ ಮಕ್ಕಳ ಗೋಳು ನೋಡಲಾರದೇ ಗೋಡೆಗೆ ಶೀಟು ಬಗ್ಗಿಸಿಕೊಟ್ಟು ತಾತ್ಕಾಲಿಕ ವ್ಯವಸ್ಥೆ ಮಾಡಿಕೊಂಡಿದ್ದೇವೆ.
Chitradurga: ಫಸಲಿಗೆ ಬಂದಿದ್ದ 200 ಅಡಿಕೆ ಮರಗಳನ್ನು ಕಡಿದ ದುಷ್ಕರ್ಮಿಗಳು!
ಒಂದು ಸಂಕಷ್ಟ ಬಗೆಹರಿಸಲಿಕ್ಕೆ ಇಷ್ಟು ವರ್ಷ ಬೇಕಾ ಅನ್ನೋದೇ ಆಶ್ಚರ್ಯ. ಈಗಲಾದರೂ ಸಂಬಂಧಪಟ್ಟವರು ನಮ್ಮ ಊರಿನ ಶಾಲೆಯ ದುಸ್ಥಿತಿ ಗಮನಿಸಿ ಸೂಕ್ತ ವ್ಯವಸ್ಥೆ ಮಾಡಿಕೊಡುವರೇನೋ ಎಂಬ ಆಶಾಭಾವನೆ ನಮ್ಮದು' ಎನ್ನುತ್ತಾರೆ. ಮಾನ್ಯ ಶಿಕ್ಷಣ ಸಚಿವರೇ, ರಾಜ್ಯದಲ್ಲಿ ಸರ್ಕಾರಿ ಶಾಲೆಗಳು ಉಳಿಯಬೇಕು ಅಂದ್ರೆ ಮೊದಲು ಆ ಶಾಲೆಗಳ ಪರಿಸ್ಥಿತಿಯನ್ನು ಪರಿಶೀಲಿಸಿ ಸೂಕ್ತ ಕ್ರಮ ಕೊಳ್ಳಲಿ. ಅದನ್ನು ಬಿಟ್ಟು ನಿಮ್ಮ ಅಧಿಕಾರಿಗಳು ಹಾಗೂ ಶಿಕ್ಷಕರು ಮಾಡುವ ನಿರ್ಲಕ್ಷ್ಯದಿಂದ ಎಷ್ಟೋ ಮಕ್ಕಳು ಸರ್ಕಾರಿ ಶಾಲೆ ತೊರೆದು ಬೇರೆಡೆ ಸೇರುವ ಪದ್ದತಿ ಮಾತ್ರ ಇನ್ಯಾವತ್ತೂ ನಿಲ್ಲಲ್ಲ. ಕೂಡಲೇ ಈ ಶಾಲೆಯ ಸಮಸ್ಯೆಗೆ ಪರಿಹಾರ ಒದಗಿಸಿ ಎಂಬುದು ಪ್ರತಿಯೊಬ್ಬರ ಬಯಕೆ.