500 ಕಿ.ಮೀ. ದೂರದವರೆಗಿನ ಹಡಗುಗಳ ಮೇಲೆ ಮೈಕ್ರೋ ಸ್ಯಾಟ್‌ಲೈಟ್‌ನಿಂದ ನಿಗಾ| 15 ಕೇಜಿ ತೂಕದ ಸ್ಯಾಟ್‌ಲೈಟ್| ಡಿಆರ್‌ಡಿಒದಿಂದ 2.3 ಕೋಟಿ ನೆರವು| ಸಮುದ್ರದಲ್ಲಿ ಸಂಚರಿಸುವ ಹಡಗುಗಳ ಚಲನ ವಲನದ ಮೇಲೆ ನಿಗಾ ವಹಿಸಲು ಈ ಉಪಗ್ರಹ ನೆರವು|
ಬೆಂಗಳೂರು(ಫೆ.18): ಪ್ರತಿಷ್ಠಿತ ಪಿಇಎಸ್ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳ ತಂಡ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ(ಡಿಆರ್‌ಡಿಒ) ಸಹಯೋಗದಲ್ಲಿ ‘ಆರ್-ಸ್ಯಾಟ್’ ಮೈಕ್ರೋ ಉಪಗ್ರಹ ಸಿದ್ಧಪಡಿಸಿದ್ದು, ಇದರ ಉಡಾವಣೆ ಫೆ.28ರಂದು ಆಂಧ್ರಪ್ರದೇಶದ ಶ್ರೀ ಹರಿಕೋಟಾದಲ್ಲಿ ನಡೆಯಲಿದೆ.
ಬುಧವಾರ ವಿವಿಯಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಈ ಮಾಹಿತಿ ನೀಡಿದ ಸರ್ಕಾರದ ಶಿಕ್ಷಣ ಸುಧಾರಣೆಗಳ ಸಲಹೆಗಾರರೂ ಆದ ಪಿಇಎಸ್ ವಿವಿಯ ಕುಲಾಧಿಪತಿ ಪ್ರೊ.ಎಂ.ಆರ್.ದೊರೆಸ್ವಾಮಿ ಅವರು, ಈ ಹಿಂದೆ ನಮ್ಮ ವಿದ್ಯಾರ್ಥಿಗಳು ಪೈ-ಸ್ಯಾಟ್ ಎಂಬ ಉಪಗ್ರಹ ಸಿದ್ಧಪಡಿಸಿ ಯಶಸ್ವಿಯಾಗಿ ಉಡಾವಣೆ ಮಾಡಿದ್ದರು. ಇದೀಗ ‘ಆರ್-ಸ್ಯಾಟ್’ ಹೆಸರಿನ ಮತ್ತೊಂದು ಉಪಗ್ರಹ ಸಿದ್ಧಪಡಿಸಿದ್ದಾರೆ. ಸಮುದ್ರದಲ್ಲಿ ಸಂಚರಿಸುವ ಹಡಗುಗಳ ಚಲನ ವಲನದ ಮೇಲೆ ನಿಗಾ ವಹಿಸಲು ಈ ಉಪಗ್ರಹ ನೆರವಾಗಲಿದೆ ಎಂದು ವಿವರಿಸಿದರು.
undefined
ವಿಮಾನಗಳ ಸಂಚಾರದ ಮಾಹಿತಿಗೆ ಬಳಸುವ ರಾಡಾರ್ ಮಾದರಿಯಲ್ಲಿ ಹಡಗುಗಳ ಸಂಚಾರದ ಮೇಲೆ ನಿಗಾ ವಹಿಸಿ ಆರ್ ಸ್ಯಾಟ್ ಡಿಆರ್‌ಡಿಒಗೆ ಮಾಹಿತಿ ರವಾನಿಸಲಿದೆ. ಸಮುದ್ರ ಸಂಚಾರ ದಟ್ಟಣೆ (ಸೀ ಟ್ರಾಫಿಕ್) ವೇಳೆ ಅನಾಹುತಗಳಿಗೆ ಅವಕಾಶವಾಗದಂತೆ ಎಚ್ಚರ ವಹಿಸಲು ಇದು ನೆರವಾಗಲಿದೆ. ಇದು ಸುಮಾರು 500 ಕಿ.ಮೀ.ದೂರದ ವರೆಗಿನ ಹಡಗುಗಳ ಮೇಲೆ ನಿಗಾ ವಹಿಸಲಿದೆ. ಇದು 15 ಕೆ.ಜಿ. ತೂಕವಿದ್ದು, 300 ಮಿ.ಮೀಟರ್ ಸುತ್ತಳತೆಯ ಮೂರು ಸೋಲಾರ್ ಪ್ಯಾನೆಲ್‌ಗಳು ಹಾಗೂ ಬ್ಯಾಟರಿ, ಆಂಟೇನಾ ಸೇರಿದಂತೆ ಹಲವು ಉಪಕರಣಗಳನ್ನು ಹೊಂದಿದೆ. ಡಿಆರ್‌ಡಿಒ ಈ ಉಪಗ್ರಹವನ್ನು ನಿಯಂತ್ರಿಸಲಿದೆ. ಉಡಾವಣೆಯಾದ ಒಂದೂವರೆ ಗಂಟೆಗೆ ಉಪಗ್ರಹ ಕಕ್ಷೆಯನ್ನು ಸೇರಲಿದೆ. ಅನಂತರ ಒಂದು ದಿನದ ನಂತರ ತನ್ನ ಕಾರ್ಯಚರಣೆ ನಿರ್ವಹಿಸಲಿದೆ. ಇದರ ಜೀವಿತಾವಧಿ 2 ವರ್ಷವಾಗಿದೆ ಎಂದು ಮಾಹಿತಿ ನೀಡಿದರು.
ಚೀನಾ ಸೇನೆ ತೆರವು: ಉಪಗ್ರಹ ಚಿತ್ರದಲ್ಲಿ ಸೆರೆ
ವಿದ್ಯಾರ್ಥಿಗಳಲ್ಲಿನ ಸಂಶೋಧನಾ ಗುಣ ಪ್ರೋತ್ಸಾಹಿಸಲು ವಿವಿಯಲ್ಲಿ ಕ್ರೂಸಿಬಲ್ ಆಫ್ ರಿಸರ್ಚ್ ಆ್ಯಂಡ್ ಇನೋವೇಷನ್ (ಕೋರಿ) ಎಂಬ ಸಂಶೋಧನಾ ಕೇಂದ್ರ ಸ್ಥಾಪಿಸಲಾಗಿದೆ. ದಶಕ ಕಾಲ ಇಸ್ರೋದಲ್ಲಿ ಪ್ರಾಜೆಕ್ಟ್ ಮ್ಯಾನೇಜರ್ ಆಗಿ ಸೇವೆ ಸಲ್ಲಿಸಿದ್ದ ಪ್ರೊ.ಸಾಂಬ ಶಿವರಾವ್ ಅವರು ಈ ಕೇಂದ್ರದ ನಿರ್ದೇಶಕರಾಗಿದ್ದು, ಅವರ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳು ಉಪಗ್ರಹ ಸಿದ್ಧಪಡಿಸುತ್ತಿದ್ದಾರೆ ಎಂದರು.
ಡಿಆರ್‌ಡಿಒದಿಂದ 2.3 ಕೋಟಿ ನೆರವು
ಸಾಂಬಶಿವರಾವ್ ಅವರು ಮಾತನಾಡಿ, ಈ ಉಪಗ್ರಹಣ ನಿರ್ಮಾಣದ ಆರಂಭಿಕ ಹಂತದಲ್ಲಿ ವಿದ್ಯಾರ್ಥಿಗಳು ನೌಕಾ ಸಂಶೋಧನಾ ಮಂಡಳಿಗೆ ಯೋಜನೆ ಕುರಿತು ಪ್ರಸ್ತಾವನೆ ಸಲ್ಲಿಸಿದ್ದರು. ಮೊದಲ ಹಂತ ಪೂರ್ಣಗೊಳ್ಳುವ ಹೊತ್ತಿಗೆ ಡಿಆರ್‌ಡಿಒ ಯೋಜನೆ ಪೂರ್ಣಗೊಳ್ಳಲು ಅಗತ್ಯವಾದ 2.3 ಕೋಟಿ ಆರ್ಥಿಕ ನೆರವು ನೀಡಿ ಬೆಂಬಲಿಸಿತು. ಎರಡು ವರ್ಷಗಳ ಕಾಲ 15 ವಿದ್ಯಾರ್ಥಿಗಳ ತಂಡ ಈ ಉಪಗ್ರಹ ನಿರ್ಮಾಣಕ್ಕೆ ಶ್ರಮಿಸಿದ್ದು ಇದೀಗ ಪೂರ್ಣಗೊಂಡಿದೆ, ಉಡಾವಣೆಗೆ ಫೆ.28ರ ಮುಹೂರ್ತ ನಿಗದಿಯಾಗಿದೆ ಎಂದರು.