10,000 ವಿದ್ಯಾರ್ಥಿಗಳು, 9 ದಶಲಕ್ಷ ಪುಸ್ತಕಗಳು, ಆರ್ಯಭಟರಂಥ ಶಿಕ್ಷಕರು.. ಅಬ್ಬಬ್ಬಾ ನಳಂದ ಗತವೈಭವ ನೆನೆಸಿಕೊಂಡ್ರೆ ಮೈ ರೋಮಾಂಚನ!

By Reshma Rao  |  First Published Jun 20, 2024, 11:07 AM IST

ಜಗತ್ತಿನ ಅತಿ ಪುರಾತನ ವಿಶ್ವವಿದ್ಯಾಲಯವಾದ ನಳಂದಾ ತನ್ನ ಕಾಲಘಟ್ಟದಲ್ಲಿ ಜಗತ್ತಿನ ಅದ್ಭುತಗಳಲ್ಲೇ ಒಂದಾಗಿತ್ತೆಂದರೂ ಅಚ್ಚರಿಯಿಲ್ಲ.. ಭಾರತ 1600 ವರ್ಷಗಳ ಮೊದಲೇ ಶೈಕ್ಷಣಿಕವಾಗಿ ಅದೆಷ್ಟು ಮುಂದುವರಿದಿತ್ತು ಎಂದು ನೋಡಿದರೆ ಅಚ್ಚರಿಯಾಗುತ್ತದೆ. 


9 ದಶಲಕ್ಷ ಪುಸ್ತಕಗಳು, 10,000 ವಿದ್ಯಾರ್ಥಿಗಳು, 2000 ಶಿಕ್ಷಕರು, 9 ಅಂತಸ್ತಿನ ಕಟ್ಟಡ, ಆಗಲೇ ವಿದ್ಯಾರ್ಥಿಗಳಿಗೆ ವಸತಿ ವ್ಯವಸ್ಥೆ, - ಹಿಂದಿನ ಭಾರತದ ಶಿಕ್ಷಣವೆಂದರೆ ಕಾಡಿನ ನಡುವೆ ಗುರು ಎದುರಲ್ಲಿ ಕೆಳಗೆ ಕುಳಿತ ಕೆಲ ಶಿಷ್ಯರು ಎಂಬಂಥ ನಿಮ್ಮ ಅನಿಸಿಕೆಗಳನ್ನು ಅಳಿಸಿ ಹಾಕಿ, ಇಂದಿನ ಶಿಕ್ಷಣಕ್ಕೂ ಮೇಲು, ಇಂದಿನ ಶಿಕ್ಷಣಕ್ಕಿಂತ ಹೆಚ್ಚು ಆಧುನಿಕತೆ ಎಂದೆನಿಸುವಂಥ ವಾತಾವರಣ ಹೊಂದಿತ್ತು 1600 ವರ್ಷಗಳ ಹಿಂದೆ ಕಟ್ಟಲಾಗಿದ್ದ ನಳಂದಾ ವಿಶ್ವವಿದ್ಯಾಲಯ.. 

ಶಿಕ್ಷಕರು
ಸೊನ್ನೆಯನ್ನು ಜಗತ್ತಿಗೆ ಕೊಟ್ಟಂಥ ಗಣಿತದ ತಂದೆ ಎನಿಸಿಕೊಂಡ ಆರ್ಯಭಟ , ಖ್ಯಾತ ಬೌದ್ಧ ಧರ್ಮದ ಶಿಕ್ಷಕರಾದ ಧರ್ಮಪಾಲ, ಶಿಲಾಭದ್ರರಂಥ ಶಿಕ್ಷಕರು ಇಲ್ಲಿ ಶಿಕ್ಷಣ ಹೇಳಿಕೊಡುತ್ತಿದ್ದರು..

ಮರಳಿದ 800 ವರ್ಷಗಳ ವೈಭವ: 12ನೇ ಶತಮಾನದಲ್ಲಿ ಧ್ವಂಸವಾಗಿದ್ದ ನಳಂದ ವಿವ ...
 

Tap to resize

Latest Videos

undefined

ಅಂತಾರಾಷ್ಟ್ರೀಯ ವಿದ್ಯಾರ್ಥಿಗಳು
ಚೀನಾ, ಟಿಬೆಟ್, ಕೊರಿಯಾ, ಮಂಗೋಲಿಯಾ, ಪರ್ಶಿಯಾ,  ಶ್ರೀಲಂಕಾ, ಜಪಾನ್ ಮುಂತಾದ ಎಲ್ಲ ಏಷ್ಯಾದ ದೇಶಗಳ ವಿದ್ಯಾರ್ಥಿಗಳು ಆಗಲೇ ಇಲ್ಲಿ ಬಂದು ಶಿಕ್ಷಣ ಪಡೆದುಕೊಳ್ಳುತ್ತಿದ್ದರು. ಇಲ್ಲಿ ಪದವಿ ಪಡೆದವರೆಂದರೆ ಪ್ರಪಂಚದಾದ್ಯಂತ ಅವರಿಗೆ ಅತ್ಯಂತ ಆದರ, ಗೌರವಗಳು ದೊರಕುತ್ತಿತ್ತು.

ಪ್ರವೇಶ ಪರೀಕ್ಷೆ
ನಳಂದಾ ವಿಶ್ವವಿದ್ಯಾಲಯಕ್ಕೆ ಪ್ರವೇಶ ಪಡೆಯುವುದು ಸುಲಭದ ಮಾತಾಗಿರಲಿಲ್ಲ. ಅದಕ್ಕೆ ಸಾಕಷ್ಟು ಸ್ಪರ್ಧಾತ್ಮಕ ಪರೀಕ್ಷೆಗಳು, ಸಂದರ್ಶನಗಳನ್ನು ಎದುರಿಸಬೇಕಿತ್ತು. ಇಂದಿನ ಐಐಎಂ, ಐಐಟಿಗೆ ಪರೀಕ್ಷೆ ಬರೆದು ಪಾಸಾಗುವಂತೆ 1600 ವರ್ಷಗಳ ಹಿಂದೆಯೇ ನಳಂದಾಕ್ಕಾಗಿ ವಿದ್ಯಾರ್ಥಿಗಳು ಕಷ್ಟಪಟ್ಟು ಓದಿ ಪರೀಕ್ಷೆ ಪಾಸ್ ಮಾಡಿಕೊಳ್ಳಬೇಕಿತ್ತು. 

9 ಅಂತಸ್ತಿನ ಗ್ರಂತಾಲಯ
ಇಲ್ಲಿನ ಲೈಬ್ರರಿಯನ್ನು ಧರ್ಮಗುಂಜ್ ಅಥವಾ ಮೌಂಟೇನ್ ಆಫ್ ಟ್ರುತ್ ಎಂದು ಹೆಸರಿಸಲಾಗಿತ್ತು. ಇಲ್ಲಿ 5-6ನೇ ಶತಮಾನದಲ್ಲೇ 9 ಅಂತಸ್ತುಗಳಲ್ಲಿ 9 ದಶಲಕ್ಷ ಪುಸ್ತಕಗಳ ಸಂಗ್ರಹವಿತ್ತು ಎಂದರೆ ಆ ಕಾಲದ ವಿದ್ವಾಂಸರು ಹಾಗೂ ವಿದ್ಯೆಯ ಕುರಿತ ಸಣ್ಣ ಒಳನೋಟ ಸಿಗಬಹುದು. ಈ ಲೈಬ್ರೆರಿ ಎಷ್ಟು ದೊಡ್ಡದಾಗಿತ್ತೆಂದರೆ ಅದನ್ನು 1190ರಲ್ಲಿ ಭಕ್ತಿಯಾರ್ ಖಿಲ್ಜಿ ಸುಟ್ಟಾಗ ಬರೋಬ್ಬರಿ 3 ತಿಂಗಳ ಕಾಲ ಬೆಂಕಿ ಆರದೆ ಹೊತ್ತಿ ಉರಿಯುತ್ತಲೇ ಇತ್ತು!

ಭಾರತ ಜಾಗತಿಕ ಜ್ಞಾನ ಕೇಂದ್ರ ಆಗಬೇಕು: ಮೋದಿ
 

ನಿರ್ಮಾಣ
5ನೇ ಶತಮಾನದಲ್ಲಿ ಅಂದರೆ 450 ಸಿಇಯಲ್ಲಿ ಗುಪ್ತರ ದೊರೆ ಕುಮಾರ ಗುಪ್ತ 1 ನಳಂದಾ ವಿವಿಯನ್ನು ಬಿಹಾರದ ಮಧ್ಯಭಾಗದಲ್ಲಿ ಸ್ಥಾಪಿಸಿದನು. 

ಇವನ್ನು ಕಲಿಸಲಾಗುತ್ತಿತ್ತು..
ನಳಂದವು ವಿಶ್ವದ ಮೊದಲ ವಸತಿ ವಿಶ್ವವಿದ್ಯಾಲಯವಾಗಿದ್ದು, 10,000 ವಿದ್ಯಾರ್ಥಿಗಳು ಮತ್ತು 2,000 ಶಿಕ್ಷಕರಿಗೆ ಅವಕಾಶ ಕಲ್ಪಿಸಿದೆ ಮತ್ತು ಬೌದ್ಧ ಅಧ್ಯಯನಗಳಿಗೆ ಮತ್ತು ಖಗೋಳಶಾಸ್ತ್ರ, ವೈದ್ಯಕೀಯ, ತರ್ಕಶಾಸ್ತ್ರ ಮತ್ತು ಗಣಿತಶಾಸ್ತ್ರದಂತಹ ವಿಷಯಗಳಿಗೆ ಪ್ರಮುಖ ಕೇಂದ್ರವಾಗಿತ್ತು.

ಶ್ರೇಷ್ಠ ವಿವಿ
ಇತಿಹಾಸದಲ್ಲಿ ನಮೂದಿತವಾದ ಮೊದಲ ಅತಿ ಶ್ರೇಷ್ಠವಾದ ವಿಶ್ವವಿದ್ಯಾಲಯ ಇದಾಗಿದ್ದು, ಕೆಂಪು ಇಟ್ಟಿಗೆಗಳಿಂದ ಕಟ್ಟಲ್ಪಟ್ಟಿತ್ತು. ಮತ್ತು ಇದು ಸುಮಾರು 14 ಎಕರೆ ಪ್ರದೇಶಗಳಲ್ಲಿ ಹರಡಿತ್ತು. 

ಪ್ರಸಿದ್ಧರ ನೆಚ್ಚಿನ ತಾಣ
ಬುದ್ಧ, ಮಹಾವೀರರು ಈ ನಳಂದಾದಲ್ಲಿ ಸಾಕಷ್ಟು ಸಮಯಗಳನ್ನು ಕಳೆಯುತ್ತಿದ್ದರು. ಚೀನಾದ ಪ್ರಸಿದ್ಧ ಬೌದ್ಧ ಗುರು ಹುಯೆನ್‌ತ್ಸಾಂಗ್ ಇಲ್ಲಿಯ ವಿದ್ಯಾರ್ಥಿಯಾಗಿದ್ದರು. ಹ್ಯೂಯೆನ್ ತ್ಸಾಂಗ್ ಪ್ರಕಾರ ಚೀನಾ, ಕೊರಿಯಾ, ಟಿಬೆಟ್, ಮಂಗೋಲಿಯಾ, ಜರ್ಮನ್ ದೇಶಗಳಿಂದ ನಳಂದಕ್ಕೆ ವೈದ್ಯಕೀಯ ಕಲಿಯಲು ಆಗಮಿಸುತ್ತಿದ್ದರು. 

ಧ್ಯಾನ ಕೇಂದ್ರಗಳು
ವಿಶ್ವವಿದ್ಯಾಲಯವನ್ನು ವಾಸ್ತುಶಾಸ್ತ್ರದ ಮೇರುಕೃತಿ ಎಂದು ಪರಿಗಣಿಸಲಾಗಿದೆ. ನಳಂದವು ಎಂಟು ಬೇರೆ ಬೇರೆ ಮೋಟು ಗೋಡೆಗಳನ್ನು ಮತ್ತು ಹತ್ತು ದೇವಾಲಯಗಳು, ಅಲ್ಲದೆ ಅನೇಕ ಧ್ಯಾನದ ಹಜಾರಗಳು ಮತ್ತು ಪಾಠದ ಕೋಣೆಗಳನ್ನು ಹೊಂದಿತ್ತು. ಮೈದಾನದಲ್ಲಿ ಸರೋವರಗಳು ಮತ್ತು ಉದ್ಯಾನವನಗಳಿದ್ದವು.

ದಾಳಿ, ಧ್ವಂಸ
1193ರಲ್ಲಿ, ನಳಂದ ವಿಶ್ವವಿದ್ಯಾನಿಲಯವನ್ನು, ಟರ್ಕಿ ದೇಶದ ಇಸ್ಲಾಮ್ ಧರ್ಮದ ಮತಾಂಧ ಬಖ್ತಿಯಾರ್ ಖಿಲ್ಜಿ ಕೊಳ್ಳೆಹೊಡೆದನು. ಬೌದ್ಧಮತವನ್ನು ಕಿತ್ತುಹಾಕಿ ಇಸ್ಲಾಮ್ ಧರ್ಮವನ್ನು ಸ್ಥಾಪಿಸಲು ಖಿಲ್ಜಿ ಮಾಡಿದ ಪ್ರಯತ್ನದಲ್ಲಿ ಸಾವಿರಾರು ಸಂನ್ಯಾಸಿಗಳನ್ನು ಜೀವಂತ ಸುಡಲಾಯಿತು ಮತ್ತು ಸಾವಿರಾರು ಸಂನ್ಯಾಸಿಗಳ ಶಿರಚ್ಛೇದ ಮಾಡಲಾಯಿತು.

ಇಂಥ ರೋಮಾಂಚನಕಾರಿಯಾದ ಇತಿಹಾಸ ಹೊಂದಿರುವ ನಳಂದಾ ವಿಶ್ವವಿದ್ಯಾಲಯವನ್ನು ಇದೀಗ ಪುನಃಸ್ಥಾಪಿಸಲಾಗಿದೆ. ಬಿಹಾರದ ರಾಜ್‌ಗಿರ್‌ನಲ್ಲಿರುವ ನಳಂದ ವಿಶ್ವವಿದ್ಯಾಲಯದ 450 ಎಕರೆಗಳಷ್ಟು ವಿಸ್ತಾರವಾಗಿರುವ ಹೊಸ ಕ್ಯಾಂಪಸ್‌ ಅನ್ನು ಪ್ರಧಾನಿ ನರೇಂದ್ರ ಮೋದಿ ಬುಧವಾರ ಉದ್ಘಾಟಿಸಿದ್ದಾರೆ. 

click me!