ಕಲ್ಯಾಣ ಕರ್ನಾಟಕ ಭಾಗದಲ್ಲಿ ಶಿಕ್ಷಕರ ಕೊರತೆ ನಿವಾರಿಸಲು 5 ಸಾವಿರ ಶಿಕ್ಷಕರನ್ನು ನೇಮಿಸಲಾಗುತ್ತಿದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಹಾಗೂ ಸಕಾಲ್ ಖಾತೆ ಸಚಿವ ಬಿ.ಸಿ. ನಾಗೇಶ್ ಹೇಳಿದರು.
ಕಲಬುರಗಿ (ಜು.05): ಕಲ್ಯಾಣ ಕರ್ನಾಟಕ ಭಾಗದಲ್ಲಿ ಶಿಕ್ಷಕರ ಕೊರತೆ ನಿವಾರಿಸಲು 5 ಸಾವಿರ ಶಿಕ್ಷಕರನ್ನು ನೇಮಿಸಲಾಗುತ್ತಿದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಹಾಗೂ ಸಕಾಲ್ ಖಾತೆ ಸಚಿವ ಬಿ.ಸಿ. ನಾಗೇಶ್ ಹೇಳಿದರು. ಸೋಮವಾರ ಅಫಜಲಪೂರ ತಾಲೂಕಿನ ದೇವಲ ಗಾಣಗಾಪೂರದ ಸರ್ಕಾರಿ ಪ್ರೌಢ ಶಾಲೆಯಲ್ಲಿ ಸುದ್ದಿಗಾರದೊಂದಿಗೆ ಮಾತನಾಡಿದ ಅವರು, ಒಂದು ವೇಳೆ ಪೂರ್ಣ ಪ್ರಮಾಣದ ಸಂಖ್ಯೆಯಲ್ಲಿ ಈ ಭಾಗದ ಶಿಕ್ಷಕರು ನೇಮಕಾತಿಯಾಗದಿದ್ದಲ್ಲಿ ಮತ್ತೊಮ್ಮೆ ತರಬೇತಿ ನೀಡಿ ಬರುವ ಡಿಸೆಂಬರ್ ಒಳಗೆ ಮತ್ತೆ ಸಿಇಟಿ ನಡೆಸಲಾಗುವುದು.
371ಜೆ ಮೀಸಲಾತಿಯಡಿ ಸ್ಥಳೀಯರು ನೇಮಕಾತಿ ಆಗುವುದರಿಂದ ಪ್ರದೇಶ ಬಿಟ್ಟು ಶಿಕ್ಷಕರು ಬೇರೆಡೆ ವರ್ಗಾವಣೆ ಆಗುವುದಿಲ್ಲ ಎಂದು ಸ್ಪಷ್ಟಪಡಿಸಿದರು.ಕಲ್ಯಾಣ ಕರ್ನಾಟಕ ಭಾಗದ ಹಿಂದುಳಿದ ಹಣೆಪಟ್ಟಿಕೊನೆಗೊಳಿಸಲು ನಮ್ಮ ಸರ್ಕಾರದ ಪ್ರಥಮಾದ್ಯತೆ. ಹೀಗಾಗಿ ಈ ಭಾಗಕ್ಕೆ ಹೆಚ್ಚಿನ ಆರ್ಥಿಕ ಅನುದಾನ ನೀಡಲಾಗುತ್ತಿದೆ. ಕೇಂದ್ರ ಸರ್ಕಾರವು ಸಹ ಈ ಭಾಗದ ಜಿಲ್ಲೆಗಳನ್ನು ಮಹತ್ವಕಾಂಕ್ಷೆ ಜಿಲ್ಲೆಯಲ್ಲಿ ಸೇರಿಸಿ ಅಭಿವೃದ್ಧಿಪಡಿಸುತ್ತಿದೆ.
ಚಕ್ರತೀರ್ಥ ಸಮಿತಿ ಪರಿಷ್ಕೃತ ಪಠ್ಯ ತಿದ್ದುಪಡಿಗೆ ಆದೇಶ, ಇಲ್ಲಿದೆ ತಿದ್ದುಪಡಿಯಾಗುವ ಲಿಸ್ಟ್
ಈ ಭಾಗದಲ್ಲಿನ ಮಕ್ಕಳಲ್ಲಿನ ಅಪೌಷ್ಠಿಕತೆ ನಿವಾರಣೆಗೆ ಹಲವರ ವಿರೋಧದ ನಡುವೆಯೂ ಮೊಟ್ಟೆವಿತರಿಸಿದ್ದು, ಸದರಿ ಕಾರ್ಯಕ್ರಮದ ಪ್ರಗತಿ ಬಗ್ಗೆ ಅಧ್ಯಯನ ನಡೆಸಲಾಗುತ್ತಿದೆ ಎಂದರು. ಶಾಲಾ ಶಿಕ್ಷಕರ ಕೊರತೆ ನೀಗಿಸಲು ರಾಜ್ಯದಾದ್ಯಂತ ಅತಿಥಿ ಶಿಕ್ಷಕರನ್ನು ನೇಮಿಸಿಕೊಂಡಿದೆ. ಇತ್ತೀಚೆಗೆ ಪ್ರಾಥಮಿಕ ಶಾಲಾ ಶಿಕ್ಷಕರ ಗೌರವ ಸಂಭಾವನೆಯನ್ನು 7,500ರಿಂದ 10 ಸಾವಿರ ರು. ಮತ್ತು ಪ್ರೌಢ ಶಾಲಾ ಶಿಕ್ಷಕರ ಗೌರವ ಸಂಭಾವನೆಯನ್ನು 8ರಿಂದ 10,500 ರು. ಗಳಿಗೆ ಹೆಚ್ಚಿಸಿದೆ ಎಂದರು.
ಭೂಕಂಪನ ಆತಂಕ ಅಗತ್ಯ ಇಲ್ಲ: ಇತ್ತೀಚೆಗೆ ಹಾಸನ ಹಾಗೂ ಕೊಡಗು ಜಿಲ್ಲೆಯ ನೈರುತ್ಯ ಗಡಿಭಾಗದಲ್ಲಿ ಭೂ ಕಂಪಿಸಿರುವ ಬಗ್ಗೆ ವರದಿಯಾಗಿದ್ದು, ಯಾರು ಸಹ ಆತಂಕಪಡುವ ಅಗತ್ಯ ಇಲ್ಲ ಎಂದು ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ.ನಾಗೇಶ್ ತಿಳಿಸಿದ್ದಾರೆ. ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮುಂಗಾರು ಸಂದರ್ಭದಲ್ಲಿ ಜಿಲ್ಲಾಡಳಿತ ಕೈಗೊಂಡಿರುವ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳ ಬಗ್ಗೆ ಮಾಹಿತಿ ಪಡೆದು ಮಾತನಾಡಿದರು. ಭೂ ಕಂಪನದಿಂದ ಜಿಲ್ಲೆಯ ಯಾವುದೇ ಭಾಗದಲ್ಲಿ ಭೂಮಿ ಬಿರುಕು ಬಿಟ್ಟಿರುವ ಬಗ್ಗೆ ವರದಿಯಾಗಿಲ್ಲ.
ಈ ಹಿಂದೆ 2018ರಲ್ಲಿ ರಿಕ್ಟರ್ ಮಾಪಕದಲ್ಲಿ 3.3ರಷ್ಟುಭೂ ಕಂಪಿಸಿರುವ ಬಗ್ಗೆ ವರದಿಯಾಗಿತ್ತು. ಆ ಸಂದರ್ಭದಲ್ಲಿ ಭೂಕುಸಿತ ಹಾಗೂ ಪ್ರವಾಹ ಉಂಟಾಗಿತ್ತು. ಈ ಬಾರಿ ಸರಾಸರಿ ಮಳೆಯ ಪ್ರಮಾಣ ಕಡಿಮೆ ಇದ್ದು, ಆ ನಿಟ್ಟಿನಲ್ಲಿ ಯಾರೂ ಸಹ ಆತಂಕ ಪಡಬೇಕಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವರು ಹೇಳಿದರು. ಹೆಚ್ಚಿನ ಮಳೆಯಾಗಿ ಹಾರಂಗಿ ಜಲಾಶಯ ಭರ್ತಿಯಾದಲ್ಲಿ ಕನಿಷ್ಠ 6 ರಿಂದ 7 ಅಡಿ ನೀರನ್ನು ಸಂಗ್ರಹ ಮಾಡಿಕೊಂಡು ಉಳಿದ ಹೆಚ್ಚುವರಿ ನೀರನ್ನು ಜಲಾಶಯದಿಂದ ಹೊರಗೆ ಬಿಡಬೇಕಾಗುತ್ತದೆ. ಆ ನಿಟ್ಟಿನಲ್ಲಿ ಜಿಲ್ಲಾಡಳಿತ ಕ್ರಮವಹಿಸಲಿದೆ.
ಪಠ್ಯ ಪರಿಷ್ಕರಣೆ ವಿವಾದ: ದೇವೇಗೌಡರ ಮನೆಗೇ ಹೋಗಿ ಪಠ್ಯ ವಿವರಣೆ ಕೊಟ್ಟಿದ್ದೇವೆ, ನಾಗೇಶ್
ಸದ್ಯ ಮಳೆಯ ಸರಾಸರಿ ಪ್ರಮಾಣ ಕಡಿಮೆ ಇದೆ ಎಂದು ತಿಳಿಸಿದರು. ಹೆಚ್ಚು ಮಳೆಯಾದಲ್ಲಿ ಅಗತ್ಯವಿರುವ ಕಡೆಗಳಲ್ಲಿ ಪರಿಹಾರ ಕೇಂದ್ರಗಳನ್ನು ತೆರೆಯುವುದು, ವೈದ್ಯರನ್ನು ನಿಯೋಜಿಸುವುದು, ಮತ್ತಿತರ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಈಗಾಗಲೇ 2018 ರಲ್ಲಿ ಸಂಭವಿಸಿದ ಪ್ರಾಕೃತಿಕ ವಿಕೋಪದಿಂದ ಮನೆ ಕಳೆದುಕೊಂಡವರಿಗೆ ಮನೆ ನೀಡಲಾಗಿದೆ. ಹಾಗೆಯೇ ಬಾಕಿ ಇರುವ ಮನೆಗಳ ಹಸ್ತಾಂತರ ಮಾಡುವುದು, ಅಗತ್ಯ ಮೂಲ ಸೌಲಭ್ಯ ಕಲ್ಪಿಸುವಂತೆ ಸಚಿವರು ತಿಳಿಸಿದರು.