ಉದ್ಯಮಿಗಳಿಗೆ ವೀಸಿ ಹುದ್ದೆ ಬೇಡ: ಕೇಂದ್ರಕ್ಕೆ ಸಚಿವ ಸುಧಾಕರ್ ಒತ್ತಾಯ

Published : Jan 15, 2025, 11:07 AM ISTUpdated : Jan 15, 2025, 11:08 AM IST
ಉದ್ಯಮಿಗಳಿಗೆ ವೀಸಿ ಹುದ್ದೆ ಬೇಡ: ಕೇಂದ್ರಕ್ಕೆ ಸಚಿವ ಸುಧಾಕರ್ ಒತ್ತಾಯ

ಸಾರಾಂಶ

ಕುಲಪತಿ ನೇಮಕಾತಿ ವಿಚಾರದಲ್ಲಿ ರಾಜ್ಯ ಸರ್ಕಾರದ ಅಧಿಕಾರ ಮೊಟಕುಗೊಳಿಸಿ ರಾಜ್ಯಪಾಲರಿಗೆ ಸಂಪೂರ್ಣ ಪರಮಾಧಿಕಾರ ನೀಡುವ ಕೆಲಸ ಮಾಡಲಾಗಿದೆ. ಇದು ನಮ್ಮ ದೇಶದ ಶಿಕ್ಷಣ ವ್ಯವಸ್ಥೆ ಮೇಲೆ ದೊಡ್ಡ ದುಷ್ಪರಿಣಾಮ ಬೀರಲಿದೆ: ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್

ಬೆಂಗಳೂರು(ಜ.15):  ವಿಶ್ವವಿದ್ಯಾಲಯ ಧನ ಸಹಾಯ ಆಯೋಗವು (ಯುಜಿಸಿ) ವಿಶ್ವವಿದ್ಯಾಲಯಗಳ ನೇಮಕಾತಿಗೆ ಸಂಬಂಧಿಸಿದಂತೆ ಇತ್ತೀಚೆಗೆ ಬಿಡುಗಡೆ ಮಾಡಿರುವ ಹೊಸ ಕರಡು ನಿಯಮಾವಳಿಗಳು ರಾಜ್ಯಗಳ ಅಧಿಕಾರ ಮೊಟಕುಗೊಳಿಸುವ ದುರುದ್ದೇಶದಿಂದ ಕೂಡಿದ್ದು, ಕೂಡಲೇ ವಾಪಸ್‌ ಪಡೆಯಬೇಕೆಂದು ರಾಜ್ಯ ಸರ್ಕಾರ ಒತ್ತಾಯಿಸಿದೆ. 

ಈ ಸಂಬಂಧ ಕೇಂದ್ರ ಶಾಲಾ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್‌ ಅವರಿಗೆ ಪತ್ರ ಬರೆದಿರುವ ರಾಜ್ಯ ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್, ಯುಜಿಸಿಯ ಹೊಸ ಕರಡು ನಿಯಮಾವಳಿಗಳು ಅವೈಜ್ಞಾನಿಕವಾಗಿವೆ. ವಿಶ್ವವಿದ್ಯಾಲಯಗಳ ಕುಲಪತಿ ನೇಮಕ, ಬೋಧಕ, “ಬೋಧಕೇತರ ಸಿಬ್ಬಂದಿ ನೇಮಕಾತಿ ವಿಚಾರದಲ್ಲಿ ರಾಜ್ಯ ಸರ್ಕಾರಕ್ಕಿರುವ ಅಧಿಕಾರ ಮೊಟಕುಗೊಳಿಸಲು ಈ ನಿಯಮ ರೂಪಿಸಲಾಗಿದೆ. ಇದು ಉನ್ನತ ಶಿಕ್ಷಣ ಬಲಪಡಿಸುವ ಬದಲು ಕೇಂದ್ರ ಸರ್ಕಾರ ತನ್ನ ಸರ್ವಾಧಿಕಾರಿ ಧೋರಣೆಯನ್ನು ರಾಜ್ಯಗಳ ಮೇಲೆ ಹೇರಲು ಪೂರಕವಾಗಿವೆ. ಹಾಗಾಗಿ ಈ ಸಂಬಂಧ ತಜ್ಞರೊಂದಿಗೆ ಚರ್ಚಿಸಿದ ಬಳಿಕ ಈ ಕರಡು ನಿಯಮಾವಳಿಗೆ ಸರ್ಕಾರದ ವಿರೋಧವಿದ್ದು, ಕೂಡಲೇ ವಾಪಸ್ ಪಡೆಯುವಂತೆ ಆಗ್ರಹಿಸಿದ್ದಾರೆ. 

ವಿದ್ಯಾರ್ಥಿಗಳೇ ಎಚ್ಚರಿಕೆಯಿಂದಿರಿ ದೇಶದಲ್ಲಿ 21 ನಕಲಿ ವಿಶ್ವವಿದ್ಯಾಲಯಗಳು ಪತ್ತೆ, ಕರ್ನಾಟಕದಲ್ಲೂ ಇದೆ!

ಕರಡು ನಿಯಮಾವಳಿಗಳಲ್ಲಿ ಕುಲಪತಿ ಸ್ಥಾನಕ್ಕೆ ಉದ್ಯಮಿಗಳು, ಸಾರ್ವಜನಿಕ ಆಡಳಿತ, ನೀತಿ ನಿರೂಪಣೆಯಲ್ಲಿ ಕೆಲಸ ಮಾಡಿದವರು, ಸರ್ಕಾರಿ ಸ್ವಾಮ್ಯದ ಸಂಸ್ಥೆಗಳ ಹಿರಿಯ ಅಧಿಕಾರಿಗಳನ್ನೂ ನೇಮಕ ಮಾಡಲು ಅವಕಾಶ ಕಲ್ಪಿಸಲಾಗಿದೆ. ಅಲ್ಲದೆ, ಕುಲಪತಿ ನೇಮಕಾತಿ ವಿಚಾರದಲ್ಲಿ ರಾಜ್ಯ ಸರ್ಕಾರದ ಅಧಿಕಾರ ಮೊಟಕುಗೊಳಿಸಿ ರಾಜ್ಯಪಾಲರಿಗೆ ಸಂಪೂರ್ಣ ಪರಮಾಧಿಕಾರ ನೀಡುವ ಕೆಲಸ ಮಾಡಲಾಗಿದೆ. ಇದು ನಮ್ಮ ದೇಶದ ಶಿಕ್ಷಣ ವ್ಯವಸ್ಥೆ ಮೇಲೆ ದೊಡ್ಡ ದುಷ್ಪರಿಣಾಮ ಬೀರಲಿದೆ. ಎಂದಿದ್ದಾರೆ.

ಉದ್ಯಮಿಗಳಿಗೂ ಕುಲಪತಿ ಹುದ್ದೆ: ಕೇಂದ್ರದ ವಿರುದ್ಧ ಸಿದ್ದರಾಮಯ್ಯ ಕಿಡಿ

ಬೆಂಗಳೂರು: ವಿಶ್ವವಿದ್ಯಾಲಯ ಧನಸಹಾಯ ಆಯೋಗ (ಯುಜಿಸಿ) ನೇಮಕಾತಿ ನಿಯಮಗಳಿಗೆ ತಿದ್ದುಪಡಿ ಮಾಡಿ ಕುಲಪತಿಗಳ ನೇಮಕಾತಿಗೆ ರಾಜ್ಯಪಾಲರಿಗೆ ಸರ್ವಾಧಿಕಾರ ನೀಡಿ ರಾಜ್ಯಗಳ ಅಧಿಕಾರ ಕಸಿಯಲು ಹೊರಟಿರುವ ಕೇಂದ್ರದ ಕ್ರಮ ಖಂಡನೀಯ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕಿಡಿಕಾರಿದ್ದರು.

ಜ.08 ರಂದು ಮಾತನಾಡಿದ ಸಿದ್ದರಾಮಯ್ಯ ಅವರು, ಕೇಂದ್ರದ ತಿದ್ದುಪಡಿಗಳಿಂದಾಗಿ ಸಾರ್ವಜನಿಕ ಮತ್ತು ಖಾಸಗಿ ಕ್ಷೇತ್ರದ ಉದ್ಯಮಿಗಳು, ಸಾರ್ವಜನಿಕ ಆಡಳಿತದ ನೀತಿ ನಿರೂಪಕರು ಸೇರಿ ಬೇರೆ ಕ್ಷೇತ್ರದಲ್ಲಿರುವ ತಜ್ಞರನ್ನು ಕುಲಪತಿಯಾಗಿ ನೇಮಕ ಮಾಡಿಕೊಳ್ಳಬಹುದಾಗಿದೆ. ಇದು ಕನ್ನಡಿಗರಿಗೆ ಮಾಡುವ ದ್ರೋಹ ಎಂದು ಆಕ್ರೋಶ ಹೊರಹಾಕಿದ್ದರು.   

ಕೇಂದ್ರದ ಈ ಕ್ರಮ ರಾಜ್ಯ ಸರ್ಕಾರದ ಮೇಲಿನ ನೇರ ಸವಾರಿ. ಒಕ್ಕೂಟ ವ್ಯವಸ್ಥೆಯನ್ನೇ ಬುಡಮೇಲು ಮಾಡುವಂಥ ಇಂತಹ ನಡವಳಿಕೆಗಳನ್ನು ರಾಜ್ಯ ಸರ್ಕಾರ ಸಹಿಸುವುದಿಲ್ಲ. ಬಿಜೆಪಿಯೇತರ ಸರ್ಕಾರವಿರುವ ರಾಜ್ಯಗಳ ಜೊತೆಯಲ್ಲಿ ಈ ಬಗ್ಗೆ ಚರ್ಚಿಸಿ ಮುಂದಿನ ಹೆಜ್ಜೆಯ ಬಗ್ಗೆ ತೀರ್ಮಾನ ಮಾಡಲಾಗುವುದು ಎಂದು ಹೇಳಿದ್ದರು. 

ವಿದ್ಯಾರ್ಥಿ ಇಂಗ್ಲೀಷ್‌ನಲ್ಲಿ ತಪ್ಪು ಹುಡುಕಲು ಹೋಗಿ ಬೆಪ್ಪಾದ ಶಿಕ್ಷಕ !

ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು, ರಾಜ್ಯ ಸರ್ಕಾರಗಳ ಅಧಿಕಾರ ಮೊಟಕುಗೊಳಿಸುವ ಸಣ್ಣ ಅವಕಾಶವನ್ನೂ ಪ್ರಧಾನಿ ಮೋದಿ ನೇತೃತ್ವದ ಸರ್ಕಾರ ಬಿಡುತ್ತಿಲ್ಲ. ಎನ್‌ಡಿಎ ಸರ್ಕಾರದ ಕಣ್ಣು ಈಗ ರಾಜ್ಯದ ವಿಶ್ವವಿದ್ಯಾಲಯಗಳ ಮೇಲೆ ಬಿದ್ದಿದ್ದು, ಯುಜಿಸಿ ನೇಮಕಾತಿಗೆ ಸಂಬಂಧಿಸಿ ಬಿಡುಗಡೆ ಮಾಡಲಾದ ಕರಡು ನಿಯಮಾಳಿಗಳ ಬಗ್ಗೆ ನಾವು ಅಗತ್ಯ ಕ್ರಮ ಕೈಗೊಳ್ಳುತ್ತೇವೆ ಎಂದಿದ್ದರು. 

ಈಗಿರುವ ನಿಯಮಾವಳಿಗಳ ಪ್ರಕಾರ ಉಪಕುಲಪತಿಗಳ ನೇಮಕಾತಿಗೆ ರಾಜ್ಯ ಸರ್ಕಾರ ಶೋಧನಾ ಸಮಿತಿ ರಚಿಸುತ್ತಿತ್ತು. ಅದರಲ್ಲಿ ಕುಲಪತಿಗಳಾಗಿರುವ ರಾಜ್ಯಪಾಲರು ಶಿಫಾರಸು ಮಾಡುವ ವ್ಯಕ್ತಿಗಳು ಕೂಡಾ ಸದಸ್ಯರಾಗಿರುತ್ತಿದ್ದರು. ಹೊಸ ನಿಯಮಗಳ ಪ್ರಕಾರ ರಾಜ್ಯಪಾಲರು ಸೂಚಿಸುವ ವ್ಯಕ್ತಿಯೇ ಶೋಧನಾ ಸಮಿತಿ ಅಧ್ಯಕ್ಷರಾಗಿರುತ್ತಾರೆ. ಇದು ಕೇಂದ್ರ ಸರ್ಕಾರದಿಂದ ರಾಜ್ಯ ಸರ್ಕಾರದ ಮೇಲಿನ ನೇರ ಸವಾರಿಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು. 

PREV
click me!

Recommended Stories

SSLCಗೆ ಶೇ.33 ಪಾಸಿಂಗ್ ಮಾರ್ಕ್ಸ್ ಸಮರ್ಥಿಸಿ ಕೊಳ್ಳುತ್ತಲೇ ರಾಜ್ಯ ಪೊಲಿಟಿಕ್ಸ್ ಅಪ್ಟೇಡ್ ಕೊಟ್ಟ ಮಧು ಬಂಗಾರಪ್ಪ
ಖಾಸಗಿ ಶಾಲೆಗಳಿಗೆ ಸೆಡ್ಡು, ಮುಂದಿನ ವರ್ಷದಿಂದ ರಾಜ್ಯಾದ್ಯಂತ 700 ಕೆಪಿಎಸ್ ಶಾಲೆ ಕಾರ್ಯಾರಂಭ