ಕನ್ನಡ ಸೇರಿದಂತೆ ಪ್ರಾದೇಶಿಕ ಭಾಷೆಗಳಲ್ಲೂ ಉನ್ನತ ಶಿಕ್ಷಣದ ಪರೀಕ್ಷೆ ಬರೆಯಲು ಅವಕಾಶ ಲಭ್ಯವಾಗುವ ಸಮಯ ಸನ್ನಿಹಿತವಾಗಿದೆ. ಕೇಂದ್ರೀಯ ಸಶಸ್ತ್ರ ಪಡೆಗಳ ಪರೀಕ್ಷೆಗಳನ್ನು ಹಿಂದಿ, ಇಂಗ್ಲಿಷ್ ಹೊರತಾಗಿ 13 ಪ್ರಾದೇಶಿಕ ಭಾಷೆಗಳಲ್ಲಿ ಬರೆಯಲು ಅವಕಾಶ ಕಲ್ಪಿಸಿದ ಬೆನ್ನಲ್ಲೇ ಹಿಂದಿಯೇತರ ಭಾಷಿಕ ರಾಜ್ಯಗಳಾದ ಕರ್ನಾಟಕ, ತಮಿಳುನಾಡು ಸೇರಿದಂತೆ ದಕ್ಷಿಣದ ಪ್ರಾದೇಶಿಕ ಭಾಷಾವಾರು ರಾಜ್ಯಗಳಿಗೆ ಈ ಸಿಹಿ ಸುದ್ದಿ ನೀಡಲಾಗಿದೆ.
ನವದೆಹಲಿ(ಏ.20): ಇಂಗ್ಲಿಷ್ ಮಾಧ್ಯಮದಲ್ಲಿ ಬೋಧನೆ ಮಾಡುತ್ತಿದ್ದರೂ ವಿದ್ಯಾರ್ಥಿಗಳಿಗೆ ಸ್ಥಳೀಯ ಭಾಷೆಗಳಲ್ಲಿ ಪರೀಕ್ಷೆ ಬರೆಯಲು ಅವಕಾಶ ನೀಡಬೇಕು ಎಂಬ ಐತಿಹಾಸಿಕ ಸೂಚನೆಯನ್ನು ವಿಶ್ವವಿದ್ಯಾಲಯ ಧನಸಹಾಯ ಆಯೋಗ (ಯುಜಿಸಿ) ವಿಶ್ವವಿದ್ಯಾಲಯಗಳಿಗೆ ನೀಡಿದೆ. ಇದರಿಂದ ಕನ್ನಡ ಸೇರಿದಂತೆ ಪ್ರಾದೇಶಿಕ ಭಾಷೆಗಳಲ್ಲೂ ಉನ್ನತ ಶಿಕ್ಷಣದ ಪರೀಕ್ಷೆ ಬರೆಯಲು ಅವಕಾಶ ಲಭ್ಯವಾಗುವ ಸಮಯ ಸನ್ನಿಹಿತವಾಗಿದೆ. ಕೇಂದ್ರೀಯ ಸಶಸ್ತ್ರ ಪಡೆಗಳ ಪರೀಕ್ಷೆಗಳನ್ನು ಹಿಂದಿ, ಇಂಗ್ಲಿಷ್ ಹೊರತಾಗಿ 13 ಪ್ರಾದೇಶಿಕ ಭಾಷೆಗಳಲ್ಲಿ ಬರೆಯಲು ಅವಕಾಶ ಕಲ್ಪಿಸಿದ ಬೆನ್ನಲ್ಲೇ ಹಿಂದಿಯೇತರ ಭಾಷಿಕ ರಾಜ್ಯಗಳಾದ ಕರ್ನಾಟಕ, ತಮಿಳುನಾಡು ಸೇರಿದಂತೆ ದಕ್ಷಿಣದ ಪ್ರಾದೇಶಿಕ ಭಾಷಾವಾರು ರಾಜ್ಯಗಳಿಗೆ ಈ ಸಿಹಿ ಸುದ್ದಿ ನೀಡಲಾಗಿದೆ.
ಇದೇ ವೇಳೆ, ಕಲಿಕೆ ಹಾಗೂ ಬೋಧನೆಯಲ್ಲಿ ಸ್ಥಳೀಯ ಭಾಷೆಗಳಿಗೆ ಆದ್ಯತೆ ನೀಡಬೇಕು ಎಂದೂ ತಾಕೀತು ಮಾಡಿದೆ. ಮಾತೃಭಾಷೆಯಲ್ಲಿನ ಶಿಕ್ಷಣಕ್ಕೆ ಒತ್ತು ನೀಡುವ ನೂತನ ರಾಷ್ಟ್ರೀಯ ಶಿಕ್ಷಣ ನೀತಿ (ಎನ್‌ಇಪಿ) ಅನ್ವಯ ಈ ಸೂಚನೆಗಳನ್ನು ನೀಡಿರುವುದಾಗಿ ಅದು ಹೇಳಿದೆ. ಈ ಸಂಬಂಧ ಎಲ್ಲ ವಿವಿಗಳಿಗೆ ಯುಜಿಸಿ ಪತ್ರ ಬರೆದಿದೆ. ಇದೇ ವೇಳೆ, ‘ತರಾತುರಿಯಲ್ಲಿ ತಕ್ಷಣಕ್ಕೇ ಇದೆಲ್ಲ ಆಗದಿದ್ದರೂ ಹಂತ ಹಂತವಾಗಿ ಜಾರಿಗೆ ತರಬಹುದು’ ಎಂದು ಸ್ಪಷ್ಟಪಡಿಸಿದೆ.
ಈ ಬಗ್ಗೆ ಮಾತನಾಡಿದ ಯುಜಿಸಿ ಅಧ್ಯಕ್ಷ ಜಗದೀಶ್ ಕುಮಾರ್, ‘ಕೋರ್ಸು ಆಂಗ್ಲ ಮಾಧ್ಯಮದಲ್ಲಿ ಇದ್ದರೂ ಸ್ಥಳೀಯ ಭಾಷೆಗಳಲ್ಲಿ ಉತ್ತರ ಬರೆಯಲು ಅವಕಾಶ ನೀಡುವಂತೆ ವಿವಿಗಳಿಗೆ ತಿಳಿಸಲಾಗಿದೆ. ಈ ಕ್ರಮದಿಂದ ವಿದ್ಯಾರ್ಥಿಗಳು ಹೆಚ್ಚು ಪರಿಣಾಮಕಾರಿಯಾಗಿ ತಮಗೆ ಗೊತ್ತಿದ್ದ ಭಾಷೆಗಳಲ್ಲಿ ಸುಲಭವಾಗಿ ಉತ್ತರ ಬರೆಯಲು ಸಾಧ್ಯವಾಗುತ್ತದೆ. ಹಾಗೂ ವಿದ್ಯಾರ್ಥಿಗಳಲ್ಲಿನ ಪ್ರತಿಭೆ ಹೊರಬರಲು ಸಹಕಾರಿಯಾಗುತ್ತದೆ. ಪರೀಕ್ಷಾ ಫಲಿತಾಂಶ ಮತ್ತಷ್ಟುಉತ್ತಮಗೊಳ್ಳಲಿದೆ’ ಎಂದರು.
ಮನೆ ಮನೆ ತೆರಳಿ ಮಕ್ಕಳ ಶಾಲೆಗೆ ಕಳುಹಿಸುವಂತೆ ಪೋಷಕರ ಮನವೊಲಿಸಿದ ಪೊಲೀಸ್ ಅಧಿಕಾರಿ
‘ಪರೀಕ್ಷೆಯಲ್ಲಿ ಬರೆಯುವುದಕ್ಕೆ ಮಾತ್ರವಲ್ಲ. ಆಂಗ್ಲ ಮಾಧ್ಯಮದಲ್ಲಿ ಬೋಧನೆ ಮಾಡುವಾಗ ಬೋಧಕರು ಸ್ಥಳೀಯ ಭಾಷೆಯಲ್ಲಿಯೂ ಬೋಧನೆ ಮಾಡಬೇಕು. ಇದು ವಿದ್ಯಾರ್ಥಿಗಳಿಗೆ ವಿಷಯದಲ್ಲಿ ಹೆಚ್ಚು ಆಸಕ್ತಿ ಮೂಡಲು ಸಾಧ್ಯವಾಗುತ್ತದೆ. ಈ ಎಲ್ಲ ವಿಚಾರಗಳಿಗೆ ಸಂಬಂಧಿಸಿದಂತೆ ವಿವಿಗಳಿಗೆ ಸೂಚನೆ ನೀಡಲಾಗಿದೆ’ ಎಂದು ಹೇಳಿದರು.
ಈ ಬಗ್ಗೆ ಪತ್ರಕರ್ತರು ಜಗದೀಶ್ ಅವರಿಗೆ, ‘ಸ್ಥಳೀಯ ಭಾಷೆಯಲ್ಲಿ ಉತ್ತರ ಬರೆದರೆ ಮೌಲ್ಯಮಾಪನ ಹೇಗೆ ನಡೆಯಲಿದೆ?’ ಎಂದು ಪ್ರಶ್ನಿಸಿದಾಗ, ‘ಮೌಲ್ಯಮಾಪಕರು ಸಾಮಾನ್ಯವಾಗಿ ಇಂಗ್ಲಿಷ್ ಜತೆಗೆ ಸ್ಥಳೀಯ ಭಾಷೆಯಲ್ಲೂ ಪ್ರಬುದ್ಧತೆ ಹೊಂದಿರುತ್ತಾರೆ. ಅವರು ಸುಲಭವಾಗಿ ಮೌಲ್ಯಮಾಪನ ಮಾಡಬಹುದು. ಒಂದು ವೇಳೆ ಇಂಥ ಮೌಲ್ಯಮಾಪಕರ ಕೊರತೆ ಇದ್ದರೆ ಬಲ್ಲ ಮೌಲ್ಯಮಾಪಕರನ್ನು ವಿವಿಗಳು ನಿಯೋಜಿಸಬೇಕು’ ಎಂದು ಹೇಳಿದರು.
ಇದೇ ವೇಳೆ, ‘ಮಾತೃಭಾಷೆ/ಸ್ಥಳೀಯ ಭಾಷೆಗಳಲ್ಲಿ ಪಠ್ಯಪುಸ್ತಕಗಳನ್ನು ಬರೆಯುವುದು ಮತ್ತು ಇತರ ಭಾಷೆಗಳಿಂದ ಪ್ರಮಾಣಿತ ಪುಸ್ತಕಗಳನ್ನು ಭಾಷಾಂತರಿಸುವುದು ಸೇರಿದಂತೆ ಬೋಧನೆಯಲ್ಲಿ ಅವುಗಳ ಬಳಕೆಯನ್ನು ಉತ್ತೇಜಿಸುವಂತಹ ಕ್ರಮಗಳನ್ನೂ ಕೈಗೊಳ್ಳಲಾಗುವುದು’ ಎಂದು ಜಗದೀಶ್ ನುಡಿದರು.