ಬೆಂಗಳೂರು: ಶಿಕ್ಷಣ ಇಲಾಖೆ ಸುಪರ್ದಿಗೆ ಬಿಬಿಎಂಪಿ ಶಾಲೆಗಳು

By Kannadaprabha News  |  First Published Jul 27, 2023, 5:58 AM IST

ಶೈಕ್ಷಣಿಕ ಗುಣಮಟ್ಟ ಹೆಚ್ಚಿಸಲು ಶಿಕ್ಷಣ ಇಲಾಖೆ ನೆರವಿಗೆ ಚಿಂತನೆ, ಇಲಾಖೆಗೆ ಬಿಬಿಎಂಪಿಯಿಂದ ಪ್ರಸ್ತಾವನೆ ಸಲ್ಲಿಕೆ, ಶಿಕ್ಷಕರಿಗೆ ಐಐಎಸ್ಸಿ ಟ್ರೈನಿಂಗ್‌. 


ಗಿರೀಶ್‌ ಗರಗ

ಬೆಂಗಳೂರು(ಜು.27):  ವರ್ಷದಿಂದ ವರ್ಷಕ್ಕೆ ಶಾಲೆ, ಕಾಲೇಜುಗಳ ನಿರ್ವಹಣೆಗೆ ಬಿಬಿಎಂಪಿ ಹರ ಸಾಹಸ ಪಡುತ್ತಿದೆ. ಅದರಲ್ಲೂ ಶಾಲೆಗಳಲ್ಲಿ ಶಿಕ್ಷಕರ ಕೊರತೆ ಹೆಚ್ಚುತ್ತಿದ್ದು, ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಲು ಸಾಧ್ಯವಾಗುತ್ತಿಲ್ಲ ಎಂಬ ಮಾತುಗಳು ಕೇಳಿ ಬರುತ್ತಿದೆ. ಹೀಗಾಗಿ ಬಿಬಿಎಂಪಿ ಅಡಿಯಲ್ಲಿನ ಶಾಲೆಗಳನ್ನು ಶಿಕ್ಷಣ ಇಲಾಖೆಗೆ ವಹಿಸುವ ಕುರಿತಂತೆ ಬಿಬಿಎಂಪಿ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ನಡುವೆ ಚರ್ಚೆ ಆರಂಭವಾಗಿದೆ.

Tap to resize

Latest Videos

undefined

ಬಿಬಿಎಂಪಿ ಅಡಿಯಲ್ಲಿ 93 ನರ್ಸರಿ (ಶಿಶುವಿಹಾರ), 16 ಪ್ರಾಥಮಿಕ, 33 ಪ್ರೌಢ ಶಾಲೆ, 19 ಪದವಿ ಪೂರ್ವ ಕಾಲೇಜು, 4 ಪದವಿ ಕಾಲೇಜು ಹಾಗೂ 2 ಸ್ನಾತಕೋತ್ತರ ಕಾಲೇಜುಗಳಿವೆ. ಅವುಗಳಲ್ಲಿ ನರ್ಸರಿ ಹೊರತು ಪಡಿಸಿ ಉಳಿದ ಶಾಲೆ-ಕಾಲೇಜುಗಳಲ್ಲಿ ಶಿಕ್ಷಕರ, ಉಪನ್ಯಾಸಕರ ಕೊರತೆಯಿದೆ. ಸದ್ಯ ಗುತ್ತಿಗೆ ಆಧಾರದಲ್ಲಿ ಪಡೆಯಲಾಗಿರುವ ಶಿಕ್ಷಕರು ಹಾಗೂ ಉಪನ್ಯಾಸಕರು ಬೋಧಿಸುತ್ತಿದ್ದಾರೆ. ಇದರಿಂದಾಗಿ ಶಾಲೆ-ಕಾಲೇಜುಗಳಲ್ಲಿ ಸಮರ್ಪಕ, ಗುಣಮಟ್ಟದ ಶಿಕ್ಷಣ ಸಿಗುತ್ತಿಲ್ಲ ಎಂಬ ಮಾತುಗಳಿವೆ. ಹೀಗಾಗಿ ಬಿಬಿಎಂಪಿ ಅಡಿಯಲ್ಲಿನ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳನ್ನು ಶಿಕ್ಷಣ ಇಲಾಖೆ ವಶಕ್ಕೆ ನೀಡುವ ಕುರಿತು ಚಿಂತಿಸಲಾಗಿದ್ದು, ಈ ಕುರಿತು ಬಿಬಿಎಂಪಿಯಿಂದ ಪ್ರಸ್ತಾವನೆಯನ್ನೂ ಸಲ್ಲಿಸಲಾಗಿದೆ.

ಶಾಲಾ ಮಕ್ಕಳಿಗೆ ಸದ್ಯಕ್ಕಿಲ್ಲ ಶೂ, ಸಾಕ್ಸ್‌ ಧರಿಸುವ ಭಾಗ್ಯ..!

ಒಂದು ಸುತ್ತಿನ ಮಾತುಕತೆ

ಬಿಬಿಎಂಪಿ ನೀಡಿರುವ ಪ್ರಸ್ತಾವನೆಯಂತೆ ಶಿಕ್ಷಣ ಇಲಾಖೆಯು ಶಾಲೆಗಳಲ್ಲಿನ ಶೈಕ್ಷಣಿಕ ಗುಣಮಟ್ಟವನ್ನು ಹೆಚ್ಚಿಸಲು ಕ್ರಮ ಕೈಗೊಳ್ಳಬೇಕಿದೆ. ಉಳಿದಂತೆ ಶಾಲೆಗಳಿರುವ ಕಟ್ಟಡಗಳು ಬಿಬಿಎಂಪಿಯ ಸುಪರ್ದಿಯಲ್ಲೇ ಇರಲಿದ್ದು, ಮೂಲಸೌಕರ್ಯ ಒದಗಿಸುವುದು ಸೇರಿದಂತೆ ಇನ್ನಿತರ ಕ್ರಮಗಳು ಬಿಬಿಎಂಪಿಯಿಂದಲೇ ಮಾಡಲಾಗುತ್ತದೆ. ಈ ಕುರಿತಂತೆ ಬಿಬಿಎಂಪಿ ಶಿಕ್ಷಣ ವಿಭಾಗದ ಅಧಿಕಾರಿಗಳು ಶಿಕ್ಷಣ ಇಲಾಖೆ ಅಧಿಕಾರಿಗಳೊಂದಿಗೆ ಒಂದು ಸುತ್ತಿನ ಮಾತುಕತೆಯನ್ನೂ ನಡೆಸಿದ್ದಾರೆ. ಈ ವೇಳೆ ಬಿಬಿಎಂಪಿ ಶಾಲೆಗಳಲ್ಲಿ ಶಿಕ್ಷಣದ ಗುಣಮಟ್ಟದ ಬಗ್ಗೆಯಷ್ಟೇ ಚರ್ಚಿಸಲಾಗಿದೆ. ಈ ಬಗ್ಗೆ ಅಂತಿಮ ನಿರ್ಧಾರ ತೆಗೆದುಕೊಳ್ಳಲು ಹಾಗೂ ಶಿಕ್ಷಣ ಇಲಾಖೆಯಿಂದ ಯಾವ ರೀತಿಯಲ್ಲಿ ನೆರವು ಪಡೆಯಬೇಕು ಎಂಬುದ ಬಗ್ಗೆ ಮತ್ತೆ ಸಭೆ ನಡೆಸಲು ನಿರ್ಧರಿಸಲಾಗಿದೆ ಎಂದು ಬಿಬಿಎಂಪಿ ಶಿಕ್ಷಣ ವಿಭಾಗದ ಅಧಿಕಾರಿಗಳು ತಿಳಿಸಿದ್ದಾರೆ.

 

ಬಿಬಿಎಂಪಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ಹೆಚ್ಚಳಕ್ಕೆ ತಜ್ಞರಿಗೆ ಮೊರೆ

ಶೈಕ್ಷಣಿಕ ಮೂಲಸೌಕರ್ಯ ಕೊರತೆ

ಬಿಬಿಎಂಪಿಯ ಶಾಲೆಗಳಲ್ಲಿ ಸದ್ಯ 140 ಕಾಯಂ ಶಿಕ್ಷಕರಿದ್ದರೆ, 581 ಗುತ್ತಿಗೆ ಆಧಾರದಲ್ಲಿ ನೇಮಿಸಲಾದ ಅತಿಥಿ ಶಿಕ್ಷಕರಿದ್ದಾರೆ. ಹೀಗಾಗಿ ಎಲ್ಲ ಶಿಕ್ಷಕರನ್ನು ಕಾಯಂ ನೇಮಕ ಮಾಡಿಕೊಳ್ಳಲು ಬಿಬಿಎಂಪಿ ಚಿಂತನೆ ನಡೆಸಿದೆಯಾ ದರೂ, ಅದಕ್ಕೆ ಸರ್ಕಾರದ ಅಥವಾ ಶಿಕ್ಷಣ ಇಲಾಖೆಯ ನೆರವು ಬೇಕಿದೆ. ಅದರ ಜತೆಗೆ ಬಿಬಿಎಂಪಿಯ 33 ಪ್ರೌಢಶಾಲೆಗಳಲ್ಲಿ ವಿಜ್ಞಾನ ಪ್ರಯೋಗಾಲಯವಿದೆಯಾದರೂ ಅದರ ಬಳಕೆ ಸಮರ್ಪಕವಾಗಿ ಆಗುತ್ತಿಲ್ಲ. ಅದರ ಜತೆಗೆ ಗಣಿತ ಪ್ರಯೋಗಾಲಯವನ್ನೂ ಸ್ಥಾಪಿಸಬೇಕಿದೆ. ಹಾಗೆಯೇ, 33 ಶಾಲೆಗಳಲ್ಲಿ 9 ಶಾಲೆಗಳಲ್ಲಿ ಮಾತ್ರ ಸ್ಮಾರ್ಚ್‌ಕ್ಲಾಸ್‌ಗಳಿದ್ದು, ಅವುಗಳ ಬಳಕೆಯೂ ಆಗುತ್ತಿಲ್ಲ. ಹೀಗಾಗಿ ಶೈಕ್ಷಣಿಕ ಮೂಲ ಸೌಕರ್ಯ ಕೊರತೆಯನ್ನು ನೀಗಿಸುವ ಕುರಿತಂತೆಯೂ ಶಿಕ್ಷಣ ಇಲಾಖೆ ನೆರವು ಪಡೆಯುವ ಬಗ್ಗೆ ಬಿಬಿಎಂಪಿ ಚಿಂತನೆ ನಡೆಸಿದೆ.

ಐಐಎಸ್ಸಿ ನೆರವು ಪಡೆಯಲಿರುವ ಬಿಬಿಎಂಪಿ

ಈ ಎಲ್ಲದರ ನಡುವೆ ಬಿಬಿಎಂಪಿ ಶಾಲೆ ಶಿಕ್ಷಕರಿಗೆ ಐಐಎಸ್ಸಿ ಟೀಚ​ರ್‍ಸ್ ಡೆವೆಲಪ್‌ಮೆಂಟ್‌ ಸೆಂಟರ್‌ ಮೂಲಕ ತರಬೇತಿ ಕೊಡಿಸಲೂ ನಿರ್ಧರಿಸಲಾಗಿದೆ. ಅದಕ್ಕಾಗಿ ಬಿಬಿಎಂಪಿ ಶಿಕ್ಷಣ ವಿಭಾಗದಿಂದ ಐಐಎಸ್ಸಿ ಟೀಚ​ರ್‍ಸ್ ಡೆವೆಲಪ್‌ಮೆಂಟ್‌ ಸೆಂಟರ್‌ನ ಸಂಚಾಲಕ ಪ್ರೊ. ಡಿ.ಎನ್‌.ರಾವ್‌ ಅವರಿಗೆ ಪತ್ರ ಬರೆಯಲಾಗಿದೆ. ಅದರಲ್ಲಿ 33 ಪ್ರೌಢಶಾಲೆಯ ಭೌತಶಾಸ್ತ್ರ, ರಸಾಯನಶಾಸ್ತ್ರ ಮತ್ತು ಗಣಿತ ಪಾಠ ಮಾಡುವ 66 ಶಿಕ್ಷಕರು ಹಾಗೂ 31 ಜೀವಶಾಸ್ತ್ರ ಶಿಕ್ಷಕರಿಗೆ ತರಬೇತಿ ಕೊಡುವಂತೆ ಕೋರಲಾಗಿದೆ. ಬೆಂಗಳೂರಿನ ಐಐಎಸ್ಸಿ ಕ್ಯಾಂಪಸ್‌ನಲ್ಲಿ ತರಬೇತಿ ಆಯೋಜನೆಗೆ ಕೋರಲಾಗಿದ್ದು, ಅದಕ್ಕೆ ಬದಲಾಗಿ ಬಿಬಿಎಂಪಿಯಿಂದ ಐಐಎಸ್ಸಿ ನಿಗದಿ ಮಾಡುವ ಶುಲ್ಕ ಪಾವತಿಸಲಾಗುತ್ತದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

click me!