ವರದಿ : ಲಿಂಗರಾಜು ಕೋರಾ
ಬೆಂಗಳೂರು (ಆ.15): ಪ್ರಸಕ್ತ ಸಾಲಿನ ಶಾಲಾ ದಾಖಲಾತಿ ಪ್ರಕ್ರಿಯೆ ಆರಂಭವಾಗಿ ಒಂದೂವರೆ ತಿಂಗಳಾದರೂ ರಾಜಧಾನಿ ಬೆಂಗಳೂರಿನಲ್ಲಿ ಶೇ.25ರಿಂದ 28ರಷ್ಟುಮಕ್ಕಳು ಇನ್ನೂ ಕೂಡ ಸರ್ಕಾರಿ, ಅನುದಾನಿತ ಹಾಗೂ ಅನುದಾನ ರಹಿತ ಈ ಯಾವುದೇ ಮಾದರಿಯ ಶಾಲೆಗೆ ದಾಖಲಾತಿಯನ್ನೇ ಪಡೆದಿಲ್ಲ.
ರಾಜ್ಯದಲ್ಲಿ ಒಟ್ಟಾರೆ ಈ ಬಾರಿ ಶಿಕ್ಷಣ ಇಲಾಖೆ ನಿರೀಕ್ಷಿಸಿದ್ದರಲ್ಲಿ ಶೇ.92ರಷ್ಟುಮಕ್ಕಳು ಈವರೆಗೆ ದಾಖಲಾತಿ ಪಡೆದಿದ್ದಾರೆ. ಇನ್ನೂ ಶೇ.8ರಷ್ಟುಮಕ್ಕಳು ದಾಖಲಾಗಬೇಕಿದೆ. ಇಲಾಖೆಯಡಿ ಬರುವ 34 ಶೈಕ್ಷಣಿಕ ಜಿಲ್ಲಾವಾರು ದಾಖಲಾತಿಯನ್ನು ಗಮಿಸಿದಾಗ ಶಿರಸಿ, ಚಿತ್ರದುರ್ಗ, ಕಾರವಾರ ಮತ್ತು ದಕ್ಷಿಣ ಕನ್ನಡ ಶೈಕ್ಷಣಿಕ ಜಿಲ್ಲೆಗಳಲ್ಲಿ ದಾಖಲಾತಿ ಪ್ರಮಾಣ ಶೇ.98ರಷ್ಟುಗುರಿ ತಲುಪಿ ಟಾಪ್ ಸ್ಥಾನದಲ್ಲಿವೆ. ಬೆಂಗಳೂರು ಉತ್ತರ ಮತ್ತು ದಕ್ಷಿಣ ಶೈಕ್ಷಣಿಕ ಜಿಲ್ಲೆಗಳು ಕ್ರಮವಾಗಿ ಶೇ.74 ಮತ್ತು 72ರಷ್ಟುಮಕ್ಕಳ ದಾಖಲಾತಿಯೊಂದಿಗೆ ಕೊನೆ ಸ್ಥಾನದಲ್ಲಿವೆ. ಅಂದರೆ ಇನ್ನೂ ಕಾಲುಭಾಗದಷ್ಟುಮಕ್ಕಳು ದಾಖಲಾತಿ ಪಡೆದಿಲ್ಲ. ಉಳಿದ ಜಿಲ್ಲೆಗಳಲ್ಲಿ ಶೇ.92ರಿಂದ 97ರಷ್ಟುಮಕ್ಕಳು ಈಗಾಗಲೇ ದಾಖಲಾಗಿದ್ದಾರೆ.
ಪಿಯು ಪ್ರವೇಶಕ್ಕೆ ಆಗಸ್ಟ್ 28 ಕೊನೆಯ ದಿನ
ಅದರಲ್ಲೂ ನಗರದ ಸರ್ಕಾರಿ ಮತ್ತು ಅನುದಾನಿತ ಶಾಲೆಗಳಿಗಿಂತ ಅನುದಾನ ರಹಿತ ಖಾಸಗಿ ಶಾಲೆಗಳಲ್ಲೇ ದಾಖಲಾತಿ ಪ್ರಮಾಣ ತೀವ್ರ ಕಡಿಮೆಯಾಗಿದೆ. ಸರ್ಕಾರಿ ಶಾಲೆಗಳಿಗೆ ಶೇ.91ರಿಂದ 93ರಷ್ಟುಮಕ್ಕಳು, ಅನುದಾನಿತ ಶಾಲೆಗಳಿಗೆ ಶೇ.93ರಿಂದ 96ರಷ್ಟುಮಕ್ಕಳು ದಾಖಲಾತಿ ಪಡೆದಿದ್ದು, ಶೇ.4ರಿಂದ 9ರಷ್ಟುಮಕ್ಕಳು ಇನ್ನೂ ದಾಖಲಾಗಬೇಕಿದೆ. ಅನುದಾನ ರಹಿತ ಶಾಲೆಗಳಿಗೆ ಶೇ.68ರಿಂದ 70ರಷ್ಟುಮಕ್ಕಳು ಮಾತ್ರ ದಾಖಲಾತಿ ಪಡೆದಿದ್ದು, ಶೇ.30ರಿಂದ 32ರಷ್ಟುಮಕ್ಕಳು ದಾಖಲಾಗಿಲ್ಲ.
2021-22ನೇ ಸಾಲಿನ ಶಾಲಾ ಪ್ರವೇಶ ಪ್ರಕ್ರಿಯೆ ಜು.1ರಿಂದಲೇ ಆರಂಭವಾಗಿದೆ. ಭೌತಿಕ ತರಗತಿ ನಡೆಯದಿದ್ದರೂ ಜುಲೈ 15ರಿಂದ ಆನ್‌ಲೈನ್ ಶಿಕ್ಷಣ ಸೇರಿದಂತೆ ಪರ್ಯಾಯ ಮಾರ್ಗಗಳ ಮೂಲಕ ಶೈಕ್ಷಣಿಕ ಚಟುವಟಿಕೆಗಳನ್ನು ಶಾಲೆಗಳು ನಡೆಸುತ್ತಿವೆ. ಇದಾಗಿ ತಿಂಗಳಾದರೂ ನಗರದ ಕಾಲು ಭಾಗದಷ್ಟುಮಕ್ಕಳು ಶಾಲೆಗೆ ದಾಖಲಾಗದೆ ಎಲ್ಲಿಗೆ ಹೋಗಿದ್ದಾರೆ, ಏನು ಮಾಡುತ್ತಿದ್ದಾರೆ, ಕೋವಿಡ್ ಹಿನ್ನೆಲೆಯಲ್ಲಿ ನಗರ ಬಿಟ್ಟು ಗ್ರಾಮೀಣ ಭಾಗದ ತಮ್ಮ ಊರುಗಳಿಗೆ ವಲಸೆ ಹೋಗಿದ್ದಾರಾ? ಇಲ್ಲವೇ ಆರ್ಥಿಕ ಸಂಕಷ್ಟದಿಂದ ಪೋಷಕರು ಮಕ್ಕಳನ್ನು ಶಾಲೆಗೆ ಸೇರಿಸಿಲ್ಲವಾ? ಅಥವಾ ಕೋವಿಡ್ ಮೂರನೇ ಅಲೆ ಆತಂಕದಿಂದ ಇನ್ನೂ ಕಾದು ನೋಡುವ ಪ್ರಯತ್ನದಲ್ಲಿದ್ದಾರಾ ಎಂಬ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಲು ಶಿಕ್ಷಣ ಇಲಾಖೆ ಪ್ರಯತ್ನಿಸುತ್ತಿದೆ.
ಆ. 23 ರಿಂದ ಶಾಲೆ ಆರಂಭ: ಗಡಿಭಾಗದ ಜಿಲ್ಲೆಗಳಲ್ಲಿ ಮುಂಜಾಗ್ರತಾ ಕ್ರಮಗಳು ಹೀಗಿವೆ
ಇಲಾಖೆಯ ಅಧಿಕಾರಿಗಳು ಹೇಳುವ ಪ್ರಕಾರ, ಇದುವರೆಗೆ ದಾಖಲಾತಿ ಪಡೆಯದ ಮಕ್ಕಳಲ್ಲಿ ಹೆಚ್ಚಿನ ಪಾಲು ಖಾಸಗಿ ಶಾಲಾ ಮಕ್ಕಳು. ಅದರಲ್ಲಿ ಸಾಕಷ್ಟುಮಕ್ಕಳ ಪೋಷಕರು ಶಾಲೆಗಳಿಗೆ ಶುಲ್ಕ ಪಾವತಿಸಿಲ್ಲ. ಕೆಲವರು ಭಾಗಶಃ ಶುಲ್ಕ ಬಾಕಿ ಉಳಿಸಿಕೊಂಡಿದ್ದರೆ, ಬಹಳಷ್ಟುಜನ ಸ್ವಲ್ಪವೂ ಶುಲ್ಕ ಪಾವತಿಸದೆ ಕೋರ್ಟ್‌ನಲ್ಲಿರುವ ಶುಲ್ಕ ವಿವಾದ ಪ್ರಕರಣ ಏನಾಗಬಹುದು ಎಂದು ಕಾದು ನೋಡುತ್ತಿರಬಹುದು. ಹಾಗಾಗಿ ಖಾಸಗಿ ಶಾಲೆಗಳು ಅಂತಹ ಮಕ್ಕಳ ದಾಖಲಾತಿಯನ್ನು ಇಲಾಖೆಯ ವೆಬ್‌ಸೈಟ್‌ನಲ್ಲಿ ದಾಖಲಿಸದೆ ಇರಬಹುದು. ಲಾಕ್‌ಡೌನ್ ಅವಧಿಯಲ್ಲಿ ಕೆಲ ಕುಟುಂಬಗಳು ನಗರವನ್ನು ತೊರೆದಿದ್ದರಿಂದ ಅವರು ಮಕ್ಕಳನ್ನು ಕೂಡ ತಮ್ಮ ಊರುಗಳಿಗೆ ಕರೆದೊಯ್ದಿದ್ದಾರೆ. ಈ ಎಲ್ಲಾ ಕಾರಣಗಳಿಂದ ನಗರದ ಶಾಲೆಗಳಲ್ಲಿ ದಾಖಲಾತಿ ಕಡಿಮೆಯಾಗಿರಬಹುದು ಎಂದು ಊಹಿಸಲಾಗಿದೆ. ಆದರೆ, ನೈಜ ಕಾರಣ ಆ.31ರ ವೇಳೆಗೆ ಎಷ್ಟುಮಕ್ಕಳು ದಾಖಲಾಗುತ್ತಾರೆ ಎಂಬುದನ್ನು ನೋಡಿಕೊಂಡು ಶಾಲೆಯಿಂದ ಹೊರಗುಳಿದ ಮಕ್ಕಳ ಸಮೀಕ್ಷೆ ನಡೆಸಿದಾಗದಷ್ಟೇ ತಿಳಿದು ಬರುತ್ತದೆ ಎನ್ನುತ್ತಾರೆ ಅಧಿಕಾರಿಗಳು.
ಇದುವರೆಗಿನ ಶಾಲಾ ದಾಖಲಾತಿಯಲ್ಲಿ ರಾಜ್ಯದ ಇತರೆಡೆಗಿಂತ ಬೆಂಗಳೂರಿನ ಶಾಲೆಗಳಲ್ಲಿ ದಾಖಲಾತಿ ಪ್ರಮಾಣ ಕಡಿಮೆ ಇದೆ. ಖಾಸಗಿ ಶಾಲೆಗಳಲ್ಲೇ ಹೆಚ್ಚು ದಾಖಲಾತಿ ಪ್ರಮಾಣ ಕಡಿಮೆ ಇರುವುದರಿಂದ ಆ ಶಾಲೆಗಳು ಸ್ಟೂಡೆಂಟ್ಸ್ ಅಚೀವ್ಮೆಂಟ್ ಟ್ರ್ಯಾಕಿಂಗ್ ಸಿಸ್ಟಮ್ (ಎಸ್‌ಎಎಸ್‌ಟಿ) ವೆಬ್‌ಪೋರ್ಟಲ್‌ನಲ್ಲಿ ಪೂರ್ಣ ಮಾಹಿತಿ ನೀಡದಿರಬಹುದು. ಮಾಹಿತಿ ದಾಖಲಿಸಲು ಆ.31ರವರೆಗೆ ಕಾಲಾವಕಾಶವಿದೆ. ಜತೆಗೆ ದಾಖಲಾತಿ ಪಡೆಯದ ಮಕ್ಕಳನ್ನು ಟ್ರ್ಯಾಕ್ ಮಾಡಲು ಡಿಡಿಪಿಐ, ಬಿಇಒಗಳಿಗೆ ಸೂಚಿಸಲಾಗಿದೆ.
- ವಿ.ಅನ್ಬುಕುಮಾರ್, ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತ