* 2.75 ಲಕ್ಷ ವಿದ್ಯಾರ್ಥಿಗಳ ಪೈಕಿ 16 ಸಾವಿರ ವಿದ್ಯಾರ್ಥಿಗಳಲ್ಲಿ ಡಿಜಿಟಲ್ ಸಾಮಗ್ರಿಗಳಿಲ್ಲ
* ಸ್ಮಾರ್ಟ್ ಫೋನ್, ಟಿವಿ, ಟ್ಯಾಬ್, ಲ್ಯಾಪ್‌ಟಾಪ್, ರೇಡಿಯೋ ಇಲ್ಲದ ವಿದ್ಯಾರ್ಥಿಗಳಿಗೆ ಕಲಿಕಾ ಸಮಸ್ಯೆ
* ವಿದ್ಯಾರ್ಥಿಗಳ ನಡುವೆ ಕಲಿಕಾ ಕಂದಕ ನಿರ್ಮಾಣವಾಗುವ ಸಾಧ್ಯತೆ
ನಾರಾಯಣ ಹೆಗಡ
ಹಾವೇರಿ(ಜು.15): ಕೊರೋನಾ ಆತಂಕದ ಕಾರಣದಿಂದ ಸದ್ಯಕ್ಕೆ ಆನ್‌ಲೈನ್ ಶಿಕ್ಷಣ ಅನಿವಾರ್ಯ ಎನಿಸಿದೆ. ಆದರೆ, ಜಿಲ್ಲೆಯಲ್ಲಿ ಇನ್ನೂ ಡಿಜಿಟಲ್ ಸಂವಹನದ ಸಾಧನವಿಲ್ಲದ 1ರಿಂದ 10ನೇ ತರಗತಿ ವರೆಗಿನ 16 ಸಾವಿರ ವಿದ್ಯಾರ್ಥಿಗಳಿದ್ದು, ಇವರು ಕಲಿಕೆ ಮುಂದುವರಿಸಲು ಸಾಧ್ಯವಿಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ.
undefined
ಕಳೆದ ಒಂದು ವರ್ಷದಿಂದ ಕೊರೋನಾ ಹಿನ್ನೆಲೆಯಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಾಲಾ ಹಂತದ ವಿದ್ಯಾರ್ಥಿಗಳಿಗೆ ಭೌತಿಕ ತರಗತಿ ನಡೆಸಲಾಗದೆ ಶೈಕ್ಷಣಿಕ ಚಟುವಟಿಕೆ ನಡೆಸಲು ತೊಂದರೆಯಾಗಿದೆ. ಆದ್ದರಿಂದ ಮಕ್ಕಳಲ್ಲಿ ಕಲಿಕೆ ನಿರಂತರತೆ ಇರುವಂತೆ ಮಾಡಲು ಪ್ರಸ್ತುತದಲ್ಲಿ ಅನಿವಾರ್ಯ ಎನಿಸಿದೆ. ಆದರೆ, ಗ್ರಾಮೀಣ ಬಡ ವಿದ್ಯಾರ್ಥಿಗಳ ಪಾಲಿಗೆ ಆನ್‌ಲೈನ್ ಶಿಕ್ಷಣ ಮರೀಚಿಕೆಯಾಗಿದೆ. ಅನೇಕ ವಿದ್ಯಾರ್ಥಿಗಳ ಮನೆಯಲ್ಲಿ ಡಿಜಿಟಲ್ ಸಾಧನಗಳಿಲ್ಲದ್ದರಿಂದ ಆನ್‌ಲೈನ್ ಪಾಠ ಕೇಳಲು ಸಾಧ್ಯವಾಗುತ್ತಿಲ್ಲ. ಇದರಿಂದ ವಿದ್ಯಾರ್ಥಿಗಳ ನಡುವೆ ಕಲಿಕಾ ಕಂದಕ ನಿರ್ಮಾಣವಾಗುವ ಸಾಧ್ಯತೆಯಿದೆ.
16 ಸಾವಿರ ಮಕ್ಕಳು ವಂಚಿತ:
ಜಿಲ್ಲೆಯಲ್ಲಿ 1ರಿಂದ 8ನೇ ತರಗತಿ ವರೆಗೆ 2,14,435 ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದಾರೆ. ಇವರ ಪೈಕಿ 1,46,139 ವಿದ್ಯಾರ್ಥಿಗಳಲ್ಲಿ ಸ್ಮಾರ್ಟ್ ಫೋನ್‌ಗಳಿವೆ. 4250 ವಿದ್ಯಾರ್ಥಿಗಳು ಕಂಪ್ಯೂಟರ್, ಲ್ಯಾಪ್‌ಟಾಪ್‌ಗಳನ್ನು ಹೊಂದಿದ್ದಾರೆ. 1694 ವಿದ್ಯಾರ್ಥಿಗಳಿಗೆ ಟ್ಯಾಬ್ ಸೌಲಭ್ಯವಿದೆ. 1,73,320 ವಿದ್ಯಾರ್ಥಿಗಳ ಮನೆಯಲ್ಲಿ ಟಿವಿ ಸೌಲಭ್ಯವಿದೆ. 7311 ವಿದ್ಯಾರ್ಥಿಗಳ ಮನೆಯಲ್ಲಿ ರೇಡಿಯೋ ಮಾತ್ರ ಇದೆ. ಈ ರೀತಿಯ ಯಾವುದೇ ಡಿಜಿಟಲ್ ಸಾಧನಗಳನ್ನು ಹೊಂದಿರದ 12,734 ವಿದ್ಯಾರ್ಥಿಗಳಿದ್ದಾರೆ.
ಹಳ್ಳಿ ಮಕ್ಕಳ ಇಂಟರ್ನೆಟ್ ಸಮಸ್ಯೆಗೆ ಶೀಘ್ರ ಪರಿಹಾರ
ಇನ್ನು 8ರಿಂದ 10ನೇ ತರಗತಿ ವರೆಗೆ 59,607 ವಿದ್ಯಾರ್ಥಿಗಳು ಓದುತ್ತಿದ್ದು, ಅವರ ಪೈಕಿ 45,822 ವಿದ್ಯಾರ್ಥಿಗಳ ಮನೆಯಲ್ಲಿ ಸ್ಮಾರ್ಟ್ ಫೋನ್‌ಗಳಿವೆ. 3489 ವಿದ್ಯಾರ್ಥಿಗಳು ಕಂಪ್ಯೂಟರ್, ಲ್ಯಾಪ್‌ಟಾಪ್ ಸೌಲಭ್ಯ ಹೊಂದಿದ್ದಾರೆ. 1950 ವಿದ್ಯಾರ್ಥಿಗಳಲ್ಲಿ ಟ್ಯಾಬ್ ಇದೆ. 49,655 ವಿದ್ಯಾರ್ಥಿಗಳ ಮನೆಯಲ್ಲಿ ಟಿವಿ ಇದ್ದು, 3369 ವಿದ್ಯಾರ್ಥಿಗಳ ಮನೆಯಲ್ಲಿ ರೇಡಿಯೋ ಇದೆ. ಇನ್ನೂ 3087 ವಿದ್ಯಾರ್ಥಿಗಳಲ್ಲಿ ಈ ಯಾವ ಸೌಲಭ್ಯವೂ ಇಲ್ಲ. 1ರಿಂದ 10ನೇ ತರಗತಿ ವರೆಗಿನ ಒಟ್ಟು 15,521 ವಿದ್ಯಾರ್ಥಿಗಳಿಗೆ ಆನ್‌ಲೈನ್ ಶಿಕ್ಷಣಕ್ಕೆ ಅಗತ್ಯವಿರುವ ಯಾವುದೇ ಸೌಲಭ್ಯ ಹೊಂದಿಲ್ಲ. ಸಾರ್ವಜನಿಕ ಶಿಕ್ಷಣ ಇಲಾಖೆ ನಡೆಸಿದ ಸಮೀಕ್ಷೆಯಿಂದ ಈ ಅಂಕಿ-ಸಂಖ್ಯೆ ತಿಳಿದುಬಂದಿದೆ. ತೀರಾ ಕಡು ಬಡ ಕುಟುಂಬಗಳ ವಿದ್ಯಾರ್ಥಿಗಳು ಕೊರೋನಾದಿಂದ ಶಿಕ್ಷಣದಿಂದಲೇ ವಂಚಿತರಾಗುವ ಅಪಾಯ ಎದುರಾಗಿದೆ.
ಸರ್ಕಾರಿ ಶಾಲೆ ಮಕ್ಕಳಿಗೆ ಸಮಸ್ಯೆ
ಖಾಸಗಿ ಶಾಲೆಗಳಿಗೆ ಮಕ್ಕಳನ್ನು ಸೇರಿಸುವ ಪಾಲಕರು ಆನ್‌ಲೈನ್ ಶಿಕ್ಷಣಕ್ಕೆ ಅಗತ್ಯ ಸಾಧನಗಳನ್ನು ಹೊಂದುವ ಸಾಮರ್ಥ್ಯ ಹೊಂದಿದ್ದಾರೆ. ಆದರೆ, ಗ್ರಾಮೀಣ ಭಾಗದಲ್ಲಿ ಸರ್ಕಾರಿ ಶಾಲೆಗಳಿಗೆ ಮಕ್ಕಳನ್ನು ಕಳುಹಿಸುವ ಪಾಲಕರಲ್ಲಿ ಅನೇಕರು ಫೋನ್ ಸೌಲಭ್ಯವನ್ನೂ ಹೊಂದಿಲ್ಲ. 1ರಿಂದ 10ನೇ ತರಗತಿ ವರೆಗೆ 2.75 ಲಕ್ಷ ವಿದ್ಯಾರ್ಥಿಗಳು ಓದುತ್ತಿದ್ದಾರೆ. ಇವರಲ್ಲಿ ಕಂಪ್ಯೂಟರ್, ಲ್ಯಾಪ್‌ಟಾಪ್, ಸ್ಮಾರ್ಟ್ ಫೋನ್ ಇದ್ದವರ ಸಂಖ್ಯೆ 2.06 ಲಕ್ಷ ಮಾತ್ರ. ಇನ್ನುಳಿದ ಸುಮಾರು 70 ಸಾವಿರ ವಿದ್ಯಾರ್ಥಿಗಳಲ್ಲಿ 55 ಸಾವಿರ ಕುಟುಂಬಗಳಲ್ಲಿ ರೇಡಿಯೋ, ಟೀವಿ ಇವೆ. ಆದರೆ, ಇದರಿಂದ ಸಮರ್ಪಕವಾಗಿ ಆನ್‌ಲೈನ್ ಶಿಕ್ಷಣ ಸಾಧ್ಯವಿಲ್ಲ. ಇವುಗಳಲ್ಲಿ ಆ್ಯಪ್ ಮೂಲಕ ನೇರ ಸಂವಾದ ಸಾಧ್ಯವಾಗುವುದಿಲ್ಲ. ಅಂದರೆ ಸುಮಾರು 70 ಸಾವಿರ ವಿದ್ಯಾರ್ಥಿಗಳಿಗೆ ಆನ್‌ಲೈನ್ ಶಿಕ್ಷಣಕ್ಕೆ ಸಮಸ್ಯೆಯಾಗಿದೆ.
ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳೇ ಹೆಚ್ಚಿನ ಸಂಖ್ಯೆಯಲ್ಲಿ ಆನ್‌ಲೈನ್ ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಜೂಮ್, ಗೂಗಲ್ ಇತ್ಯಾದಿ ಆ್ಯಪ್ ಮೂಲಕ ತರಗತಿ ನಡೆಸಿದರೆ 70 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಅವು ತಲುಪುವ ಸಾಧನಗಳಿಲ್ಲ. ಕೊರೋನಾ ಮೂರನೇ ಅಲೆ ಬರುವ ಸಾಧ್ಯತೆ ಬಗ್ಗೆಯೂ ಹೇಳಲಾಗುತ್ತಿದೆ. ಆದ್ದರಿಂದ ಭೌತಿಕ ತರಗತಿ ಯಾವಾಗ ಆರಂಭವಾಗುತ್ತದೆ ಎಂಬುದು ಗೊತ್ತಿಲ್ಲ. ಸದ್ಯಕ್ಕೆ ಆನ್‌ಲೈನ್ ಶಿಕ್ಷಣ ಅನಿವಾರ್ಯ ಎನಿಸಿದರೂ ಇದರಿಂದ ಹತ್ತಾರು ಸಾವಿರ ವಿದ್ಯಾರ್ಥಿಗಳು ವಂಚಿತರಾಗಲಿದ್ದಾರೆ.
ಯಾವೊಬ್ಬ ಮಗುವೂ ಶಿಕ್ಷಣದಿಂದ ವಂಚಿತರಾಗಬಾರದು. ಕೊರೋನಾದಿಂದ ಭೌತಿಕ ತರಗತಿಗಳು ಆರಂಭವಾಗಿಲ್ಲ. ಆದ್ದರಿಂದ ಆನ್‌ಲೈನ್ ಶಿಕ್ಷಣಕ್ಕೆ ಗಮನ ನೀಡಲಾಗಿದೆ. ಶಿಕ್ಷಕರು ಪ್ರತಿ ವಿದ್ಯಾರ್ಥಿಯ ಕಲಿಕೆಗೆ ಗಮನ ನೀಡುತ್ತಿದ್ದಾರೆ. ಅಲ್ಲದೇ ಇದಕ್ಕೆ ಸಮುದಾಯವೂ ಕೈಜೋಡಿಸುತ್ತಿದೆ. ಅನೇಕ ಸಂಘ ಸಂಸ್ಥೆಗಳು, ದಾನಿಗಳ ನೆರವಿನಿಂದ ಆನ್‌ಲೈನ್ ಶಿಕ್ಷಣಕ್ಕೆ ಅನುಕೂಲ ಮಾಡಿಕೊಡಲು ಪ್ರಯತ್ನ ನಡೆಸಲಾಗಿದೆ ಎಂದು ಜಿಪಂ ಸಿಇಒ ಮಹಮ್ಮದ್ ರೋಷನ್ ತಿಳಿಸಿದ್ದಾರೆ.