ಸಣ್ಣ ಕೀಟ ಸೊಳ್ಳೆಗೆ ಜನರು ಹೆದರುತ್ತಾರೆ. ಅಕಸ್ಮಾತ್ ಕಚ್ಚಿದರೆ ಎಲ್ಲಿ, ಯಾವ ರೋಗ ತಗಲುವುದೋ ಎಂಬ ಭಯ. ಹಗಲು ಕಚ್ಚುವ ಸೊಳ್ಳೆ, ರಾತ್ರಿ ಕಚ್ಚುವ ಸೊಳ್ಳೆ ಎಂಬ ಭಯ ಬೇರೆ. ಅಷ್ಟಕ್ಕೂ ಡೆಂಗ್ಯೂ ಸೊಳ್ಳೆ ಹಗಲು ಮಾತ್ರ ಕಚ್ಚುತ್ತಾ?
ಸೊಳ್ಳೆ ಕಚ್ಚಿದರೆ ನಿರ್ಲಕ್ಷಿಸುವವರೇ ಹೆಚ್ಚು. ಯಾರೂ ಸೊಳ್ಳೆಯನ್ನು ಗಂಭೀರವಾಗಿ ಪರಿಗಣಿಸುವುದೇ ಇಲ್ಲ. ಆದರೆ, ಒಂದು ಸೊಳ್ಳೆ ಕಡಿದರೂ ಜೀವವನ್ನೇ ಬಲಿ ತೆಗೆದುಕೊಳ್ಳಬಹುದು.
ಪ್ರಭೇದಕ್ಕೆ ಅನುಗುಣವಾಗಿ ಸೊಳ್ಳೆ ಚಟುವಟಿಕೆಗಳು ಅವಲಂಬಿತವಾಗಿರುತ್ತವೆ. ಕೆಲವು ಸೊಳ್ಳೆಗಳು ಹಗಲಲ್ಲಿ ಆ್ಯಕ್ಟಿವ್ ಆಗಿದ್ದರೆ, ಮತ್ತೆ ಕೆಲವು ರಾತ್ರಿ ಹೊತ್ತಲ್ಲಿ ಚಟುವಟಿಕೆಯಿಂದ ಇರುತ್ತವೆ. ಏಡಸ್ ಸೊಳ್ಳೆ ಹಗಲಲ್ಲಿ ಹೆಚ್ಚು ಸಕ್ರಿಯವಾಗಿದ್ದು, ಮನುಷ್ಯನನ್ನು ಹೆಚ್ಚು ಕಡಿಯುತ್ತದೆ. ಅದರಲ್ಲಿಯೂ ಬೆಳಗ್ಗೆ ಹಾಗೂ ಮಧ್ಯಾಹ್ನ ಇವು ಸಿಕ್ಕಾಪಟ್ಟೆ ಸಕ್ರಿಯವಾಗಿರುತ್ತವೆ.
ಸೊಳ್ಳೆಯಿಂದ ಕಾಡೋ ಡೆಂಗ್ಯೂ: ಸತ್ಯ, ಮಿಥ್ಯಗಳೇನು?
ದೇಶಾದ್ಯಂತ ಹಲವರನ್ನು ಆಶ್ಪತ್ರೆಗೆ ಸೇರುವಂತೆ ಮಾಡುವ ಹಾಗೂ ಅನೇಕರ ಸಾವಿಗೂ ಕಾರಣವಾಗುವಂಥ ರೋಗ ತರುತ್ತಿರುವುದು ಇದೇ ಏಡಿಸ್ ಸೊಳ್ಳೆ. ಡೆಂಗ್ಯೂ ಹರಡಲು ಏಡಿಸ್ ಏಜೆಪ್ಟಿ ಎಂಬ ಸೊಳ್ಳೆಯೇ ಕಾರಣ. ರೋಗಿಗೆ ಕಚ್ಚಿದ ಸೊಳ್ಳೆ ಆರೋಗ್ಯವಂತ ಮನುಷ್ಯನಿಗೆ ಕಡಿದರೆ ಡೆಂಗ್ಯೂ ಬರುವುದು ಗ್ಯಾರಂಟಿ.
ಪ್ರಾಥಮಿಕ ಅಧ್ಯಯನದ ಪ್ರಕಾರ ಈ ಏಡಿಸ್ ಏಜೆಪ್ಟಿ ಸೊಳ್ಳೆ ಹಗಲಲ್ಲಿ ಕಚ್ಚುವುದೇ ಹೆಚ್ಚು. ಸೂರ್ಯೋದಯದ ಎರಡು ಗಂಟೆಗಳ ನಂತರ ಹಾಗೂ ಸೂರ್ಯಾಸ್ತಮಾನಕ್ಕೂ ಕೆಲವು ಗಂಟೆಗಳ ಮುನ್ನ ಈ ಸೊಳ್ಳೆಗಳು ಸಕ್ರಿಯವಾಗುತ್ತವೆ. ಹಾಗಂಥ ರಾತ್ರಿ ಕಚ್ಚುವುದೇ ಇಲ್ಲ ಎಂದಲ್ಲ. ತುಸು ಬೆಳಕಿದ್ದರೂ ಸಾಕು ಈ ಸೊಳ್ಳೆಗಳು ತಮ್ಮ ಆಟ ತೋರಿಸುತ್ತವೆ. ಯಾವುದೇ ಸೂಚನೆಯೂ ಇಲ್ಲದೇ, ಮನುಷ್ಯನ ಮೊಣಕಾಲು ಹಾಗೂ ಮೊಣಕೈಗೆ ಕಚ್ಚುತ್ತವೆ ಈ ಉಪದ್ರವಿ ಕೀಟ. ಮನುಷ್ಯನನ್ನು ಕಚ್ಚುವುದರಲ್ಲಿ ಹೆಚ್ಚು ಖುಷಿ ಪಡುವ ಈ ಸೊಳ್ಳೆಗಳು ನಾಯಿ ಸೇರಿ ಕೆಲವು ಸಾಕು ಪ್ರಾಣಿಗಳನ್ನೂ ಕಡಿಯುತ್ತವೆ. ಅದರಲ್ಲಿಯೂ ಸಸ್ತನಿಗಳೊಂದಿಗೆ ಇದಕ್ಕೆ ವಿಶೇಷ ವ್ಯಾಮೋಹ.
ವರ್ಷ ಪೂರ್ತಿ ಕಾಡೋ ಡೆಂಗ್ಯೂ ಬಗ್ಗೆ ಇರಲಿ ಜಾಗೃತಿ
ಹೆಣ್ಣು ಸೊಳ್ಳೆಯಿಂದ ರೋಗ ಹರಡುವುದು ಹೆಚ್ಚು. ಗಂಡು ಸೊಳ್ಳೆಯ ಆಯಸ್ಸು ಕೇವಲ 10 ದಿನಗಳಾಗಿದ್ದು, ಇವು ಯಾವುದೇ ರೋಗವನ್ನೂ ಹರಡುವುದಿಲ್ಲ. ಆದರೆ, ಮಾರಾಣಾಂತಿಕ ರೋಗಕ್ಕೆ ಕಾರಣವಾಗುವ ಹೆಣ್ಣು ಸೊಳ್ಳೆಯ ಆಯಸ್ಸು 42ರಿಂದ 56 ದಿನಗಳು. ಡೆಂಗ್ಯೂ, ಮಲೇರಿಯಾ ಹಾಗೂ ಜಾಂಡೀಸ್‌ನಂಥ ರೋಗಗಳನ್ನು ಹರಡಲೂ ಇವು ಕಾರಣವಾಗಬಲ್ಲವು.
ಸೊಳ್ಳೆ ಕಚ್ಚುವುದನ್ನು ನಿರ್ಲಕ್ಷಿಸಲು ಸಾಧ್ಯವಿಲ್ಲ. ಒಂದು ಸೊಳ್ಳೆಯೂ ಜೀವವನ್ನೇ ಕಿತ್ತುಕೊಳ್ಳಲೂ ಬಹುದು. ಅದಕ್ಕೆ ಸೊಳ್ಳೆ ನಿಮ್ಮನ್ನು ಕೊಲ್ಲುವ ಮುನ್ನ, ನೀವೇ ಸೊಳ್ಳೆಯನ್ನು ಕೊಂದು ಬಿಡಿ.