ಮಂಗಳೂರಿನಲ್ಲಿ ಯುವಕನಿಗೆ ದುಷ್ಕರ್ಮಿಗಳ ತಂಡ ಚಾಕು ಇರಿದ ಘಟನೆ ಮಂಗಳೂರು ಹೊರವಲಯದ ಸುರತ್ಕಲ್ ಬಳಿ ನಡೆದಿದೆ.
ಮಂಗಳೂರು (ಜು. 28): ಯುವಕನಿಗೆ ದುಷ್ಕರ್ಮಿಗಳ ತಂಡ ಚಾಕು ಇರಿದ ಘಟನೆ ಮಂಗಳೂರು ಹೊರವಲಯದ ಸುರತ್ಕಲ್ ಬಳಿ ನಡೆದಿದೆ. ಸುರತ್ಕಲ್ ಮಂಗಲಪೇಟೆಯಲ್ಲಿ ಫಾಝಿಲ್‌ಗೆ ದುಷ್ಕರ್ಮಿಗಳ ಚಾಕು ಇರಿದಿದ್ದಾರೆ. ಸದ್ಯ ಯುವಕನ ಸ್ಥಿತಿ ಗಂಭೀರವಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ. ಸುರತ್ಕಲ್ ಪೊಲೀಸ್ ಠಾಣೆ ಪೊಲೀಸರ ತನಿಖೆ ನಡೆಸುತ್ತಿದ್ದಾರೆ. ಅಂಗಡಿಗೆ ನುಗ್ಗಿ ಫಾಜಿಲ್ ಮೇಲೆ ದುಷ್ಕರ್ಮಿಗಳಿಂದ ದಾಳಿ ನಡೆಸಲಾಗಿದೆ. ಘಟನೆ ಸಬಂಧ ಮತ್ತಷ್ಟು ಮಾಹಿತಿ ನಿರೀಕ್ಷಿಸಲಾಗಿದೆ.
ಬೆಳ್ಳಾರೆಯಲ್ಲಿ ಬಿಜೆಪಿ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ ಈಗ ದೇಶಾದ್ಯಂತ ಭಾರೀ ಸದ್ದು ಮಾಡಿದೆ. ಈ ಬೆನ್ನಲ್ಲೇ ಸದ್ಯ ಕರಾವಳಿ ಭಾಗದಲ್ಲಿ ಬಿಗು ವಾತಾವರಣ ನಿರ್ಮಾಣವಾಗಿದೆ. ಈ ನಡುವೆ ಮತ್ತೋರ್ವ ಯುವಕನಿಗೆ ಚಾಕು ಇರಿತವಾಗಿದ್ದು ಆತಂಕಕ್ಕೆ ಕಾರಣವಾಗಿದೆ. ಸದ್ಯ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದ ಆರೋಪಿಗಳಾದ ಜಾಕೀರ್ ಮತ್ತು ಶಫೀಕ್ ನನ್ನು ಪೊಲೀಸರು ನ್ಯಾಯಾಲಕಕ್ಕೆ ಹಾಜರುಪಡಿಸಿದ್ದು, ಕೋರ್ಟ್ 14 ದಿನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.
ಬಿಜೆಪಿ ಕಾರ‍್ಯಕರ್ತನ ಹತ್ಯೆ ವಿರುದ್ಧ ಭುಗಿಲೆದ್ದ ಆಕ್ರೋಶ: ಇನ್ನು ಬಿಜೆಪಿ ಯುವ ಮೋರ್ಚಾ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆಗೆ ಹಿಂದೂ ಕಾರ್ಯಕರ್ತರ ಆಕ್ರೋಶ ಭುಗಿಲೆದ್ದಿದೆ. ಪ್ರವೀಣ್ ಪಾರ್ಥಿವ ಶರೀರದ ಮೆರವಣಿಗೆ, ಅಂತಿಮ ದರ್ಶನ ವೇಳೆ ಮೂರು ಅಂಗಡಿ ಮೇಲೆ ಕೆಲವರು ಕಲ್ಲು ತೂರಾಟ ನಡೆಸಿದ್ದಲ್ಲದೆ, ಸರ್ಕಾರಿ ಬಸ್ಸೊಂದರ ಗಾಜಿಗೂ ಹಾನಿ ಮಾಡಿದ್ದಾರೆ. ದ್ವಿಚಕ್ರ ವಾಹನವೊಂದನ್ನು ಪುಡಿ ಪುಡಿ ಮಾಡಿದ್ದು, ಉದ್ರಿಕ್ತರ ನಿಯಂತ್ರಣ ವೇಳೆ ಪೊಲೀಸರು ನಡೆಸಿದ ಲಾಠಿ ಚಾಜ್‌ರ್‍ನಲ್ಲಿ ನಾಲ್ಕೈದು ಮಂದಿ ಗಾಯಗೊಂಡಿದ್ದಾರೆ.
ಪುತ್ತೂರಿಂದ ಬೆಳ್ಳಾರೆಗೆ ಪ್ರವೀಣ್ ನೆಟ್ಟಾರು ಅಂತಿಮ ಯಾತ್ರೆ; ನಿನ್ನೆ ಏನೆಲ್ಲಾ ನಡೀತು ಗೊತ್ತಾ!
ಇದೇ ವೇಳೆ, ಬಿಜೆಪಿ ಸರ್ಕಾರವೇ ಅಧಿಕಾರದಲ್ಲಿದ್ದರೂ ಸಾಲು ಸಾಲು ಹಿಂದೂ ಕಾರ್ಯಕರ್ತರ ಹತ್ಯೆ ಆಗುತ್ತಿರುವುದಕ್ಕೆ ಇದೀಗ ಪಕ್ಷದ ನಾಯಕರ ಮೇಲೆಯೇ ಕಾರ್ಯಕರ್ತರು ತಿರುಗಿ ಬಿದ್ದಿದ್ದು, ಸುಳ್ಯದ ಬೆಳ್ಳಾರೆಯಲ್ಲಿ ಪ್ರವೀಣ್ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ಆಗಮಿಸಿದ್ದ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್, ಸಚಿವರಾದ ಸುನಿಲ್ ಕುಮಾರ್, ಅಂಗಾರ ಅವರಿಗೆ ಧಿಕ್ಕಾರ ಕೂಗಿ ಬಿಸಿ ಮುಟ್ಟಿಸಿದ್ದಾರೆ. ಕಟೀಲ್ ಕಾರಿಗೆ ಘೇರಾವ್ ಹಾಕಿ ಪಲ್ಟಿಮಾಡಲೆತ್ನಿಸಿದ ಘಟನೆಯೂ ನಡೆದಿದೆ.