* ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ಬಳೋಬಾಳ ಗ್ರಾಮದಲ್ಲಿ ನಡೆದ ಘಟನೆ
* ಪೆಟ್ರೋಲ್ ಕದಿಯುವುದನ್ನು ನೋಡಿದ್ದ ಕೊಲೆಯಾದ ಯುವಕ
* ಈ ಸಂಬಂಧ ಘಟಪ್ರಭಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು
ಗೋಕಾಕ(ಸೆ.01): ಪೆಟ್ರೋಲ್ ಕಳ್ಳತನ ಮಾಡುವುದನ್ನು ನೋಡಿದ ಎಂಬ ಕಾರಣ ಬರ್ಬರವಾಗಿ ಕೊಲೆ ಮಾಡಿ, ತಿಪ್ಪೆಗುಂಡಿಯಲ್ಲಿ ಹೂತಿಟ್ಟಿರುವ ಘಟನೆ ಘಟಪ್ರಭಾ ಪೊಲೀಸ್ ಠಾಣಾ ವ್ಯಾಪ್ತಿಯ ಗೋಕಾಕ ತಾಲೂಕಿನ ಬಳೋಬಾಳ ಎಂಬ ಗ್ರಾಮದಲ್ಲಿ ನಡೆದಿದ್ದು, ಇದು ತಡವಾಗಿ ಬೆಳಕಿಗೆ ಬಂದಿದೆ.
ಮಹಾದೇವ ಕಿಚಡಿ (28) ಎಂಬಾತ ಕೊಲೆಯಾದ ಯುವಕ. ಪೆಟ್ರೋಲ್ ಕದಿಯುವುದನ್ನು ನೋಡಿದ ತಪ್ಪಿಗೆ ಮಹಾದೇವನನ್ನು ಬರ್ಬರವಾಗಿ ಕೊಲೆ ಮಾಡಿ, ಪ್ರವೀಣ ಸುಣಧೋಳಿ ಎಂಬಾತ ತಿಪ್ಪೆಗುಂಡಿಯಲ್ಲಿ ಹೂತಿಟ್ಟಿದ್ದಾಗಿ ತಿಳಿದು ಬಂದಿದೆ.
ಬಾಗಲಕೋಟೆ: ಒಂದೇ ಕುಟುಂಬದ ನಾಲ್ವರು ಸಹೋದರರ ಬರ್ಬರ ಹತ್ಯೆ
ಬಳೋಬಾಳ ಗ್ರಾಮದಲ್ಲಿ ಮನೆ ಮುಂದೆ ನಿಲ್ಲಿಸಿದಂತ ವಾಹನಗಳ ಪೆಟ್ರೋಲ್ ರಾತ್ರೋರಾತ್ರಿ ಪ್ರವೀಣ ಎಂಬ ಯುವಕ ಕದಿಯುತ್ತಿದ್ದ. ಇದನ್ನು ಮಹಾದೇವ ನೋಡಿದ್ದಾನೆ. ಇನ್ನು ಮಹಾದೇವ ಊರಿನ ಜನರ ಮುಂದೆ ಈ ವಿಷಯ ಹೇಳಿ ಮಾನ ಕಳೆಯುತ್ತಾನೆಂದು ಪ್ರವೀಣ ರಾಡ್‌ನಿಂದ ಹೊಡೆದು ಕೊಲೆಗೈದಿದ್ದಾನೆ ಎಂದು ಹೇಳಲಾಗುತ್ತಿದೆ.
ಕೊಲೆ ಮಾಡಿದ ಬಳಿಕ ಶವವನ್ನು ತಿಪ್ಪೆಯಲ್ಲಿ ಹೂತಿಟ್ಟಿದ್ದಾನೆ. ಮೂರ್ನಾಲ್ಕು ದಿನಗಳ ಬಳಿಕ ಶವ ಕೊಳೆತಿದ್ದು ವಾಸನೆ ಊರಿಗೆ ಹಬ್ಬಿದೆ. ಆಗ ಜನರು ಬಂದು ನೋಡಿದಾಗ ಶವ ಸಿಕ್ಕಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರವೀಣನನ್ನು ಪೊಲೀಸರು ಬಂಧಿಸಿದ್ದಾರೆ. ಘಟಪ್ರಭಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.