ಸೂರಮ್ಮನಹಳ್ಳಿಯಲ್ಲಿದ್ದ 8 ಎಕರೆ ಜಮೀನಲ್ಲಿ ತನ್ನ ಆಸ್ತಿ ಪಾಲನ್ನು ನೀಡುವಂತೆ ಮಾವನಾದ ಚಂದ್ರಣ್ಣನ ಬಳಿ ಈರಕ್ಕ ಕೇಳಿದ್ದಳು. ಹೀಗಾಗಿ ಆಸ್ತಿ ಪಾಲು ಕೇಳಿದ್ದಕ್ಕೆ ಕೋಪಗೊಂಡ ಚಂದ್ರಣ್ಣ ತನ್ನ ಮಗ ಗಂಗಾಧರನ ಜೊತೆ ಸೇರಿ ಬೆಳಿಗ್ಗೆ ಈರಕ್ಕನನ್ನು ಬರ್ಬರವಾಗಿ ಹತ್ಯೆ ಮಾಡಿದ್ದಾರೆ.
ವರದಿ: ಕಿರಣ್.ಎಲ್. ತೊಡರನಾಳ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿತ್ರದುರ್ಗ
ಚಿತ್ರದುರ್ಗ(ಜು.17): ಆಸ್ತಿ ವಿಚಾರಕ್ಕೆ ಸಿನಿಮಾ ಶೈಲಿಯಲ್ಲಿ ತಮ್ಮನ ಪತ್ನಿಯನ್ನೇ ಅಣ್ಣ ಮಚ್ಚಿನಿಂದ ಕೊಚ್ಚಿ ಕೊಲೆಗೈದಿರುವ ಘಟನೆ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲ್ಲೂಕಿನ ಹಾಲಿಗೊಂಡನಹಳ್ಳಿಯಲ್ಲಿ ಇಂದು(ಬುಧವಾರ) ನಡೆದಿದೆ.
ಚಳ್ಳಕೆರೆ ತಾಲ್ಲೂಕಿನ ಸೂರಮ್ಮನಹಳ್ಳಿಯ ಚಂದ್ರಣ್ಣನ ತಮ್ಮ ಗೋವಿಂದಪ್ಪ 8 ವರ್ಷದ ಹಿಂದೆ ನಿಧನರಾಗಿದ್ದರು. ಈ ವೇಳೆ ಅತನ ಪತ್ನಿ ಈರಕ್ಕ ತವರು ಮನೆಗೆ ಹೋಗಿ ಅಲ್ಲೇ ಜೀವನ ಸಾಗಿಸುತ್ತಿದ್ದರು. ಈ ವೇಳೆ, ಸೂರಮ್ಮನಹಳ್ಳಿಯಲ್ಲಿದ್ದ 8 ಎಕರೆ ಜಮೀನಲ್ಲಿ ತನ್ನ ಆಸ್ತಿ ಪಾಲನ್ನು ನೀಡುವಂತೆ ಮಾವನಾದ ಚಂದ್ರಣ್ಣನ ಬಳಿ ಈರಕ್ಕ ಕೇಳಿದ್ದಳು. ಹೀಗಾಗಿ ಆಸ್ತಿ ಪಾಲು ಕೇಳಿದ್ದಕ್ಕೆ ಕೋಪಗೊಂಡ ಚಂದ್ರಣ್ಣ ತನ್ನ ಮಗ ಗಂಗಾಧರನ ಜೊತೆ ಸೇರಿ ಬೆಳಿಗ್ಗೆ ಈರಕ್ಕನನ್ನು ಬರ್ಬರವಾಗಿ ಹತ್ಯೆ ಮಾಡಿದ್ದಾರೆ.
ಗ್ರಾಮದ ಒಳಗೆ ಏಕಾಏಕಿ ನುಗ್ಗಿರೋ ಆರೋಪಿಗಳು ಮೃತ ಮಹಿಳೆಯ ಕಣ್ಣಿಗೆ ಮೊದಲು ಖಾರದ ಪುಡಿ ಎರಚಿ ನಂತರ ಬರ್ಬರವಾಗಿ ಕೊಲೆಗೈದಿದ್ದಾರೆ. ಕೂಡಲೇ ಎಚ್ಚೆತ್ತ ಗ್ರಾಮಸ್ಥರು ಆರೋಪಿಗಳನ್ನು ಹಿಡಿಯಲು ಹೋದವರ ಮೇಲೂ ಮಚ್ಚಿನಿಂದ ಹಲ್ಲೆ ಮಾಡಲು ಯತ್ನಿಸಿದ್ದು, ಕೂಡಲೇ ಪರಶುರಾಂಪುರ ಠಾಣೆ ಪಿಎಸ್‌ಐ ಬಸವರಾಜ್, ಹಾಗೂ ಚಳ್ಳಕೆರೆ ಡಿವೈಎಸ್‌ಪಿ ರಾಜಣ್ಣ ಮಾಹಿತಿ ನೀಡಿದಾಗ ಸ್ಥಳಕ್ಕೆ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ.
ಮಗುವೆಂದೂ ನೋಡದೇ ಪೈಶಾಚಿಕ ಕೃತ್ಯ: 4 ವರ್ಷದ ಬಾಲಕಿಯ ಅತ್ಯಾಚಾರವೆಸಗಿ ಕೊಲೆ
ಇನ್ನು ಇದಕ್ಕೂ ಮುನ್ನ ಹಾಲಿಗೊಂಡನಹಳ್ಳಿ ಬಂದಿದ್ದ ಚಂದ್ರಣ್ಣ ಹಾಗೂ ಆತನ ಪುತ್ರ ಗಂಗಾಧರ ಈರಕ್ಕನನ್ನು ಸಿನಿಮಾ ಶೈಲಿಯಲ್ಲಿ ಅಟ್ಟಾಡಿಸಿಕೊಂಡು ಹೋಗಿ ಹಲ್ಲೆ ನಡೆಸಿದ್ದು, ಗ್ರಾಮದ ಮಧ್ಯೆ ಆಕೆಯ ತಲೆಗೆ ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿದ್ದಾರೆ. ಈ ವೇಳೆ ಆರೋಪಿ ಚಂದ್ರಣ್ಣನನ್ನ ತಡೆಯಲು ಯತ್ನಿಸಿದ ಗ್ರಾಮಸ್ಥರ ಮೇಲೂ ಆರೋಪಿಯು ಮಚ್ಚು ಬೀಸಿದ ಹಿನ್ನೆಲೆಯಲ್ಲಿ ಆತನನ್ನು ಗ್ರಾಮದಲ್ಲಿನ ಕಂಬಕ್ಕೆ ಕಟ್ಟಿ ಹಾಕಿದ್ದರು. ಅಲ್ಲದೇ ಹತ್ಯೆ ಬಳಿಕ ಸ್ಥಳದಿಂದ ಪರಾರಿಯಾಗಿದ್ದ ಚಂದ್ರಣ್ಣನ ಪುತ್ರ ಗಂಗಾಧರನನ್ನು ಪೊಲೀಸರು ಬಂಧಿಸಿದ್ದು, ಸದ್ಯ. ಅಪ್ಪ, ಮಗ ಇಬ್ರು ಪೊಲೀಸರ ಅತಿಥಿಯಾಗಿದ್ದಾರೆ.
ಒಟ್ಟಾರೆ ಆಸ್ತಿ ಆಸೆಗಾಗಿ ತಮ್ಮನ ಪತ್ನಿಯನ್ನೇ ಅಣ್ಣ ಕೊಲೆಗೈದಿದ್ದಾನೆ. ಹೀಗಾಗಿ ಹಣ, ಆಸ್ತಿಗಾಗಿ ಯಾವ ಸಂಬಂಧವನ್ನು ಜನ ಲೆಕ್ಕಿಸಲ್ಲ ಎಂಬುದಕ್ಕೆ ಈ ಕೊಲೆ ಸಾಕ್ಷಿಯಾಗಿದ್ದು, ಪ್ರಕರಣದಿಂದಾಗಿ ಇಡೀ ಗ್ರಾಮವೇ ಬೆಚ್ಚು ಬಿದ್ದಿದೆ.