ನಾರಿಯರಿಗೆ ಸೋಷಿಯಲ್‌ ಮೀಡಿಯಾ ಕೀಚಕರ ಕಾಟ..!

By Kannadaprabha News  |  First Published Nov 3, 2022, 9:18 AM IST

ಆಧುನಿಕ ಕೀಚಕರದ್ದು ಹೊರ ಜಗತ್ತಿಗೆ ಗೋಮುಖ, ಸಂತ್ರಸ್ತೆ ಮುಂದೆ ವ್ಯಾಘ್ರರೂಪಿ, ಮಹಿಳೆಯರಿಗೆ ತೊಂದರೆ ಕೊಟ್ಟರೂ ಕೇಸ್‌ ಮಾಡಲ್ಲವೆಂಬ ಹುಚ್ಚು ಭ್ರಮೆಯಲ್ಲಿರೋ ಪೋಲಿಗಳು 


ನಾಗರಾಜ ಎಸ್.ಬಡದಾಳ್

ದಾವಣಗೆರೆ(ನ.03):  ರೋಡ್‌ ರೋಮಿಯೋಗಳ ಹಾವಳಿ ಈಗ ಇಲ್ಲವೆಂದು ಜನರು ನಿಟ್ಟಿಸಿರು ಬಿಡುತ್ತಿರುವ ಬೆನ್ನಲ್ಲೇ ಮೊಬೈಲ್‌, ಸೋಷಿಯಲ್‌ ಮೀಡಿಯಾಗಳ ಮೂಲಕ ವಿದ್ಯಾರ್ಥಿನಿಯರು, ಯುವತಿಯರು, ಗೃಹಿಣಿಯರ ಶಾಂತಿ, ನೆಮ್ಮದಿಗೆ ಭಂಗ ತರುವ ಸೋಷಿಯಲ್‌ ಮೀಡಿಯಾಗಳ ಕೀಚಕರ ಹಾವಳಿ ದಿನದಿನಕ್ಕೂ ಮಿತಿ ಮೀರುತ್ತಿದೆ.

Tap to resize

Latest Videos

ವಾಟ್ಸ್ಯಾಪ್‌, ಮೆಸ್ಸೆಂಜರ್‌, ಫೇಸ್‌ಬುಕ್‌, ಟ್ವಿಟರ್‌, ಎಸ್ಸೆಮ್ಮೆಸ್‌, ವೀಡಿಯೋ ಕಾಲ್‌, ವಾಯ್ಸ್‌ ಕಾಲ್‌ ಹೀಗೆ ನಾನಾ ಬಗೆಯಲ್ಲಿ ಹೆಣ್ಣು ಮಕ್ಕಳ ಬದುಕಿನೊಂದಿಗೆ ಚೆಲ್ಲಾಟ ಆಡುತ್ತಿರುವ ಕಿಡಿಗೇಡಿಗಳ ಕೃತ್ಯ ಹೆಚ್ಚುತ್ತಿದೆ. ಕುಟುಂಬಕ್ಕೆ ಪರಿಚಯಸ್ಥರು, ಸಮೀಪ ಅಥವಾ ದೂರದ ಸಂಬಂಧಿ, ನಿರುದ್ಯೋಗಿಗಳು, ಉದ್ಯೋಗಸ್ಥರು, ಸ್ವಯಂ ಉದ್ಯೋಗಿಗಳು, ತೋಟ, ಹೊಲ, ಗದ್ದೆ ಇರುವಂತಹ ಕೆಲವರು, ತನ್ನನ್ನು ತಾನು ಶ್ರೀಮಂತ ಅಂತಾ ತಿಳಿದುಕೊಂಡವನು, ನಗರ, ಪಟ್ಟಣ ಪ್ರದೇಶಕ್ಕೆ ಹೊಂದಿರುವ ಗ್ರಾಮೀಣ ಭಾಗದ ಕೆಲ ಕಿಡಿಗೇಡಿಗಳ ಕೃತ್ಯದಿಂದ ಹೆಣ್ಣು ಮಕ್ಕಳು ಬೆಚ್ಚಿ ಬೀಳುತ್ತಿದ್ದಾರೆ.

ಕಾನ್‌ಸ್ಟೇಟೇಬಲ್‌ ಮೇಲೆ ಪೆಪ್ಪರ್‌ ಸ್ಪ್ರೇ ಮಾಡಿ ಡ್ರ್ಯಾಗರಿಂದ ಹಲ್ಲೆಗೈದ ರೌಡಿ

ವಿದ್ಯಾರ್ಥಿನಿಯರು, ಯುವತಿಯರು, ಅವಿವಾಹಿತೆಯರಾಗಿದ್ದರೆ ತಮ್ಮ ತಂದೆ, ತಾಯಿ, ಸಹೋದರರು, ಕುಟುಂಬದ ಸಂಬಂಧಿ ಅನಿಸಿಕೊಂಡ ಗೋಮುಖ ವ್ಯಾಘ್ರರು ಸೋಷಿಯಲ್‌ ಮೀಡಿಯಾಗಳಲ್ಲಿ ನೀಡುತ್ತಿರುವ ಕಿರುಕುಳ ಸಹಿಸಲಾಗದೇ ಹೆಣ್ಣು ಮಕ್ಕಳು ಅತ್ತ ಹೇಳಿಕೊಳ್ಳಲೂ ಆಗದ ಸಂಕಷ್ಟದ ಸ್ಥಿತಿಗೆ ಸಿಲುಕಿದ್ದಾರೆ. ಇನ್ನು ಸೋಷಿಯಲ್‌ ಮೀಡಿಯಾ ಕಿರಾತಕರು ಹೊರ ಜಗತ್ತಿಗೆ ಸಜ್ಜನನಂತೆ, ಸನ್ನಡತೆ ತೋರುತ್ತಾ, ಇತ್ತ ತನಗಿಂತ ಕಿರಿಯ-ಹಿರಿಯ ಹೆಣ್ಣು ಮಕ್ಕಳಿಗೆ ತೊಂದರೆ ನೀಡುವುದನ್ನು ಮತ್ತೆ ಮತ್ತೆ ಮುಂದುವರಿಸುತ್ತಿರುವುದು ಪೊಲೀಸ್‌ ಇಲಾಖೆ ಹದ್ದಿನ ಕಣ್ಣಿಟ್ಟು ಗಮನಿಸುತ್ತದೆ.

ಎಷ್ಟೇ ಹತ್ತಿರದವರಾದರೂ ಸಲಿಗೆ, ಸಹವಾಸ ಬೇಡ

ಆರಂಭದಲ್ಲಿ ಸಜ್ಜನನಂತೆ ವರ್ತಿಸಿ, ತನ್ನ ಕಷ್ಟಹೇಳಿಕೊಂಡಂತೆ, ನಿಮ್ಮ ಸಲಹೆಬೇಕೆಂದು, ಸಮಸ್ಯೆಗೆ ನೀವು ಪರಿಹಾರ ಹೇಳಿ ಅಕ್ಕ, ಆಂಟಿ, ಅತ್ತಿಗೆ, ಬಾಬೀ, ದೊಡ್ಡಮ್ಮ, ಚಿಕ್ಕಮ್ಮ, ಮೇಡಂ ಅಂತೆಲ್ಲಾ ಹೇಳಿ ಹತ್ತಿರವಾಗುವ ಕಿರಾತಕರು ಮಹಿಳೆಯರ ಸ್ನೇಹ ಗಳಿಸುತ್ತಾರೆ. ನಂತರ ನಿಮ್ಮ ಫೋಟೋ ಕಳಿಸಿ ಎಂಬುದಾಗಿ ಒಂದಿಷ್ಟುಸಲಿಗೆ ಸಿಕ್ಕ ನಂತರ ತಮ್ಮ ಗಾಳಕ್ಕೆ ಸಿಲುಕುವ ಹೆಣ್ಣು ಮಕ್ಕಳ ಕಾಡಿ ಬೇಡಿ ಖಾಸಗಿ ಫೋಟೋ ತರಿಸುವ, ವೀಡಿಯೋ ಕಾಲ್‌ ಮಾಡಿ ರೆಕಾರ್ಡ್‌ ಮಾಡುವ ಸೋಷಿಯಲ್‌ ಮೀಡಿಯಾಗಳ ಕಿರಾತಕರು ಹೆಣೆದ ಬಲೆಗೆ ತಮಗೆ ಅರಿವಿಲ್ಲದಂತೆ ಸಿಲುಕುವ ಮಹಿಳೆಯರ ಸಂಕಷ್ಟ, ನೋವು ಶುರುವಾಗುವುದೇ ಅಲ್ಲಿಂದ. ಅಲ್ಲಿವರೆಗೆ ವಿಧೇಯನಂತಿದ್ದವನ ವಿಕೃತ ರೂಪ ಅಲ್ಲಿಂದಲೇ ಅನಾವರಣವಾಗುತ್ತದೆ.

ತಕ್ಕ ಪಾಠ ಕಲಿಸುವ ಕೆಲಸ:

ಹೆಣ್ಣು ಮಕ್ಕಳು ತಾವು ನಂಬಿಕೆ ಇಟ್ಟವ್ಯಕ್ತಿ ಬ್ಲಾಕ್‌ ಮೇಲ್‌ ಮಾಡುತ್ತಿರುವ ಪ್ರಕರಣ ಅಲ್ಲಲ್ಲಿ ಬೆಳಕಿಗೆ ಬರುತ್ತಿವೆ. ಈಗಾಗಲೇ ಇಂತಹ ಹಲವು ಪ್ರಕರಣಗಳು ರಾಜ್ಯ, ರಾಷ್ಟ್ರದ ವಿವಿಧೆಡೆ ವರದಿಯಾಗಿ ಪ್ರಕರಣ ದಾಖಲಾಗಿವೆ. ಅಂತಹ ಕೀಚಕರಿಗೆ ತಕ್ಕ ಪಾಠ ಕಲಿಸುವ ಕೆಲಸ ಪೊಲೀಸ್‌ ಇಲಾಖೆಯೂ ಮಾಡುತ್ತಲೇ ಬರುತ್ತಿದೆ. ಸೋಷಿಯಲ್‌ ಮೀಡಿಯಾದಲ್ಲಿ ತಮ್ಮನ್ನು ನಂಬಿ ಮಾತನಾಡಿದ ಮಹಿಳೆಯರ ಆಡಿಯೋ ಕಾಲ್‌, ವೀಡಿಯೋ ಕಾಲ್‌ಗಳನ್ನು ಮಾಡಿ ಅದನ್ನು ಸೇವ್‌ ಮಾಡಿ ಬ್ಲಾಕ್‌ಮೇಲ್‌ ಮಾಡುತ್ತಿರುವವರ ಸಂಖ್ಯೆ ಕಡಿಮೆ ಏನಿಲ್ಲ. ಇಂತಹ ಕೀಚಕರ ಹಾವಳಿಗೆ ಹೆಣ್ಣು ಮಕ್ಕಳು ಕಂಗಾಲಾಗಿದ್ದಾರೆ.

ರಸಗುಲ್ಲಾಕ್ಕಾಗಿ ಬಿತ್ತು ಹೆಣ: ಮದುವೆ ಮನೆಯಾಯ್ತು ಮಸಣ

ಪೊಲೀಸ್‌ ಕೇಸ್‌ ಆಗಲ್ಲವೆಂಬ ಹುಂಬತನ

ಕರೆ ಮಾಡು, ಫೋಟೋ ಕಳಿಸು ಅಂದ ತಕ್ಷಣ ಕಳಿಸಬೇಕು. ವೀಡಿಯೋ ಕಾಲ್‌ ಮಾಡಬೇಕೆಂದಾಗ ಮಾಡಬೇಕು, ನೀನು ಕರೆ ಸ್ವೀಕರಿಸದಿದ್ದರೆ ನಿನ್ನ ಫೋಟೋ, ವೀಡಿಯೋ ಯಾರಿಗೆ ಹೋಗಬೇಕೋ ಅಂತಹವರಿಗೆ ಹೋಗುತ್ತದೆ, ಎಲ್ಲಾ ಗ್ರೂಪ್‌ಗೂ ಹೋಗುತ್ತದೆ ಎಂದು ಹೆಣ್ಣು ಮಕ್ಕಳಿಗೆ ಮತ್ತಷ್ಟುಬೆದರಿಸುವ ಕೆಲಸ ಇಂತಹ ಕೀಚಕರು ಮಾಡುತ್ತಿದ್ದಾರೆ. ಒಂದು ಭಂಡ ಧೈರ್ಯವೆಂದರೆ ವಿದ್ಯಾರ್ಥಿನಿಯರು, ಯುವತಿಯರು, ಗೃಹಿಣಿಯರು ಇಷ್ಟೆಲ್ಲಾ ಆದ ಮೇಲೆ ಏನೂ ಮಾಡುವುದಿಲ್ಲ. ಹೇಳಿದಂತೆ ಕೇಳುತ್ತಾರೆಂಬ ಲೆಕ್ಕಾಚಾರ ಸೋಷಿಯಲ್‌ ಮೀಡಿಯಾ ಕೀಚಕರದ್ದು. ಮನೆಯಲ್ಲಿ ಹೇಳುವುದಿಲ್ಲವೆಂದು ಒಂದು ಕಾರಣವಾದರೆ, ಪೊಲೀಸರವರೆಗೂ ವಿಚಾರ ಹೋಗದು ಎಂಬ ತಮ್ಮದೇ ಲೆಕ್ಕಾಚಾರದಿಂದ ಇಂತಹವರ ಹಾವಳಿ ಮಿತಿ ಮೀರುತ್ತಿದೆ. ಆದರೆ, ಪೊಲೀಸ್‌ ಇಲಾಖೆ ಇಂತಹ ಅಸಹಾಯಕ, ನೊಂದ ಮಹಿಳೆಯರಿಗೆ ಕಾನೂನಾತ್ಮಕವಾಗಿ, ಗೋಪ್ಯತೆ ಕಾಪಾಡಿ ಶಾಂತಿ, ನೆಮ್ಮದಿ ಕೊಡಿಸುವ ಕೆಲಸವನ್ನೂ ಮಾಡುತ್ತಿದೆ. ಈಗಾಗಲೇ ಇಂತಹ ಸೋಷಿಯಲ್‌ ಮೀಡಿಯಾ ಕೀಚಕರನ್ನು ಎಲ್ಲೆಲ್ಲಿ ತಿದ್ದಿ, ತೀಡಿ ಸರಿ ಮಾಡಬೇಕೋ ಅಂತಹ ಕೆಲಸವನ್ನೂ ಇಲಾಖೆ ಅಷ್ಟೇ ಪರಿಣಾಮಕಾರಿಯಾಗಿ ಮಾಡುತ್ತಿದೆ ಎಂಬುದೂ ಗಮನಾರ್ಹ.

ಪ್ರಮುಖ ಮುಖ್ಯಾಂಶಗಳು: 

* ಸೋಷಿಯಲ್‌ ಮೀಡಿಯಾ ಕೀಚಕರ ಹಾವಳಿಗೆ ಬೆಚ್ಚಿ ಬಿದ್ದ ಹೆಣ್ಣು ಮಕ್ಕಳು
* ವಿದ್ಯಾರ್ಥಿನಿ, ಯುವತಿ, ಗೃಹಿಣಿಯರು, ವಿಧವೆ, ವಿಚ್ಛೇದಿತರುಗಳೇ ಗುರಿ
* ನಸುಕು, ಮಧ್ಯಾಹ್ನ, ರಾತ್ರಿ, ತಡರಾತ್ರಿ ಸೋಷಿಯಲ್‌ ಮೀಡಿಯಾ ಕಾಟ
* ನುಂಗಲೂ ಆಗದೇ, ಉಗಿಯಲು ಆಗದ ಸಂಕಷ್ಟದ ಸ್ಥಿತಿಯಲ್ಲಿ ಹೆಣ್ಮಕ್ಕಳು
* ಸೆರಗಿನಲ್ಲೇ ಕೆಂಡ ಕಟ್ಟಿಕೊಂಡು ಪರಿತಪಿಸುವ ಹೆಣ್ಣು ಮಕ್ಕಳಿಗೆ ಪೊಲೀಸ್‌ ಅಭಯ
* ಕೇಸ್‌ ಆದರೆ ಗೋಪ್ಯತೆಗೆ ಒತ್ತು, ಮೌಖಿಕವಾಗಿ ಬುದ್ಧಿ ಹೇಳಿದ ನಿದರ್ಶನವೂ ಇದೆ
 

click me!