* ಮದ್ಯ ಸೇವಿಸಲು ಬಿಡದ ಸಹೋದರನ ಹತ್ಯೆ ಮಾಡಿದ ಅಣ್ಣ
* ಊಟಕ್ಕೆ ಕುಳಿತಾಗ ಗುಂಡಿನ ಮಳೆಗರೆದ
* ಕೊರೋನಾ ಲಾಕ್ ಡೌನ್ ಪರಿಣಾಮ ಕೆಲಸ ಕಳೆದುಕೊಂಡಿದ್ದ
* ಸ್ನೇಹಿತರೊಂದಿಗೆ ಸೇರಿ ಪ್ರತಿದಿನ ಎಣ್ಣೆ ಪಾರ್ಟಿ
ಪಂಚಕುಲಾ(ಜೂ. 07) ಮದ್ಯದ ಅಮಲು ಮತ್ತು ಮದ್ಯದ ಆಸೆ ಏನೂ ಬೇಕಾದರೂ ಮಾಡಿಸುತ್ತದೆ ಎನ್ನುವುದಕ್ಕೆ ಈ ಘಟನೆಯೇ ಸಾಕ್ಷಿ. ಮದ್ಯ ಸೇವನೆ ತಡೆದಿದ್ದಕ್ಕೆ 28 ವರ್ಷದ ವ್ಯಕ್ತಿಯೊಬ್ಬ ತನ್ನ ಸಹೋದರನ್ನೇ ಕೊಲೆ ಮಾಡಿದ್ದಾನೆ. ನಿರುದ್ಯೋಗಿಯಾಗಿದ್ದವ ಡಬಲ್ ಬ್ಯಾರಲ್ ಗನ್ ನಿಂದ ಸಹೋದರನನ್ನೇ ಶೂಟ್ ಮಾಡಿದ್ದಾನೆ.
ಶನಿವಾರ ರಾತ್ರಿ ಚಂಡಿಮಂದಿರದ ಚುನಭಟ್ಟಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಮೃತನನ್ನು ಅಜಿತ್ ಸಿಂಗ್ ಎಂದು ಗುರುತಿಸಲಾಗಿದೆ. ಆರೋಪಿ ಸತ್ನಾಮ್ ಸಿಂಗ್ ತನ್ನ ಫೇಸ್‌ಬುಕ್ ಖಾತೆಯಲ್ಲಿ ವೀಡಿಯೊವನ್ನು ಅಪ್‌ಲೋಡ್ ಮಾಡಿದ್ದು, ಅಲ್ಲಿ ಅವನು ಅಪರಾಧವನ್ನು ಒಪ್ಪಿಕೊಂಡಿದ್ದಾನೆ. ಸಹೋದರನ ಹತ್ಯೆ ಮಾಡಿದ್ದು ನೋವಾಗಿದೆ ಎಂದಿದ್ದಾನೆ
ಬ್ಯಾಂಕ್ ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದ ಸತ್ನಾಮ್ ಸಿಂಗ್ ಕೊರೋನಾ ಲಾಖ್ ಡೌನ್ ಕಾರಣಕ್ಕೆ ಕೆಲಸ ಕಳೆದುಕೊಂಡಿದ್ದ. ಆತನ ಸಹೋದರ ಸಹ ನಿರುದ್ಯೋಗಿಯಾಗಿದ್ದ. ಶನಿವಾರ ಬೆಳಗ್ಗೆ 9 ಗಂಟೆ ಸುಮಾರಿಗೆ ತನ್ನ ಗೆಳೆಯನೊಂದಿಗೆ ಮನೆಗೆ ಬಂದ ಸತ್ನಾಮ್ ಸಿಂಗ್ ಕೋಣೆಗೆ ಹೋಗಿದ್ದಾನೆ. ಅಣ್ಣ ಗೆಳೆಯನ ಜತೆ ಮದ್ಯ ಸೇವಿಸುತ್ತಿದ್ದಾನೆ ಎಂದು ಭಾವಿಸಿದ ತಮ್ಮ ಅದನ್ನ ತಡೆದು ಬುದ್ಧಿ ಹೇಳಲು ಹೋಗಿದ್ದಾನೆ.
ಇಷ್ಟೆ ಅಲ್ಲದೆ ಪಕ್ಕದಲ್ಲಿಯೇ ವಾಸವಿದ್ದ ಅಪ್ಪನ ಬಳಿ ಅಣ್ಣನ ಕುಡಿತದ ವಿಚಾರ ಹೇಳಲು ಹೋಗಿದ್ದಾನೆ. ಇದರಿಂದ ಅಣ್ಣನಿಗೆ ಅವಮಾನವಾಗಿದೆ. ಗೆಳೆಯನನ್ನು ಹೊರಗೆ ಬಿಟ್ಟು ಒಂದು ಗಂಟೆ ನಂತರ ಮನೆಗೆ ಬಂದ ಅಣ್ಣ ತನ್ನ ಕೋಣೆಗೆ ಸಿಟ್ಟಿನಿಂದ ತೆರಳಿ ಬಾಗಿಲು ಹಾಕಿಕೊಂಡಿದ್ದಾನೆ.
ರಾತ್ರಿ ಊಟಕ್ಕೆ ಎಂದು ತಮ್ಮ ಕುಳಿತುಕೊಂಡಿದ್ದಾಗ ಹಿಂದಿನಿಂದ ಬಂದು ಏಕಾಏಕಿ ಶೂಟ್ ಮಾಡಿದ್ದಾನೆ. ಎರಡು ಸಾರಿ ಗುಂಡು ಹಾರಿಸಿದ ಪರಿಣಾಮ ತಮ್ಮ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ. ಆಸ್ಪತ್ರೆ ಸೇರಿಸುವ ಯತ್ನ ಮಾಡಿದರೂ ಪ್ರಯೋಜನವಾಗಿಲ್ಲ.