ಲವ - ಕುಶರನ್ನು ಹತ್ಯೆ ಮಾಡಿದ್ದ ಹಂದಿ ಅಣ್ಣಿ ಬರ್ಬರ ಕೊಲೆ ಮತ್ತು ಮುನ್ನೆಲೆಗೆ ಬಂದ ಶಿವಮೊಗ್ಗ ಭೂಗತಲೋಕ

By Sharath Sharma  |  First Published Jul 14, 2022, 12:53 PM IST

Shimoga rowdy sheeter Handi Anni murder: ಶಿವಮೊಗ್ಗದ ಕುಖ್ಯಾತ ರೌಡಿ ಶೀಟರ್‌ ಲವ-ಕುಶ ಸೋದರರನ್ನು ಬರ್ಬರವಾಗಿ ಹತ್ಯೆ ಮಾಡಿದ್ದ ಹಂದಿ ಅಣ್ಣಿಯನ್ನು ಕ್ರೂರವಾಗಿ ಕೊಲ್ಲಲಾಗಿದೆ. ಹಾಡಹಗಲೇ ನಾಲ್ಕೈದು ಜನರ ತಂಡ ಹಂದಿ ಅಣ್ಣಿಯನ್ನು ಲಾಂಗಿನಿಂದ ಕೊಚ್ಚಿ ಕೊಲೆ ಮಾಡಲಾಗಿದೆ. 


ಶಿವಮೊಗ್ಗ: ಅದೊಂದು ಕಾಲದಲ್ಲಿ ಇಡೀ ಶಿವಮೊಗ್ಗವನ್ನು ನಡುಗಿಸಿದ್ದ ಲವ - ಕುಶ ಇಬ್ಬರನ್ನೂ ಹತ್ಯೆ ಮಾಡಿ ಶಿವಮೊಗ್ಗ ಭೂಗತ ಲೋಕಕ್ಕೆ ನಾನೇ ಅಧಿಪತಿ ಎಂದು ಸಂದೇಶ ರವಾನಿಸಿದ್ದ ಹಂದಿ ಅಣ್ಣಿ ಇಂದು ಬರ್ಬರವಾಗಿ ಕೊಲೆಯಾಗಿದ್ದಾನೆ. ಇನೋವಾ ಕಾರಿನಲ್ಲಿ ಬಂದ ನಾಲ್ಕಕ್ಕೂ ಹೆಚ್ಚು ಆರೋಪಿಗಳು ಹಂದಿ ಅಣ್ಣಿಯನ್ನು ಅಟ್ಟಾಡಿಸಿ ಲಾಂಗಿನಿಂದ ಕೊಚ್ಚಿ ಕೊಲೆ ಮಾಡಿದ್ದಾರೆ. ಹಂದಿ ಅಣ್ಣಿ ತಲೆಗೆ ಗಂಭೀರ ಗಾಯವಾಗಿದ್ದು ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಹಂದಿ ಅಣ್ಣಿ ಬೈಕಿನಲ್ಲಿ ಹೋಗುತ್ತಿದ್ದಾಗ ಕಾರಿನಲ್ಲಿ ಅಡ್ಡಗಟ್ಟಿ ಹತ್ಯೆಮಾಡಲಾಗಿದೆ. ಹಂದಿ ಅಣ್ಣಿ ಮೇಲೆ ಎಂಟು ಕೊಲೆ ಆರೋಪವಿದೆ. ಅದರಲ್ಲಿ ಪ್ರಮುಖವಾದವು ಎಂದರೆ ಲವ-ಕುಶ ಸಹೋದರರ ಹತ್ಯೆ. ಈ ಹತ್ಯೆಯ ಮೂಲಕ ಇಡೀ ರಾಜ್ಯದಲ್ಲಿ ಹಂದಿ ಅಣ್ಣಿ ಹೆಸರು ಚಾಲ್ತಿಗೆ ಬಂದಿತ್ತು. ಕೊಲೆ ಮಾಡಿದ ನಂತರ ಪತ್ರಕರ್ತ ರವಿ ಬೆಳೆಗೆರೆ ಕಚೇರಿಗೆ ತೆರಳಿ ನಂತರ ಪೊಲೀಸರಿಗೆ ಶರಣಾಗಿದ್ದ ಹಂದಿ ಅಣ್ಣಿ. ನಂತರ ಆತನಿಗೆ ಜಾಮೀನು ಸಿಕ್ಕ ಬಳಿಕ ಶಿವಮೊಗ್ಗದಲ್ಲಿ ಹಫ್ತಾ ವಸೂಲಿ ಮಾಡಿಕೊಂಡು ಜನರನ್ನು ಬೆದರಿಸಿಕೊಂಡು ಕಾಲ ಕಳೆಯುತ್ತಿದ್ದ. ಹಂದಿ ಅಣ್ಣಿ ಅಂದರೆ ಶಿವಮೊಗ್ಗದ ಜನ ಇಂದಿಗೂ ಭಯ ಪಡುತ್ತಾರೆ. 

ಯಾರು ಈ ಲವ-ಕುಶ?: 
ಶಿವಮೊಗ್ಗ ಜಿಲ್ಲೆಯಷ್ಟೇ ಅಲ್ಲ ಇಡೀ ಮಲೆನಾಡಿನ ತುಂಬ ಭಯದ ವಾತಾವರಣ ಹುಟ್ಟಿಸಿ ರಾಜಾರೋಷವಾಗಿ ಮೆರೆಯುತ್ತಿದ್ದ ಅಣ್ಣ - ತಮ್ಮ ಜೋಡಿ ಲವ-ಕುಶ. 2000ದ ದಶಕದ ಆರಂಭದಲ್ಲಿ ಲವ-ಕುಶ ಹೆಸರು ಕೇಳಿದರೆ ಜನ ಭಯಗೊಳ್ಳುತ್ತಿದ್ದರು. ಶಿವಮೊಗ್ಗ ಜನರ ನೆಮ್ಮದಿಯನ್ನು ಸಂಪೂರ್ಣವಾಗಿ ಕಿತ್ತುಕೊಂಡ ಭಯದಲ್ಲೇ ಬದುಕುವಂತೆ ಮಾಡಿತ್ತು ಈ ಇಬ್ಬರ ಕ್ರೌರ್ಯ. ಆದರೆ 2006ರಲ್ಲಿ ಅಖಾಡಕ್ಕೆ ಇನ್ನೊಬ್ಬನ ಎಂಟ್ರಿಯಾಗಿತ್ತು. ಅವನೇ ಇಂದು ಕೊಲೆಯಾದ ಹಂದಿ ಅಣ್ಣಿ. ಲವ-ಮತ್ತು ಕುಶ ಇಬ್ಬರನ್ನೂ ದಾರುಣವಾಗಿ ಹಾಡಹಗಲೇ ಹಂದಿ ಅಣ್ಣಿ ಗ್ಯಾಂಗ್‌ ಕೊಚ್ಚಿ ಕೊಲೆ ಮಾಡಿತ್ತು. ಆ ಸಮಯದಲ್ಲಿ ಶಿವಮೊಗ್ಗದ ಜನ ಹಂದಿ ಅಣ್ಣಿಗೆ ಧನ್ಯವಾದ ಅರ್ಪಿಸಿದ್ದರು. ಯಾಕೆಂದರೆ ಶಿವಮೊಗ್ಗ ಜಿಲ್ಲೆಯ ನೆಮ್ಮದಿ ಕಸಿದುಕೊಂಡಿದ್ದ ನಟೋರಿಯಸ್‌ಗಳು ಬೀದಿ ಹೆಣವಾಗಿದ್ದರು. 

Tap to resize

Latest Videos

ಇದನ್ನೂ ಓದಿ: ಬೆಂಗಳೂರಲ್ಲಿ ಮಾಜಿ ಕಾರ್ಪೊರೇಟರ್‌ ಗಂಡನ ಮೇಲೆ ಕುಟುಂಬದವರಿಂದಲೇ ಮಾರಣಾಂತಿಕ ಹಲ್ಲೆ

ಹಂದಿ ಅಣ್ಣಿ, ಶಿವಮೊಗ್ಗದ ಗೋಣಿಗ ಬೀದಿಯ ನಿವಾಸಿಯಾಗಿದ್ದ. ಲವ-ಕುಶರನ್ನು ಕೊಲೆ ಮಾಡಿದಾಗ ಆತನಿಗಿನ್ನೂ 20ರ ಹರೆಯ. ಸಾಗರ ರಸ್ತೆಯ ಗ್ಯಾರೇಜ್‌ ಒಂದರಲ್ಲಿ ಇದ್ದ ಲವ-ಕುಶರ ಮೇಲೆ ಮುತ್ತಿಗೆ ಹಾಕಿ ಹಂದಿ ಅಣ್ಣಿಯ ಪಡ್ಡೆ ಹೈಕಳ ಗ್ಯಾಂಗ್‌ ಶಿವಮೊಗ್ಗ ಭೂಗತ ದೊರೆಗಳನ್ನು ಇಲ್ಲವಾಗಿಸಿತ್ತು. ರಾತ್ರೋರಾತ್ರಿ ಹಂದಿ ಅಣ್ಣಿ ಮತ್ತು ಗ್ಯಾಂಗ್‌ ರಾಜ್ಯವ್ಯಾಪಿ ಕುಖ್ಯಾತಿ ಗಳಿಸಿದ್ದರು. ಅದಾದ ನಂತರ ಶಿವಮೊಗ್ಗದಲ್ಲಿ ಹಂದಿ ಅಣ್ಣಿ ಗ್ಯಾಂಗ್‌ ರಕ್ತಸಿಕ್ತ ಅಧ್ಯಾಯ ಮುಂದುವರೆಯುತ್ತದೆ. ಆದರೆ 2012ರ ನಂತರ ಹಂದಿ ಅಣ್ಣಿ ಗ್ಯಾಂಗ್‌ ಮೇಲೂ ದಾಳಿಗಳು ಆಗಲು ಆರಂಭಿಸಿತು. ಜೈಲಿನಿಂದ ಬಿಡುಗಡೆಯಾದ ಹಂದಿ ಅಣ್ಣಿ ತಮ್ಮ ಗಿರಿಯನ್ನು ರೌಡಿ ಅಜ್ರು ತಂಡ ಹೊಡೆದುಹಾಕತ್ತೆ. ಗಿರಿ ಮೇಲೆ ಮನಸೋ ಇಚ್ಚೆ ದಾಳಿ ಮಾಡಿದ ಅಜ್ರು ತಂಡ ಅಲ್ಲಿಂದ ಮರೆಯಾಗಿತ್ತು. ನಂತರ ಮೆಗ್ಗಾನ್‌ ಆಸ್ಪತ್ರೆಗೆ ಸೇರಿಸಿದ್ದೇನೋ ನಿಜ ಆದರೆ ಉಳಿಯಲಿಲ್ಲ. 

ಇದನ್ನೂ ಓದಿ: ನಡುರಸ್ತೆಯಲ್ಲೇ ಕಾಂಗ್ರೆಸ್ ಮುಖಂಡನ ಬರ್ಬರ ಹತ್ಯೆ!

ಇದಾದ ನಂತರ ಮತ್ತೆ ಶಿವಮೊಗ್ಗದಲ್ಲಿ ಗ್ಯಾಂಗ್‌ ವಾರ್‌ಗಳು ಆರಂಭವಾದವು. ತಮ್ಮ ಗಿರಿಯ ಶವದ ಮೇಲೆ ಪ್ರಮಾಣ ಮಾಡಿದ್ದ ಹಂದಿ ಅಣ್ಣಿ, ರೌಡಿ ಅಜ್ರು ರುಂಡ ಕತ್ತರಿಸುವುದಾಗಿ ಪ್ರತಿಜ್ಞೆ ಮಾಡಿದ್ದ. ಅದಾದ ನಂತರ ಬೀದಿ ಹೊಡೆದಾಟಗಳು ಹೆಚ್ಚಾದವು. ಇದೀಗ ರೌಡಿ ಹಂದಿ ಅಣ್ಣಿಯನ್ನೇ ಬರ್ಬರವಾಗಿ ಕೊಲೆ ಮಾಡಲಾಗಿದೆ. ಪೊಲೀಸರು ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಆರಂಭಿಸಿದ್ದಾರೆ.

ಇದನ್ನೂ ಓದಿ: ಹುಬ್ಬಳ್ಳಿ: ಗುರೂಜಿ ಹತ್ಯೆ, ಆಂತರಿಕ ವಿಚಾರ ಬಯಲಿಗೆ ಪ್ರತ್ಯೇಕ ತಂಡ

click me!