ಬಡ್ಡಿ ದಂಧೆಗೆ ಭೀಮಾತೀರದಲ್ಲಿ ರೌಡಿ ಶೀಟರ್ ಹೆಣ ಉರುಳಿದೆ. ಹಾಡಹಗಲೆ ರೌಡಿಶೀಟರ್‌ನನ್ನ ರಸ್ತೆಯ ಮೇಲೆ ಕೊಚ್ಚಿ ಕೊಲ್ಲಲಾಗಿದೆ.
ವರದಿ: ಷಡಕ್ಷರಿ ಕಂಪೂನವರ್ ಏಷ್ಯಾನೆಟ್ ಸುವರ್ಣ ನ್ಯೂಸ್
ವಿಜಯಪುರ (ಜು.11): ಬಡ್ಡಿ ದಂಧೆಗೆ ಭೀಮಾತೀರದಲ್ಲಿ ರೌಡಿ ಶೀಟರ್ ಹೆಣ ಉರುಳಿದೆ. ಹಾಡಹಗಲೆ ಆಲಮೇಲ ಪೊಲೀಸ್ ಠಾಣೆಯ ರೌಡಿಶೀಟರ್‌ನನ್ನ ರಸ್ತೆಯ ಮೇಲೆ ಕೊಚ್ಚಿ ಕೊಲ್ಲಲಾಗಿದೆ. ಹಾಡುಹಗಲೆ ಹತ್ಯೆ ನಡೆದಿದ್ದು ಜನರಲ್ಲಿ ಆತಂಕ ಮೂಡಿಸಿದೆ. ಮಾರಕಾಸ್ತ್ರ ಬಳಸಿ ಕೊಲೆ ಮಾಡಿರುವ ಅಪರಿಚಿತ ಹಂತಕರು ಪರಾರಿಯಾಗಿದ್ದಾರೆ
ದೇವರನಾವದಗಿಯ ನಡುರಸ್ತೆಯಲ್ಲೆ ಹತ್ಯೆ!
ಜಿಲ್ಲೆಯ ಆಲಮೇಲ ಸಮೀಪದ ದೇವರನಾವದಗಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಕೊಲೆಯಾದ ರೌಡಿಶೀಟರ್ ನನ್ನು ಮಾಳಪ್ಪ ಯಮನಪ್ಪ ಮೇತ್ರಿ (40) ಎಂದು ಗುರುತಿಸಲಾಗಿದೆ. ಇತನನ್ನು ದುರ್ಷ್ಕಮಿಗಳು ಮಚ್ಚು, ಲಾಂಗಗಳಿಂದ ತಲೆಗೆ ಹೊಡೆದು ಬರ್ಬರವಾಗಿ ಹತ್ಯೆ ಮಾಡಿ ಪರಾರಿಯಾಗಿದ್ದಾರೆ. ಇನ್ನು ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ವಿಜಯಪುರ ಎಸ್ಪಿ ಹೆಚ್ ಡಿ ಆನಂದಕುಮಾರ್ ಧಾವಿಸಿ ಸ್ಥಳ ಪರಿಶೀಲನೆ ನಡೆಸಿದ್ದಾರೆ. ಹಂತಕರ ಹೆಡೆಮುರಿಕಟ್ಟುವಂತೆ ಅಧಿಕಾರಿಗಳಿಗೆ ತಾಕೀತು ಮಾಡಿದ್ದಾರೆ.
ಕಳಪೆ ರಸ್ತೆ ಕಾಮಗಾರಿ ವೀಕ್ಷಣೆಗೆ ಬಂದ ಎಂಜಿನಿಯರ್ ಗೆ ಕಲ್ಲು ಹೊಡೆದ ಗ್ರಾಮಸ್ಥರು!
ಬಡ್ಡಿದಂಧೆಗೆ ಹತ್ಯೆಯಾದನಾ ಮಾಳಪ್ಪ?
ಮೇಲ್ನೋಟಕ್ಕೆ ರೌಡಿ ಶೀಟರ್ ಮಾಳಪ್ಪ ಮೇತ್ರಿ ಹತ್ಯೆಗೆ ಆತನ ಬಡ್ಡಿ ದಂಧೆ ಕಾರಣ ಎನ್ನಲಾಗ್ತಿದೆ. ಜನರಿಗೆ ಅತಿ ಹೆಚ್ಚಿನ ಬಡ್ಡಿಗೆ ಹಣ ಸಾಲ ನೀಡಿ ಸುಲಿಗೆ ಮಾಡುತ್ತಿದ್ದ, 10 ರಿಂದ 15 ಸಾವಿರದಷ್ಟು ಸಾಲ ನೀಡಿ ಮೀಟರ ಬಡ್ಡಿ, ಚಕ್ರ ಬಡ್ಡಿಗಳ ಮೂಲಕ ಸಾಲ ವಸೂಲಿ ಮಾಡ್ತಿದ್ದ ಎನ್ನಲಾಗ್ತಿದೆ. ಕೆಲವರಿಗೆ ಕೇವಲ ಸಾವಿರಾರು ರೂಪಾಯಿ ಸಾಲ ನೀಡಿ ಬಳಿಕ ಧಮ್ಕಿ ಹಾಕಿ ಲಕ್ಷಾಂತರ ರೂಪಾಯಿ ವಸೂಲಿ ಮಾಡಿದ್ದ ಎನ್ನುವ ಮಾತುಗಳು ಕೇಳಿ ಬರ್ತಿವೆ. ಬಡ್ಡಿ ಕೊಡದಿದ್ದರೆ ಅಂತವರಿಗೆ ಟಾರ್ಚರ್ ನೀಡುತ್ತಿದ್ದ, ಇದೆ ಟಾರ್ಚರ್ ನಿಂದಾಗಿ ದೇವರನಾವದಗಿ ಸೇರಿ ಆಲಮೇಲ ಸುತ್ತಮುತ್ತಲಿನ ಹಳ್ಳಿಗಳಲ್ಲಿ ಬಡ್ಡಿ ವ್ಯವಹಾರ ಇತ್ತು ಎನ್ನಲಾಗಿದೆ. ಇದೆ ಬಡ್ಡಿದಂಧೆ ಕಾರಣಕ್ಕಾಗಿಯೇ ಹೆಣ ಬಿದ್ದಿರಬಹುದು ಎಂದು ಶಂಕಿಸಲಾಗಿದೆ.
ಹಂತಕರಿಗಾಗಿ ಬಲೆ ಬೀಸಿದ ಪೊಲೀಸರು
ಇತ್ತ ಮಾಳಪ್ಪ ಹತ್ಯೆಯಾದ ಘಟನಾಸ್ಥಳಕ್ಕೆ ವಿಜಯಪುರ ಎಸ್ಪಿ ಹೆಚ್ ಡಿ ಆನಂದಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರಾಥಮಿಕ ಮಾಹಿತಿಯಲ್ಲಿ ಇದೊಂದು ಬಡ್ಡಿದಂಧೆ ಹಿನ್ನೆಲೆ ನಡೆದ ಕೊಲೆ ಎನ್ನಲಾಗಿದೆ. ಮಲ್ಲಿಕಾರ್ಜುನ್ ಜನಿವಾರ ಎಂಬಾತನಿಗೆ ಮಾಳಪ್ಪ ಬಡ್ಡಿಯಂತೆ ಸಾಲ ನೀಡಿದ್ದ, ಹಣ ಕೊಡುವುದಾಗಿ ಕರೆಯಿಸಿ ಮಲ್ಲಿಕಾರ್ಜು ಜನಿವಾರ್ ಹಾಗೂ ಸಹಚರರೇ ಕೊಲೆ ಮಾಡಿರಬಹುದು ಎನ್ನುವ ಅನುಮಾನ ಪೊಲೀಸರಿಗಿದೆ. ಕೊನೆಯ ಕರೆಯು ಮಲ್ಲಿಕಾರ್ಜುನ್ ಇದ್ದು, ಸದ್ಯ ಪರಾರಿಯಾದ್ದಾನೆ ಎಂದು ಏಷ್ಯಾನೆಟ್ ಸುವರ್ಣ ನ್ಯೂಸ್ ಡಾಟ್ ಕಾಮ್ (asianet suvarna news.com) ಗೆ ಎಸ್ಪಿ ಆನಂದಕುಮಾರ್ ಮಾಹಿತಿ ನೀಡಿದ್ದಾರೆ.
ಪುನೀತ್ ರಾಜ್ ಕುಮಾರ್ ಪೋಟೊ ತೆಗೆಸಿದ್ದೆ ಯುವ ಬ್ರಿಗೇಡ್ ಕಾರ್ಯಕರ್ತನ ಕೊಲೆಗೆ
ಹಣಕೊಡ್ತೀವಿ ಬಾ ಎಂದು ಕರೆದು ಹತ್ಯೆ ಶಂಕೆ?
ಇನ್ನು ಕೆಲ ಮಾಹಿತಿಗಳಂತೆ ರೌಡಿಶೀಟರ್ ಮಾಳಪ್ಪ ಆಲಮೇಲ ಭಾಗದಲ್ಲಿ ಬಡ್ಡಿಕುಳ ಎಂದೆ ಕುಖ್ಯಾತಿ ಪಡೆದಿದ್ದ. ಈತನಿಂದ ಹಣ ಸಾಲ ಪಡೆದು ಟಾರ್ಚರ್ ಪಡೆದವರು ಹತ್ಯೆ ಮಾಡಿರುವ ಶಂಕೆಯು ವ್ಯಕ್ತವಾಗಿದೆ. ಬಡ್ಡಿ ಸಮೇತ ಸಾಲದ ಹಣ ನೀಡ್ತೀವಿ ಎಂದು ಕರೆದು ಹತ್ಯೆ ಮಾಡಿರಬಹುದು ಎನ್ನುವ ಅನುಮಾನಗಳು ಇವೆ.
ಮಾಳಪ್ಪನ ಮೇಲೆ ಇದ್ವು ಹತ್ತಾರು ಕ್ರಿಮಿನಲ್ ಕೇಸ್
ಕೊಲೆಯಾದ ಮಾಳಪ್ಪ ಮೇತ್ರಿ ಏನು ಸಾಧಾರಣ ಆಸಾಮಿಯಾಗಿರಲಿಲ್ಲ. ಈತನ ಮೇಲು ಹತ್ತಾರು ಕ್ರಿಮಿನಲ್ ಕೇಸ್ ಗಳಿದ್ದವು. ಕಂಟ್ರಿ ಪಿಸ್ತುಲ್ ಹೊಂದಿದ ಕಾರಣ ಭಾರತೀಯ ಶಸ್ತ್ರಾಸ್ತ್ರ ಕಾಯ್ದೆ ಅಡಿಯಲ್ಲಿ ಈತನ ಮೇಲೆ ಪ್ರಕರಣ ದಾಖಲಾಗಿತ್ತು. ಅಕ್ರಮ ಚಟುವಟಿಕೆ, ಕೊಲೆ ಪ್ರಕರಣಗಳಲ್ಲಿ ಭಾಗಿ ಸೇರಿದಂತೆ ಕೊಲೆ ಯತ್ನ ಪ್ರಕರಣಗಳು ಈತನ ಮೇಲಿದ್ದವು. ಹೀಗಾಗಿಯೇ 2002ರಲ್ಲಿ ಆಲಮೇಲ ಪೊಲೀಸರು ಈತನ ಮೇಲೆ ರೌಡಿಶೀಟರ್ ತೆಗೆದಿದ್ದರು.
ಕ್ರಿಮಿನಲ್ ಗಳಿಗೆ ಎಸ್ಪಿ ಮತ್ತೊಮ್ಮೆ ಖಡಕ್ ಎಚ್ಚರಿಕೆ
ಭೀಮಾತೀರದ ಆಲಮೇಲಕ್ಕೆ ಭೇಟಿ ನೀಡಿದ ಎಸ್ಪಿ ಆನಂದಕುಮಾರ್ ಮತ್ತೆ ಕ್ರಿಮಿನಲ್ ಗಳಿಗೆ ವಾರ್ನ್ ನೀಡಿದ್ದಾರೆ. ಭೀಮಾತೀರದಲ್ಲಿ ಶಾಂತಿ ಸುವ್ಯವಸ್ಥೆಗೆ ಧಕ್ಕೆ ತಂದೆ ಸುಮ್ಮನೆ ಬಿಡೋಲ್ಲ ಎಂದಿದ್ದಾರೆ. ಯಾರೇ ಈ ಭಾಗದ ಶಾಂತಿ ಸುವ್ಯವಸ್ಥೆ ಹಾಳು ಮಾಡಲು ಯತ್ನಿಸಿದ್ರು ಅಂತವ್ರ ಹೆಡೆಮುರಿ ಕಟ್ಟದೆ ಬಿಡೋದಿಲ್ಲ ಎನ್ನುವ ಮೂಲಕ ಖಡಕ್ ಸಂದೇಶ ನೀಡಿದ್ದಾರೆ.
ಇತ್ತ ತಂದೆಯನ್ನೆ ಕೊಂದ ಮಗ
ಇನ್ನು ಮತ್ತೊಂದು ಕಡೆ ಕ್ಷುಲ್ಲಕ ಕಾರಣಕ್ಕೆ ತಂದೆಯನ್ನೇ ಮಗ ಕೊಂದ ಘಟನೆ ವಿಜಯಪುರದ ವೆಂಕಟೇಶ ನಗರದಲ್ಲಿ ನಡೆದಿದೆ. ಮೇಶ ಕೂಡಿಗನವರ ಕೊಲೆಯಾದವನು. ಆತನ ಮತ ಅಮೀತ ಕೊಲೆ ಮಾಡಿ ಪರಾರಿಯಾಗಿದ್ದಾನೆ. ಸ್ಥಳಕ್ಕೆ ಜಲನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಜಲನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.