ಯಾದಗಿರಿಯಲ್ಲಿ ಬಿಜೆಪಿ ಕಾರ್ಯಕರ್ತನ ಹತ್ಯೆ, ಹಿಂದೂ ಪರ ಸಂಘಟನೆ ಪ್ರತಿಭಟನೆ

By Gowthami K  |  First Published May 16, 2023, 5:15 PM IST

ಯಾದಗಿರಿಯಲ್ಲಿ ವಾಹನ ನಿಲುಗಡೆ ವಿಚಾರವಾಗಿ ನಡೆಯುತ್ತಿದ್ದ ಜಗಳ ಬಿಡಿಸಲು ಬಂದ ಬಿಜೆಪಿ ಕಾರ್ಯಕರ್ತನ ಹತ್ಯೆ. ಬಿಜೆಪಿ ಹಾಗೂ ಹಿಂದೂಪರ ಸಂಘಟನೆ ಕಾರ್ಯಕರ್ತರಿಂದ ಪ್ರತಿಭಟನೆ


ಯಾದಗಿರಿ (ಮೇ.16): ವಾಹನ ನಿಲುಗಡೆ ವಿಚಾರವಾಗಿ ನಡೆಯುತ್ತಿದ್ದ ಜಗಳ ಬಿಡಿಸಲು ಬಂದ ವ್ಯಕ್ತಿಯೊಬ್ಬನನ್ನು ಚಾಕುವಿನಿಂದ ಇರಿದು ಬರ್ಬರವಾಗಿ ಹತ್ಯೆ ಮಾಡಿದ ಘಟನೆ ಭಾನುವಾರ ರಾತ್ರಿ ಯಾದಗಿರಿ ನರದ ಹೊಸಳ್ಳಿ ಕ್ರಾಸ್‌ ಸಮೀಪದ ರಾಯಲ್‌ ಗಾರ್ಡನ್‌ ಹೋಟೆಲ್‌ ಬಳಿ ನಡೆದಿದೆ. ಹತ್ಯೆಗೀಡಾದ ವ್ಯಕ್ತಿಯನ್ನು ಶ್ರೀನಿವಾಸ್‌ (48) ಎಂದು ಗುರುತಿಸಲಾಗಿದ್ದು, ಯಾದಗಿರಿ ನಗರದಲ್ಲಿ ಅಸಾರ್‌ ಮೊಹಲ್ಲಾದಲ್ಲಿ ಮಂಡಕ್ಕಿ ವಗ್ಗರಣೆ ಹೋಟೆಲ್‌ ನಡೆಸುತ್ತಿದ್ದ. ಶ್ರೀನಿವಾಸ್‌ ಸ್ಥಳೀಯ ಬಿಜೆಪಿ ಸಕ್ರಿಯ ಕಾರ್ಯಕರ್ತನಾಗಿದ್ದು, ಮೊನ್ನೆಯಷ್ಟೇ ನಡೆದ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಪರ ಪ್ರಚಾರದಲ್ಲಿಯೂ ತೊಡಗಿಸಿಕೊಂಡಿದ್ದ. ಹತ್ಯೆ ಖಂಡಿಸಿ, ಬಿಜೆಪಿ ನಗರದಲ್ಲಿ ಪ್ರತಿಭಟನೆ ನಡೆಸಿದೆ.

ಘಟನೆಯ ಹಿನ್ನೆಲೆ:
ಭಾನುವಾರ ರಾತ್ರಿ 10.30ರ ಸುಮಾರಿಗೆ ಹೊಸಳ್ಳಿ ಕ್ರಾಸ್‌ ಬಳಿ ಇರುವ ರಾಯಲ್‌ ಗಾರ್ಡನ್‌ ಹೋಟೆಲ್‌ ಎದುರೇ ಹತ್ಯೆ ಪ್ರಕರಣ ನಡೆದಿದೆ. ಹೋಟೆಲ್‌ ಸಮೀಪದ ವೈನ್‌ ಶಾಪ್‌ ಮಾಲೀಕ ಚಂದ್ರಶೇಖರ್‌ ಗುತ್ತೇದಾರ್‌ ಎಂಬುವವರು ನಿಲ್ಲಿಸಿದ್ದ ಕಾರಿನ ಹಿಂಭಾಗದಲ್ಲಿ ಬೈಕು ಹಾಗೂ ಮತ್ತೊಂದು ಕಾರು ನಿಂತಿದ್ದವು.

Latest Videos

undefined

ಈ ವಾಹನಗಳು ಹೋಟೆಲ್‌ ಊಟಕ್ಕೆ ಬಂದಿದ್ದ ಗ್ರಾಹಕರಾಗಿದ್ದಿರಬಹುದು ಎಂದು ಭಾವಿಸಿದ್ದ ಚಂದ್ರಶೇಖರ್‌, ರಾಯಲ್‌ ಹೋಟೆಲ್‌ನೊಳಗೆ ಹೋಗಿ ಕೌಂಟರ್‌ ಬಳಿ ಇದ್ದ ಮಾಲೀಕನಿಗೆ ತಿಳಿಸಿದ್ದಾರೆ. ಊಟಕ್ಕೆ ಬಂದವರ ಪೈಕಿ ಈ ವಾಹನಗಳಿದ್ದ ತೆಗೆಸುವಂತೆ ಹೇಳಿದಾಗ, ಅಲ್ಲಿ ಸಣ್ಣ ಮಾತಿನ ಚಕಮಕಿ ನಡೆದಿದೆ.

ಈ ಸಂದರ್ಭದಲ್ಲಿ ಅಲ್ಲಿಯೇ ಊಟ ಮಾಡುತ್ತಿದ್ದ ಶ್ರೀನಿವಾಸ್‌ ಈ ಜಗಳ ಬಿಡಿಸಲು ಬಂದಾಗ, ಹೋಟೆಲ್‌ ಸಿಬ್ಬಂದಿ ಬಂದು ಚಾಕುವಿನಿಂದ ಇರಿದಿದ್ದಾರೆ. ಅಡ್ಡ ಬಂದ ಚಂದ್ರಶೇಖರ್‌ ಕೈಗೆ ಗಾಯಗಳಾಗಿವೆ. ಹೊಟ್ಟೆಬದಿ ಇರಿತದಿಂದಾಗಿ ತೀವ್ರವಾಗಿ ಗಾಯಗೊಂಡ ಶ್ರೀನಿವಾಸ್‌, ರಕ್ತಸ್ರಾವದಿಂದಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಘಟನೆ ಅರಿತ ಪೊಲೀಸರು ಸ್ಥಳಕ್ಕಾಗಮಿಸಿ, ಗಾಯಾಳುವನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸೋಮವಾರ ಸಂಜೆವರೆಗೆ ಆರು ಜನ ಆರೋಪಿಗಳನ್ನು ಬಂಧಿಸಿದ್ದಾರೆ. ಯಾದಗಿರಿಯ ಅಬ್ದುಲ್‌ ಸತ್ತಾರ್‌ (59), ಅಡುಗೆ ಮಾಡುತ್ತಿದ್ದ ಹೈದರಾಬಾದ್‌ ಮೂಲಕ ಮೊಹ್ಮದ್‌ ಅಬ್ದುಲ್‌ ಅನಾಸ್‌ ಖಾನ್‌ (20), ಪಶ್ಚಿಮ ಬಂಗಾಳ ಮೂಲದ ಅಡುಗೆ ಸಹಾಯಕರುಗಳಾದ ಖಾನುಜಾನ್‌, ಮುಜಫರ್‌ ಅಲಿ, ಓಡಿಸ್ಸಾ ಮೂಲದ ಮಕ್ಬೂಲ್‌ ಖಾನ್‌ ಹಾಗೂ ಸುನಿಲ್‌ ಬಂಧಿತರು. ಯಾದಗಿರಿ ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬಿಜೆಪಿ ಪ್ರತಿಭಟನೆ:
ಶ್ರೀನಿವಾಸ ಬರ್ಬರ ಹತ್ಯೆ ಖಂಡಿಸಿ, ಸೋಮವರ ನಗರದ ಗಾಂಧಿ ಚೌಕಿನಲ್ಲಿ ಬಿಜೆಪಿ ನಗರ ಮಂಡಳ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಚುನಾವಣೆ ಫಲಿತಾಂಶದಲ್ಲಿ ರಾಜ್ಯದಲ್ಲಿ ಕಾಂಗ್ರೆಸ್‌ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ 48 ಗಂಟೆಗಳಲ್ಲೇ ಹಿಂದೂ ವ್ಯಕ್ತಿಗಳ ಮೇಲೆ ಹಲ್ಲೆ, ಕೊಲೆ ಪ್ರಕರಣಗಳು ದಾಖಲಾಗುತ್ತಿವೆ. ದೇಶದ್ರೋಹಿ ಸಂಘಟನೆಗಳು ಎಚ್ಚೆತ್ತುಕೊಂಡು ಇಂಥ ದುಷ್ಕೃತ್ಯದಲ್ಲಿ ತೊಡಗಿಕೊಂಡಿದ್ದು ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹಾಳು ಮಾಡಲು ಮುಂದಾಗುತ್ತಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಶ್ರೀನಿವಾಸ ಕುಟುಂಬಕ್ಕೆ ರಾಜ್ಯ ಸರ್ಕಾರ 50 ಲಕ್ಷ ರು.ಗಳ ಪರಿಹಾರ ಕೊಡಬೇಕು, ಮುಂದೆ ಈ ರೀತಿ ಘಟನೆ ನಡೆಯದಂತೆ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾ ಪ್ರಧಾನ ಕಾರ್ಯದರ್ಶಿ ವೆಂಕಟರಡ್ಡಿ ಅಬ್ಬೆತುಮಕೂರು ಆಗ್ರಹಿಸಿದರು.

ಕಣ್ಮುಂದೆ ಬೆಂಕಿ ಹಚ್ಚಿಕೊಂಡ ಅಕ್ಕನ ರಕ್ಷಿಸದೇ ವೀಡಿಯೋ ಮಾಡ್ತಾ ನಿಂತ ತಮ್ಮ

ನೀಲಕಂಠರಾಯ ಯಲ್ಹೇರಿ, ಹಣಮಂತ ಇಟಗಿ, ಸ್ವಾಮಿದೇವ ದಾಸನಕೇರಿ, ಮಂಜುನಾಥ ಜಡಿ, ರಮೇಶ ದೊಡ್ಮನಿ, ದೀಪಕ್‌ ಪೊದ್ದಾರ್‌, ರಾಜು ಏಕನಾಥ, ಶಿವರಾಜ ದಾಸನಕೆರಿ ಮುಂತಾದವರು ಪ್ರತಿಭಟನೆಯಲ್ಲಿದ್ದರು.

ಓಟು ಹಾಕಲು ಬಂದವಳಿಗ ಅಪಘಾತ, ಸಾವು ಬದುಕಿನ ಹೋರಾಟದಲ್ಲಿ ನರ್ಸಿಂಗ್

ಹತ್ಯೆಯಾದ ಶ್ರೀನಿವಾಸ್‌ ಯಾದಗಿರಿ ನಗರದ ಮುಸ್ಲಿಂ ಬಾಹುಳ್ಯವಿರುವ ಅಸಾರ್‌ ಮೊಹಲ್ಲಾದಲ್ಲಿ ಸಣ್ಣ ಕ್ಯಾಂಟೀನ್‌ ಇಟ್ಟುಕೊಂಡಿದ್ದ. ಹತ್ಯೆ ವಿಷಯ ತಿಳಿದ ಮೊಹಲ್ಲಾದ ಮುಸ್ಲಿಂ ಸಮುದಾಯದ ಆತನ ಪರಿಚಿತರೂ ಸಹ ಆಗಮಿಸಿದ್ದರು. ತಮ್ಮೊಡನೆ ಶ್ರೀನಿವಾಸ್‌ ಸಂಬಂಧ ಚೆನ್ನಾಗಿತ್ತು ಎಂದು ಮೆಲುಕು ಹಾಕಿದರು. ಶ್ರೀನಿವಾಸ್‌ ಕುಟುಂಬಸ್ಥರ ರೋದನ ಮುಗಿಲು ಮುಟ್ಟಿತ್ತು.

click me!