Kodagu: ಆಹಾರ ಅರಸಿ ಬಂದ 10 ತಿಂಗಳ ಗರ್ಭಿಣಿ ಕಾಡಾನೆಯನ್ನು ಗುಂಡಿಕ್ಕಿ ಕೊಂದ ಕಿರಾತಕರು!

By Suvarna News  |  First Published May 21, 2023, 5:50 PM IST

 ತೋಟಕ್ಕೆ ನುಗ್ಗುತ್ತವೆಯೆಂದು ಆಹಾರ ಅರಸಿ ಬಂದ 10 ತಿಂಗಳ ಗರ್ಭಿಣಿ ಕಾಡಾನೆಯನ್ನು ಗುಂಡಿಕ್ಕಿ ಕೊಂದು ಕಿರಾತಕರು ತಲೆಮರೆಸಿಕೊಂಡಿರುವ ಘಟನೆ ಕೊಡಗಿನಲ್ಲಿ ನಡೆದಿದೆ.


ವರದಿ : ರವಿ.ಎಸ್ ಹಳ್ಳಿ ಏಷ್ಯಾನೆಟ್ ಸುವರ್ಣ ನ್ಯೂಸ್

ಕೊಡಗು (ಮೇ.21): ವನ್ಯಜೀವಿ ಹಾಗೂ ಮಾನವನ ನಡುವಿನ ಸಂಘರ್ಷ ಕೊಡಗು ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ತೀವ್ರಗೊಳ್ಳುತ್ತಲೇ ಇದೆ. ವರ್ಷಂ ಪ್ರತಿ ಕಾಡಿನ ಪ್ರಮಾಣ ಕಡಿಮೆಯಾದಂತೆ ಆಹಾರ ಮತ್ತು ನೀರಿನ ಪ್ರಮಾಣವೂ ಕಡಿಮೆಯಾಗಿ ಜನ ವಸತಿ ಮತ್ತು ರೈತರ ಹೊಲ ಗದ್ದೆಗಳಿಗೆ ಆನೆಗಳು ನುಗ್ಗುವುದು ಸರ್ವೇ ಸಾಮಾನ್ಯ ಎನ್ನುವಂತೆ ಆಗಿದೆ. ಹೀಗೆ ತನ್ನ ದೊಡ್ಡದಾದ ಹೊಟ್ಟೆಯನ್ನು ತುಂಬಿಸಿಕೊಂಡು, ಅಸಿವು ನೀಗಿಸಿಕೊಳ್ಳಲು ತೋಟದತ್ತ ನುಗ್ಗಿದ 10 ತಿಂಗಳ ಗರ್ಭಿಣಿ ಹೆಣ್ಣಾನೆಯೊಂದು ದಾರುಣವಾಗಿ ಉಸಿರು ಚೆಲ್ಲಿದ ಘಟನೆ ಕೊಡಗು ಜಿಲ್ಲೆ ಕುಶಾಲನಗರ ತಾಲ್ಲೂಕಿನ ರಸೂಲ್ ಪುರ ಬಾಳುಗೋಡಿನಲ್ಲಿ ಶನಿವಾರ ತಡರಾತ್ರಿ ನಡೆದಿದೆ. ಆಹಾರ ಅರಸಿ ಕಾಡಿನಿಂದ ನಾಡಿಗೆ ಬಂದ ಈ ಹೆಣ್ಣಾನೆಯನ್ನು ಕಿಡಿಗೇಡಿಗಳು ಗುಂಡಿಟ್ಟು ಹತ್ಯೆ ಮಾಡಿದ್ದಾರೆ. ಅಂದಾಜು 20 ವರ್ಷದ ಹೆಣ್ಣಾನೆಯನ್ನು ಶೂಟ್ ಮಾಡಿ ಹತ್ಯೆ ಮಾಡಲಾಗಿದೆ.

Latest Videos

undefined

ರಸೂಲ್ ಪುರ, ಬಾಳುಗೋಡು ಹಾಗೆ ದುಬಾರೆ ಭಾಗದಲ್ಲಿ ಕಾಡಾನೆಗಳ ಕಾಟ ಹೊಸದೇನು ಅಲ್ಲ. ಆ ಭಾಗದಲ್ಲೆಲ್ಲಾ ಸಾಕಷ್ಟು ಅರಣ್ಯ ಪ್ರದೇಶ ಇರುವುದರಿಂದ ಅಲ್ಲಿರುವ ಆನೆಗಳು ಪ್ರತೀ ರಾತ್ರಿ ಕಾಡಿನಿಂದ ನಾಡಿಗೆ ಆಹಾರ ಅರಸಿ ಬಂದೇ ಬರುತ್ತವೆ. ಇದಕ್ಕಾಗಿ ರೈತರು, ಅರಣ್ಯ ಇಲಾಖೆ ಕಾಡಿನ ಅಂಚಿನಲ್ಲಿ ಸೋಲಾರ್ ವಿದ್ಯುತ್ ಬೇಲಿಯನ್ನು ನಿರ್ಮಿಸಲಾಗಿದೆ. ಆದರೆ ಇವುಗಳು ಸರಿಯಾಗಿ ಕೆಲಸ ಮಾಡದ ಹಿನ್ನೆಲೆಯಲ್ಲಿ ಆನೆಗಳು ಸುಲಭವಾಗಿ ರೈತರ ತೋಟ ಗದ್ದೆಗಳಿಗೆ ನುಗ್ಗುತ್ತವೆ. ಹೀಗೆ ರಾತ್ರಿಯೂ ಕೂಡ ಕಾಫಿ ತೋಟಗಳಿಗೆ ನುಗ್ಗಿದ ಹೆಣ್ಣಾನೆಯೊಂದಕ್ಕೆ ಶೂಟ್ ಮಾಡಿ ಹತ್ಯೆ ಮಾಡಲಾಗಿದೆ. ಶೂಟ್ ಮಾಡುತ್ತಿದ್ದಂತೆ ಆನೆ ಸ್ಥಳದಲ್ಲಿಯೇ ಸತ್ತು ಬಿದ್ದಿದೆ. 

ಡಿಂಪು ಎಂಬುವವರ ತೋಟದಲ್ಲಿ ಆನೆ ಸತ್ತು ಬಿದ್ದಿದೆ. ವಿಷಯ ತಿಳಿಯುತ್ತಿದ್ದಂತೆ ಬೆಳಿಗ್ಗೆಯೇ ಸ್ಥಳಕ್ಕೆ ಮಡಿಕೇರಿ ಡಿಎಫ್ಓ ಶಿವರಾಮ್ ಬಾಬು, ಕುಶಾಲನಗರ ಆರ್ಎಫ್ಓ ಶಿವರಾಮ್, ದುಬ್ಬಾರೆ ವ್ಯಾಪ್ತಿಯ ಡಿಆರ್ಎಫ್ಓ ಕೆ.ಪಿ. ರಂಜನ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆನೆಯು ಸತ್ತು ಬಿದ್ದಿರುವ ತೋಟದ ಮಾಲೀಕರಾದ ಡಿಂಪು ಮತ್ತು ಅದೇ ಗ್ರಾಮದ ಮತ್ತೋರ್ವ ವ್ಯಕ್ತಿ ದಿನೇಶ್ ಎಂಬುವವರ ಮೇಲೆ ಅರಣ್ಯ ಇಲಾಖೆ ಅಧಿಕಾರಿಗಳು ಅನುಮಾನ ವ್ಯಕ್ತಪಡಿಸಿದ್ದಾರೆ.

ಬೆಂಗಳೂರಿನ ರೌಡಿಶೀಟರ್ ಅಲ್ಯೂಮಿನಿಯಂ ಬಾಬು ತಮಿಳುನಾಡಿನಲ್ಲಿ ಭೀಕರ ಹತ್ಯೆ!

ಆನೆ ಸತ್ತು ಬಿದ್ದಿರುವ ಜಾಗದಲ್ಲಿ ಗುಂಡಿನ ಕಾಟ್ರೇಜ್ಗಳು ಕೂಡ ಸಿಕ್ಕಿದ್ದು, ಇದರಿಂದ ಯಾರು ಆನೆಯನ್ನು ಶೂಟ್ ಮಾಡಿ ಹತ್ಯೆ ಮಾಡಿದ್ದಾರೆ ಎನ್ನುವುದನ್ನು ಪತ್ತೆ ಹಚ್ಚಲು ಸುಲಭವಾಗಲಿದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಅನುಮಾನ ವ್ಯಕ್ತಪಡಿಸಿರುವ ಇಬ್ಬರು ವ್ಯಕ್ತಿಗಳು ತಲೆಮರೆಸಿಕೊಂಡಿದ್ದು ಅರಣ್ಯ ಇಲಾಖೆ ಪೊಲೀಸರು ಇಬ್ಬರಿಗಾಗಿ ಹುಡುಕಾಟ ನಡೆಸಿದ್ದಾರೆ. ಹತ್ಯೆಯಾಗಿರುವ ಆನೆಯನ್ನು ಸ್ಥಳದಲ್ಲಿಯೇ ಮರಣೋತ್ತರ ಪರೀಕ್ಷೆ ಮಾಡಲಾಗಿದೆ. ಆನೆಗೆ ಎರಡು ಸುತ್ತಿನ ಗುಂಡು ಹಾರಿಸಲಾಗಿದ್ದು, ಇದು ಉದ್ದೇಶ ಪೂರ್ವಕವಾಗಿಯೇ ಗುಂಡು ಹೊಡೆದು ಹತ್ಯೆ ಮಾಡಿರುವುದು ಎನ್ನಲಾಗಿದೆ.

Bengaluru: ಜೀವನದಲ್ಲಿ ಎಂಜಾಯ್ ಮಾಡೋಕೆ 2 ಕೋಟಿ ನೀಡಿ ತಂದೆಯನ್ನೇ ಹತ್ಯೆ ಮಾಡಿಸಿದ

ಒಂದು ಗುಂಡು ಆನೆಯ ತಲೆಗೆ ಸರಿಯಾಗಿ ಬಿದ್ದಿದ್ದರೆ, ಮತ್ತೊಂದು ಗುಂಡು ಕುತ್ತಿಗೆಗೆ ಹೊಕ್ಕಿದೆ. ಹೀಗಾಗಿ ಆನೆ ಸ್ಥಳದಲ್ಲಿಯೇ ಮೃತಪಟ್ಟಿದೆ ಎಂದು ಶಿವರಾಮ್ ಬಾಬು ತಿಳಿಸಿದ್ದಾರೆ. ಆನೆ 10 ತಿಂಗಳ ಗರ್ಭಿಣಿಯಾಗಿತ್ತು ಎನ್ನುವುದು ಮರಣೋತ್ತರ ಪರೀಕ್ಷೆ ವೇಳೆ ಗೊತ್ತಾಗಿದೆ. ಇನ್ನು ಕೆಲವು ತಿಂಗಳು ಕಳೆದಿದ್ದರೆ ಆನೆ ಮರಿಯೊಂದಕ್ಕೆ ಜೀವ ನೀಡುತಿತ್ತು. ಆನೆ ಮೃತಪಟ್ಟಿದ್ದರಿಂದ ಹೊಟ್ಟೆಯಲ್ಲಿದ್ದ ಮರಿಯೂ ಕಣ್ಬಿಡುವುದಕ್ಕೂ ಮುನ್ನವೇ ಸಾವನ್ನಪ್ಪಿದೆ. ಮರಣೋತ್ತರ ಪರೀಕ್ಷೆ ಬಳಿಕ ಅಲ್ಲಿಯೇ ಆನೆ ಶವ ಸಂಸ್ಕಾರ ಮಾಡಲಾಗಿದೆ.

click me!