ರಾಜ್ಯದ ಆಡಳಿತಾರೂಢ ಬಿಜೆಪಿ ಸರ್ಕಾರಕ್ಕೆ ಸವಾಲು ಹಾಗೂ ಪ್ರತಿಷ್ಠೆಯಾಗಿ ಪರಿಣಮಿಸಿದ್ದ ದ.ಕ. ಯುವಮೋರ್ಚಾ ಕಾರ್ಯಕಾರಿಣಿ ಸದಸ್ಯ, ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದ ಪ್ರಮುಖ ಆರೋಪಿಯನ್ನು ಪತ್ತೆ ಮಾಡುವಲ್ಲಿ ದ.ಕ. ಪೊಲೀಸರು ಬಹುತೇಕ ಯಶಸ್ವಿಯಾಗಿದ್ದಾರೆ.
ಮಂಗಳೂರು (ಜು.31): ರಾಜ್ಯದ ಆಡಳಿತಾರೂಢ ಬಿಜೆಪಿ ಸರ್ಕಾರಕ್ಕೆ ಸವಾಲು ಹಾಗೂ ಪ್ರತಿಷ್ಠೆಯಾಗಿ ಪರಿಣಮಿಸಿದ್ದ ದ.ಕ. ಯುವಮೋರ್ಚಾ ಕಾರ್ಯಕಾರಿಣಿ ಸದಸ್ಯ, ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದ ಪ್ರಮುಖ ಆರೋಪಿಯನ್ನು ಪತ್ತೆ ಮಾಡುವಲ್ಲಿ ದ.ಕ. ಪೊಲೀಸರು ಬಹುತೇಕ ಯಶಸ್ವಿಯಾಗಿದ್ದಾರೆ. ಮಹತ್ವದ ಸುಳಿವಿನ ಮೇರೆಗೆ ಕೇರಳ ಮೂಲದ ಶಂಕಿತ ಯುವಕನೊಬ್ಬನನ್ನು ಶನಿವಾರ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಪ್ರವೀಣ್ ಹತ್ಯೆ ಘಟನೆಯಲ್ಲಿ ಇಬ್ಬರು ಆರೋಪಿಗಳನ್ನು ಈಗಾಗಲೇ ಬಂಧಿಸಿರುವ ಪೊಲೀಸರು ಮೂರನೇ ವ್ಯಕ್ತಿಯಾದ ಈತನೇ ಪ್ರಮುಖ ಸೂತ್ರಧಾರ ಎಂಬುದನ್ನು ಪತ್ತೆ ಮಾಡುವಲ್ಲಿ ಸಫಲರಾಗಿದ್ದಾರೆ ಎಂದು ಮೂಲಗಳು ಹೇಳುತ್ತಿವೆ.
ಜು.26ರಂದು ರಾತ್ರಿ ಬೆಳ್ಳಾರೆಯಲ್ಲಿ ಕೋಳಿ ಅಂಗಡಿ ಬಂದ್ ಮಾಡಿ ಹೊರಡುವ ವೇಳೆಗೆ ಬೈಕ್‌ನಲ್ಲಿ ಬಂದ ಮೂವರು ದುಷ್ಕರ್ಮಿಗಳು ಪ್ರವೀಣ್‌ಗೆ ತಲವಾರಿನಿಂದ ಕಡಿದು ಪರಾರಿಯಾಗಿದ್ದರು. ಗಂಭೀರ ಗಾಯಗೊಂಡಿದ್ದ ಪ್ರವೀಣ್ ಆಸ್ಪತ್ರೆಗೆ ಸಾಗಿಸುವ ಮಧ್ಯೆ ಮೃತಪಟ್ಟಿದ್ದರು. ಈ ಘಟನೆ ಎಲ್ಲಡೆಗೆ ದಿಗ್ಭ್ರಮೆ ಮೂಡಿಸಿತ್ತಲ್ಲದೆ, ಮರುದಿನ ಪಾರ್ಥೀವ ಶರೀರದ ಅಂತಿಮ ಯಾತ್ರೆ ವೇಳೆ ಬೆಳ್ಳಾರೆಯಲ್ಲಿ ಲಾಠಿ ಚಾಜ್‌ರ್‍ಗೆ ಕಾರಣವಾಗಿತ್ತು. ಅಲ್ಲದೆ ಜನಪ್ರತಿನಿಧಿಗಳ ವಿರುದ್ಧವೇ ಹಿಂದೂ ಕಾರ್ಯಕರ್ತರು ತಿರುಗಿ ಬೀಳುವಂತಾಗಿತ್ತು. ಪ್ರವೀಣ್ ಮನೆಗೆ ಸಿಎಂ ಭೇಟಿ ವೇಳೆಯೂ ಇದು ಪ್ರತಿಧ್ವನಿಸಿತ್ತು.
Chikkamagaluru: ಕರಾವಳಿಯಲ್ಲಿ ಪ್ರವೀಣ್ ಹತ್ಯೆ ಪ್ರಕರಣ: ಇಸ್ಲಾಮಿಕ್ ರಾಷ್ಟ್ರ ಮಾಡಲು ಸಂಚು
ಈ ಎಲ್ಲ ಹಿನ್ನೆಲೆಯಲ್ಲಿ ಘಟನೆಯನ್ನು ಗಂಭೀರ ಪರಿಗಣಿಸಿದ ದ.ಕ. ಪೊಲೀಸರು ದುಷ್ಕರ್ಮಿಗಳ ಪತ್ತೆಗೆ ಆರು ತಂಡಗಳನ್ನು ರಚಿಸಿ ಕಾರ್ಯಾಚರಣೆಗೆ ಇಳಿದಿದ್ದರು. ಹತ್ಯೆ ಘಟನೆ ನಡೆದ ಎರಡೇ ದಿನದಲ್ಲಿ ಇಬ್ಬರು ಆರೋಪಿಗಳಾದ ಝಕೀರ್(29) ಸವಣೂರು ಮತ್ತು ಶಫೀಕ್(27) ಬೆಳ್ಳಾರೆ ಎಂಬಿಬ್ಬರನ್ನು ಬಂಧಿಸಿದ್ದರು. ಬಂಧಿತರು ಪ್ರವೀಣ್ ಹತ್ಯೆಗೆ ಹಂತಕರಿಗೆ ನೆರವು ನೀಡಿರುವ ಅಂಶವನ್ನು ತನಿಖೆ ವೇಳೆ ಹೇಳಿದ್ದರು. ಈ ಘಟನೆಗೆ ಕೇರಳ ಲಿಂಕ್ ಇರುವ ಬಗ್ಗೆ, ಪ್ರಮುಖ ಆರೋಪಿಗಳ ಬಗ್ಗೆ ಬಾಯಿಬಿಟ್ಟಿದ್ದರು ಎಂದು ಹೇಳಲಾಗಿದೆ. ಇದರ ಆಧಾರದಲ್ಲಿ ಪೊಲೀಸರ ಒಂದು ತಂಡ ಕೇರಳಕ್ಕೆ ತೆರಳಿ ಶಂಕಿತ ಆರೋಪಿ ಆಬೀದ್ ಎಂಬಾತನನ್ನು ವಶಕ್ಕೆ ತೆಗೆದುಕೊಂಡಿದೆ ಎಂದು ಕೇರಳ ಸುದ್ದಿ ಚಾನೆಲ್‌ವೊಂದು ವರದಿ ಮಾಡಿದೆ. ಆದರೆ ದ.ಕ. ಪೊಲೀಸರು ಈತನ ಬಂಧನ ಬಗ್ಗೆ ಅಧಿಕೃತವಾಗಿ ಘೋಷಣೆ ಮಾಡಿಲ್ಲ. ವಿಚಾರಣೆಗಾಗಿ ವಶಕ್ಕೆ ತೆಗೆದುಕೊಂಡಿರುವುದಾಗಿ ಅಷ್ಟೇ ಎಂದು ಹೇಳಿದ್ದಾರೆ.
ಹತ್ಯೆ ನಡೆಸಿದ ದಿನ ಕೇರಳದಲ್ಲಿ ಇರಲಿಲ್ಲ!: ಶಂಕಿತ ಆರೋಪಿ ಆಬೀದ್‌ನನ್ನು ಕೇರಳದ ತಲಶ್ಶೇರಿ ಬಳಿಯಿಂದ ದ.ಕ. ಪೊಲೀಸ್ ತಂಡ ಶನಿವಾರ ಬೆಳ್ಳಂಬೆಳಗ್ಗೆ ಅಲ್ಲಿನ ಪೊಲೀಸರ ಸಹಕಾರದಿಂದ ವಶಕ್ಕೆ ತೆಗೆದುಕೊಂಡಿದೆ. ತಲಶ್ಶೇರಿ ಬಳಿ ಉದಯ ಚಿಕನ್ ಹೆಸರಿನ ಸ್ಟಾಲ್‌ನಲ್ಲಿ ಆಬೀದ್ ಕೆಲಸ ಮಾಡುತ್ತಿದ್ದಾನೆ. ತಲಶ್ಶೇರಿ ಪ್ರದೇಶದಲ್ಲಿ ರಾಜಕೀಯ ಸಂಘಟನೆಯೊಂದರ ಸದಸ್ಯನಾಗಿ ಈತ ಗುರುತಿಸಿಕೊಂಡಿದ್ದ ಎಂಬುದನ್ನು ಪೊಲೀಸರು ಕಂಡುಕೊಂಡಿದ್ದಾರೆ. ಪ್ರವೀಣ್‌ನ ಕೊಲೆ ನಡೆದ ದಿನ ಶಂಕಿತ ಆಬೀದ್ ಕೇರಳದ ಊರಿನಲ್ಲಿ ಇರಲಿಲ್ಲ, ಚಿಕನ್ ಸ್ಟಾಲ್‌ಗೂ ಕೆಲಸಕ್ಕೆ ಹೋಗಿರಲಿಲ್ಲ ಎಂಬ ಮಾಹಿತಿ ಪೊಲೀಸರಿಗೆ ಲಭಿಸಿದೆ.
ಈ ಕೊಲೆಯ ಹಿಂದೆ ಉದ್ಯಮ ಮಾಫಿಯಾದ ಸಾಧ್ಯತೆ ಬಗ್ಗೆ ಮಲಯಾಳಂ ಚಾನೆಲ್ ವರದಿ ಮಾಡಿದೆ. ಪ್ರವೀಣ್ ಹತ್ಯೆ ಆರೋಪಿಗಳಿಗೆ ಕೇರಳ ಲಿಂಕ್ ಇರುವ ಶಂಕೆ ಮೇರೆಗೆ ದ.ಕ. ಪೊಲೀಸ್ ತಂಡ, ಕಾಸರಗೋಡು, ಕಾಞಂಗಾಡ್ ಹಾಗೂ ಕಣ್ಣೂರು ಪ್ರದೇಶಗಳಲ್ಲಿ ಕಾರ್ಯಾಚರಣೆ ಕೈಗೊಂಡಿತ್ತು. ಶಂಕಿತ ಆಬೀದ್‌ನನ್ನು ವಶಕ್ಕೆ ತೆಗೆದುಕೊಂಡು ಮಂಗಳೂರಿಗೆ ಕರೆತರಲಾಗುತ್ತಿದೆ. ಕೇರಳದಿಂದ ಆಬೀದ್‌ನನ್ನು ವಶಕ್ಕೆ ಪಡೆದ ನಂತರದ ಬೆಳವಣಿಗೆಯಲ್ಲಿ ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಎಡಿಜಿಪಿ ಅಲೋಕ್ ಕುಮಾರ್ ನೇತೃತ್ವದಲ್ಲಿ ಶನಿವಾರ ವಿಶೇಷ ಸಭೆ ನಡೆಸಲಾಗಿದೆ. ಈ ಸಭೆಯಲ್ಲಿ ಪಶ್ಚಿಮ ವಲಯ ಐಜಿಪಿ ದೇವಜ್ಯೋತಿ ರೇ, ಜಿಲ್ಲಾ ಎಸ್ಪಿ ಋುಷಿಕೇಶ್ ಸೋನವಾಣೆ, ಹೆಚ್ಚುವರಿ ಎಸ್ಪಿ ಕುಮಾರ್‌ಚಂದ್ರ, ವಿಶೇಷ ಅಧಿಕಾರಿ ಅನುಚೇತ್ ಮತ್ತಿತರರು ಪಾಲ್ಗೊಂಡಿದ್ದರು. ಪ್ರವೀಣ್ ಹತ್ಯೆಯನ್ನು ಕೂಲಂಕಷ ತನಿಖೆಗೆ ಒಳಪಡಿಸುವುದು ಸೇರಿದಂತೆ ಸುರತ್ಕಲ್ ಹತ್ಯೆಯನ್ನು ಬೇಧಿಸುವ ಬಗ್ಗೆಯೂ ಸಭೆಯಲ್ಲಿ ಚರ್ಚೆ ನಡೆಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಫಾಝಿಲ್ ಹತ್ಯೆ, ಶಂಕಿತರ ಸುಳಿವು ಪತ್ತೆ: ಸುರತ್ಕಲ್‌ನಲ್ಲಿ ಜು.28ರಂದು ರಾತ್ರಿ ನಡೆದ ಮೊಹಮ್ಮದ್ ಫಾಝಿಲ್ ಹತ್ಯೆಯ ದುಷ್ಕರ್ಮಿಗಳು ಸುಳಿವು ಲಭ್ಯವಾಗಿರುವ ಬಗ್ಗೆ ಪೊಲೀಸರು ಮಾಹಿತಿ ನೀಡಿದ್ದಾರೆ. ಇದೇ ವೇಳೆ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ ಎಂಬ ಸುದ್ದಿ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಇದನ್ನು ಪೊಲೀಸರು ನಿರಾಕರಿಸಿದ್ದಾರೆ. ಇಲ್ಲಿವರೆಗೆ ಒಟ್ಟು 21 ಮಂದಿಯನ್ನು ಶಂಕೆ ಮೇರೆಗೆ ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿದೆ. ಅದರಲ್ಲಿ 6 ಮಂದಿ ತೀವ್ರ ಶಂಕಿತರನ್ನು ವಿಚಾರಣೆಗೆ ಗುರಿಪಡಿಸಲಾಗಿದೆ. ಆರೋಪಿಗಳ ಸುಳಿವು ಬಹುತೇಕ ಲಭ್ಯವಾಗಿದ್ದು, ಶೀಘ್ರವೇ ಬಂಧಿಸುವ ವಿಶ್ವಾಸ ಇದೆ ಎಂದು ಎಡಿಜಿಪಿ ಅಲೋಕ್ ಕುಮಾರ್ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಎನ್ಐಎ ತನಿಖೆಗೆ ಎಲ್ಲರೂ ಒತ್ತಾಯಿಸೋದು ಯಾಕೆ ಅಂತ ಉತ್ತರ ಸಿಕ್ತು!
ಹತ್ಯೆಗೆ ಕಾರಣ ಪತ್ತೆಗೆ ಕ್ರಮ: ಇದೇ ವೇಳೆ ಫಾಝಿಲ್ ಬದಲು ಬೇರೊಬ್ಬರ ಹತ್ಯೆಗೆ ಹಂತಕರು ಸ್ಕೆಚ್ ಹಾಕಿದ್ದರು. ಅದು ತಪ್ಪಿದ ಬಳಿಕ ಅನ್ಯಕೋಮಿನ ಸ್ಥಳೀಯ ಅಂಗಡಿ ಮಾಲೀಕನ ಹತ್ಯೆಗೆ ಯತ್ನಿಸಲಾಗಿತ್ತು. ಅದು ಅಸಾಧ್ಯವಾದಾಗ ಫಾಝಿಲ್‌ನ್ನು ಹತ್ಯೆ ಮಾಡಲಾಗಿದೆ ಎಂಬ ಸುದ್ದಿ ಜಾಲತಾಣಗಳಲ್ಲಿ ಹರಿದಾಡುತ್ತಿದ್ದೆ. ಆದರೆ ಆರೋಪಿಗಳ ಪತ್ತೆಯಾಗದ ವಿನಃ ಹತ್ಯೆಗೆ ನಿಖರ ಕಾರಣ ಹೇಳಲು ಸಾಧ್ಯವಿಲ್ಲ. ಆದ್ದರಿಂದ ಯಾವುದೇ ಊಹಾಪೋಹಗಳಿಗೆ ಕಿವಿಗೊಡಬಾರದು ಎಂದು ಪೊಲೀಸ್ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.