ಅತಿಯಾದ ಸಲುಗೆ ಅತಿರೇಕಕ್ಕೆ ತಿರುಗಿದಾಗ ಏನೆಲ್ಲಾ ಅನರ್ಥಗಳು ಸಂಭವಿಸುತ್ತವೆ ಎನ್ನುವುದಕ್ಕೆ ಶಿಕ್ಷಕಿ ದೀಪಿಕಾ ಕೊಲೆ ಪ್ರಕರಣ ಸಾಕ್ಷಿಯಾಗಿದೆ. ಅಕ್ಕ.. ಅಕ್ಕ.. ಎಂದೇ ಹಿಂದೆ ತಿರುಗುತ್ತಿದ್ದ ಯುವಕನೇ ಆಕೆಯ ಉಸಿರುಗಟ್ಟಿಸಿ ಸಾಯಿಸಿ ಮಣ್ಣಿನಲ್ಲಿ ಸಮಾಧಿ ಮಾಡಿದನು. ಇದೀಗ ಪೊಲೀಸರಿಂದ ಬಂಧನಕ್ಕೊಳಗಾಗಿ ಜೈಲು ಕಂಬಿ ಹಿಂದೆ ಬಿದ್ದಿದ್ದಾನೆ.
ಮಂಡ್ಯ (ಜ.25): ಅತಿಯಾದ ಸಲುಗೆ ಅತಿರೇಕಕ್ಕೆ ತಿರುಗಿದಾಗ ಏನೆಲ್ಲಾ ಅನರ್ಥಗಳು ಸಂಭವಿಸುತ್ತವೆ ಎನ್ನುವುದಕ್ಕೆ ಶಿಕ್ಷಕಿ ದೀಪಿಕಾ ಕೊಲೆ ಪ್ರಕರಣ ಸಾಕ್ಷಿಯಾಗಿದೆ. ಅಕ್ಕ.. ಅಕ್ಕ.. ಎಂದೇ ಹಿಂದೆ ತಿರುಗುತ್ತಿದ್ದ ಯುವಕನೇ ಆಕೆಯ ಉಸಿರುಗಟ್ಟಿಸಿ ಸಾಯಿಸಿ ಮಣ್ಣಿನಲ್ಲಿ ಸಮಾಧಿ ಮಾಡಿದನು. ಇದೀಗ ಪೊಲೀಸರಿಂದ ಬಂಧನಕ್ಕೊಳಗಾಗಿ ಜೈಲು ಕಂಬಿ ಹಿಂದೆ ಬಿದ್ದಿದ್ದಾನೆ.
ಪಾಂಡವಪುರ ತಾಲೂಕು ಮಾಣಿಕ್ಯನಹಳ್ಳಿ ಗ್ರಾಮದ ನಿತೀಶ್‌ಕುಮಾರ್ (೨೨) ಬಂಧಿತ ಆರೋಪಿ. ಮೇಲುಕೋಟೆ ಶ್ರೀ ಯೋಗಾನರಸಿಂಹಸ್ವಾಮಿ ದೇವಾಲಯದ ಹಿಂದೆ ಜ.೨೦ರಂದು ದೀಪಿಕಾಳನ್ನು ಕೊಲೆ ಮಾಡಿ ಪರಾರಿಯಾಗಿದ್ದ ನಿತೀಶ್, ಹೊಸಪೇಟೆಯಲ್ಲಿರುವ ಖಚಿತ ಮಾಹಿತಿ ಮೇರೆಗೆ ಡಿವೈಎಸ್ಪಿ ಮುರಳಿ ನೇತೃತ್ವದ ಪೊಲೀಸರ ತಂಡ ದಾಳಿ ನಡೆಸಿ ವಶಕ್ಕೆ ಪಡೆದು ವಿಚಾರಣೆ ನಡೆಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಮೇಲುಕೋಟೆ ಶಿಕ್ಷಕಿ ಹಂತಕ ಹೊಸಪೇಟೆಯಲ್ಲಿ ಅರೆಸ್ಟ್: 'ಅಪ್ಪಾಜಿ ದೀಪಿಕಾ ಅಕ್ಕಾ ಸಿಕ್ಕಿದ್ರಾ' ಅಂತ ಕೇಳಿದ್ದ ಕೊಲೆಗಾರ!
ಮಾಣಿಕ್ಯನಹಳ್ಳಿ ಗ್ರಾಮದ ವೆಂಕಟೇಶ್ ಪುತ್ರಿ ದೀಪಿಕಾ ಅದೇ ಗ್ರಾಮದ ಲೋಕೇಶ್‌ನನ್ನು ಪ್ರೀತಿಸಿ ಮದುವೆಯಾಗಿದ್ದರು. ಇವರಿಗೆ ಮಗು ಕೂಡ ಇತ್ತು. ಮೇಲುಕೋಟೆ ಎಸ್‌ಇಟಿ ಶಾಲೆಯಲ್ಲಿ ಅತಿಥಿ ಶಿಕ್ಷಕಿಯಾಗಿ ಕೆಲಸ ನಿರ್ವಹಿಸುತ್ತಿದ್ದ ದೀಪಿಕಾಗೆ ಸ್ವಗ್ರಾಮದ ನಿತೀಶ್‌ಕುಮಾರ್ ಎಂಬ ಯುವಕ ಪರಿಚಿತನಾಗಿದ್ದ. ದೀಪಿಕಾರನ್ನು ಅಕ್ಕ.. ಅಕ್ಕ.. ಎಂದು ಕರೆಯುತ್ತಾ ಮನೆಗೆಲ್ಲಾ ಬರುತ್ತಿದ್ದನು.
ಆಪ್ತ ಸ್ನೇಹಿತರಂತಿದ್ದ ದೀಪಿಕಾ ಮತ್ತು ನಿತೀಶ್ ನಡುವೆ ಫೋನ್ ಸಂಭಾಷಣೆ, ಆಗಾಗ ಭೇಟಿಯಾಗುವುದು, ಸಲುಗೆಯಿಂದ ಮಾತನಾಡುವುದು ಮುಂದುವರೆದಿತ್ತು. ಇವರಿಬ್ಬರ ನಡುವಿನ ಸಲುಗೆ ಕುಟುಂಬದವರಿಗೆ ಸರಿಕಂಡಿರಲಿಲ್ಲ. ಈ ವಿಚಾರವಾಗಿ ನಿತೀಶ್‌ಗೆ ಎಚ್ಚರಿಕೆಯನ್ನೂ ನೀಡಿದ್ದರು. ನಿತೀಶ್ ಜೊತೆಗಿನ ಸಲುಗೆ ಕುರಿತು ದೀಪಿಕಾರನ್ನು ಪ್ರಶ್ನಿಸಿದಾಗ ಆತ ನನ್ನ ತಮ್ಮ ಇದ್ದಂತೆ ಎಂದು ಹೇಳಿಕೊಂಡಿದ್ದರು.
ಕುಟುಂಬಸ್ಥರು ನೀಡಿದ ಎಚ್ಚರಿಕೆಯಿಂದ ದೀಪಿಕಾ ಎಚ್ಚೆತ್ತುಕೊಂಡು ನಿತೀಶ್‌ನಿಂದ ಅಂತರ ಕಾಯ್ದುಕೊಂಡಿದ್ದರು. ವಾರದಿಂದ ಫೋನ್ ಕರೆ ಮಾಡಿದರೆ ಸ್ವೀಕರಿಸದಿರುವುದು, ಆತ ಭೇಟಿಯಾಗಲು ಬಯಸಿದಾಗ ಸಿಗದೆ ಓಡಾಡುವುದು ಮಾಡುತ್ತಿದ್ದರು. ದೀಪಿಕಾ ತನ್ನಿಂದ ದೂರವಾಗುತ್ತಿರುವುದನ್ನು ಕಂಡು ನಿತೀಶ್‌ಗೆ ಸಹಿಸಲಾಗಿರಲಿಲ್ಲ. ನಿತೀಶ್ ಹುಟ್ಟುಹಬ್ಬಕ್ಕೆ ಶರ್ಟ್‌ವೊಂದನ್ನು ಗಿಫ್ಟ್ ನೀಡುವುದಾಗಿ ಹೇಳಿದ್ದ ದೀಪಿಕಾ ಅದನ್ನೂ ಕೊಡಿಸಿರಲಿಲ್ಲ. ಹುಟ್ಟುಹಬ್ಬದ ದಿನ ಭೇಟಿಗೂ ಸಿಕ್ಕಿರಲಿಲ್ಲವೆಂದು ಹೇಳಲಾಗಿದೆ.
ದೀಪಿಕಾ ನಡವಳಿಕೆಯಿಂದ ನಿತೀಶ್ ಕ್ರೋಧಗೊಂಡು ಕೊಲೆ ಮಾಡಲು ಮೊದಲೇ ತಯಾರಿ ಮಾಡಿಕೊಂಡಿದ್ದನು. ಒಂದು ದಿನ ಮೊದಲೇ ಶ್ರೀಯೋಗಾನರಸಿಂಹಸ್ವಾಮಿ ಬೆಟ್ಟದ ತಪ್ಪಲಿನಲ್ಲೇ ಗುಂಡಿಯನ್ನು ತೆಗೆದು ಅದೇ ಸ್ಥಳದಲ್ಲೇ ಕೊಲೆ ಮಾಡುವುದಕ್ಕೆ ನಿಶ್ಚಯ ಮಾಡಿಕೊಂಡಿದ್ದನು. ಜ.೨೦ರಂದು ದೀಪಿಕಾರನ್ನು ಮೊಬೈಲ್ ಮೂಲಕ ನಿತೀಶ್ ಸಂಪರ್ಕಿಸಿದ್ದನು. ಆದರೂ ಭೇಟಿಗೆ ಸಿಕ್ಕಿರಲಿಲ್ಲ. ಶಾಲೆಯಲ್ಲಿ ಕರ್ತವ್ಯ ಮುಗಿಸಿ ವಾಪಸಾಗುವ ವೇಳೆ ಆಕೆಯನ್ನು ಅಡ್ಡಗಟ್ಟಿದ ನಿತೀಶ್, ದೂರಕ್ಕೆ ಕರೆದೊಯ್ದಿದ್ದಾನೆ. ಅಲ್ಲಿ ಇಬ್ಬರ ನಡುವೆ ಮಾತಿಗೆ ಮಾತು ಬೆಳೆದು ಜಗಳಕ್ಕೆ ತಿರುಗಿದೆ. ನಿತೀಶ್ ಆಕ್ರೋಶದಿಂದ ದೀಪಿಕಾರ ಮೇಲೆ ಹಲ್ಲೆ ನಡೆಸಿ ಕೊನೆಗೆ ವೇಲ್‌ನಿಂದ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾನೆಂದು ತಿಳಿದುಬಂದಿದೆ.
ದೀಪಿಕಾ ಶವವನ್ನು ಮೊದಲೇ ತೆಗೆದಿದ್ದ ಗುಂಡಿಯಲ್ಲಿ ಹೂತಿಟ್ಟು ನಿತೀಶ್ ಊರಿಗೆ ಹಿಂತಿರುಗಿದ್ದನು. ಎರಡು ದಿನ ಯಾರಿಗೂ ಅನುಮಾನ ಬರದಂತೆ ನಡೆದುಕೊಂಡಿದ್ದನು. ಕುಟುಂಬಸ್ಥರು ದೀಪಿಕಾ ನಾಪತ್ತೆಯಾಗಿರುವ ಕುರಿತು ಪೊಲೀಸರಿಗೆ ದೂರು ನೀಡಿದ್ದರು. ಈ ದೂರನ್ನು ಆಧರಿಸಿ ಪೊಲೀಸರು ತನಿಖೆ ನಡೆಸಿದಾಗ ದೀಪಿಕಾ ಸ್ಕೂಟರ್ ಮಾತ್ರ ಪತ್ತೆಯಾಗಿತ್ತು.
ಮತ್ತಷ್ಟು ಹುಡುಕಾಟ ನಡೆಸಿದಾಗ ಎರಡು ದಿನದ ಬಳಿಕ ಶ್ರೀಯೋಗಾನರಸಿಂಹಸ್ವಾಮಿ ಬೆಟ್ಟದ ತಪ್ಪಲಿನಲ್ಲಿ ಮಣ್ಣುಗುಡ್ಡೆಯ ಬಳಿ ನೊಣಗಳು ಮುತ್ತಿಕೊಂಡು ದುರ್ವಾಸನೆ ಬರುತ್ತಿತ್ತು. ಆ ಸ್ಥಳದಲ್ಲಿ ಮಣ್ಣು ತೆಗೆದಾಗ ದೀಪಿಕಾ ಮೃತದೇಹ ಪತ್ತೆಯಾಗಿತ್ತು.
ಇದೇ ಸಮಯಕ್ಕೆ ನಿತೀಶ್ ಹಾಗೂ ದೀಪಿಕಾ ಜಗಳವಾಡುವ ದೃಶ್ಯವನ್ನು ಅವರ ಗಮನಕ್ಕೆ ಬಾರದಂತೆ ಪ್ರವಾಸಿಗರೊಬ್ಬರು ಸೆರೆ ಹಿಡಿದಿದ್ದರು. ದೀಪಿಕಾ ಪತಿ ಲೋಕೇಶ್ ಆ ವಿಡಿಯೋ ನೋಡಿ ನಿತೀಶ್ ಮೇಲೆ ಅನುಮಾನ ವ್ಯಕ್ತಪಡಿಸಿ ಪೊಲೀಸರಿಗೆ ದೂರು ನೀಡಿದ್ದರು. ಆ ವೇಳೆಗೆ ನಿತೀಶ್ ಗ್ರಾಮದಿಂದ ಪರಾರಿಯಾಗಿದ್ದನು. ನಿತೀಶ್ ತಂದೆಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿ ಆರೋಪಿ ಇರುವಿಕೆಯನ್ನು ಪತ್ತೆಹಚ್ಚಿ ಪೊಲೀಸರು ಬಂಧಿಸಿದ್ದಾರೆ.
ಮೇಲುಕೋಟೆ ಶಾಲೆಗೆ ಹೋದ ಹಳ್ಳಿ ಮೇಡಂ ದುರಂತ ಅಂತ್ಯ: ಅಕ್ಕ ಅಕ್ಕ ಅಂತಿದ್ದವನೇ ಹೆಣವಾಕಿದ!
ಇಬ್ಬರ ನಡುವಿನ ಅತಿಯಾದ ಸಲುಗೆ ಇದ್ದದ್ದೇ ಕೊಲೆಗೆ ಕಾರಣವಾಗಿದೆ. ದೀಪಿಕಾ ಆಗಾಗ ಭೇಟಿಗೆ ಸಿಗದಿರುವುದು, ಆತನ ಹುಟ್ಟುಹಬ್ಬಕ್ಕೆ ಶರ್ಟ್ ಕೊಡಿಸುವುದಾಗಿ ಹೇಳಿ ಕೊಡಿಸದಿರುವುದು, ಫೋನ್ ಕರೆ ಸ್ವೀಕರಿಸದಿರುವುದು ಇಂತಹ ಸಣ್ಣಪುಟ್ಟ ವಿಚಾರಕ್ಕಾಗಿ ಕೋಪಗೊಂಡು ದೀಪಿಕಾರನ್ನು ನಿತೀಶ್ ಕೊಲೆ ಮಾಡಿದ್ದಾನೆ. ಆತನನ್ನು ಬಂಧಿಸಲಾಗಿದೆ. ಶವದ ಮರಣೋತ್ತರ ಪರೀಕ್ಷೆ ನಡೆಸಿ ಕುಟುಂಬದವರಿಗೆ ನೀಡಲಾಗಿದೆ.- ಎನ್.ಯತೀಶ್, ಜಿಲ್ಲಾ ಪೊಲೀಸ್ ಅಧೀಕ್ಷಕರು, ಮಂಡ್ಯ