Crime News ; ಮಾಜಿ ಪ್ರೇಯಸಿ ಮನೆ ಬಳಿ ಗಲಾಟೆ ಮಾಡಿದ್ದವನ ಕೊಲೆ!

By Kannadaprabha News  |  First Published Jul 17, 2022, 6:50 AM IST

ಪ್ರೀತಿ ವಿಚಾರವಾಗಿ ತಮ್ಮ ಮನೆಗೆ ಬಂದು ಗಲಾಟೆ ಮಾಡುತ್ತಿದ್ದ ಯುವಕನೊಬ್ಬನನ್ನು ಆತನ ಮಾಜಿ ಪ್ರೇಯಸಿಯ ಪತಿ ಕತ್ತರಿಯಿಂದ ಇರಿದು ಕೊಂದಿರುವ ಘಟನೆ ಶಿವಾಜಿ ನಗರದಲ್ಲಿ ನಡೆದಿದೆ.


ಬೆಂಗಳೂರು (ಜು.17): ಪ್ರೀತಿ ವಿಚಾರವಾಗಿ ತಮ್ಮ ಮನೆಗೆ ಬಂದು ಗಲಾಟೆ ಮಾಡುತ್ತಿದ್ದ ಯುವಕನೊಬ್ಬನನ್ನು ಆತನ ಮಾಜಿ ಪ್ರೇಯಸಿಯ ಪತಿ ಕತ್ತರಿಯಿಂದ ಇರಿದು ಕೊಂದಿರುವ ಘಟನೆ ಶಿವಾಜಿ ನಗರದಲ್ಲಿ ನಡೆದಿದೆ. ಶಿವಾಜಿ ನಗರದ ನಿವಾಸಿ ಜಾವದ್‌ ಖಾನ್‌ (25) ಕೊಲೆಯಾದ ವ್ಯಕ್ತಿ. ಈ ಹತ್ಯೆ ಸಂಬಂಧ ಮೃತನ ಮಾಜಿ ಪ್ರಿಯತಮೆ ಸಿಮ್ರಾನ್‌ ಹಾಗೂ ಆಕೆಯ ಗಂಡ ಜಿಶಾನ್‌ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಸಿಮ್ರಾನ್‌ ಮನೆಗೆ ಶುಕ್ರವಾರ ರಾತ್ರಿ 9.30ಕ್ಕೆ ತೆರಳಿ ಜಾವದ್‌ ಖಾನ್‌ ಗಲಾಟೆ ಮಾಡಿದ್ದು, ಆಗ ಪರಸ್ಪರ ಜಗಳದಲ್ಲಿ ಖಾನ್‌ ಕುತ್ತಿಗೆಗೆ ಕತ್ತರಿಯಿಂದ ಜಿಶಾನ್‌ ಇರಿದಿದ್ದಾನೆ. ಹಲ್ಲೆಗೊಳಗಾದ ಖಾನ್‌ ಅಲ್ಲೇ ಸಮೀಪದ ಖಾಸಗಿ ಆಸ್ಪತ್ರೆಗೆ ತೆರಳಿದ್ದಾನೆ. ಆದರೆ ಆಸ್ಪತ್ರೆ ಸೇರಿದ ಕೆಲವೇ ಕ್ಷಣಗಳಲ್ಲಿ ತೀವ್ರ ರಕ್ತಸ್ರಾವದಿಂದ ಮೃತಪಟ್ಟಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಮೃತ ಜಾವದ್‌ ಖಾನ್‌ ಎಲೆಕ್ಟ್ರಿಕಲ್‌ ಉಪಕರಣ ಮೆಕ್ಯಾನಿಕ್‌ ಆಗಿದ್ದು, ರಸೆಲ್‌ ಮಾರುಕಟ್ಟೆಸಮೀಪ ನೆಲೆಸಿದ್ದ. ಎರಡು ವರ್ಷಗಳಿಂದ ಸಿಮ್ರಾನ್‌ಳನ್ನು ಆತ ಪ್ರೀತಿಸುತ್ತಿದ್ದ. ಆದರೆ ಕೆಲ ದಿನಗಳ ಬಳಿಕ ಇಬ್ಬರ ಮಧ್ಯೆ ವೈಮನಸ್ಸು ಬಂದು ಪ್ರತ್ಯೇಕವಾಗಿದ್ದರು. ನಂತರ ಔಷಧಿ ಮಾರಾಟ ಪ್ರತಿನಿಧಿ ಜಿನಾಶ್‌ ಜತೆ ಆಕೆ ವಿವಾಹವಾಗಿದ್ದಳು.

ಈ ಮದುವೆಯಿಂದ ಕೆರಳಿದ ಖಾನ್‌, ಆಗಾಗ್ಗೆ ಮಾಜಿ ಪ್ರೇಯಸಿ ಮನೆ ಬಳಿ ತೆರಳಿ ಗಲಾಟೆ ಮಾಡುತ್ತಿದ್ದ. ಅಂತೆಯೇ ಶುಕ್ರವಾರ ರಾತ್ರಿ ತೆರಳಿದಾಗ ಖಾನ್‌ ಹಾಗೂ ಆತನ ಮಾಜಿ ಪ್ರಿಯತಮೆ ದಂಪತಿ ಮಧ್ಯೆ ಜಗಳವಾಗಿ ಕೊನೆಗೆ ಕೊಲೆಯಲ್ಲಿ ಅಂತ್ಯವಾಗಿದೆ ಎಂದು ಶಿವಾಜಿ ನಗರ ಠಾಣೆ ಪೊಲೀಸರು ಹೇಳಿದ್ದಾರೆ.

Tap to resize

Latest Videos

Bengaluru Crime News: ಪ್ರೇಮಕ್ಕೆ ವಿರೊಧ: ಯುವತಿ ಬಾಯ್‌ಫ್ರೆಂಡ್ ಕೊಂದ ಮಾವ

ಮೆಸೇಜ್‌ ಮಾಡಲಿಲ್ಲವೆಂದು ಮಹಿಳೆ ಕೊಲೆಗೆ ಯತ್ನ: ಆರೋಪಿ ಬಂಧನ
ಬಂಟ್ವಾಳ: ಸಂಬಂಧಿಕ ಮಹಿಳೆಯೊಬ್ಬಳು ಮೆಸೇಜ್‌ ಮಾಡಿಲ್ಲ ಎಂಬ ಕಾರಣಕ್ಕಾಗಿ ವ್ಯಕ್ತಿಯೊಬ್ಬ ಮನೆಗೆ ನುಗ್ಗಿ ಮಹಿಳೆಯನ್ನು ಕೊಲ್ಲಲು ಯತ್ನಿಸಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಗ್ರಾಮಾಂತರ ಪೊಲೀಸ್‌ ಠಾಣಾ ವ್ಯಾಪ್ತಿಯ ಪಿಲಿಮೊಗರು ಗ್ರಾಮದಲ್ಲಿ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.

ಪಿಲಿಮೊಗರು ಗ್ರಾಮದ ಪರವರಕೋಡಿ ಎಂಬಲ್ಲಿ ಈ ಘಟನೆ ನಡೆದಿದೆ. ಪಿಲಿಮೊಗರು ನಿವಾಸಿ ಉಮೇಶ್‌ ಎಂಬವರ ಪತ್ನಿ ಲತಾ ಅವರನ್ನು ಕೊಲ್ಲಲು ಪ್ರಯತ್ನಿಸಿದ್ದು , ಗಾಯಗೊಂಡಿರುವ ಅವರು ಚಿಕಿತ್ಸೆ ಪಡೆಯುತ್ತಿದ್ದಾರೆ. ಪಲ್ಲಿಪಾಡಿ ನಿವಾಸಿ, ಆರೋಪಿ ರಮೇಶ್‌ ತಲೆಮರೆಸಿಕೊಂಡಿದ್ದಾನೆ.

ರಮೇಶ್‌ ಮಹಿಳೆ ಲತಾ ಅವರ ಸಂಬಂಧಿಕನಾಗಿದ್ದು, ಮನೆಗೆ ಬಂದು ಹೋಗುತ್ತಿದ್ದ. ಮನೆಯವರ ಜೊತೆ ಸಲುಗೆಯಿಂದ ಇದ್ದು, ಲತಾಗೆ ಕಾಲ್‌ ಹಾಗೂ ಮೆಸೇಜ್‌ ಮಾಡುತ್ತಿದ್ದ. ಇದನ್ನು ತಿಳಿದ ಉಮೇಶ್‌ ಪತ್ನಿಗೆ ಆತನಿಗೆ ಮೆಸೇಜ್‌ ಹಾಗೂ ಕಾಲ್‌ ಮಾಡದಂತೆ ತಿಳಿಸಿದ್ದರು. ಲತಾ ಮೆಸೇಜ್‌ ಮಾಡದ ಕಾರಣ ಆರೋಪಿ ರಮೇಶ್‌ ಮನೆಗೆ ಬಂದು ವಿಚಾರಿಸಿದ್ದಾನೆ. ಲತಾ ಅವರು ಕಾರಣ ತಿಳಿಸಿದಾಗ ಆರೋಪಿ ರಮೇಶ್‌ ಅವಾಚ್ಯ ಶಬ್ದಗಳಿಂದ ಬೈದು ಮೈಮುಟ್ಟಲು ಬಂದಿದ್ದು, ವಿರೋಧಿಸಿದ ಲತಾ ಗಂಡನಿಗೆ ತಿಳಿಸುವುದಾಗಿ ಹೇಳಿದಾಗ ಮನೆಯ ಒಳಗೆ ಇದ್ದ ಕತ್ತಿಯನ್ನು ತಂದು ಕೊಲ್ಲುವ ಉದ್ದೇಶದಿಂದ ತಲೆಗೆ ಕಡಿದಿದ್ದಾನೆ. ಲತಾ ಅವರ ಬೊಬ್ಬೆ ಕೇಳಿ ಪಕ್ಕದ ಮನೆಯಲ್ಲಿರುವ ಮೈದುನ ಪ್ರಕಾಶ್‌ ಹಾಗೂ ಅತ್ತೆ ಕುಸುಮ ಅವರು ಮನೆಗೆ ಬಂದಾಗ ಆರೋಪಿ ಪರಾರಿಯಾಗಿದ್ದಾನೆ. ಗಾಯಗೊಂಡ ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಗ್ರಾಮಾಂತರ ಪೋಲೀಸರು ಆರೋಪಿಗಾಗಿ ಬಲೆ ಬೀಸಿದ್ದಾರೆ.

click me!