ಈ ಸ್ಫೋಟದ ಪರಿಣಾಮ ಹೋಮ್ ಥಿಯೇಟರ್ ವ್ಯವಸ್ಥೆ ಇರಿಸಲಾಗಿದ್ದ ಕೊಠಡಿಯ ಗೋಡೆಗಳು ಮತ್ತು ಛಾವಣಿ ಕುಸಿದು ಬಿದ್ದಿದೆ. 22 ವರ್ಷದ ಹೇಮೇಂದ್ರ ಮೆರಾವಿ ಎಂದು ಗುರುತಿಸಲಾದ ವರ ವೈರ್ ಅನ್ನು ಪ್ಲಗ್‌ಗೆ ಜೋಡಿಸಿದ ನಂತರ ಹೋಮ್ ಥಿಯೇಟರ್ ಸಿಸ್ಟಮ್ ಅನ್ನು ಸ್ವಿಚ್ ಆನ್ ಮಾಡಿದಾಗ, ಭಾರಿ ಸ್ಫೋಟ ಸಂಭವಿಸಿದೆ.
ಕಬೀರ್‌ಧಾಮ್ , ಛತ್ತೀಸ್‌ಗಢ (ಏಪ್ರಿಲ್ 5, 2023): ಮದುವೆಗೆ ಉಡುಗೊರೆಯಾಗಿ ಸ್ವೀಕರಿಸಿದ ಹೋಮ್ ಥಿಯೇಟರ್ ಮ್ಯೂಸಿಕ್ ಸಿಸ್ಟಂ ಅನ್ನು ಸ್ವಿಚ್ ಆನ್ ಮಾಡಿದ ತಕ್ಷಣ ಸ್ಫೋಟಗೊಂಡಿರುವ ಘಟನೆಗೆ ಟ್ವಿಸ್ಟ್ ಸಿಕ್ಕಿದೆ. ಈ ಸ್ಫೋಟದಲ್ಲಿ ನವ ವಿವಾಹಿತ ಹಾಗೂ ಅವರ ಸಹೋದರ ಮೃತಪಟ್ಟಿದ್ದು, ಜತೆಗೆ ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದರು. ಛತ್ತೀಸ್‌ಗಢದ ಕಬೀರ್‌ಧಾಮ್ ಜಿಲ್ಲೆಯಲ್ಲಿ ಈ ಘಟನೆ ವರದಿಯಾಗಿತ್ತು.
ಸದ್ಯ, ಈ ಹೋಮ್ ಥಿಯೇಟರ್ ಅನ್ನು ಸ್ಫೋಟಕಗಳಿಂದ ಸಜ್ಜುಗೊಳಿಸಲಾಗಿತ್ತು ಮತ್ತು ಈ ಉಡುಗೊರೆ ನೀಡಿದ್ದು ವಧುವಿನ ಮಾಜಿ ಬಾಯ್‌ಫ್ರೆಂಡ್ ಎಂದು ಪೊಲೀಸ್ ತನಿಖೆಯಿಂದ ತಿಳಿದುಬಂದಿದೆ. ಈ ಸ್ಫೋಟದ ಪರಿಣಾಮ ಹೋಮ್ ಥಿಯೇಟರ್ ವ್ಯವಸ್ಥೆ ಇರಿಸಲಾಗಿದ್ದ ಕೊಠಡಿಯ ಗೋಡೆಗಳು ಮತ್ತು ಛಾವಣಿ ಕುಸಿದು ಬಿದ್ದಿದೆ. 22 ವರ್ಷದ ಹೇಮೇಂದ್ರ ಮೆರಾವಿ ಎಂದು ಗುರುತಿಸಲಾದ ವರ ವೈರ್ ಅನ್ನು ಪ್ಲಗ್‌ಗೆ ಜೋಡಿಸಿದ ನಂತರ ಹೋಮ್ ಥಿಯೇಟರ್ ಸಿಸ್ಟಮ್ ಅನ್ನು ಸ್ವಿಚ್ ಆನ್ ಮಾಡಿದಾಗ, ಭಾರಿ ಸ್ಫೋಟ ಸಂಭವಿಸಿದೆ. ಈ ಘಟನೆಯಿಂದ ನವ ವಿವಾಹಿತ ಮೆರಾವಿ ಸ್ಥಳದಲ್ಲೇ ಸಾವಿಗೆ ಕಾರಣವಾಯಿತು ಎಂದು ಪೊಲೀಸರು ತಿಳಿಸಿದ್ದಾರೆ. ಮತ್ತೊಂದೆಡೆ ಅವರ ಸಹೋದರ ಚಿಕಿತ್ಸೆ ವೇಳೆ ಮೃತಪಟ್ಟಿದ್ದಾರೆ.
ಇದನ್ನು ಓದಿ: ಮದುವೆ ಉಡುಗೊರೆಯಾಗಿ ನೀಡಿದ್ದ ಮ್ಯೂಸಿಕ್ ಸಿಸ್ಟಮ್‌ನಲ್ಲಿ ಬಾಂಬ್..! ಸ್ಫೋಟಕ್ಕೆ ನವ ವಿವಾಹಿತ ಸೇರಿ ಇಬ್ಬರು ಬಲಿ
ಹೋಮ್ ಥಿಯೇಟರ್ ಸಿಸ್ಟಂನಲ್ಲಿ ಯಾರೋ ಸ್ಫೋಟಕಗಳನ್ನು ಇಟ್ಟಿದ್ದರಿಂದ ಸ್ಫೋಟ ಸಂಭವಿಸಿದೆ ಎಂದು ಪೊಲೀಸ್ ತನಿಖೆಯಲ್ಲಿ ಕಂಡುಬಂದಿತ್ತು. ನಂತರ, ಪೊಲೀಸರು ಮದುವೆಯ ಸಮಯದಲ್ಲಿ ಪಡೆದ ಉಡುಗೊರೆಗಳ ಪಟ್ಟಿಯನ್ನು ತನಿಖೆ ಮಾಡಲು ಪ್ರಾರಂಭಿಸಿದಾಗ, ಈ ಮ್ಯೂಸಿಕ್ ಸಿಸ್ಟಮ್ ಅನ್ನು ವಧುವಿನ ಮಾಜಿ ಪ್ರೇಮಿ ಉಡುಗೊರೆಯಾಗಿ ನೀಡಿದ್ದು ಎಂದು ಅವರು ಕಂಡುಕೊಂಡರು.
ಆರೋಪಿಯನ್ನು ಸರಜೂ ಎಂದು ಗುರುತಿಸಿದ ಪೊಲೀಸರು ನಂತರ ಆತನನ್ನು ಬಂಧಿಸಿದ್ದಾರೆ. ತನ್ನ ಮಾಜಿ ಗೆಳತಿ ಬೇರೆಯವನ ಜತೆ ಮದುವೆಯಾಗುತ್ತಿರುವುದಕ್ಕೆ ಕೋಪಗೊಂಡು ಈ ರೀತಿ ಮಾಡಿದ್ದಾಗಿ ಒಪ್ಪಿಕೊಂಡಿದ್ದಾನೆ. ಈ ಹಿನ್ನೆಲೆ ಸ್ಫೋಟಕಗಳನ್ನು ಹಾಕಿದ ಹೋಮ್ ಥಿಯೇಟರ್ ಸಿಸ್ಟಂ ಅನ್ನು ಉಡುಗೊರೆಯಾಗಿ ನೀಡಿದ್ದಾಗಿ ಹೇಳಿಕೊಂಡಿದ್ದಾನೆ ಎಂದು ಛತ್ತೀಸ್‌ಗಢದ ಕಬೀರ್‌ಧಾಮ್ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಮನೀಶಾ ಠಾಕೂರ್ ಅವರು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಯೂಟ್ಯೂಬ್‌ಗೆ ವಿಡಿಯೋ ಕಾಲ್ ಅಪ್ಲೋಡ್ ಮಾಡುವ ಬೆದರಿಕೆ: 80 ವರ್ಷದ ಮುದುಕನಿಗೆ 8 ಲಕ್ಷ ರೂ. ವಂಚನೆ
ಹೇಮೇಂದ್ರ ಮೆರಾವಿ ಏಪ್ರಿಲ್ 1 ರಂದು ವಿವಾಹವಾಗಿದ್ದರು. ಇನ್ನು, ಈ ಸ್ಫೋಟದಲ್ಲಿ ಅವರ ಸಹೋದರ ರಾಜ್‌ಕುಮಾರ್, 30, ಮತ್ತು ಒಂದೂವರೆ ವರ್ಷದ ಬಾಲಕ ಸೇರಿದಂತೆ ನಾಲ್ವರು ಗಾಯಗೊಂಡಿದ್ದು, ಅವರನ್ನು ಕವ್ರಾದ ಜಿಲ್ಲಾ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ರಾಜ್‌ಕುಮಾರ್ ಮೃತಪಟ್ಟಿದ್ದಾರೆ. ಉಳಿದವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಛತ್ತೀಸ್‌ಗಢ ಪೊಲೀಸರು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಮದುವೆಯಾಗಿದ್ರೂ ಅಪ್ರಾಪ್ತೆ ವಿದ್ಯಾರ್ಥಿನಿಗೆ ತಾಳಿ ಕಟ್ಟಿದ ಟೀಚರ್: ಕಾಮುಕ ಶಿಕ್ಷಕನ ಬಂಧನ