ಕಲಬುರಗಿ: ಭೂಮಿಗಾಗಿ ನಡೆಯಿತೆ ವಕೀಲ ಈರಣ್ಣಗೌಡ ಹತ್ಯೆ?

By Kannadaprabha News  |  First Published Dec 13, 2023, 10:00 PM IST

ಆಸ್ತಿ ವಿವಾದದಿಂದ ವಕೀಲ ಈರಣ್ಣಗೌಡ ಕೊಲೆ: ಹತ್ಯೆಗೆ ಸ್ಕೆಚ್‌ ಹಾಕಿದ್ದ ಆರೋಪಿ ದಂಪತಿ ಅಂದರ್‌​ । ವಿಚಾರಣೆ ನಡೆದಷ್ಟೂ ಹೊಸ ಸಂಗತಿಗಳು ಬಯಲು


ಕಲಬುರಗಿ(ಡಿ.13):  ಕಲಬುರಗಿ ಸಾಯಿ ಮಂದಿರ ಹತ್ತಿರವಿರುವ ಗಂಗಾ ವಿಹಾರ ಅಪಾರ್ಟ್‌ಮೆಂಟ್‌ನಲ್ಲಿ ಡಿ.7ರಂದು ನಡೆದ ವಕೀಲ ಈರಣ್ಣ ಗೌಡರ ಹತ್ಯೆ ಪ್ರಕರಣದಲ್ಲಿ ವಿಚಾರಣೆ ತೀವ್ರಗೊಳ್ಳುತ್ತಿರುವ ಬೆನ್ನಲ್ಲೆ ಹಲವಾರು ಹೊಸ ಸಂಗತಿಗಳು ಬಯಲಾಗುತ್ತಿವೆ. ಪೊಲೀಸರು ನಿನ್ನೆಯಷ್ಟೇ ಕೊಲೆ ಪ್ರಕರಣದಲ್ಲಿ ನೀಲಕಂಠ ಪಾಟೀಲ್‌, ಅವರ ಪತ್ನಿ ಸಿದ್ದಮ್ಮರನ್ನು ಬಂಧಿಸಿದ್ದಾರೆ. ಕೊಲೆಗೆ ಸ್ಕೆಚ್‌ ಹಾಕಿಕೊಟ್ಟ ಆರೋಪ ಈ ದಂಪತಿ ಮೇಲಿದೆ.

ಡಿಸೆಂಬರ್‌ ಮೊದಲ ವಾರವೇ ಕೊಲೆಗೆ ಪ್ಲಾನ್‌ ರೂಪಿಸಲಾಗಿತ್ತು. ಅದರಂತೆಯೇ ಎಲ್ಲವೂ ಜಾರಿಯಾದಾಗ ಕೊಲೆ ಮಾಡಿದ ತಂಡದಲ್ಲಿದ್ದ ಆರೋಪಿ ಹಂತಕ ಮಲ್ಲೀನಾಥ ನಾಯಿಕೋಡಿ ಈತ ರಕ್ತಸಿಕ್ತ ಕೈಯಲ್ಲೇ ಸ್ಕೆಚ್‌ ಹಾಕಿದ್ದ. ದಂಪತಿ ಮನೆಗೆ ಹೋಗಿ 50 ಸಾವಿರ ರುಪಾಯಿ ಹಣ ಪಡೆದಿದ್ದನೆಂಬ ಭಯಾನಕ ಸಂಗತಿ ಪೊಲೀಸರ ವಿಚಾರಣೆಯಲ್ಲಿ ಬಹಿರಂಗವಾಗಿದೆ.

Tap to resize

Latest Videos

undefined

ಕಲಬುರಗಿ ವಕೀಲನ ಬರ್ಬರ ಹತ್ಯೆ ಪ್ರಕರಣ; 8 ವರ್ಷಗಳ ಹಿಂದೆ ನಡೆದಿದ್ದ ಹಲ್ಲೆ ವಿಡಿಯೋ ಮತ್ತೆ ವೈರಲ್!

ಸದ್ಯ ಕೊಲೆಗೆ ಪ್ಲ್ಯಾನ್‌ ರೂಪಿಸಿದ್ದಾರೆಂಬ ಆರೋಪದ ಮೇಲೆ ಪೊಲೀಸರಿಂದ ಸೆರೆಯಲ್ಲಿರುವ ನೀಲಕಂಠ ಪಾಟೀಲ್‌ ಹಾಗೂ ಕೊಲೆಯಾದ ವಕೀಲ ಈರಣ್ಣಗೌಡ ಇವರಿಬ್ಬರೂ ಸಹೋದರ ಸಂಬಂಧಿಗಳಾಗಿದ್ದರು. ಕಲಬುರಗಿ ಮಹಾ ನಗರಕ್ಕೆ ಹೊಂದಿಕೊಂಡಂತೆಯೇ ಬೆಲೆ ಬಾಳುವ (ಎಕರೆಗೆ ಅಂದಾಜು 3 ಕೋಟಿ ರು) 12 ಎಕರೆ ಜಮೀನು ವಕೀಲ ಈರಣ್ಣಗೌಡ ಪಾಟೀಲ ಹೆಸರಲ್ಲಿತ್ತು. ಈ ಬೆಲೆಬಾಳುವ ಜಮೀನನ್ನು ಕೊಲೆ ಮಾಡಿದ ಆರೋಪ ಹೊತ್ತು ಬಂಧನದಲ್ಲಿರುವ ಮಲ್ಲೀನಾಥ ನಾಯಿಕೋಡಿ ಕುಟುಂಬ ನೋಡಿಕೊಳ್ಳುತ್ತಿತ್ತು. ಈ ನಡುವೆ ವಕೀಲ ಈರಣ್ಣಗೌಡ 12 ಎಕರೆ ಜಮೀನನ್ನು ಕೃಷಿಯೇತರ ಎಂದು ಪರಿವರ್ತಿಸಿ ನಿವೇಶನ ಮಾಡಿ ಅಭಿವೃದ್ಧಿಪಡಿಸಿ ಮಾರಾಟ ಮಾಡುವ ದಿಶೆಯಲ್ಲಿ ಯೋಜನೆ ರೂಪಿಸಲಾರಂಭಿಸಿದ್ದರು.

12 ಎಕರೆ ಜಮೀನಲ್ಲಿ ಪಾಲಿಗಾಗಿ ದಾವೆ ಹೂಡಿದ್ದರು:

ಈರಣ್ಣ ಗೌಡರ ಹೆಸರಲ್ಲಿದ್ದ ಕೋಟಿ ಬೆಲೆ ಬಾಳುವ ಜಮೀನಿನ ಮೇಲೆ ಅದಾಗಲೇ ಕಣ್ಣಿಟ್ಟಿದ್ದ ನೀಲಕಂಠ ಪಾಟೀಲ್‌, ಮಲ್ಲೀನಾಥ ನಾಯಿಕೋಡಿ ಕುಟುಂಬದವರು ಸದರಿ 12 ಎಕರೆ ಜಮೀನಲ್ಲಿ ತಮಗೂ ಪಾಲುಬೇಕೆಂದು ನ್ಯಾಯಾಲಯದಲ್ಲಿ ದಾವೆ ಸಹ ಹೂಡಿದ್ದರೆಂಬುದು ಪೊಲೀಸ್‌ ವಿಚಾರಣೆಯಲ್ಲಿ ಗೊತ್ತಾಗಿದೆ. 12 ಎಕರೆ ಜಮೀನಿಗಾಗಿ ಅದಾಗಲೇ ಹತ್ತಾರು ಬಾರಿ ಊರಲ್ಲಿ, ಬಂಧು ಬಳಗದಲ್ಲಿ ನ್ಯಾಯ, ಪಂಚಾಯಿತಿ ಸಹ ನಡೆದಿದ್ದವು. ರಾಜೀ ಸಂಧಾನಗಳು ನಡೆದು ವಿಫಲವಾಗಿದ್ದವು.

12 ಎಕರೆ ಬೆಲೆಬಾಳುವ ಜಮೀನಿನಲ್ಲಿ 2 ರಿಂದ 3 ಎಕರೆಯಷ್ಟಾದರೂ ತಮಗೆ ನೀಡಲೇಬೇಕು ಎಂದು ಪಾಟೀಲ್‌, ನಾಯಿಕೋಡಿ ಕುಟುಂಬದವರು ಈರಣ್ಣಗೌಡರ ದುಂಬಾಲು ಬಿದ್ದಿದ್ದರು ಎಂದು ವಿಚಾರಣೆಯಲ್ಲಿ ಗೊತ್ತಾಗಿದೆ. ಆದರೆ ಪಾಟೀಲ್‌ ಮತ್ತು ನಾಯಿಕೋಡಿ ಕುಟುಂಬದ ಈ ಆಗ್ರಹವನ್ನು ಹತ್ಯೆಗೀಡಾದ ವಕೀಲ ಈರಣ್ಣಗೌಡರು ತಳ್ಳಿಹಾಕಿದ್ದರಲ್ಲದೆ ಎನ್‌ಎ ಮಾಡಿಸಿ ನಿವೇಶನ ಮಾಡಿ ಯೋಜನೆ ರೂಪಿಸಲು ಮುಂದಾಗಿದ್ದರು.

ಈರಣ್ಣಗೌಡರನ್ನೇ ಮುಗಿಸಿದರೆ ಆಸ್ಥಿ ತಮ್ಮದು ಆಗುವುದೆಂದು ಸಂಚು

ಈರಣ್ಣಗೌಡರ ಈ ನಿಲುವಿನಿಂದ ಕೆರಳಿದ್ದ ಪಾಟೀಲ್‌ ಮತ್ತು ನಾಯಿಕೋಡಿ ಕುಟುಂಬದವರು ಇಡೀ ಕುಟುಂಬದಲ್ಲೇ ಒಬ್ಬನೇ ಪುರುಷ ಸಂತಾನವಾಗಿರುವ ಈರಣ್ಣಗೌಡರನ್ನೇ ಮುಗಿಸಿದರೆ ಇಡೀ ಆಸ್ತಿಯೇ ತಮ್ಮದಾಗುತ್ತದೆಂದು ಯೋಚಿಸಿದ್ದೇ ಸದರಿ ಕೊಲೆಗೆ ಸಂಚು ರೂಪಿಸಿ ಅನುಷ್ಠಾನಕ್ಕೆ ತರಲಾಯಿತು ಎಂಬ ಅಂಶ ವಿಚಾರಣೆಯಲ್ಲಿ ಬಯಲಾಗಿದೆ. ಈರಣ್ಣಗೌಡ ಪಾಟೀಲ್‌ ಹತ್ಯೆ ಡಿ.7ರ ದಿನವೇ ಕಲಬುರಗಿ ಜಿಲ್ಲಾ ನ್ಯಾಯಾಲಯದಲ್ಲಿ ಜಮೀನು ಕುರಿತಾದ ಹೂಡಲಾಗಿದ್ದ ದಾವೆಯ ಅಂತಿಮ ತೀರ್ಪು ಹೊರಬೀಳೋದಿತ್ತು.

ಕಲಬುರಗಿ ವಕೀಲನ ಹತ್ಯೆ ಪ್ರಕರಣ; ಪ್ರಮುಖ ಆರೋಪಿ ಬಂಧನ

ಈ ದಿನ ಈರಣ್ಣಗೌಡ ಪಾಟೀಲ್‌ ಕಡತಗಳ ಸಮೇತ ಕೋರ್ಟ್‌ಗೆ ಸಿದ್ಧರಾಗಿದ್ದರು. ಇತ್ತ ಆರೋಪಿ ನೀಲಕಂಠ ಪಾಟೀಲ್‌, ಮತ್ತವರ ಪತ್ನಿ ಸಿದ್ದಮ್ಮ ಹೊಸ ಕಾರ್‌ ಪೂಜೆಗೆಂದು ದತ್ತಾತ್ರೇಯ ದೇವರ ತಾಣ ಗಾಣಗಾಪುರಕ್ಕೆ ತೆರಳಿದ್ದರು.
ಮೊದಲೇ ಸಂಚು ರೂಪಿಸಿದಂತೆಯೇ ಮಲ್ಲೀನಾಥ, ಅವ್ವಣ್ಣ ಹಾಗೂ ಭಾಗೇಶ ನಾಯಿಕೋಡಿ ಮೂವರು ಸೇರಿಕೊಂಡು ಅವರು ವಾಸವಾಗಿರುವ ಅಪಾರ್ಟ್‌ಮೆಂಟ್‌ನ ಮನೆ ಮುಂದೆ ಕೋರ್ಟ್‌ಗೆ ಹೋಗೋ ಸಮಯದಲ್ಲೇ ಅಡ್ಡಗಟ್ಟಿ ಮಚ್ಚಿನಿಂದ ಹತ್ತಾರು ಬಾರಿ ಕೊಚ್ಚಿದ್ದಲ್ಲದೆ ತಲೆ ಮೇಲೆ ಕಲ್ಲು ಎತ್ತಿಹಾಕಿ ಬರ್ಬರವಾಗಿ ಕೊಲೆ ಮಾಡಿದ್ದರು.

ಕೊಲೆ ಘಟನೆ ನಡೆದ 24 ಗಂಟೆಯಲ್ಲೇ ಎಲ್ಲಾ ಪ್ರಮುಖ ಆರೋಪಿಗಳನ್ನು ಬಂಧಿಸಿ, ನ್ಯಾಯಾಂಗ ಬಂಧನಕ್ಕೊಪ್ಪಿಸಲಾಗಿದೆ. ಪ್ರಕರಣದ ಸಂಪೂರ್ಣ ವಿಚಾರಣೆಯ ನಂತರ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಲಾಗುತ್ತದೆ ಎಂದು ಕಲಬುರಗಿ ನಗರ ಪೊಲೀಸ್‌ ಆಯುಕ್ತ ಆರ್‌. ಚೇತನ್‌ ತಿಳಿಸಿದ್ದಾರೆ.   

click me!