* ಸೈಕೋ ಕಿಲ್ಲರ್ ಉಮೇಶ್ ರೆಡ್ಡಿಗೆ ಗಲ್ಲು ಶಿಕ್ಷೆ ಕಾಯಂ
* ಕೆಳ ನ್ಯಾಯಾಲಯದ ಆದೇಶ ಎತ್ತಿ ಹಿಡಿದ ಹೈಕೋರ್ಟ್
* ಬೆಳಗಾವಿ ಹಿಂಡಲಗಾ ಜೈಲಿನಲ್ಲಿರುವ ಉಮೇಶ್ ರೆಡ್ಡಿ
*ಸುಪ್ರೀಂಗೆ ಮೇಲ್ಮನವಿ ಸಲ್ಲಿಸಲು ಆರು ವಾರಗಳ ಸಮಯಾವಕಾಶ
ಬೆಂಗಳೂರು(ಸೆ. 29) ವಿಕೃತಕಾಮಿ ಉಮೇಶ್ ರೆಡ್ಡಿಗೆ(umesh reddy) ಗಲ್ಲು(Death Sentence) ಶಿಕ್ಷೆಯನ್ನು ಕರ್ನಾಟಕ ಹೈಕೋರ್ಟ್ ಕಾಯಂಗೊಳಿಸಿದೆ. ಕೆಳಗಿನ ನ್ಯಾಯಾಲಯ ನೀಡಿದ್ದ ಗಲ್ಲು ಶಿಕ್ಷೆಯನ್ನು ಜೀವಾವಧಿ ಶಿಕ್ಷೆಯನ್ನಾಗಿ ಪರಿವರ್ತನೆ ಮಾಡಬೇಕೆಂದು ಉಮೇಶ್ ರೆಡ್ಡಿ ಪರ ವಕೀಲರಿಂದ ಅರ್ಜಿ ಸಲ್ಲಿಕೆಯಾಗಿತ್ತು. ರಾಷ್ಟ್ರಪತಿಗೂ ಕ್ಷಮಾದಾನಕ್ಕೆ ಮನವಿ ಮಾಡಿಕೊಳ್ಳಲಾಗಿತ್ತು.
ಕ್ಷಮಾದಾನದ ಅರ್ಜಿ ವಿಳಂಬವಾಗಿದ್ದು ಜೀವಾವಧಿ ಶಿಕ್ಷೆ ನೀಡಿ ಎಂದು ರೆಡ್ಡಿ ಮನವಿ ಮಾಡಿಕೊಂಡಿದ್ದ. ಕಳೆದ ಹತ್ತು ವರ್ಷಗಳಿಂದ ನನ್ನನ್ನು ಒಂಟಿಯಾಗಿ ಸೆರೆಯಲ್ಲಿ ಇಡಲಾಗಿದೆ ಎಂದು ಹೇಳಿದ್ದ.
ಸುಪ್ರೀಂ ಕೋರ್ಟ್ ಗೆ ಮನವಿ ಸಲ್ಲಿಸಿದ್ದ. ಆದರೆ ಸುಪ್ರೀಂ ಮನವಿಯನ್ನು ಹೈಕೋರ್ಟ್ ಗೆ ವರ್ಗಾಯಿಸಿ ಅಲ್ಲಿಯೇ ಇತ್ಯರ್ಥ ಮಾಡುವಂತೆ ತಿಳಿಸಿತ್ತು. ಉಮೇಶ್ ರೆಡ್ಡಿ ಸದ್ಯ ಹಿಂಡಲಗಾ ಜೈಲಿನಲ್ಲಿ ಇದ್ದಾನೆ.
ಅತ್ಯಾಚಾರಿಗೆ 26 ದಿನದಲ್ಲೇ ಗಲ್ಲು ಶಿಕ್ಷೆ ಪ್ರಕಟ
ಸುಪ್ರೀಂ ಕೋರ್ಟ್ ಗೆ ಮನವಿ ಸಲ್ಲಿಸಲು ಅವಕಾಶ ಒಂದನ್ನು ನೀಡಲಾಗಿದೆ. ಗಲ್ಲು ಶಿಕ್ಷೆಯಾಗಿರುವ ಕಾರಣ ಸಮಯಾವಕಾಶ ನೀಡುತ್ತಿದ್ದೇವೆ ಎಂದು ನ್ಯಾಯ ಪೀಠ ಹೇಳಿದೆ.
ಫೆಬ್ರವರಿ 28, 1998 ರಲ್ಲಿ ಬೆಂಗಳೂರಿನ ಮಹಿಳೆಯೊಬ್ಬರ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಿದ್ದ. ಈ ಪ್ರಕರಣದಲ್ಲಿ (2007) ಗಲ್ಲು ಶಿಕ್ಷೆಯಾಗಿತ್ತು. ಆರು ಸಾರಿ ಪೊಲೀಸರ ಕೈಯಿಂದ ತಪ್ಪಿಸಿಕೊಂಡಿದ್ದ. ಚಿತ್ರದುರ್ಗ ಮೂಲದ ಸೈಕೋ ಕಿಲ್ಲರ್ ಮೇಲೆ ಕರ್ನಾಟಕ, ಆಂಧ್ರ ಮತ್ತು ಮುಂಬೈನಲ್ಲಿ ಕೊಲೆ ಮತ್ತು ಅತ್ಯಾಚಾರದ ಪ್ರಕರಣಗಳು ಇವೆ. ಎಂಟಕ್ಕೂ ಅಧಿಕ ಪ್ರಕರಣಗಳ ಬಗ್ಗೆ ಆತನೇ ಬಾಯಿ ಬಿಟ್ಟಿದ್ದ.
ಕ್ಷಮಾದಾನ ಕೋರಿ ಉಮೇಶ್ ರೆಡ್ಡಿ ತಾಯಿ 2013 ರಲ್ಲಿ ರಾಷ್ಟ್ರಪತಿಗೆ ಮನವಿ ಸಲ್ಲಿಕೆ ಮಾಡಿದ್ದರು. ಆದರೆ ಅಲ್ಲಿಯೂ ಅರ್ಜಿ ತಿರಸ್ಕಾರವಾಗಿತ್ತು. ಕೊನೆಗೂ ಈಗ ಉಮೇಶ್ ರೆಡ್ಡಿಗೆ ಗಲ್ಲು ಶಿಕ್ಷೆ ಕಾಯಂ ಆಗಿದೆ.
ಹಿಂಡಲಗಾ ಜೈಲಿನಲ್ಲಿರುವ ವಿಕೃತ ಕಾಮಿ: 26 ಅಕ್ಟೋಬರ್ 2006ರಲ್ಲಿ ಬೆಂಗಳೂರು ಕಾರಾಗೃಹದಿಂದ ಬೆಳಗಾವಿ ಹಿಂಡಲಗಾ ಜೈಲಿಗೆ ಉಮೇಶ್ ರೆಡ್ಡಿಯನ್ನು ಶಿಫ್ಟ್ ಮಾಡಲಾಗಿತ್ತು. ಕಳೆದ ಹದಿನೈದು ವರ್ಷಗಳಿಂದ ಹಿಂಡಲಗಾ ಜೈಲಿನಲ್ಲಿ ಸೆರೆವಾಸ ಅನುಭವಿಸುತ್ತಿದ್ದಾನೆ. ಸದ್ಯ ಹಿಂಡಲಗಾ ಜೈಲಿನ ಗಲ್ಲು ಶಿಕ್ಷೆಗೆ ಗುರಿಯಾದವರಿಗೆ ಇರಿಸುವ ಪ್ರತ್ಯೇಕ ಕೊಠಡಿಯಲ್ಲಿರುವ ಉಮೇಶ್ ರೆಡ್ಡಿಗೆ ಇದೀಗ ಗಲ್ಲು ಕಾಯಂ ಆಗಿದೆ.