ಧಾರವಾಡದಲ್ಲಿ ತನ್ನ ಮಗಳನ್ನು ಪ್ರೀತಿ ಮಾಡುತ್ತಿದ್ದ ಯುವಕನಿಗೆ ಯುವತಿಯ ತಂದೆಯೇ ಹೋಗಿ ಚಾಕು ಇರಿದು ಸಾಯಿಸಲು ಯತ್ನಿಸಿದ್ದಾನೆ. ಯುವಕ ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾನೆ.
ಧಾರವಾಡ (ಜು.16): ಮಕ್ಕಳನ್ನು ಪ್ರೀತಿಯಿಂದ ಬೆಳೆಸುವ ಪೋಷಕರು ಚಿಕ್ಕಂದಿರಲ್ಲಿ ಆಸೆ ಪಟ್ಟಿದ್ದನ್ನೆಲ್ಲಾ ಕೊಡಿಸಿ ಮುದ್ದಾಗಿ ಬೆಳೆಸುತ್ತಾರೆ. ಆದರೆ, ಅವರು ವಯಸ್ಕ ಹಂತಕ್ಕೆ ಬಂದಾಗ ಪ್ರೀತಿ ಮಾಡುವುದಕ್ಕೆ ಪೋಷಕರ ವಿರೋಧ ಇದ್ದೇ ಇದೆ. ಆದರೆ, ಇಲ್ಲೊಬ್ಬ ತಂದೆ ತನ್ನ ಮಗಳು ಪ್ರೀತಿ ಮಾಡುತ್ತಿದ್ದುದನ್ನು ತಡೆಯಲಾಗದೇ, ಮಗಳನ್ನು ಪ್ರೀತಿಸುತ್ತಿದ್ದ ಯುವಕನಿಗೆ ಚಾಚು ಚುಚ್ಚಿದ್ದಾರೆ.
ಈ ಘಟನೆ ನಡೆದಿರುವುದು ಧಾರವಾಡ ನಗರದ ಸೈದಾಪೂರ ಪ್ರದೇಶದಲ್ಲಿ ನಡೆದಿದೆ. ಚಾಕು ಇರಿತಕ್ಕೆ ಒಳಗಾದ ಯುವಕ ಶಶಾಂಕ ಮೂಗನ್ನನವರ ಎಂಬಾತನಾಗಿದ್ದಾನೆ. ಚಾಕು ಚುಚ್ಚಿದ ಯುವತಿಯ ತಂದೆಯನ್ನು ಹುಲಗಪ್ಪ ಬಡಿಗೇರ ಎಂದು ಗುರುತಿಸಲಾಗಿದೆ. ಹುಲಗಪ್ಪನ ಮಗಳನ್ನು ಶಶಾಂಕ ಪ್ರೀತಿ ಮಾಡುತ್ತಿದ್ದನು. ಈ ಯುವಕ ಗುಜರಿ ಅಂಗಡಿಯೊಂದರಲ್ಲಿ ಕೆಲಸ ಮಾಡಿಕೊಂಡಿದ್ದನು. ಶ್ರೀಮಂತಿಕೆ ಇರದಿದ್ದರೂ, ಜೀವನ ಮಾಡುವಷ್ಟು ಹಣವನ್ನು ಯುವಕ ಗಳಿಸುತ್ತಿದ್ದನು. ಆದರೆ, ಆತ ಸಮಾಜದಲ್ಲಿ ಮರ್ಯಾದೆ ಇಲ್ಲದ ಗುಜರಿ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದನೆಂದು ಕೋಪಗೊಂಡ ಯುವತಿಯ ತಂದೆ, ಯುವಕನಿರುವ ಸ್ಥಳಕ್ಕೆ ತೆರಳಿ ಸೀದಾ ಹೊಟ್ಟೆಗೆ ಚಾಕುವಿನಿಂದ ಚುಚ್ಚಿದ್ದಾನೆ.
ಸ್ಥಳೀಯರಿಂದ ಯುವಕನ ರಕ್ಷಣೆ: ಇನ್ನು ಚಾಕು ಚುಚ್ಚಿದ ಬೆನ್ನಲ್ಲೇ ಯುವಕ ತೀವ್ರ ರಕ್ತಸ್ರಾವ ಉಂಟಾಗಿ ಬಿದ್ದಿದ್ದಾನೆ. ಇನ್ನು ಅಕ್ಕ ಪಕ್ಕದವರು ಈ ಘಟನೆ ನಡೆದ ಕೂಡಲೇ ಚೀರಾಟದಿಂದ ತಪ್ಪಿಸಿಕೊಳ್ಳಲು ಯತ್ನಿಸುತ್ತಿದ್ದ ಯುವಕನ ಸಹಾಯಕ್ಕೆ ಬಂದಿದ್ದಾರೆ. ನಂತರ, ಯುವತಿಯ ತಂದೆಯನ್ನು ಹಿಡಿದು ಚಾಕು ಚುಚ್ಚುವುದನ್ನು ತಡೆದಿದ್ದಾರೆ. ಆದರೆ, ಅದಾಗಲೇ ಮೂರ್ನಾಲ್ಕು ಬಾರಿ ಚಾಕು ಚುಚ್ಚಿದ್ದರಿಂದ ಯುವಕನಿಗೆ ತೀವ್ರ ರಕ್ತಸ್ರಾವ ಉಂಟಾಗಿತ್ತು. ಕೂಡಲೇ ಯುವಕನನ್ನು ಆಟೋದಲ್ಲಿ ಕರೆದುಕೊಂಡು ಹೋಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಯುವಕ ಕಿಮ್ಸ್ ಆಸ್ಪತ್ರೆಯಲ್ಲಿ ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾರೆ.
ಮಗಳನ್ನು ಪ್ರೀತಿಸಿದ್ದಕ್ಕೆ ಬೆಂಕಿ ಹಚ್ಚಿದ ಯುವತಿ ಮನೆಯವರು: ಬೆಂಗಳೂರು (ಜು.16): ಪ್ರೀತಿಸಿದ ಕಾರಣಕ್ಕೆ ದುಷ್ಕರ್ಮಿಗಳು ಕಾಲೇಜು ವಿದ್ಯಾರ್ಥಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಹೃದಯವಿದ್ರಾವಕ ಘಟನೆ ನಡೆದಿದೆ. ಆರ್.ಆರ್.ನಗರದ ನಿವಾಸಿ ರಂಗನಾಥ ಪುತ್ರನಾದ ಮನು, ತನ್ನ ಸಂಬಂಧಿಕರ ಯುವತಿಯನ್ನು ಪ್ರೀತಿಸುತಿದ್ದ. ಇಬ್ಬರ ಪ್ರೀತಿಗೆ ಯುವತಿಯ ಪೋಷಕರು ವಿರೋಧ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆ ಕಳೆದ ಜುಲೈ 3 ರಂದು ಮೈಸೂರಿನಿಂದ ಬೆಂಗಳೂರಿಗೆ ಬಂದಿದ್ದ ಯುವತಿಯನ್ನು ಮನೆಗೆ ಕರೆದೊಯ್ದಿದ್ದ. ಈ ವೇಳೆ ಯುವತಿಯ ಪೋಷಕರು ಮನು ಮನೆಗೆ ನುಗ್ಗಿ ಹಲ್ಲೆ ನಡೆಸಿ ಯುವತಿಯನ್ನು ಕರೆದೊಯ್ದೊದಿದ್ದರು.
ಪ್ರೀತಿಸಿದ್ದಕ್ಕೆ ಕಾಲೇಜು ವಿದ್ಯಾರ್ಥಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ದುಷ್ಕರ್ಮಿಗಳು
ಕಿಡ್ನಾಪ್ ಮಾಡಿ ಪೆಟ್ರೋಲ್ ಸುರಿದು ಬೆಂಕಿಯಿಟ್ಟರು: ಇದಾದ ಬಳಿಕ ಮನು ಎಂದಿನಂತೆ ಕಾಲೇಜಿಗೆ ತೆರಳಿದ್ದು, ಆತನ ತಂದೆ ತಂದೆ ರಂಗನಾಥ ನಿನ್ನೆ ಬೆಳಗ್ಗೆ ಡ್ರಾಪ್ ಮಾಡಿದ್ದರು. ಬಳಿಕ ವಾಪಾಸ್ಸಾಗುವ ವೇಳೆ ಬಸ್ ನಿಲ್ದಾಣದಲ್ಲಿ ಬಸ್ಗೆ ಕಾಯುತಿದ್ದ ಮನುವನ್ನು ಕಿಡ್ನಾಪ್ ಮಾಡಿದ ದುಷ್ಕರ್ಮಿಗಳು, ಯುವಕನ ಕೈ ಕಾಲು ಕಟ್ಟಿಹಾಕಿ ಬೆಂಕಿ ಇಟ್ಟಿದ್ದಾರೆ. ಗಾಯಾಳು ವಿದ್ಯಾರ್ಥಿ ಮನುಗೆ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಆರೋಪಿಗಳ ವಿರುದ್ದ ಕುಂಬಳಗೋಡು ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ. ಶಶಾಂಕ್ ದೊಡ್ಡಪ್ಪ ಮತ್ತು ಮನು ಹಾಗೂ ಸಹಚರರಿಂದ ಕೃತ್ಯ ಎಸಗಲಾಗಿದೆ.